ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ನಿಲಯದಲ್ಲಿ ಕಳೆದ 8 ದಿನಗಳಿಂದ ಊಟಕ್ಕಾಗಿ ಪರದಾಡುತ್ತಿರುವ ವಿದ್ಯಾರ್ಥಿನಿಯರು| ಒಮ್ಮೊಮ್ಮೆ ಹಸಿವು ತಾಳಲಾರದೇ ತಲೆಸುತ್ತು ಬಂದು ಕುಸಿದು ಬೀಳುತ್ತಿರುವ ವಿದ್ಯಾರ್ಥಿನಿಯರು| ತಾಲೂಕಿನ ವಿವಿಧ ಭಾಗಗಳಿಂದ 100 ವಿದ್ಯಾರ್ಥಿನಿಯರು ಈ ವಸತಿ ಶಾಲೆಯಲ್ಲಿ ಪ್ರವೇಶ ಪಡೆದಿದ್ದಾರೆ| ಪ್ರತಿ ತಿಂಗಳು ಪ್ರತಿ ವಿದ್ಯಾರ್ಥಿನಿಯ ಊಟ, ಉಪಹಾರಕ್ಕಾಗಿ ಸರ್ಕಾರ 1470 ರೂ. ಹಣವನ್ನು ಗುತ್ತಿಗೆದಾರರಿಗೆ ನೀಡುತ್ತಿದೆ|
ಸಿರುಗುಪ್ಪ:(ಸೆ.28) ತಾಲೂಕಿನ ತೆಕ್ಕಲಕೋಟೆಯಲ್ಲಿರುವ ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ನಿಲಯದಲ್ಲಿರುವ ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ಗುತ್ತಿಗೆದಾರರಿಂದ ಆಹಾರ ಸಾಮಗ್ರಿಗಳು ಪೂರೈಕೆಯಾಗದೇ ಕಳೆದ 8 ದಿನಗಳಿಂದ ಊಟಕ್ಕಾಗಿ ಪರದಾಡುತ್ತಿದ್ದಾರೆ! ಒಮ್ಮೊಮ್ಮೆ ಹಸಿವು ತಾಳಲಾರದೇ ವಿದ್ಯಾರ್ಥಿನಿಯರು ತಲೆಸುತ್ತು ಬಂದು ಕುಸಿದು ಬೀಳುತ್ತಿದ್ದಾರೆ!
6 ರಿಂದ 8ನೇ ತರಗತಿಯಲ್ಲಿ ಓದಲು ತಾಲೂಕಿನ ವಿವಿಧ ಭಾಗಗಳಿಂದ ಬಂದ 100 ವಿದ್ಯಾರ್ಥಿನಿಯರು ಈ ವಸತಿ ಶಾಲೆಯಲ್ಲಿ ಪ್ರವೇಶ ಪಡೆದಿದ್ದಾರೆ. ಪ್ರತಿ ತಿಂಗಳು ಪ್ರತಿ ವಿದ್ಯಾರ್ಥಿನಿಯ ಊಟ, ಉಪಹಾರಕ್ಕಾಗಿ ಸರ್ಕಾರ 1470 ರೂ. ಹಣವನ್ನು ಗುತ್ತಿಗೆದಾರರಿಗೆ ನೀಡುತ್ತಿದೆ. ಈ ಹಣದಲ್ಲಿ ಊಟ, ಉಪಹಾರ, ಚಹಾ, ಹಣ್ಣು, ಮಾಂಸ, ಮೊಟ್ಟೆ, ಬಿಸ್ಕೀಟ್ ನೀಡಬೇಕೆಂಬ ಷರತ್ತು ವಿಧಿಸಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಬಳ್ಳಾರಿಯ ‘ಶ್ರೀಮಹಾಲಕ್ಷ್ಮೀ ಮಲ್ಟಿಪರ್ಪಸ್ ರೂರಲ್ ಆ್ಯಂಡ್ ಅರ್ಬನ್ ಸೊಸೈಟಿ’ಯಿಂದ ಗುತ್ತಿಗೆ ಪಡೆದ ಈ ಸಂಸ್ಥೆಯ ಅಧ್ಯಕ್ಷೆ ವೆಂಕಟಲಕ್ಷ್ಮೀ ಕಳೆದ ಒಂದು ವರ್ಷದಿಂದ ವಸತಿ ನಿಲಯದ ವಿದ್ಯಾರ್ಥಿನಿಯರಿಗೆ ಸರ್ಕಾರ ನಿಗದಿ ಪಡಿಸಿದಂತೆ ಆಹಾರ ಪದಾರ್ಥಗಳನ್ನು ಪೂರೈಸದೆ, ಕೇವಲ 15 ದಿನಕ್ಕೆ ಆಗುವಷ್ಟು ಸಾಮಗ್ರಿಗಳನ್ನು ವಿತರಿಸುತ್ತಿದ್ದಾರೆ. ಇದರಿಂದ ಉಳಿದ 15 ದಿನಗಳು ಅಕ್ಕಿ, ಗೋದಿ, ರಾಗಿ, ತರಕಾರಿಯನ್ನು ಬಿಟ್ಟು ಬೇರೇನೂ ಇಲ್ಲದೇ ಇರುವುದರಿಂದ ಇದ್ದುದರಲ್ಲಿಯೇ ಅನ್ನ ತಯಾರಿಸುತ್ತಾರೆ. ಸಾಂಬಾರು ತಯಾರಿಸಲು ಬೇಕಾದ ತೊಗರಿಬೇಳೆ, ಎಣ್ಣೆ, ಮಸಾಲೆ ಪದಾರ್ಥಗಳು ಇಲ್ಲದೇ ಇರುವುದರಿಂದ ಉಳಿದ ತರಕಾರಿಯಲ್ಲಿ ಚಟ್ನಿ, ಮಜ್ಜಿಗೆ ಊಟಕ್ಕೆ ನೀಡುತ್ತಿದ್ದಾರೆ. ಚಹಾ, ಹಣ್ಣು, ಮಾಂಸ, ಮೊಟ್ಟೆ, ಬಿಸ್ಕೀಟ್ ನೀಡುತ್ತಿಲ್ಲವಂತೆ.
ನಮಗೆ ಮೆನು ಪ್ರಕಾರ ಊಟ ನೀಡುತ್ತಿಲ್ಲ. ಪ್ರತಿ ದಿನ ಅನ್ನ ಚಟ್ನಿ, ಮಜ್ಜಿಗೆ ಕೊಡುತ್ತಾರೆ. ಟೀ, ಬಿಸ್ಕೀಟ್, ಹಣ್ಣುಗಳು, ಮೊಟ್ಟೆ, ಮಾಂಸ ಕೊಡುವುದನ್ನು ಮರೆತೇ ಬಿಟ್ಟಿದ್ದಾರೆ. ಅನ್ನ, ಚಟ್ನಿ, ಮಜ್ಜಿಗೆ ಪ್ರತಿ ದಿನ ತಿಂದು ಸಾಕಾಗಿದೆ. ಇದರಿಂದಾಗಿ ಕೆಲವರು ಊಟ ಮಾಡಲಾಗದೇ ಇರುವುದರಿಂದ ತಲೆಸುತ್ತಿ ಬೀಳುತ್ತಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ನಮ್ಮ ಬಗ್ಗೆ ಕಾಳಜಿ ತೆಗೆದುಕೊಂಡು ಮೆನು ಪ್ರಕಾರ ಆಹಾರ ನೀಡುವಂತೆ ಗುತ್ತಿಗೆದಾರರಿಗೆ ತಿಳಿಸಿದರೆ ನಮಗೆ ಅನುಕೂಲವಾಗುತ್ತದೆ ಎಂದು ವಿದ್ಯಾರ್ಥಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಈ ಬಗ್ಗೆ ಮಾತನಾಡಿದ ವಸತಿ ಶಾಲೆಯ ಮುಖ್ಯ ಗುರುಮಾತೆ ಶ್ರೀಲತಾ ಬಾಯಿ ಅವರು, ಗುತ್ತಿಗೆದಾರರಿಗೆ ಸಮರ್ಪಕ ಆಹಾರ ಸಾಮಗ್ರಿ ಪೂರೈಸಲು ಫೋನ್ ಮಾಡಿದರೂ ಕರೆ ಸ್ವೀಕರಿಸುವುದಿಲ್ಲ. ಈ ಬಗ್ಗೆ ಬಳ್ಳಾರಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗೆ 6 ಬಾರಿ ಪತ್ರ ಬರೆದಿದ್ದೇವೆ. ಎರಡು ಬಾರಿ ಖುದ್ದು ಉಪನಿರ್ದೇಶಕರನ್ನು ಭೇಟಿ ಮಾಡಿ ಇಲ್ಲಿನ ಸಮಸ್ಯೆ ಬಗ್ಗೆ ಮಾಹಿತಿ ನೀಡಿದ್ದೇನೆ ಎಂದು ತಿಳಿಸಿದ್ದಾರೆ.
ಇನ್ನು ಈ ಬಗ್ಗೆ ಮಾಹಿತಿ ನೀಡಿದ ಬಿಇಒ ಪಿ.ಡಿ. ಭಜಂತ್ರಿ ಅವರು, ವಿದ್ಯಾರ್ಥಿಗಳಿಗೆ ಊಟ, ಉಪಾಹಾರಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಲು ಮುಖ್ಯಗುರುಗಳಿಗೆ ತಿಳಿಸಿದ್ದೇನೆ. ಈ ಸಮಸ್ಯೆ ಬಗ್ಗೆ ಗುತ್ತಿಗೆದಾರರಿಗೆ ನಾನು ಕರೆ ಮಾಡಿದರೂ ಅವರು ಕರೆ ಸ್ವೀಕರಿಸುತ್ತಿಲ್ಲ. ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಪತ್ರ ಬರೆದು ಸಮಸ್ಯೆ ಪರಿಹರಿಸುವಂತೆ ಕೇಳಿಕೊಂಡಿದ್ದೇನೆ ಎಂದು ಹೇಳಿದ್ದಾರೆ.