
ಉತ್ತರ ಕನ್ನಡ (ಜ.24): ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ಸದ್ಬಳಕೆಗಿಂತ ಹೆಚ್ಚಾಗಿ ಬೇರೊಬ್ಬರ ಮಾನಸಿಕ ಸ್ಥೈರ್ಯ ಕುಗ್ಗಿಸಲು ಹೇಗೆ ಬಳಕೆಯಾಗುತ್ತಿವೆ ಎಂಬುದಕ್ಕೆ ಅಂಕೋಲಾ ತಾಲೂಕಿನ ಆವರ್ಸಾದಲ್ಲಿ ನಡೆದ ಘಟನೆಯೇ ಸಾಕ್ಷಿಯಾಗಿದೆ. ಕಳೆದ ಹದಿನೈದು ದಿನಗಳಿಂದ ವಿಡಿಯೋ ವೈರಲ್ ಆತಂಕದಲ್ಲಿದ್ದ ಫಾರ್ಮಾಸಿಸ್ಟ್ ಒಬ್ಬರು ತಮ್ಮ ಜೀವನವನ್ನು ಅಕಾಲಿಕವಾಗಿ ಕೊನೆಗೊಳಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೊಲೀಸರು ಈಗ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಕಾರವಾರದ ಖ್ಯಾತ ಪಿಕಳೆ ನರ್ಸಿಂಗ್ ಹೋಂನಲ್ಲಿ ಔಷಧ ವಿತರಣಾ ವಿಭಾಗದಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ರಾಜೀವ್ (ರಾಜು) ಪಿಕಳೆ (67) ಅವರು ಅತ್ಯಂತ ಪ್ರಾಮಾಣಿಕ ಹಾಗೂ ಮೃದು ಸ್ವಭಾವದ ವ್ಯಕ್ತಿಯಾಗಿದ್ದರು. ಸುಮಾರು 15 ದಿನಗಳ ಹಿಂದೆ ಔಷಧ ನೀಡುವಾಗ ಕಣ್ತಪ್ಪಿನಿಂದ ಅವಧಿ ಮೀರಿದ ಮಾತ್ರೆ ನೀಡಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು. ಈ ವೇಳೆ ರಾಜೀವ್ ಅವರು ಇದು ಮಾನವ ಸಹಜ ಕಣ್ತಪ್ಪಿನಿಂದಾದ ಪ್ರಮಾದ ಎಂದು ಒಪ್ಪಿಕೊಂಡು ಸಾರ್ವಜನಿಕವಾಗಿ ಕ್ಷಮೆಯನ್ನೂ ಯಾಚಿಸಿದ್ದರು.
ಆದರೆ, ಅಲ್ಲಿಗೆ ವಿವಾದ ನಿಲ್ಲಲಿಲ್ಲ. ಅಪರಿಚಿತ ವ್ಯಕ್ತಿಯೊಬ್ಬರು ಗುಪ್ತವಾಗಿ ಈ ದೃಶ್ಯವನ್ನು ಚಿತ್ರೀಕರಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದರು. ಈ ವಿಡಿಯೋ ವ್ಯಾಪಕವಾಗಿ ಹಂಚಿಕೆಯಾದ ಕಾರಣ, ಸಮಾಜಕ್ಕೆ ಮುಖ ತೋರಿಸಲು ಮುಜುಗರ ಅನುಭವಿಸುತ್ತಿದ್ದ ರಾಜೀವ್ ಅವರು ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಕಳೆದ 30 ವರ್ಷಗಳಿಂದ ಅತ್ಯಂತ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾ ಬಂದರೂ, ಕೇವಲ ಒಂದು ಕಣ್ತಪ್ಪಿನಿಂದ ಆಗಿರುವ ತಪ್ಪು ಇಡೀ ತನ್ನ ಜೀವಮಾನದ ಪ್ರಾಮಾಣಿಕತೆಗೇ ಕಪ್ಪು ಚುಕ್ಕೆಯಾಯಿತು ಎಂದು ಮನನೊಂದು, ಮನೆಯ ಆವರಣದ ಮುಂದೆ ತುಳಸಿ ಗಿಡದ ಪಕ್ಕದಲ್ಲಿ ನಿಂತು ಡಬಲ್ ಬ್ಯಾರಲ್ ಬಂದೂಕಿನಿಂದ ತಲೆಗೆ ಗುಂಡು ಹೊಡೆದುಕೊಂಡು ಪ್ರಾಣವನ್ನೇ ಬಿಟ್ಟಿದ್ದಾರೆ.
ಈ ದುರದೃಷ್ಟಕರ ಘಟನೆಗೆ ಕಾರಣರಾದವರನ್ನು ಪತ್ತೆ ಹಚ್ಚುವಲ್ಲಿ ಅಂಕೋಲಾ ಪೊಲೀಸರು ಯಶಸ್ವಿಯಾಗಿದ್ದಾರೆ. ಕಾರವಾರ ತಾಲೂಕಿನ ವೈಲವಾಡ ಗ್ರಾಮದ ಸುಭಾಷ್, ಹರಿಶ್ಚಂದ್ರ ಹಾಗೂ ಅನಿಲ್ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕ್ಷಮೆ ಕೇಳಿದ ಮೇಲೆಯೂ ವಿಡಿಯೋ ವೈರಲ್ ಮಾಡಿ ವ್ಯಕ್ತಿಯೊಬ್ಬರ ನೆಮ್ಮದಿ ಕೆಡಿಸಿದ ಆರೋಪ ಇವರ ಮೇಲಿದೆ. ಇವರ ಈ ಕೃತ್ಯವು ಅಂತಿಮವಾಗಿ ಒಬ್ಬ ವ್ಯಕ್ತಿಯ ಜೀವನ ಅಂತ್ಯಗೊಳ್ಳಲು ಪ್ರೇರಕವಾಯಿತು ಎಂಬ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಕಾರವಾರ ನಗರಸಭೆಯ ಮಾಜಿ ಅಧ್ಯಕ್ಷ ಡಾ. ನಿತಿನ್ ಪಿಕಳೆ ಅವರ ಸಂಬಂಧಿಯೂ ಆಗಿದ್ದ ರಾಜೀವ್ ಅವರು, ನಿನ್ನೆ ಆವರ್ಸಾದಲ್ಲಿರುವ ತಮ್ಮ ಮನೆಯಲ್ಲಿ ಯಾರೂ ಇಲ್ಲದ ವೇಳೆ ಪರವಾನಗಿ ಹೊಂದಿದ್ದ ಡಬಲ್ ಬ್ಯಾರಲ್ ಗನ್ ಬಳಸಿ ತಮ್ಮ ಬದುಕಿಗೆ ತಾವೇ ಪೂರ್ಣವಿರಾಮ ಇಟ್ಟಿದ್ದಾರೆ. ಮನೆಯ ತುಳಸಿಕಟ್ಟೆಯ ಮುಂಭಾಗದಲ್ಲೇ ಈ ಘಟನೆ ನಡೆದಿದ್ದು, ಇಡೀ ಜಿಲ್ಲೆಯನ್ನು ಕಂಗೆಡಿಸಿದೆ.
ಯಾವುದೇ ಘಟನೆಯ ಸತ್ಯಾಸತ್ಯತೆ ಅರಿಯದೆ ಅಥವಾ ತಪ್ಪನ್ನು ತಿದ್ದಿಕೊಳ್ಳುವ ಅವಕಾಶ ನೀಡದೆ, ಡಿಜಿಟಲ್ ವೇದಿಕೆಗಳಲ್ಲಿ ಜನರನ್ನು ಗುರಿ ಮಾಡುವುದು ಎಷ್ಟು ಅಪಾಯಕಾರಿ ಎಂಬುದಕ್ಕೆ ಈ ಘಟನೆ ನಿದರ್ಶನವಾಗಿದೆ. ಕ್ಷಮೆ ಕೇಳಿದ ಮೇಲೆಯೂ ಮಾನಸಿಕ ಕಿರುಕುಳ ನೀಡಿದವರ ವಿರುದ್ಧ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಸದ್ಯ ಅಂಕೋಲಾ ಪೊಲೀಸರು ಪ್ರಕರಣದ ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಇತ್ತೀಚೆಗೆ ಕೇರಳದಲ್ಲಿ ಬಸ್ಸಿನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರ ಬಳಿ ನಿಂತುಕೊಂಡಿದ್ದ ಯುವತಿಯೊಬ್ಬಳು ಅವರು ತನಗೆ ಅಸಭ್ಯವಾಗಿ ಎದೆ ಭಾಗಕ್ಕೆ ಮುಟ್ಟುತ್ತಿದ್ದಾರೆ ಎಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಳು. ಇದರ ಬೆನ್ನಲ್ಲಿಯೇ ತೀವ್ರ ಮನನೊಂದಿದ್ದ ವ್ಯಕ್ತಿ ಸಮಾಜಕ್ಕೆ ಮುಖ ತೋರಿಸಲಾಗಿದೇ ಪ್ರಾಣ ಬಿಟ್ಟಿದ್ದರು. ಇದರ ಬಳಿಕ ಯುವತಿಯನ್ನು ಪೊಲೀಸರು ಬಂಧಿಸಿದ್ದರು. ಈ ಪ್ರಕರಣ ಮಾಸುವ ಮುನ್ನವೇ ಇದೀಗ ಕಾರವಾರದಲ್ಲಿಯೂ ಇಂಥದ್ದೊಂದು ಘಟನೆ ನಡೆದಿದೆ.