ವಾಯುಭಾರ ಕುಸಿತ: ದಕ್ಷಿಣ, ಮಲೆನಾಡಲ್ಲಿ ಭಾರೀ ಮಳೆ ಸಾಧ್ಯತೆ, ಹೈಅಲರ್ಟ್‌

By Kannadaprabha News  |  First Published May 15, 2020, 10:55 AM IST

ಅಂಡಮಾನ್‌ ವಾಯುಭಾರ ಕುಸಿತದ ಎಫೆಕ್ಟ್| ಬಂಗಾಳಕೊಲ್ಲಿಯಲ್ಲಿ ಪ್ರಬಲ ಚಂಡಮಾರುತ| ದಕ್ಷಿಣ ಒಳನಾಡು ಹಾಗೂ ಮಲೆನಾಡು ಭಾಗದಲ್ಲಿ ಮೇ 17 ವರೆಗೆ ಹೆಚ್ಚಿನ ಮಳೆಯಾಗುವ ಸಾಧ್ಯತೆ| ಉತ್ತರ ಕರ್ನಾಟಕ ಭಾಗದಲ್ಲಿ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಗರಿಷ್ಠ ಉಷ್ಣಾಂಶದ ಪ್ರಮಾಣ 41 ಡಿಗ್ರಿ ಸೆಲ್ಸಿಯಸ್‌ನಿಂದ 43 ಡಿಗ್ರಿ ಸೆಲ್ಸಿಯಸ್‌ ಇರುವ ಸಾಧ್ಯತೆ|


ಬೆಂಗಳೂರು(ಮೇ.15): ಅಂಡಮಾನ್‌ನಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮದಿಂದ ರಾಜ್ಯದ ದಕ್ಷಿಣ ಒಳನಾಡು ಹಾಗೂ ಮಲೆನಾಡು ಭಾಗದಲ್ಲಿ ಮೇ 17 ವರೆಗೆ ಹೆಚ್ಚಿನ ಮಳೆಯಾಗುವ ಸಾಧ್ಯತೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಅಂಡಮಾನ್‌ನಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಒಂದೆರಡು ದಿನದಲ್ಲಿ ಚಂಡಮಾರುತವಾಗಿ ರೂಪಗೊಳ್ಳುವ ಸಾಧ್ಯತೆ ಇದೆ. ಬಂಗಾಳಕೊಲ್ಲಿ ಸಮುದ್ರದಲ್ಲಿ ಈ ಚಂಡಮಾರುತ ಸಾಗಲಿದ್ದು, ಒಡಿಶಾ, ಬಾಂಗ್ಲಾ ದೇಶದ ಬಳಿ ಭೂ ಸ್ಪರ್ಶಗೊಳ್ಳಲಿದೆ. ಇದರ ಪರಿಣಾಮ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ಶಿವಮೊಗ್ಗ ಜಿಲ್ಲೆಗಳಿಗೆ ಮೇ 15 ರಿಂದ ಮೇ 17ರ ವರೆಗೆ 65 ಮಿ.ಮೀ ನಿಂದ 115 ಮಿ.ಮೀ ವರೆಗೆ ಮಳೆಯಾಗುವ ಸಾಧ್ಯತೆ ಇರುವುದರಿಂದ ಈ ಜಿಲ್ಲೆಗಳಿಗೆ ಹವಾಮಾನ ಇಲಾಖೆ ‘ಎಲ್ಲೋ ಅಲರ್ಟ್‌’ ಎಚ್ಚರಿಕೆ ನೀಡಿದೆ.

Latest Videos

undefined

ಕರಾವಳಿಯಲ್ಲಿ ಗುಡುಗು ಸಹಿತ ಗಾಳಿ ಮಳೆ

ಮುಂಗಾರು ಮೇಲೆ ಪರಿಣಾಮ?:

ಅಂಡಮಾನ್‌ನಲ್ಲಿ ವಾಡಿಕೆ ಪ್ರಕಾರ ಮೇ 20ರ ವೇಳೆ ಮುಂಗಾರು ಆರಂಭವಾಗಬೇಕು. ತದನಂತರ ಜೂನ್‌ ಮೊದಲ ವಾರದಲ್ಲಿ ಕೇರಳ ಭಾಗದಿಂದ ಮುಂಗಾರು ಪ್ರವೇಶ ಪಡೆದುಕೊಳ್ಳುತ್ತದೆ, ಆದರೆ, ಈ ಬಾರಿ ಮೇ 16ಕ್ಕೆ ಅಂಡಮಾನ್‌ನಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಇದು ಪ್ರಭಾವ ಬೀರಿದರೆ ಮುಂಗಾರು ವಿಳಂಬವಾಗಲಿದೆ. ‘ಇದೀಗ ಅಂಡಮಾನ್‌ನಲ್ಲಿ ಉಂಟಾಗಿರುವ ವಾಯುಭಾರ ಮುಂಗಾರಿನ ಮೇಲೆ ಯಾವುದೇ ಪರಿಣಾಮ ಉಂಟು ಮಾಡುವುದಿಲ್ಲ’ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಹೀಗಾಗಿ, ಈ ವರ್ಷ ವಾಡಿಕೆಯಂತೆ ಜೂನ್‌ ಮೊದಲ ವಾರದಲ್ಲಿ ಮುಂಗಾರು ಪ್ರವೇಶವಾಗಲಿದೆ. ಶೇ.71 ರಷ್ಟು ಮುಂಗಾರು ಮಳೆಯಾಗಲಿದೆ ಎಂದು ಕೆಎಸ್‌ಎನ್‌ಡಿಎಂಸಿ ನಿರ್ದೇಶಕ ಶ್ರೀನಿವಾಸ್‌ ರೆಡ್ಡಿ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಉ.ಕದಲ್ಲಿ ಎರಡು ದಿನ ಭಾರೀ ಬಿಸಿಲು

ಉತ್ತರ ಕರ್ನಾಟಕ ಭಾಗದಲ್ಲಿ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಗರಿಷ್ಠ ಉಷ್ಣಾಂಶದ ಪ್ರಮಾಣ 41 ಡಿಗ್ರಿ ಸೆಲ್ಸಿಯಸ್‌ನಿಂದ 43 ಡಿಗ್ರಿ ಸೆಲ್ಸಿಯಸ್‌ ಇರುವ ಸಾಧ್ಯತೆ ಇದೆ. ಹಾಗಾಗಿ, ಸಾರ್ವಜನಿಕರು ಮತ್ತು ರೈತರು ಬೆಳಗ್ಗೆ 11.30 ರಿಂದ ಮಧ್ಯಾಹ್ನ 3.30ರ ವರೆಗೆ ಹೊರಗೆ ಓಡಾಡುವುದನ್ನು ಕಡಿಮೆ ಮಾಡಿ. ಸಾಧ್ಯವಾದಷ್ಟುಮನೆಯಲ್ಲಿಯೇ ಇರುವಂತೆ ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
 

click me!