ಬೆಂಗಳೂರು ಜಲಮಂಡಳಿಯಿಂದ ನೀರಿನ ಟ್ಯಾಂಕರ್ ಮಾಫಿಯಾ ತಡೆಗೆ ಆ್ಯಪ್ ಬಿಡುಗಡೆ. ಸ್ವಿಗ್ಗಿ, ಜೊಮೆಟೋ ಮಾದರಿಯಲ್ಲಿ ಆನ್‌ಲೈನ್‌ನಲ್ಲಿ ಕಾವೇರಿ ನೀರು ಬುಕ್ ಮಾಡಿ, ಟ್ಯಾಂಕರ್ ಮೂಲಕ ನೀರು ಪಡೆಯಿರಿ..
ಬೆಂಗಳೂರು (ಮಾ.18): ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಡಬ್ಯೂಎಸ್ಎಸ್‌ಬು) ಇದೇ ಮೊದಲ ಬಾರಿಗೆ ನೀರಿನ ಟ್ಯಾಂಕರ್ ಮಾಫಿಯಾವನ್ನು ನಿಯಂತ್ರಿಸಲು ಮತ್ತು ಬೇಸಿಗೆಯಲ್ಲಿ ನೀರಿನ ಕೊರತೆಯ ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಲು 'ವೆಬ್ ಆಧಾರಿತ ಮೊಬೈಲ್ ಅಡಾಪ್ಟಿವ್ ಅಪ್ಲಿಕೇಶನ್' ಆರಂಭಿಸಲು ಮುಂದಾಗಿದೆ.
ಮೊಬೈಲ್ ಆಧಾರಿತ ಅಪ್ಲಿಕೇಶನ್ ಈಗಾಗಲೇ ವಿನ್ಯಾಸಗೊಳಿಸಲಾಗಿದ್ದು, ಇದರ ಲಿಂಕ್ ಶೀಘ್ರದಲ್ಲೇ BWSSB ವೆಬ್‌ಸೈಟ್‌ನಲ್ಲಿ ಎಲ್ಲರಿಗೂ ಲಭ್ಯವಾಗುವಂತೆ ಮಾಡಲಾಗುತ್ತದೆ.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾರ್ಚ್ ಅಂತ್ಯದ ವೇಳೆಗೆ ಈ ಪೈಲಟ್ ಯೋಜನೆಗೆ ಚಾಲನೆ ನೀಡಲಿದ್ದಾರೆ. ಬೆಂಗಳೂರು ನಿವಾಸಿಗಳು ಸ್ವಿಗ್ಗಿ, ಜೊಮೆಟೋ ಮಾದರಿಯಲ್ಲಿ ಆನ್‌ಲೈನ್‌ನಲ್ಲಿ ನೀರಿನ ಟ್ಯಾಂಕಗರ್‌ಳನ್ನು ಬುಕ್ ಮಾಡಲು ಮತ್ತು ನಿಗದಿತ ಸಮಯದೊಳಗೆ ನೀರು ಪಡೆಯಲು ಪೂರ್ವನಿರ್ಧರಿತ ಶುಲ್ಕವನ್ನು ಪಾವತಿಸಲು ಅವಕಾಶ ನೀಡುತ್ತದೆ. ಅದು ಕೂಡ ಈ ಜಲಮಂಡಳಿಯ ನೀರಿನ ಟ್ಯಾಂಕರ್‌ಗಳಿಂದ ಖಾಸಗಿಯವರಂತೆ ಬೋರ್‌ವೆಲ್ ನೀರನ್ನು ಪೂರೈಸದೇ ಕಾವೇರಿ ನೀರನ್ನು ಮಾತ್ರ ಪೂರೈಕೆ ಮಾಡಲಾಗುತ್ತದೆ. ಪ್ರಮುಖವಾಗಿ ಕಾವೇರಿ ನೀರಿನ ಕೊಳವೆ ಮಾರ್ಗವಿಲ್ಲದ ಪ್ರದೇಶಗಳಲ್ಲಿ ಸ್ಥಾಪಿಸಲಾದ 100ಕ್ಕೂ ಹೆಚ್ಚು ಕಾವೇರಿ ನೀರಿನ ಸಂಪರ್ಕ ಕೇಂದ್ರಗಳಿಂದ ಈ ಕಾವೇರಿ ನೀರನ್ನು ಪೂರೈಸಲಾಗುತ್ತದೆ.
ಈ ಬಗ್ಗೆ ಪತ್ರಿಕೆಯೊಂದರ ಜೊತೆಗೆ ಮಾತನಾಡಿದ ಬೆಂಗಳೂರು ಜಲಮಂಡಳಿ ಅಧ್ಯಕ್ಷ ವಿ.ರಾಮ್ ಪ್ರಸಾತ್ ಮನೋಹರ್, ಈಗಾಗಲೇ ಜಲಮಂಡಳಿಯಿಂದ ಬೇಸಿಗೆಯಲ್ಲಿ ನೀರು ಪೂರೈಕೆ ಮಾಡಲು 200 ಟ್ಯಾಂಕರ್ ನೇಮಿಸಿಕೊಳ್ಳುವ ಪ್ರಕ್ರಿಯೆ ಪೂರ್ಣಗೊಳಿಸಿದ್ದೇವೆ. ಪ್ರಸ್ತುತ 6,000 ಲೀಟರ್ ಮತ್ತು 12,000 ಲೀಟರ್ ಸಾಮರ್ಥ್ಯದ ಈ ಟ್ಯಾಂಕರ್‌ಗಳನ್ನು ನೇಮಿಸಿಕೊಳ್ಳಲಾಗಿದ್ದು, ದಿನಕ್ಕೆ 8 ಟ್ರಿಪ್‌ಮಾಡಬಹುದು. ಮೊದಲು ಬೆಂಗಳೂರಿನ ಪೂರ್ವ ಭಾಗದಲ್ಲಿ ಇದನ್ನು ಅಳವಡಿಕೆ ಮಾಡಿಕೊಳ್ಳಲಾಗುತ್ತದೆ. ಇದರಲ್ಲಿ ಲಾಭ, ನಷ್ಟವನ್ನು ಲೆಕ್ಕ ಹಾಕದೇ ಹೊಸ ಸಾಫ್ಟ್‌ವೇರ್ ಮೂಲಕ ಕಾವೇರಿ ನೀರನ್ನು ಪೂರೈಕೆ ಮಾಡುವ ಕಾರ್ಯ ಕೈಗೆತ್ತಿಕೊಳ್ಳಲಾಗುತ್ತದೆ. ಪ್ರತಿ ಟ್ಯಾಂಕರ್‌ಗೆ ಸಂಗ್ರಹಣ ಸಾಮರ್ಥ್ಯ ಹಾಗೂ ನೀರು ಸರಬರಾಜು ಅಂತರವನ್ನು ಗಮನಿಸಿ ಶುಲ್ಕ ವಿಧಿಸಲಾಗುತ್ತದೆ. ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಾದ ಗೂಗಲ್‌ಪೇ, ಫೋನ್ ಪೇ ಸೇರಿ ಇತರೆ ಪ್ಲಾಟ್‌ಫಾರ್ಮ್ ಮೂಲಕ ಹಣ ಪಾವತಿಸಬಹುದು ಎಂದು ತಿಳಿಸಿದರು.
ಇದನ್ನೂ ಓದಿ: ಬೆಂಗಳೂರಿನ ಪಾರ್ಕ್‌ಗಳಲ್ಲಿ ಜಾಗಿಂಗ್ ನಿಷೇಧ; ಕಾರಣ ಕೇಳಿ ನೀವು ಶಾಕ್ ಆಗೋದಂತೂ ಗ್ಯಾರಂಟಿ..!
ಇದೀಗ ಜಲಮಂಡಳಿಯಿಂದ ಜಾರಿಗೆ ತರುತ್ತಿರುವ ಅಪ್ಲಿಕೇಶನ್ ಮೂಲಕ 'ಬೇಸಿಗೆಯಲ್ಲಿ ಟ್ಯಾಂಕರ್ ಮಾಫಿಯಾ ನಡೆಯುವುದಕ್ಕೆ ಕಡಿವಾಣ ಹಾಕಲಾಗುತ್ತದೆ. ಟ್ಯಾಂಕರ್ ಮಾಲೀಕರು ಮನಬಂದಂತೆ ಹಣ ವಸೂಲಿ ಮಾಡುವುದನ್ನು ನಿವಾರಿಸಲಾಗುತ್ತದೆ. ಪ್ರತಿ ಟ್ಯಾಂಕರ್‌ಗೆ ಜಿಪಿಎಸ್ ಅಳವಡಿಸಲಾಗಿದ್ದು, ಇದರಲ್ಲಿ ಗ್ರಾಹಕರು ಟ್ರ್ಯಾಕ್ ಮಾಡಬಹುದು. ಟ್ಯಾಂಕರ್ ಬುಕಿಂಗ್ ಸಮಯದಲ್ಲಿ ಗ್ರಾಹಕರ ವಿತರಣಾ ವಿಳಾಸದ ಜಿಪಿಎಸ್ ನಿರ್ದೇಶಾಂಕಗಳನ್ನು ಪಡೆಯಲಾಗುತ್ತದೆ. ಗ್ರಾಹಕರಿಗೆ ಒಟಿಪಿ ಕಳುಹಿಸಲಾಗುತ್ತದೆ. ಜೊತೆಗೆ, ಟ್ಯಾಂಕರ್ ಸಿಬ್ಬಂದಿಯೊಂದಿಗೆ ಒಟಿಪಿ ಹಂಚಿಕೊಂಡ ನಂತರವೇ ನೀರು ಸರಬರಾಜು ಮಾಡಲಾಗುತ್ತದೆ. ಕಾವೇರಿ ನೀರಿಗಾಗಿ 24 ಗಂಟೆ ಮುಂಚಿತವಾಗಿ ಬುಕ್ ಮಾಡಬೇಕು. ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ನೀರು ಪೂರೈಸಲಾಗುತ್ತದೆ.
ಇನ್ನು ಎಲ್ಲ ನೀರಿನ ಟ್ಯಾಂಕರ್‌ನಲ್ಲಿ ಸ್ವಯಂಚಾಲಿತ ಸಕ್ರಿಯಗೊಳಿಸಿದ ರೇಡಿಯೋ ಆವರ್ತನ ಗುರುತು (ಆರ್‌ಎಫ್‌ಐಡಿ) ಅಳವಡಿಕೆ ಮಾಡಿದ್ದು, ಟ್ಯಾಂಕರ್‌ನಲ್ಲಿ ಎಷ್ಟು ಲೀಟರ್ ತುಂಬಿದೆ ಎಂಬುದನ್ನು ಲೆಕ್ಕಾಚಾರ ಮಾಡುವ ರೀತಿಯಲ್ಲಿ ಸಾಫ್ಟ್‌ವೇರ್ ರಚಿಸಲಾಗಿದೆ. ಈ ಮೂಲಕ ನೀರಿನ ಟ್ಯಾಂಕರ್‌ಗಳನ್ನು ಹುಡುಕುತ್ತಿರುವ ನಿರ್ದಿಷ್ಟ ಪ್ರದೇಶದಲ್ಲಿ ಅಪಾರ್ಟ್‌ಮೆಂಟ್‌ಗಳು ಅಥವಾ ವೈಯಕ್ತಿಕ ಮನೆಗಳಲ್ಲಿ ವಾಸಿಸುವ ಜನರ ಸಂಖ್ಯೆಯನ್ನು ಟ್ರೇಸ್ ಮಾಡುವುದಕ್ಕೆ ಜಲಮಂಡಳಿ ಮುಂದಾಗಿದೆ. ಏಕೆಂದರೆ, ಕಾವೇರಿ ನೀರಿನ ದುರುಪಯೋಗ ಆಗುವುದನ್ನು ತಡೆಗಟ್ಟಲು ಬುಕಿಂಗ್ ಮಿತಿಯನ್ನು ಕೂಡ ಅಳವಡಿಕೆ ಮಾಡಲಾಗುತ್ತದೆ ಎಂದು ರಾಮ್ ಪ್ರಸಾತ್ ಮನೋಹರ್ ತಿಳಿಸಿದರು.
ಇದನ್ನೂ ಓದಿ: ವಿಶ್ವವಿಖ್ಯಾತ ಬೆಂಗಳೂರು ಕರಗ ಮಹೋತ್ಸವ ಏ.4ರಿಂದ ಆರಂಭ; 'ಕರಗ ಶಕ್ತ್ಯೋತ್ಸವ' ವಿವರ ಬಿಚ್ಚಿಟ್ಟ ಬಿಬಿಎಂಪಿ!