
ದಾವಣಗೆರೆ (ಜ.24): ರಾಜ್ಯ ಸರ್ಕಾರದಿಂದ ಬಡವರ ಹಸಿವು ನೀಗಿಸಲು ಆರಂಭಿಸಲಾದ ಇಂದಿರಾ ಕ್ಯಾಂಟೀನ್ ಈಗ ಅವ್ಯವಸ್ಥೆಯ ಆಗರವಾಗಿದೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದ ಇಂದಿರಾ ಕ್ಯಾಂಟೀನ್‌ನಲ್ಲಿ ಗ್ರಾಹಕರಿಗೆ ಹಳಸಿದ ಸಾಂಬಾರ್ ನೀಡುತ್ತಿರುವ ಗಂಭೀರ ಘಟನೆ ಬೆಳಕಿಗೆ ಬಂದಿದ್ದು, ಸಿಬ್ಬಂದಿಯ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾರಿಕೊಪ್ಪ ನಿವಾಸಿ ಮಂಜುನಾಥ ಎಂಬುವರು ಇಂದು ಬೆಳಿಗ್ಗೆ ತಮ್ಮ ಸ್ನೇಹಿತರೊಂದಿಗೆ ಉಪಾಹಾರಕ್ಕಾಗಿ ಹೊನ್ನಾಳಿಯ ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿದ್ದರು. ಇಡ್ಲಿ ಆರ್ಡರ್ ಮಾಡಿದ ಮಂಜುನಾಥ ಅವರಿಗೆ ಸಿಬ್ಬಂದಿ ನೀಡಿದ ಸಾಂಬಾರ್ ಸಂಪೂರ್ಣವಾಗಿ ಹಳಸಿ ಹೋಗಿತ್ತು. ಇದರಿಂದ ಅಸಮಾಧಾನಗೊಂಡ ಗ್ರಾಹಕರು, ಈ ಬಗ್ಗೆ ವಿಚಾರಿಸಿದಾಗ ಸಿಬ್ಬಂದಿ ಕ್ಷಮೆ ಕೇಳುವ ಬದಲು ದರ್ಪದ ಮಾತುಗಳನ್ನಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ವಿಶೇಷವೆಂದರೆ, ಈ ಇಂದಿರಾ ಕ್ಯಾಂಟೀನ್ ಉದ್ಘಾಟನೆಯಾಗಿ ಕೇವಲ ಎರಡು ತಿಂಗಳು ಕಳೆದಿದೆಯಷ್ಟೇ. ಆರಂಭದ ದಿನಗಳಲ್ಲಿ ಉತ್ತಮ ಸೇವೆಯ ಭರವಸೆ ನೀಡಿದ್ದ ನಿರ್ವಹಣಾ ಮಂಡಳಿ, ಇದೀಗ ಗುಣಮಟ್ಟವನ್ನು ಗಾಳಿಗೆ ತೂರಿದೆ. 'ಹೊಸದಾಗಿ ಶುರುವಾದ ಕ್ಯಾಂಟೀನ್‌ನಲ್ಲೇ ಇಂತಹ ಗತಿ ಬಂದರೆ, ಮುಂದಿನ ದಿನಗಳಲ್ಲಿ ಜನರ ಆರೋಗ್ಯದ ಗತಿ ಏನು?' ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ. ಕ್ಯಾಂಟೀನ್‌ನಲ್ಲಿ ನಡೆಯುತ್ತಿರುವ ಅಶುಚಿಯಾದ ವಾತಾವರಣ ಮತ್ತು ಸಿಬ್ಬಂದಿಯ ಉದ್ಧಟತನವನ್ನು ಮಂಜುನಾಥ ಅವರು ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯನ್ನು ಹಳ್ಳ ಹಿಡಿಸುತ್ತಿರುವ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಒತ್ತಾಯ ಕೇಳಿಬಂದಿದೆ.
ಈ ಅಚಾತುರ್ಯದ ಬಗ್ಗೆ ಗ್ರಾಹಕರು ತಕ್ಷಣವೇ ಹೊನ್ನಾಳಿ ಪುರಸಭೆ ಮುಖ್ಯಾಧಿಕಾರಿ ಟಿ. ಲೀಲಾವತಿ ಅವರಿಗೆ ಅಧಿಕೃತವಾಗಿ ದೂರು ಸಲ್ಲಿಸಿದ್ದಾರೆ. ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಕ್ಯಾಂಟೀನ್‌ನ ಆಹಾರ ಗುಣಮಟ್ಟವನ್ನು ತುರ್ತಾಗಿ ತಪಾಸಣೆ ಮಾಡಬೇಕು ಮತ್ತು ಕರ್ತವ್ಯ ಲೋಪ ಎಸಗಿದ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.