
ಶಿವಮೊಗ್ಗ: ಕಸ್ತೂರಿ ರಂಗನ್ ವರದಿ ಕರಡು ಅಧಿಸೂಚನೆ ವಿರೋಧಿಸಿ ರಾಜ್ಯ ಸರ್ಕಾರ ನಿರ್ಣಯ ಕೈಗೊಳ್ಳಬೇಕು ಎಂದು ಮಾಜಿ ಶಾಸಕ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹರತಾಳು ಹಾಲಪ್ಪ ಒತ್ತಾಯಿಸಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರ 7ನೇ ಬಾರಿಗೆ ಕಸ್ತೂರಿ ರಂಗನ್ ವರದಿ ಜಾರಿ ಸಂಬಂಧ ಕರಡು ಅಧಿಸೂಚನೆಯನ್ನು ಹೊರಡಿಸಿದೆ. ಇದಕ್ಕೆ ಸಾರ್ವಜನಿಕರು, ಸಂಘ ಸಂಸ್ಥೆಗಳಿಂದ ಆಕ್ಷೇಪಣೆಯನ್ನೂ ಆಹ್ವಾನಿಸಿದೆ. ಇದೊಂದು ಅವೈಜ್ಞಾನಿಕ ಹಾಗೂ ಅಪ್ರಸ್ತುತ ವರದಿ ಆಗಿರುವ ಹಿನ್ನೆಲೆಯಲ್ಲಿ ವಿರೋಧ ಮಾಡಬೇಕಾಗಿದೆ ಎಂದರು.
ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅವಧಿಯಿಂದ ಹಿಡಿದು ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ಕೂಡ ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸಿ ನಿರ್ಣಯ ಕೈಗೊಳ್ಳಲಾಗಿತ್ತು. 2022ರಲ್ಲಿಯೂ ಒಮ್ಮೆ ಅಧಿಸೂಚನೆಯನ್ನು ಹೊರಡಿಸಲಾಗಿತ್ತು. ಈ ಹಿಂದೆ ಸಂಸದ ಬಿ.ವೈ ರಾಘವೇಂದ್ರ ನೇತೃತ್ವದಲ್ಲಿ ಕೇಂದ್ರ ಸಚಿವರಾಗಿದ್ದ ಶೋಭಾ ಕರಂದ್ಲಾಜೆ, ಪ್ರಹ್ಲಾದ ಜೋಷಿ ಅವರ ಜೊತೆಗೂಡಿ ಅಂದಿನ ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಸಮ್ಮುಖದಲ್ಲಿ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಅರಣ್ಯ ಮತ್ತು ಪರಿಸರ ಇಲಾಖೆಯ ಹಿರಿಯ ಅಧಿಕಾರಿಗಳು ಸೇರಿ ಚರ್ಚೆ ನಡೆಸಲಾಗಿತ್ತು. ಕರ್ನಾಟಕಕ್ಕೆ ಉಂಟಾಗಬಹುದಾದ ಗಂಭೀರ ಸಮಸ್ಯೆಗಳನ್ನು ಮನವರಿಕೆ ಮಾಡಲಾಗಿತ್ತು.
ವರದಿಯ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಿ, ಅದರ ವರದಿ ಬಂದ ನಂತರ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ಅಲ್ಲಿಯವರೆಗೆ ಕನಿಷ್ಠ ಒಂದು ವರ್ಷದ ಅವಧಿಗೆ ಪ್ರಕ್ರಿಯೆಯನ್ನು ಮುಂದೂಡಲಾಗುವುದು ಎಂದು ಕೇಂದ್ರ ಸಚಿವರು ಭರವಸೆ ನೀಡಿದ್ದರು. ಅಧಿಕಾರಿಗಳ ಸಮಿತಿ ರಚನೆಯಾಗಿತ್ತೇ ವಿನಃ ಅದರ ವರದಿ ಏನಾಯಿತು ಎಂಬುದು ನಂತರ ಸ್ಪಷ್ಟವಾಗಲಿಲ್ಲ. ಜನಪ್ರತಿನಿಧಿಗಳು ಹಾಗೂ ಸ್ಥಳೀಯರ ಅಭಿಪ್ರಾಯಗಳನ್ನು ಪಡೆದುಕೊಳ್ಳುವಂತೆ ಸೂಚಿಸಲಾಗಿದ್ದರೂ, ತಮ್ಮನ್ನು ಸಂಪರ್ಕಿಸಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಇದೀಗ ಸುಮಾರು ನಾಲ್ಕು ವರ್ಷಗಳಾಗಿವೆ. ಆದರೆ ಮತ್ತೆ ಏಳನೇ ಕರಡು ಅಧಿಸೂಚನೆ ಹೊರಡಿಸುವ ಮೂಲಕ ಸಮಸ್ಯೆಯನ್ನು ಮುನ್ನೆಲೆಗೆ ತರಲಾಗಿದೆ ಎಂದರು.
ರಾಜ್ಯ ಸರ್ಕಾರ ಇದನ್ನು ಆಕ್ಷೇಪಿಸಿ ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರವನ್ನು ಭೇಟಿ ಮಾಡಿ ಅಹವಾಲು ಸಲ್ಲಿಸಬೇಕು. ಕೇರಳ ಸರ್ಕಾರದ ಮಾದರಿಯನ್ನು ಇಲ್ಲಿ ಅನುಸರಿಸಬೇಕು. ಆಡಳಿತ ಪಕ್ಷ, ವಿರೋಧ ಪಕ್ಷ ಅಂತಲ್ಲ. ಎಲ್ಲರೂ ಇದನ್ನು ವಿರೋಧ ಮಾಡಬೇಕಾಗಿದೆ ಎಂದರು.
ಕರ್ನಾಟಕದಲ್ಲಿ ಪಶ್ಚಿಮ ಘಟ್ಟಗಳು 20,668 ಚದರ ಕಿಮೀ ವ್ಯಾಪ್ತಿಯನ್ನು ಹೊಂದಿವೆ. ಕರ್ನಾಟಕದ 1449 ಹಳ್ಳಿಗಳು ಇದರ ಅಡಿಯಲ್ಲಿ ಬರುತ್ತವೆ. ಶಿವಮೊಗ್ಗ ಜಿಲ್ಲೆಯಲ್ಲಿಯೇ 447 ಗ್ರಾಮಗಳನ್ನು ವರದಿ ಅಡಿಯಲ್ಲಿ ಗುರುತಿಸಲಾಗಿದೆ. ಇದು ಜಾರಿಗೆ ಬಂದರೆ ದೊಡ್ಡ ಅನಾಹುತವೇ ಆಗುತ್ತದೆ. ರೈತರಿಗೆ ತೊಂದರೆ ಆಗುತ್ತದೆ. ಕೃಷಿ ಚಟುವಟಿಕೆ ಮಾಡಲು ಆಗುವುದಿಲ್ಲ. ಇದು ಇನ್ನೊಂದು ಮುಳುಗಡೆ ಆಗಲಿದೆ ಎಂದರು.
ಮಲ್ಲಿಕಾರ್ಜುನ ಹಕ್ರೆ ಮಾತನಾಡಿ, ರಾಜ್ಯ ಸರ್ಕಾರ ಗುಟ್ಕಾ ನಿಷೇಧ ಮಾಡಲು ಹೊರಟಿರುವುದರಿಂದ ಅಡಿಕೆ ದರ ತೀವ್ರ ಕುಸಿತ ಕಂಡಿದೆ. ರಾಜ್ಯ ಸರ್ಕಾರ ಸಿಗರೇಟ್ ಲಾಭಿಗೆ ಮಣಿದು ಈ ಆದೇಶ ಜಾರಿಗೆ ತರಲು ಮುಂದಾಗಿದೆ ಎಂದು ಆರೋಪಿಸಿದರು.
ಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ಕೆ.ಜಗದೀಶ್, ಮಾಲತೇಶ್, ಎಸ್.ಚಂದ್ರಶೇಖರ್, ಎನ್.ಮಂಜುನಾಥ್, ದಿನೇಶ್ ಆಚಾರ್ಯ, ಶರತ್ ಕಲ್ಯಾಣಿ ಇದ್ದರು.
ಜಿಲ್ಲೆಯಲ್ಲಿ ಕಸ್ತೂರಿ ರಂಗನ್ ವರದಿಯ ವಿರುದ್ಧದ ಹೋರಾಟವನ್ನು ಸಹಕಾರಿ ಕ್ಷೇತ್ರದಲ್ಲಿ ಗುರುತಿಸಿಕೊಂಡವರು ಮಾಡುತ್ತಿದ್ದಾರೆ. ಇದು ರಾಜಕೀಯ ಹೋರಾಟವಾಗಬಾರದು. ಆಡಳಿತ ಪಕ್ಷ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳು, ಜನಪ್ರತಿನಿಧಿಗಳು, ರೈತರು, ಸ್ಥಳೀಯ ಸಂಸ್ಥೆಗಳು ಹಾಗೂ ಸಾರ್ವಜನಿಕರು ಪಕ್ಷಾತೀತವಾಗಿ ಒಂದಾಗಿ ಹೋರಾಡಬೇಕು. ಹೋರಾಟ ನಡೆಸುವುದರ ಜೊತೆಗೆ ಸರ್ಕಾರದ ಮೇಲೆ ಪರಿಣಾಮ ಬೀರುವ ರೀತಿಯಲ್ಲಿ ಕೇಂದ್ರದೊಂದಿಗೆ ಚರ್ಚಿಸಿ, ವರದಿಯನ್ನು ಹಿಂಪಡೆಯುವಂತೆ ಮಾಡುವುದು ಮುಖ್ಯ.
-ಹರತಾಳು ಹಾಲಪ್ಪ, ರಾಜ್ಯ ಬಿಜೆಪಿ ಉಪಾಧ್ಯಕ್ಷ.
ಶಿವಮೊಗ್ಗ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹಾಗೂ ಸಂಸದ ಬಿ.ವೈ. ರಾಘವೇಂದ್ರ ವಿರುದ್ದ ಅಡ್ಜೆಸ್ಟ್‌ಮೆಂಟ್ ರಾಜಕಾರಣದ ಆರೋಪ ಮಾಡಿರುವ ಮಾಜಿ ಸಚಿವ, ಬಿಜೆಪಿ ನಾಯಕ ಕುಮಾರ್ ಬಂಗಾರಪ್ಪ ಹೇಳಿಕೆಗೆ ಹರತಾಳು ಹಾಲಪ್ಪ ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದಾರೆ. ಸೊರಬದಲ್ಲಿ ಕುಮಾರ್ ಬಂಗಾರಪ್ಪ ಅವರು ಇತ್ತೀಚೆಗೆ ಬಿಜೆಪಿ ಹಾಗೂ ಪಕ್ಷದ ಪ್ರಮುಖ ನಾಯಕರ ವಿರುದ್ಧ ಮಾಡಿರುವ ಹೇಳಿಕೆಗಳ ಕುರಿತು ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಹಾಲಪ್ಪ, ‘ಅದನ್ನ ಮತ್ತೆ ಮಾತಾಡೋಣ. ನಮ್ಮ ಪಾರ್ಟಿ ಮೀಟಿಂಗ್ ನಡೆಯುತ್ತಿದೆ. ರಾಜ್ಯ ಕಾರ್ಯಕಾರಿಣಿ ಇದೆ’ ಎಂದು ಹೇಳಿ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದರು. ಈ ವಿಚಾರ ತಮ್ಮ ಗಮನಕ್ಕೆ ಬಂದಿದೆಯೇ, ಇಲ್ಲವೇ ಎಂದು ಪತ್ರಕರ್ತರು ಮರು ಪ್ರಶ್ನಿಸಿದಾಗ,‘ಸೋಮವಾರ, ಮಂಗಳವಾರ ಈ ಬಗ್ಗೆ ಮಾತಾಡೋಣ’ ಎಂದು ಉತ್ತರಿಸಿದರು.
ಈ ವೇಳೆ ಪ್ರಶ್ನೆಯನ್ನೇ ಹಾಸ್ಯವಾಗಿ ತಿರುಗಿಸಿದ ಹಾಲಪ್ಪ, ‘ನಾವು ಕಾನಿಗೆ ಬಂದಾಗ ಮೀನಿನ ಸುದ್ದಿ ಬೇಡ. ನಾವು ಕಾನಿಗೆ ಹೋದ್ರೆ ಮೀನು ಸಿಗುತ್ತಾ? ಅಲ್ಲಿ ಜೇನು ಹುಡುಕಬೇಕು’ ಎಂದು ಮಾರ್ಮಿಕವಾಗಿ ಹೇಳಿದರು. ಕಾಂಗ್ರೆಸ್‌ಗೆ ಹೋಗೋ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅದಕ್ಕೆ ಉತ್ತರ ಅದೇ... ನಾವ್ಯಾಕೆ ಹೋಗ್ತೀವಿ ಅಲ್ಲಿಗೆ ಎಂದು ಉತ್ತರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಹರತಾಳು ಹಾಲಪ್ಪ ಮಾತನಾಡಿದರು.