ಮತ್ತೊಂದು ಚುನಾವಣೆಗೆ ಸಜ್ಜಾಗುತ್ತಿದೆ ತುಮಕೂರು

ತುಮಕೂರು ಜಿಲ್ಲೆ ಇದೀಗ ಮತ್ತೊಂದು ಚುನಾವಣೆಗೆ ಸಜ್ಜಾಗುತ್ತಿದೆ. ಶೀಘ್ರದಲ್ಲೇ ಚುನಾವಣೆ ನಡೆಯುತ್ತಿದ್ದು, ಅಭ್ಯರ್ಥಿಗಳು ಕಸರತ್ತು ಆರಂಭಿಸಿದ್ದಾರೆ. 


  ತುಮಕೂರು (ಏ.06):  10 ತಾಲೂಕು ಒಳಗೊಂಡು 12 ಸಾವಿರಕ್ಕೂ ಹೆಚ್ಚು ಮತದಾರರಿರುವ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಜಿಲ್ಲಾ ಕಸಾಪಗೆ ಚುನಾವಣೆಗೆ ಕಲ್ಪತರು ಜಿಲ್ಲೆ ಸಜ್ಜಾಗಿದೆ.

ಈಗಾಗಲೇ ನಾಮಪತ್ರ ಪ್ರಕ್ರಿಯೆ ನಡೆದಿದ್ದು ಮೇ 9 ರಂದು ಚುನಾವಣೆ ನಡೆಯಲಿದೆ. ಕಳೆದ ಬಾರಿ ಬಾ. ಹ. ರಮಾಕುಮಾರಿ ಅವರು ಸ್ಪರ್ಧಿಸಿ ಜಯಶಾಲಿಯಾಗಿದ್ದರು. ನ್ಯಾಯಾಲಯ ಮತ್ತಿತರ ಕಾರಣದಿಂದಾಗಿ 3 ವರ್ಷದ ಅವಧಿ ಐದು ವರ್ಷಕ್ಕೆ ಮುಂದುವರೆಯಿತು. ಈಗ ಚುನಾವಣೆ ಘೋಷಣೆಯಾಗಿದ್ದು ಅಭ್ಯರ್ಥಿಗಳು ಮತದಾರರ ಮನವೊಲಿಸಲು ಕಸರತ್ತು ಆರಂಭಿಸಿದ್ದಾರೆ.

Latest Videos

'ಮಸ್ಕಿ ಚುನಾವಣೆಗೆ ಬಿಜೆಪಿಯಿಂದ 50 ಕೋಟಿ ಖರ್ಚು, ಪ್ರತಾಪಗೌಡ 30 ಕೋಟಿ ರೂ. ಗೆ ಸೇಲ್' ...

ಯಾರಾರ‍ಯರು ಕಣದಲ್ಲಿ:  ಮೇ 9 ರಂದು ನಡೆಯಲಿರುವ ಜಿಲ್ಲಾ ಕಸಾಪ ಚುನಾವಣೆಗೆ ಲೇಖಕಿ ಶೈಲಾ ನಾಗರಾಜ್‌, ದೇವರಾಜ, ಕೆ.ಎಸ್‌. ಸಿದ್ದಲಿಂಗಪ್ಪ, ಚಂದ್ರಪ್ಪ, ಪುಟ್ಟಕಾಮಣ್ಣ ಅವರು ಸ್ಪರ್ಧಿಸಲಿದ್ದಾರೆ. ಈಗಾಗಲೇ ಎಲ್ಲರೂ ಪ್ರಚಾರದಲ್ಲಿ ನಿರತರಾಗಿದ್ದಾರೆ. 10 ತಾಲೂಕುಗಳನ್ನೊಳಗೊಂಡ ತುಮಕೂರು ಅತ್ಯಂತ ದೊಡ್ಡ ಜಿಲ್ಲೆಯಾಗಿದ್ದು ಸುಡು ಬಿಸಿಲು ಹಾಗೂ ಕೊರೋನಾ 2ನೇ ಅಲೆ ನಡುವೆ ಅಭ್ಯರ್ಥಿಗಳು ಪ್ರಚಾರ ನಡೆಸಿದ್ದಾರೆ.

ಮತದಾರರು ಯಾರು ಹೆಚ್ಚು:  ಜಿಲ್ಲೆಯ ಪ್ರಾತಿನಿಧಿಕ ಸಂಸ್ಥೆಯಾದ ಕಸಾಪಗೆ ಜಿಲ್ಲೆಯಲ್ಲಿ ಸಾಹಿತಿಗಳಿಗಿಂತ ಅತಿ ಹೆಚ್ಚು ಮತದಾರರು ಶಿಕ್ಷಕರು, ಉಪನ್ಯಾಸಕರು ಇದ್ದಾರೆ. ಹೀಗಾಗಿ ಶಿಕ್ಷಕ ಕ್ಷೇತ್ರದಲ್ಲಿರುವ ಮೂರು ಬಂದಿ ಕಣದಲ್ಲಿದ್ದಾರೆ. ಡಿಡಿಯಾಗಿ ನಿವೃತ್ತಿಯಾಗಿರುವ ಕೆ.ಎಸ್‌. ಸಿದ್ಧಲಿಂಗಪ್ಪ, ದೇವರಾಜು ಹಾಗೂ ಆರ್‌.ವಿ. ಪುಟ್ಟಕಾಮಣ್ಣ ಅವರು ಶಿಕ್ಷಕರ ಮತಗಳನ್ನು ನಂಬಿ ಕಣದಲ್ಲಿದ್ದಾರೆ. ಹಾಗೆಯೇ ಕಳೆದ ಬಾರಿ 35 ವರ್ಷಗಳಿಂದ ಮಹಿಳೆಯೊಬ್ಬರು ಕಸಾಪ ಅಧ್ಯಕ್ಷರಾಗಿಲ್ಲವೆಂಬ ಉದ್ಘೋಷದೊಂದಿಗೆ ಬಾ. ಹ. ರಮಾಕುಮಾರಿ ಅವರು ಪ್ರಚಾರಕ್ಕೆ ಇಳಿದಿದ್ದರು. ಆ ಚುನಾವಣೆಯಲ್ಲಿ ರಮಾಕುಮಾರಿ ಗೆದ್ದರು ಕೂಡ. ಈಗ ಮತ್ತೆ ಮಹಿಳೆಯೊಬ್ಬರು ಕಣದಲ್ಲಿದ್ದಾರೆ. ಮಹಿಳಾ ಸಂಘಟಕಿಯಾಗಿ ಗುರುತಿಸಿಕೊಂಡಿರುವ ಶೈಲಾ ನಾಗರಾಜ್‌ ಪ್ರಚಾರದಲ್ಲಿ ತೊಡಗಿದ್ದಾರೆ. ಹಾಗೆಯೇ ನೀರಾವರಿ, ರೈಲು ಹೋರಾಟದಲ್ಲಿ ತೊಡಗಿಸಿಕೊಂಡಿರುವ ಹಾಗೂ ಶಿರಾ ತಾಲೂಕು ಕಸಾಪ ಮಾಜಿ ಅಧ್ಯಕ್ಷ ಪುಟ್ಟಕಾಮಣ್ಣ ಕೂಡ ಪ್ರಚಾರದಲ್ಲಿ ನಿರತರಾಗಿದ್ದಾರೆ. ಇನ್ನು ಒಂದು ಬಾರಿ ಕಸಾಪ ಜಿಲ್ಲಾಧ್ಯಕ್ಷರಾಗಿರುವ ಮೇಜರ್‌ ಡಿ. ಚಂದ್ರಪ್ಪ ಕೂಡ ಪ್ರಚಾರದಲ್ಲಿ ತೊಡಗಿದ್ದಾರೆ. ಉಳಿದಂತೆ ಶಿಕ್ಷಕ ಮತದಾರ ಮತ ನಂಬಿಕೊಂಡು ಕೆ.ಎಸ್‌. ಸಿದ್ದಲಿಂಗಪ್ಪ ಹಾಗೂ ದೇವರಾಜ್‌ ಕೂಡ ಸ್ಪರ್ಧಿಸುತ್ತಿದ್ದಾರೆ.

ಈಗಾಗಲೇ ಚುನಾವಣೆ ಬಿರುಸಿನಿಂದ ಕೂಡಿದ್ದು ಇನ್ನು ವಾರದ ಬಳಿಕ ಮತ್ತಷ್ಟುಕಾವು ಪಡೆಯಲಿದೆ. ಈಗಾಗಲೇ ರಾಜ್ಯ ಮಟ್ಟದಲ್ಲಿ ಯಾರ ಜೊತೆ ಗುರುತಿಸಿಕೊಳ್ಳಬೇಕೆಂದ ಚರ್ಚೆಯಲ್ಲಿ ಜಿಲ್ಲಾ ಅಭ್ಯರ್ಥಿಗಳು ತೊಡಗಿದ್ದು ಮುಂದಿನ 2 ವಾರದಲ್ಲಿ ಇದಕ್ಕೆ ಸ್ಪಷ್ಟರೂಪ ದೊರೆಯಲಿದೆ. ಈಗಾಗಲೇ ಅಭ್ಯರ್ಥಿಗಳು 10 ತಾಲೂಕುಗಳಲ್ಲಿ ಪ್ರಚಾರ ನಡೆಸಿದ್ದು ಮುಂದೆ ಮತ್ತಷ್ಟುಕಾವು ಪಡೆಯಲಿದೆ.

click me!