'ಕೃಷ್ಣದೇವರಾಯ ಜಯಂತಿ ಮಾಡ್ತಾರೆ, ಶಿವಾಜಿ ಜಯಂತಿ ಏಕಿಲ್ಲ?

By Kannadaprabha NewsFirst Published Feb 24, 2020, 9:36 AM IST
Highlights

ಮರಾಠರನ್ನು 2ಎಗೆ ಸೇರಿಸಲೇಬೇಕು| ಮಾಜಿ ಸಚಿವ ಪಿಜಿಆರ್‌ ಸಿಂಧ್ಯ ಒತ್ತಾಯ|ಶಿವಾಜಿ ಜಯಂತಿಗೆ ಜನಪ್ರತಿನಿಧಿಗಳು ಗೈರಾಗಿರುವುದಕ್ಕೆ ಪಿಜಿಆರ್‌ ಸಿಂಧ್ಯ ಅಸಮಾಧಾನ| ಬೆಳಗಾವಿಯ ಮರಾಠರು ಕನ್ನಡಿಗರೇ. ನಮ್ಮ ಉಸಿರು ಕನ್ನಡವೇ. ರಾಜಕಾರಣಿಗಳು ಇದನ್ನು ಅರ್ಥ ಮಾಡಿಕೊಳ್ಳಬೇಕು|

ಬೆಂಗಳೂರು(ಫೆ.24): ದೇಶದಲ್ಲಿ ಮೊದಲ ಬಾರಿಗೆ ಶಿವಾಜಿ ವಂಶಸ್ಥ ಕೊಲ್ಹಾಪುರದ ಸಾಹು ಮಹಾರಾಜ ದಲಿತರು, ಅಲ್ಪಸಂಖ್ಯಾತರರು, ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕೊಟ್ಟರು. ಅಂತಹ ವಂಶದಲ್ಲಿ ಹುಟ್ಟಿರುವ ಮರಾಠರನ್ನು ಪ್ರವರ್ಗ 2ಎಗೆ ಸೇರಿಸಲೇಬೇಕು ಎಂದು ಮಾಜಿ ಸಚಿವ ಪಿಜಿಆರ್‌ ಸಿಂಧ್ಯ ಆಗ್ರಹಿಸಿದ್ದಾರೆ.

ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್‌ ಭಾನುವಾರ ಕೆಕೆಎಂಪಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ‘ಛತ್ರಪತಿ ಶಿವಾಜಿ ಮಹಾರಾಜರ 393ನೇ ಜಯಂತ್ಯುತ್ಸವ’ದಲ್ಲಿ ಮಾತನಾಡಿದ ಅವರು, ಮರಾಠರೆಲ್ಲ ಮಹಾರಾಷ್ಟ್ರದಲ್ಲೇ ಇರಬೇಕು ಎಂಬ ನಿಯಮವಿಲ್ಲ. ಶಿವಾಜಿ ಮಹಾರಾಜರು ದೇಶದ ಹಲವೆಡೆ ಓಡಾಡಿದ್ದಾರೆ. ಬೆಳಗಾವಿಯ ಮರಾಠರು ಕನ್ನಡಿಗರೇ. ನಮ್ಮ ಉಸಿರು ಕನ್ನಡವೇ. ರಾಜಕಾರಣಿಗಳು ಇದನ್ನು ಅರ್ಥ ಮಾಡಿಕೊಳ್ಳಬೇಕು. ಸಮಾನತೆ, ದೇಶಭಕ್ತಿಯ ಬಗ್ಗೆ ಯಾರು ಹೇಳುವ ಅಗತ್ಯವಿಲ್ಲ. ಇವತ್ತು ಭಾರತ ಮಾತಾಕೀ ಜೈ ಎನ್ನುವ ಶಕ್ತಿ ಬರಲು ಶಿವಾಜಿ ಕಾರಣ. ಹೀಗಾಗಿ ಶಿವಾಜಿಯ ಹೆಸರಿನಲ್ಲಿ ಮರಾಠರು ಒಂದಾಗಬೇಕು. ರಾಜಕೀಯ ಶಕ್ತಿ ಬೆಳೆಸಿಕೊಳ್ಳಬೇಕು. ತಾವು ಬೆಳೆಯುವುದರ ಜತೆಗೆ ಇತರೆ ಸಮುದಾಯಗಳನ್ನು ಜತೆಯಲ್ಲಿ ಕರೆದೊಯ್ಯಬೇಕು ಎಂದು ಹೇಳಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

‘ಶಿವಾಜಿ ಮಹಾರಾಜರು 12ನೇ ವರ್ಷದಲ್ಲಿ  ಬೆಂಗಳೂರಿನಲ್ಲಿ ನೆಲೆಸಿದ್ದರು. ಶಿವಾಜಿ ತಂದೆ ಶಹಾಜಿ ಅವರು ಮಲ್ಲೇಶ್ವರದ ಶಿವನ ದೇವಸ್ಥಾನ ಜೀರ್ಣೋದ್ಧಾರ ಮಾಡಿದ್ದರು. ತಿಳಿವಳಿಕೆ ಇಲ್ಲದರು ಶಿವಾಜಿ ಹಾಗೂ ಶಹಾಜಿ ವಿರುದ್ಧ ಮಾತನಾಡುತ್ತಾರೆ. ಶಿವಾಜಿ ಜಯಂತಿ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಾರೆ. ಶಹಾಜಿ ವಿಜಯಪುರ ಸುಲ್ತಾನರ ಬಳಿ ಇದ್ದಾಗ ಬೆಂಗಳೂರಿನ ಕೆಂಪೇಗೌಡರ ವಿರುದ್ಧ ಯುದ್ಧ ಮಾಡಿ ಸೋಲಿಸುತ್ತಾನೆ. ಈ ವೇಳೆ ಕೆಂಪೇಗೌಡರನ್ನು ಜೈಲಿಗೆ ಹಾಕದೆ ಬಿಟ್ಟು ಹೋಗುತ್ತಾನೆ. ಅದೇ ವಿಜಯನಗರದ ಕೃಷ್ಣದೇವರಾಯ ಕೆಂಪೇಗೌಡರನ್ನು ಸೋಲಿಸಿ, ಆರು ವರ್ಷಗಳ ಕಾಲ ಜೈಲಿಗೆ ಹಾಕುತ್ತಾನೆ. ಇಂತಹ ಕೃಷ್ಣದೇವರಾಯರ ಜಯಂತಿ ಮಾಡಬಹುದು. ಮೊಘಲರು ದೇಶವನ್ನು ಕೊಳ್ಳೆ ಹೊಡೆಯುವಾಗ ಅವರ ವಿರುದ್ಧ ದಿಟ್ಟತನದಿಂದ ಹೋರಾಡಿದ ಶಿವಾಜಿಯ ಜಯಂತಿ ಮಾಡಿದರೆ ತಪ್ಪೇನು?’ ಎಂದರು.

ಕೆಕೆಎಂಪಿ ಅಧ್ಯಕ್ಷ ಎಸ್‌.ಸುರೇಶ್‌ರಾವ್‌ ಸಾಠೆ, ಗೌರವ ಅಧ್ಯಕ್ಷ ವಿ.ಎ.ರಾಣೋಜಿರಾವ್‌ ಸಾಠೆ, ಗೋಸಾಯಿ ಮಹಾಸಂಸ್ಥಾನ ಮಠದ ಮಂಜುನಾಥ ಸ್ವಾಮೀಜಿ, ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ ವಿ. ಮಾನೆ, ಪಾಲಿಕೆ ಸದಸ್ಯರಾದ ಎಸ್‌.ಸಂಪತ್‌ಕುಮಾರ್‌, ಆರ್‌.ಗಣೇಶ್‌ರಾವ್‌ ಮಾನೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ರಾಜಕಾರಣಿಗಳು ಗೈರು: ಸಿಂಧ್ಯ ಅಸಮಾಧಾನ

ಶಿವಾಜಿ ಜಯಂತಿಗೆ ಜನಪ್ರತಿನಿಧಿಗಳು ಗೈರಾಗಿರುವುದಕ್ಕೆ ಪಿಜಿಆರ್‌ ಸಿಂಧ್ಯ ಅಸಮಾಧಾನ ಹೊರಹಾಕಿದರು. ಮರಾಠರು ಬೆಂಗಳೂರಿನಲ್ಲಿ ರಾಜಕೀಯ ಶಕ್ತಿ ಕಳೆದುಕೊಂಡಿರುವುದರಿಂದ ಸರ್ಕಾರ ಹಾಗೂ ರಾಜಕಾರಣಿಗಳು ಸಮುದಾಯವನ್ನು ನಿರ್ಲಕ್ಷ್ಯಿಸಿದ್ದಾರೆ. ಅದೇ ಬೆಳಗಾವಿ, ಹುಬ್ಬಳ್ಳಿ ಮೊದಲಾದ ಕಡೆ ಶಿವಾಜಿ ಜಯಂತಿ ಮಾಡಿದ್ದರೆ ಗೈರಾಗುತ್ತಿದ್ದರಾ, ಹೀಗಾಗಿ ಮರಾಠಿಗರು ಸಂಘಟಿತರಾಗಿ ರಾಜಕೀಯವಾಗಿ ಬೆಳೆಯಬೇಕು ಎಂದು ಹೇಳಿದರು.

click me!