ರಾಜ್ಯದಲ್ಲಿ ಕ್ಯಾಸಿನೋ ತೆರೆಯಲು ಬಿಡುವುದಿಲ್ಲ: ಜನಪರ ವೇದಿಕೆ| ಕ್ಯಾಸಿನೋ ರೀತಿಯ ಜೂಜು ಕೇಂದ್ರ ನಮ್ಮ ಸಂಸ್ಕೃತಿಗೆ ವಿರೋಧವಾದದ್ದು| ಸರ್ಕಾರ ಪ್ರವಾಸೋದ್ಯಮವನ್ನು ಇಲ್ಲಿನ ಸಂಸ್ಕೃತಿ, ಪರಿಸರ ಹಾಗೂ ಇತಿಹಾಸವನ್ನು ಪ್ರವಾಸಿಗರಿಗೆ ತಿಳಿಸುವ ಮೂಲಕ ಅಭಿವೃದ್ಧಿ ಪಡಿಸಬೇಕು|
ಚನ್ನಪಟ್ಟಣ(ಫೆ.24): ಪ್ರವಾಸೋದ್ಯಮದ ಹೆಸರಿನಲ್ಲಿ ರಾಜ್ಯದಲ್ಲಿ ಜೂಜು ಕೇಂದ್ರ ತೆರೆಯುವ ಮೂಲಕ ನಾಡಿನ ಸಂಸ್ಕೃತಿಗೆ ಅಪಮಾನ ಮಾಡಲು ಮುಂದಾಗಿರುವ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಅವರನ್ನು ಕೂಡಲೇ ಸಂಪುಟದಿಂದ ಮುಖ್ಯಮಂತ್ರಿ ಕೈ ಬಿಡಬೇಕು ಎಂದು ಒತ್ತಾಯಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಪದಾಧಿಕಾರಿಗಳು ನಗರದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಇಲ್ಲಿನ ಅಂಚೆ ಕಚೇರಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ವೇದಿಕೆಯ ಕಾರ್ಯಕರ್ತರು, ಕ್ಯಾಸಿನೋ ರೀತಿಯ ಜೂಜು ಕೇಂದ್ರ ನಮ್ಮ ಸಂಸ್ಕೃತಿಗೆ ವಿರೋಧವಾದದ್ದು, ಸರ್ಕಾರ ಪ್ರವಾಸೋದ್ಯಮವನ್ನು ಇಲ್ಲಿನ ಸಂಸ್ಕೃತಿ, ಪರಿಸರ ಹಾಗೂ ಇತಿಹಾಸವನ್ನು ಪ್ರವಾಸಿಗರಿಗೆ ತಿಳಿಸುವ ಮೂಲಕ ಅಭಿವೃದ್ಧಿ ಪಡಿಸಬೇಕು. ಅದನ್ನು ಬಿಟ್ಟು ಜೂಜು ಕೇಂದ್ರವಾಗಿ ಪರದೇಶಿ ವಿಕೃತಿಯನ್ನು ಇಲ್ಲಿ ಹೇರಲು ಮುಂದಾಗಿರುವುದು ಸಾಧುವಲ್ಲ ಎಂದು ಕಿಡಿಕಾರಿದರು.
ಸರ್ಕಾರ ಬೀಳಿಸಿದವರಿಗೆ ಸಹಕಾರವೇ?:
ಹತ್ತು ತಿಂಗಳ ಹಿಂದೆ ದೋಸ್ತಿ ಸರ್ಕಾರವನ್ನು ಬೀಳಿಸಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ತರುವಲ್ಲಿ ಜೂಜು ಅಡ್ಡೆಗಳ ಕಿಂಗ್‌ಪಿನ್‌ಗಳು ಪ್ರಮುಖ ಪಾತ್ರ ವಹಿಸಿದ್ದು ಜಗಜ್ಜಾಹೀರವಾಗಿರುವ ಸಂಗತಿ. ಇದೀಗ, ದೋಸ್ತಿ ಸರ್ಕಾರ ಬೀಳಿಸಲು ನೆರವು ನೀಡಿದ ಜೂಜು ಅಡ್ಡೆಗಳ ಕಿಂಗ್‌ಪಿನ್‌ಗಳ ಋುಣ ತೀರಿಸಲು ಸರ್ಕಾರ ಈರೀತಿ ಮಾಡುತ್ತಿದೆಯೇ ಎಂದು ಪ್ರಶ್ನಿಸಿದ ಪ್ರತಿಭಟನಾಕಾರರು, ದೇಶ, ಧರ್ಮ, ಸಂಸ್ಕೃತಿ ಎಂದು ಮಾತು ಮಾತಿಗೂ ಹೇಳುವ ಬಿಜೆಪಿಯವರು ನಮ್ಮ ಸಂಸ್ಕೃತಿಯನ್ನು ಕಾಪಾಡುವುದು ಇದೇನಾ ಎಂದು ಅಣಕವಾಡಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಹಣ ಸಂಪಾದನೆಗಾಗಿ ಜೂಜು ಕೇಂದ್ರಗಳನ್ನು ತೆರೆದಿದ್ದೇ ಆದಲ್ಲಿ ನಾಡಿನಲ್ಲಿ ಅರಾಜಕತೆ ಸೃಷ್ಟಿಯಾಗುವ ಜತೆಗೆ ನಮ್ಮ ಸಂಸ್ಕೃತಿ ಮತ್ತು ಪರಂಪರೆಗೆ ದಕ್ಕೆಯಾಗುತ್ತದೆ. ಯುವ ಜನತೆ ಜೂಜಿನ ಮೋಜಿಗೆ ಬಿದ್ದು ಸಾಲದ ಸುಳಿಗೆ ಸಿಲುಕುತ್ತಾರೆ. ಕೆಲವೇ ಕೆಲವು ಜೂಜುಅಡ್ಡೆ ಕೋರರನ್ನು ಶ್ರೀಮಂತರಾಗಿಸಲು ಎಲ್ಲರ ಜೇಬಿಗೆ ಕನ್ನ ಹಾಕಲು ಸರ್ಕಾರವೇ ಮುಂದೆ ನಿಂತು ಸಹಕಾರ ನೀಡುವುದು ಸರಿಯಲ್ಲ, ಇಂತಹ ಕಾರ್ಯಕ್ಕೆ ನಮ್ಮ ಸಂಘಟನೆ ಯಾವುದೇ ಕಾರಣಕ್ಕೂ ಅವಕಾಶ ಮಾಡಿಕೊಡುವುದಿಲ್ಲ. ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದರು.
ಪ್ರತಿಭಟನೆಯ ನೇತೃತ್ವವನ್ನು ವೇದಿಕೆಯ ರಾಜ್ಯಾಧ್ಯಕ್ಷ ರಮೇಶ್‌ಗೌಡ ವಹಿಸಿದ್ದರು. ಕಕಜವೇ ಜಿಲ್ಲಾಧ್ಯಕ್ಷ ಬೇವೂರು ಯೋಗೀಶ್‌ಗೌಡ, ಡಾ.ರಾಜ್ ಕಲಾಬಳಗದ ಅಧ್ಯಕ್ಷ ಹೆಚ್.ಮಂಜುನಾಥ್,ಮಾಜಿ ನಗರಸಭಾ ಸದಸ್ಯರಾದ ಎಸ್.ಉಮಾಶಂಕರ್, ಜೆ.ಸಿ.ಬಿ. ಲೋಕೇಶ್, ಕಕಜವೇಯ ಮಹಿಳಾ ವಿಭಾಗದ ರೋಸಿ, ರಾಜೇಶ್, ನರಸಿಂಹ,ಚಿಕ್ಕಣ್ಣ, ಪ್ರಕಾಶ್,ಸತೀಶ್, ಶಿವಣ್ಣ, ನಾಗೇಶ್, ಸಿದ್ದಪ್ಪ ಮುಂತಾದವರು ಭಾಗವಹಿಸಿದ್ದರು.