ಅ.25ರಂದು ಮಂಗಳವಾರ ಸಂಭವಿಸಲಿರುವ ಸೂರ್ಯಗ್ರಹಣದ ದಿನದಂದು ಕರಾವಳಿಯ ದೇವಾಲಯಗಳಲ್ಲಿ ದೇವರ ದರ್ಶನ ಹಾಗೂ ಸೇವೆಗಳಲ್ಲಿ ಅಲ್ಪಸ್ವಲ್ಪ ವ್ಯತ್ಯಯವಾಗಲಿದೆ. ಉಡುಪಿ ಕೃಷ್ಣಮಠದಲ್ಲಿ ಮಧ್ಯಾಹ್ನದ ಸಾರ್ವಜನಿಕ ಅನ್ನಸಂತರ್ಪಣೆ ಇರುವುದಿಲ್ಲ.
ಮಂಗಳೂರು (ಅ.21): ಅ.25ರಂದು ಮಂಗಳವಾರ ಸಂಭವಿಸಲಿರುವ ಸೂರ್ಯಗ್ರಹಣದ ದಿನದಂದು ಕರಾವಳಿಯ ದೇವಾಲಯಗಳಲ್ಲಿ ದೇವರ ದರ್ಶನ ಹಾಗೂ ಸೇವೆಗಳಲ್ಲಿ ಅಲ್ಪಸ್ವಲ್ಪ ವ್ಯತ್ಯಯವಾಗಲಿದೆ.
ಧರ್ಮಸ್ಥಳದಲ್ಲಿ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನದ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಮಧ್ಯಾಹ್ನದವರೆಗೆ ಎಂದಿನಂತೆ ಅವಕಾಶವಿದ್ದು, ಬಳಿಕ ಅಪರಾಹ್ನ 2.30ರಿಂದ ರಾತ್ರಿ 7.30ರ ವರೆಗೆ ದೇವರ ದರ್ಶನಕ್ಕೆ ಅವಕಾಶವಿರುವುದಿಲ್ಲ. ಅನ್ನಛತ್ರದಲ್ಲಿ ಅಪರಾಹ್ನ 2.30 ರವರೆಗೆ ಭೋಜನ ಪ್ರಸಾದದ ವ್ಯವಸ್ಥೆ ಇರಲಿದೆ. ಬಳಿಕ ರಾತ್ರಿ 7.30 ರ ನಂತರ ಭೋಜನ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.
undefined
ಕುಕ್ಕೆಯಲ್ಲಿ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದೀಪಾವಳಿಯ ಮಧ್ಯ ದಿನ ಅ.25ರಂದು ಸೂರ್ಯಗ್ರಹಣ ಇರುವುದರಿಂದ ಆ ದಿನ ಯಾವುದೇ ಸೇವೆಗಳು, ದರ್ಶನ ಹಾಗೂ ಭೋಜನ ಪ್ರಸಾದ ವ್ಯವಸ್ಥೆ ಇರುವುದಿಲ್ಲ. 26ರಂದು ಕ್ಷೇತ್ರದಲ್ಲಿ ನಿತ್ಯ ಪೂಜಾ ಸಮಯಗಳಲ್ಲಿ ವ್ಯತ್ಯಯವಾಗುವುದರಿಂದ ಬೆಳಗ್ಗೆಗಂಟೆ 9 ರಿಂದ ಭಕ್ತಾದಿಗಳಿಗೆ ಶ್ರೀ ದೇವರ ದರ್ಶನ, ಸೇವೆಗಳು ಆರಂಭಗೊಳ್ಳಲಿವೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.
Surya Grahan 2022: ಗ್ರಹಣ ಕಾಲದಲ್ಲಿ ನೀವು ಮಾಡಬಾರದ್ದೇನು, ಮಾಡಬೇಕಾದ್ದೇನು?
ಕಟೀಲಿನಲ್ಲಿ: ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮಧ್ಯಾಹ್ನ ಎಂದಿನಂತೆ ಅನ್ನಪ್ರಸಾದವಿರುತ್ತದೆ. ಗ್ರಹಣ ಆರಂಭಗೊಳ್ಳುವ ಅವಧಿಯಿಂದ ಮೋಕ್ಷದ ಅವಧಿಯಲ್ಲಿ ಭಕ್ತರಿಗೆ ದೇವಸ್ಥಾನಕ್ಕೆ ಪ್ರವೇಶವಿದ್ದು, ದೇವಳಕ್ಕೆ ಸುತ್ತು ಬರಬಹುದು ಹಾಗೂ ಜಪ ಮಾಡಬಹುದು. ಆದರೆ ಈ ಅವಧಿಯಲ್ಲಿ ಯಾವುದೇ ಸೇವೆ, ಪ್ರಸಾದ ವಿತರಣೆ ಇರುವುದಿಲ್ಲ ಎಂದು ದೇವಸ್ಥಾನದ ಅರ್ಚಕ ಶ್ರೀಹರಿನಾರಾಯಣ ಆಸ್ರಣ್ಣ ತಿಳಿಸಿದ್ದಾರೆ.
ಕಟೀಲು ದೇವಳದಲ್ಲಿ ದೇವಿ ಲಿಂಗ ಸ್ವರೂಪಿಯಾಗಿರುವುದರಿಂದ ಅ.25ರಂದು ಸಂಜೆ 5.08ಕ್ಕೆ ಸೂರ್ಯಗ್ರಹಣ ಆರಂಭ ಗೊಂಡ (ಸ್ಪರ್ಶ) ಅವಧಿಯಿಂದ ಮಧ್ಯಕಾಲ 5.51ರ ವರೆಗೆ ದೇವರಿಗೆ ನಿರಂತರ ಅಭಿಷೇಕ ನಡೆಯಲಿದೆ. ಮಧ್ಯಕಾಲ 5.50ಕ್ಕೆ ದೇವರಿಗೆ ಪೂಜೆ ನಡೆಯಲಿದೆ. ಬಳಿಕ ಮಧ್ಯಕಾಲದಿಂದ ಸಂಜೆ 6.29ರ ಮೋಕ್ಷ ಕಾಲದವರೆಗ ಪುನಃ ನಿರಂತರ ದೇವರಿಗೆ ಅಭಿಷೇಕ ನಡೆಯಲಿದ್ದು ಮೋಕ್ಷದ ಬಳಿಕ ದೇವರಿಗೆ ಪೂಜೆ ಹಾಗೂ ನಿತ್ಯ ಪೂಜೆ ಜರುಗಲಿದೆ. ಗ್ರಹಣದ ಅವಧಿಯಲ್ಲಿ ಭಕ್ತರು ದೇವರಿಗೆ ತುಪ್ಪವನ್ನು ನೀಡಬಹುದು. ಭಕ್ತಾದಿಗಳು ದೇವರ ದೀಪಕ್ಕೆ ಶುದ್ಧ ಎಳ್ಳೆಣ್ಣೆ, ತುಪ್ಪ, ಬತ್ತಿ ಸಮರ್ಪಿಸುವುದರಿಂದ ಗ್ರಹಣ ದೋಷ ನಿವೃತ್ತಿಯಾಗಿ ಅನುಗ್ರಹ ಪ್ರಾಪ್ತಿಯಾಗುತ್ತದೆ. ರಾತ್ರಿ ಅನ್ನ ಪ್ರಸಾದವಿರುವುದಿಲ್ಲ. ಅದರ ಬದಲಿಗೆ ಫಲಾಹಾರ ಇರುತ್ತದೆ ಎಂದು ಶ್ರೀಹರಿನಾರಾಯಣ ಆಸ್ರಣ್ಣ ತಿಳಿಸಿದ್ದಾರೆ.
ಬಪ್ಪನಾಡು ದೇವಳ: ಮೂಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸೂರ್ಯ ಗ್ರಹಣದಂದು ಸಂಜೆ 4.45ರಿಂದ 6.45ರ ವರೆಗೆ ಯಾವುದೇ ಪೂಜೆ, ಸೇವೆ, ಪ್ರಸಾದ ವಿತರಣೆ ಇರುವುದಿಲ್ಲ. ಸಂಜೆ 6.45ರ ಬಳಿಕ ನಿತ್ಯ ಪೂಜೆ ಜರುಗಲಿದೆ. ಅಂದು ಮಧ್ಯಾಹ್ನ ಅನ್ನಪ್ರಸಾದ ಇರುವುದಿಲ್ಲ ಎಂದು ದೇವಸ್ಥಾನದ ಪ್ರಧಾನ ಅರ್ಚಕ ನರಸಿಂಹ ಭಟ್ ತಿಳಿಸಿದ್ದಾರೆ.
ಉಡುಪಿ: ಅ.25ರಂದು ಸಂಭವಿಸಲಿರುವ ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ಉಡುಪಿ ಕೃಷ್ಣಮಠದಲ್ಲಿ ಮಧ್ಯಾಹ್ನದ ಸಾರ್ವಜನಿಕ ಅನ್ನಸಂತರ್ಪಣೆ ಇರುವುದಿಲ್ಲ, ಸಾರ್ವಜನಿಕರಿಗೆ ಕೃಷ್ಣದರ್ಶನಕ್ಕೆ ಅವಕಾಶ ಇರುತ್ತದೆ.
ಈ ಬಾರಿ ಭಾರತದಲ್ಲೂ ಗೋಚರಿಸುತ್ತೆ ಸೂರ್ಯಗ್ರಹಣ; ವೀಕ್ಷಿಸೋದು ಹೇಗೆ?
ಕೃಷ್ಣಮಠದ ಸಂಪ್ರದಾಯದಂತೆ ಉಡುಪಿಯಲ್ಲಿ 23ರಂದು ಸಂಜೆ ದೀಪಾವಳಿಯ ಪ್ರಯುಕ್ತ ಯಮದೀಪ ಮತ್ತು ಜಲಪೂರಣ ನಡೆಯಲಿದೆ. 24ರಂದು ಬೆಳಿಗ್ಗೆ 5.14ಕ್ಕೆ ತೈಲಾಭ್ಯಂಜನ, ನರಕಚತುರ್ದಶಿ, ಸಂಜೆ ವ್ರೋಮದೀಪ, ಧನಧಾನ್ಯ-ಲಕ್ಷ್ಮೀ ಪೂಜೆ, ಬಲೀಂದ್ರ ಪೂಜೆ ನಡೆಯಲಿದೆ. 25ರಂದು ಬೆಳಗ್ಗೆ ಗೋಪೂಜೆ ನಡೆಯಲಿದೆ. 26ರಂದು ಬಲಿಪಾಡ್ಯ, ಸಂಜೆ ಅಂಗಡಿಪೂಜೆ, ತುಳಸಿಪೂಜೆಗಳು ನಡೆಯಲಿವೆ. ಉಡುಪಿಯಲ್ಲಿ ಸಂಜೆ 5.08 ಗಂಟೆಗೆ ಗ್ರಹಣ ಸ್ಪರ್ಶವಾಗಿ, 6.29 ಗಂಟೆಗೆ ಗ್ರಹಣ ಮೋಕ್ಷವಾಗಲಿದೆ ಎಂದು ತಿಳಿಸಲಾಗಿದೆ.