ಪೊಲೀಸರು ನಿಯಂತ್ರಣ ಘಟಕದಲ್ಲಿ ಕುಳಿತು ಸಾರ್ವಜನಿಕ ಸ್ಥಳಗಳಲ್ಲಿರುವ ನಾಗರಿಕರಿಗೆ ಸ್ಪೀಕರ್ ಮುಖಾಂತರ ಸೂಚನೆ-ಸಲಹೆ ನೀಡುವ ವಿನೂತನ ವ್ಯವಸ್ಥೆ ಇರುವ ರಾಜ್ಯದ ಪ್ರಥಮ ಸಿಸಿಟಿವಿ ಕ್ಯಾಮೆರಾ ನಿಯಂತ್ರಣ ಘಟಕವನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಗುರುವಾರ ಉದ್ಘಾಟಿಸಿದರು.
ಬೆಂಗಳೂರು (ಅ.21): ಪೊಲೀಸರು ನಿಯಂತ್ರಣ ಘಟಕದಲ್ಲಿ ಕುಳಿತು ಸಾರ್ವಜನಿಕ ಸ್ಥಳಗಳಲ್ಲಿರುವ ನಾಗರಿಕರಿಗೆ ಸ್ಪೀಕರ್ ಮುಖಾಂತರ ಸೂಚನೆ-ಸಲಹೆ ನೀಡುವ ವಿನೂತನ ವ್ಯವಸ್ಥೆ ಇರುವ ರಾಜ್ಯದ ಪ್ರಥಮ ಸಿಸಿಟಿವಿ ಕ್ಯಾಮೆರಾ ನಿಯಂತ್ರಣ ಘಟಕವನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಗುರುವಾರ ಉದ್ಘಾಟಿಸಿದರು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಯಶವಂತಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನದ 65 ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ. ಈ ಕ್ಯಾಮರಾಗಳ ನಿಯಂತ್ರಣ ಘಟಕವನ್ನು ಯಶವಂತಪುರ ಪೊಲೀಸ್ ಠಾಣೆಯಲ್ಲಿ ಸ್ಥಾಪಿಸಲಾಗಿದೆ.
ನಿಯಂತ್ರಣ ಘಟಕ ಉದ್ಘಾಟಿಸಿ ಬಳಿಕ ಮಾತನಾಡಿದ ಸಚಿವ ಆರಗ ಜ್ಞಾನೇಂದ್ರ, ಸಮಾಜದ ಸ್ವಾಸ್ಥ್ಯ ಉಳಿಸಿ ಸಮಾಜ ವಿರೋಧಿ ಶಕ್ತಿಗಳ ವಿರುದ್ಧದ ಹೋರಾಟದಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಕೆ ಅತ್ಯವಶ್ಯಕವಾಗಿದೆ. ಪೊಲೀಸರ ಜತೆಗೆ ಸಾರ್ವಜನಿಕರೂ ಕೈ ಜೋಡಿಸಿದರೆ, ಕಾನೂನು ಸುವ್ಯವಸ್ಥೆ ಕಾಪಾಡಲು ಹೆಚ್ಚು ನೆರವಾಗಲಿದೆ ಎಂದರು. ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಸಚಿವರೂ ಆದ ಮುನಿರತ್ನ, ಹಿರಿಯ ಐಪಿಎಸ್ ಅಧಿಕಾರಿಗಳಾದ ಸಂದೀಪ್ ಪಾಟೀಲ್, ವಿನಾಯಕ ವಸಂತ ರಾವ್ ಪಾಟೀಲ್ ಮತ್ತಿತರರಿದ್ದರು.
Bengaluru: ಉಲ್ಲಾಳು ಗ್ರಾಮದಲ್ಲಿ ಮಲ್ಪಿ ಸ್ಟೆಷಾಲಿಟಿ ಆಸ್ಪತ್ರೆಗೆ ಸಚಿವ ಸಂಪುಟ ಸಭೆ ಒಪ್ಪಿಗೆ
ಸಿಸಿ ಕ್ಯಾಮರಾ ವಿಶೇಷತೆ: ಸಿಸಿಟಿವಿ ಕ್ಯಾಮರಾ ದಿನದ 24 ತಾಸು ಕಾರ್ಯ ನಿರ್ವಹಿಸಲಿವೆ. ಈ ಕ್ಯಾಮರಾಗಳಲ್ಲಿ ಸ್ಪೀಕರ್ ಇದೆ. ಕ್ಯಾಮರಾ ಅಳವಡಿಸಿರುವ ಸಾರ್ವಜನಿಕ ಸ್ಥಳಗಳಲ್ಲಿ ಸಂಶಯಾಸ್ಪದವಾಗಿ ಓಡಾಡುವವರ ಬಗ್ಗೆ ವಿಶೇಷ ನಿಗಾವಹಿಸಬಹುದು. ನಿಯಂತ್ರಣ ಕೊಠಡಿಯಲ್ಲೇ ಕುಳಿತು ಸ್ಪೀಕರ್ ಬಳಸಿ ಸಾರ್ವಜನಿಕ ಪ್ರಕಟಣೆ ನೀಡಬಹುದು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಈ ಸ್ಪೀಕರ್ ಬಳಸಿಕೊಳ್ಳಬಹುದು. ಈ ಸಿಸಿಟಿವಿ ಕ್ಯಾಮರಾಗಳಲ್ಲಿ ಗರಿಷ್ಠ ಒಂದು ತಿಂಗಳ ದೃಶ್ಯಾವಳಿ ಸಂಗ್ರಹ ಸಿಗುತ್ತದೆ. ಒಂದು ವೇಳೆ ತಾಂತ್ರಿಕ ದೋಷದಿಂದ ನಿಯಂತ್ರಣ ಕೊಠಡಿಗೆ ಸಂಪರ್ಕ ಕಡಿತವಾದರೂ ಮೂರು ದಿನಗಳ ದೃಶ್ಯಾವಳಿ ಸಂಗ್ರಹ ಲಭ್ಯವಾಗಲಿದೆ.
ಈ 65 ಸಿಸಿಟಿವಿ ಕ್ಯಾಮರಾಗಳನ್ನು ಸುಮಾರು 1.20 ಕೋಟಿ ವೆಚ್ಚದಲ್ಲಿ ಖರೀದಿಸಲಾಗಿದೆ. ಬಿಡ್ ಪಡೆದುಕೊಂಡು ಕ್ಯಾಮರಾ ಪೂರೈಸಿರುವ ಕಂಪನಿ ಈ ಕ್ಯಾಮರಾಗಳಿಗೆ ಐದು ವರ್ಷ ವಾರಂಟಿ ನೀಡಿದೆ. ಅಂತೆಯೆ ಐದು ವರ್ಷ ಈ ಕ್ಯಾಮರಾಗಳ ನಿರ್ವಹಣೆ ಮಾಡಲಿದೆ.
ಆಟೋ ಚಾಲಕನಿಗೆ ಎಚ್ಚರಿಕೆ: ಸಿಸಿಟಿವಿ ಕ್ಯಾಮರಾ ನಿಯಂತ್ರಣ ಘಟಕ ಉದ್ಘಾಟನೆ ವೇಳೆ ಯಶವಂತಪುರ ರೈಲ್ವೆ ಸ್ಟೇಷನ್ ಸಮೀಪ ವಾಹನ ಸಂಚಾರ ವೀಕ್ಷಿಸಿದರು. ನಿಯಂತ್ರಣ ಕೊಠಡಿಯ ಸ್ಪೀಕರ್ ಬಳಸಿಕೊಂಡು ರಸ್ತೆಯಲ್ಲೇ ಆಟೋ ನಿಲ್ಲಿಸಿಕೊಂಡು ಸಂಚಾರಕ್ಕೆ ಅಡ್ಡಿಪಡಿಸುತ್ತಿದ್ದ ಆಟೋ ಚಾಲಕನನ್ನು ಎಚ್ಚರಿಸಿದರು. ಸ್ಪೀಕರ್‌ನಲ್ಲಿ ಸಚಿವರ ದನಿ ಕೇಳುತ್ತಿದ್ದಂತೆ ಚಾಲಕ ಆಟೋ ಚಲಾಯಿಸಿಕೊಂಡು ಮುಂದೆ ಸಾಗಿದ. ಅಂತೆಯೆ ರಸ್ತೆಯಲ್ಲಿ ನಿಂತಿದ್ದ ಏಳೆಂಟು ಜನರ ಗುಂಪು ಚದುರಿತು.
ಸಚಿವ ಸೋಮಣ್ಣ ಕ್ರಿಯಾಶೀಲ ಜನಪ್ರತಿನಿಧಿ: ಸಿಎಂ ಬೊಮ್ಮಾಯಿ
ಮೂರು ಪಾಳಿಯಲ್ಲಿ ಕೆಲಸ: ಯಶವಂತಪುರ ಪೊಲೀಸ್ ಠಾಣೆಯಲ್ಲಿರುವ ಈ ಸಿಸಿಟಿವಿ ಕ್ಯಾಮರಾ ನಿಯಂತ್ರಣಾ ಘಟಕ ದಿನದ 24 ತಾಸು ಕಾರ್ಯ ನಿರ್ವಹಿಸಲಿದೆ. ಇನ್ನು ಮುಂದೆ ನಿತ್ಯ ಮೂರು ಜನ ಸಿಬ್ಬಂದಿ ಮೂರು ಪಾಳಿಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. 65 ಸಿಸಿಟಿವಿ ಕ್ಯಾಮರಾದ ದೃಶ್ಯಾವಳಿಗಳು ನಿಯಂತ್ರಣ ಘಟಕದ ಮಾನಿಟರ್ ಮೇಲೆ ಕಾಣಿಸಲಿದೆ. ಈ ದೃಶ್ಯಾವಳಿಗಳ ಮೇಲೆ ಸಿಬ್ಬಂದಿ ನಿಗಾವಹಿಸಲಿದ್ದಾರೆ.