ಫೋನ್ ಕದ್ದಾಲಿಕೆ, ಸ್ಟಿಂಗ್ ಆಪರೇಷನ್ ಕೈಗೆ ಮಾಮೂಲಿ: ಕಾಂಗ್ರೆಸ್ ವಿರುದ್ಧ BJP ಶಾಸಕ ಚನ್ನಬಸಪ್ಪ ವಾಗ್ದಾಳಿ

Kannadaprabha News   | Kannada Prabha
Published : Oct 18, 2026, 09:16 AM IST
SN Channabasappa

ಸಾರಾಂಶ

ರಾಜ್ಯದಲ್ಲಿ ನಡೆಯುತ್ತಿರುವ ಸ್ಟಿಂಗ್ ಆಪರೇಷನ್ ಮತ್ತು ಹನಿಟ್ರ್ಯಾಪ್ ಪ್ರಕರಣಗಳ ಹಿಂದೆ ಕಾಂಗ್ರೆಸ್ ನಾಯಕರೇ ಇದ್ದಾರೆ ಎಂದು ಬಿಜೆಪಿ ಶಾಸಕ ಎಸ್.ಎನ್. ಚನ್ನಬಸಪ್ಪ ಆರೋಪಿಸಿದ್ದಾರೆ. ಈ ಕುರಿತು ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಿರುವ ಅವರು, 2028ಕ್ಕೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶಿವಮೊಗ್ಗ: ಅಂದಿನ ಫೋನ್ ಕದ್ದಾಲಿಕೆ ಪ್ರಕರಣ ಬದಲಾದ ಕಾಲಮಾನದಲ್ಲಿ ಈಗ ಸ್ಟಿಂಗ್ ಆಪರೇಷನ್ ಆಗಿ ಬದಲಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಇದು ಸರ್ವೇ ಸಾಮಾನ್ಯವಾಗಿದ್ದು, ಅವರ ಬದುಕೇ ಇದರಲ್ಲಿ ಅಡಕವಾಗಿದೆ ಎಂದು ಬಿಜೆಪಿ ಶಾಸಕ ಎಸ್.ಎನ್. ಚನ್ನಬಸಪ್ಪ ಕಿಡಿಕಾರಿದರು.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆ ರಾಜ್ಯದಲ್ಲಿ ಫೋನ್ ಕದ್ದಾಲಿಕೆ ಪ್ರಕರಣ ನಡೆದು ಅಂದು ಕಾಂಗ್ರೆಸ್ ಸರ್ಕಾರ ಪತನಗೊಂಡಿತ್ತು. ಆದರೆ, ಇಂದು ಪರಿಸ್ಥಿತಿ ಬದಲಾಗಿದ್ದು, ಸ್ಟಿಂಗ್ ಆಪರೇಷನ್ ರೂಪ ಪಡೆದಿದೆ ಅಷ್ಟೆ. ಸರ್ಕಾರದ ಸಚಿವರು ಹಾಗೂ ಶಾಸಕರ ನೈಜ ಪರಿಸ್ಥಿತಿಯನ್ನು ಇದು ಜನರಿಗೆ ತಿಳಿಸುತ್ತಿದೆ. ಇದರ ಹಿಂದೆ ಬೇರೆ ಯಾರೂ ಇಲ್ಲ, ಕಾಂಗ್ರೆಸ್‌ನ ಧುರೀಣರೇ ಅನೇಕರಿದ್ದಾರೆ ಎಂಬುದು ಸಾಬೀತಾಗಿ ಚರ್ಚೆಯಾಗುತ್ತಿದೆ ಎಂದರು.

ಅನುಮಾನದಿಂದ ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ:

ಯಾರ್‍ಯಾರು ಇದರಲ್ಲಿದ್ದಾರೆ, ಯಾರ ಬಗ್ಗೆ ಏನೇನಿದೆ, ಏನು ಹೇಳಬೇಕು, ಏನು ಹೇಳಬಾರದು ಎಂಬುದರ ಬಗ್ಗೆ ಗಂಭೀರವಾಗಿ ಯೋಚಿಸಬೇಕಿದೆ. ಇಂದು ಮಹಿಳಾ ಶಾಸಕರು ಸೇರಿದಂತೆ ಅನೇಕ ಶಾಸಕರನ್ನು ಅಪಮಾನದ ಸಂಕೇತವಾಗಿ, ಅನುಮಾನದಿಂದ ನೋಡುವ ಸ್ಥಿತಿ ನಿರ್ಮಾಣವಾಗಿದೆ. ಇದರ ಬಗ್ಗೆ ಸಮಗ್ರ ತನಿಖೆಯಾಗಿ, ಇದನ್ನು ಮಾಡಿಸಿದವರು ಯಾರು ಮತ್ತು ಇದಕ್ಕೆ ಕಾರಣಕರ್ತರು ಯಾರು ಎಂಬುದನ್ನು ತನಿಖೆ ಮೂಲಕ ರಾಜ್ಯದ ಜನತೆಯ ಮುಂದೆ ತೆರೆದಿಡಬೇಕು. ಮುಖ್ಯವಾಗಿ ಸರ್ಕಾರ ಇದರ ಬಗ್ಗೆ ಆಸಕ್ತಿ ವಹಿಸಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಎಲ್ಲರೂ ಕೋರ್ಟ್‌ಗೆ ಹೋಗುವಂಥ ಸ್ಥಿತಿ ನಿರ್ಮಾಣವಾಗಿದೆ. ಒಂದು ಕಡೆ ಕಾಂಗ್ರೆಸ್ ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಕೆಲಸ ಮಾಡುತ್ತಿದ್ದರೆ, ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದುಕೊಂಡೇ ಕಾಲೆಳೆಯುವ ಕೆಲಸ ಮಾಡುತ್ತಿದೆ. ಇದರಿಂದ ಜನಜೀವನ ಹಾಗೂ ಸರ್ಕಾರಿ ವ್ಯವಸ್ಥೆ ಕುಸಿದು ಬೀಳುತ್ತಿದ್ದು, ಜವಾಬ್ದಾರಿಯುತ ಸರ್ಕಾರವಾಗಿ ಈ ಕುರಿತು ತನಿಖೆ ನಡೆಸಿ, ಕುತಂತ್ರ ಮಾಡಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್ ಶಾಸಕರೇ ನ್ಯಾಯಾಲಯಕ್ಕೆ ಹೋಗಿದ್ದಾರೆ ಮತ್ತು ಎಚ್.ಡಿ. ಕುಮಾರಸ್ವಾಮಿ ಅವರು ಪೊಲೀಸ್ ಇಲಾಖೆ ಮುಂದೆ ಹೋಗಿ ಒತ್ತಾಯಿಸಿದ್ದಾರೆ. ಹಾಗಾದರೆ ಸರ್ಕಾರವನ್ನೇ ಅಸ್ಥಿರಗೊಳಿಸುವ ಕೆಲಸ ಕಾಂಗ್ರೆಸ್‌ನವರಿಂದಲೇ ನಡೆಯುತ್ತಿದ್ಯಾ? ಇದನ್ನು ಸಿಬಿಐ ಅಥವಾ ಯಾವ ತನಿಖೆಗಾದರೂ ಒಳಪಡಿಸಿ. ನಾವು ಸಿಬಿಐ ತನಿಖೆ ಬಗ್ಗೆ ಕೇಳಿದರೆ, ಕಾಂಗ್ರೆಸ್‌ಗೆ ಸಿಬಿಐ ಮೇಲೆ ನಂಬಿಕೆಯಿಲ್ಲ ಎನ್ನುತ್ತಾರೆ. ಕಾಂಗ್ರೆಸ್‌ಗೆ ಯಾವುದರ ಮೇಲೆ ನಂಬಿಕೆ ಇದೆಯೋ ಅದರ ಮೂಲಕವೇ ತನಿಖೆ ನಡೆಸಿ ರಾಜ್ಯದ ಜನತೆಗೆ ಸತ್ಯಾಂಶ ತಿಳಿಸಿ ಸಾಕು ಎಂದರು.

ಬಿಜೆಪಿ ಅಧಿಕಾರಕ್ಕೆ ಖಚಿತ

ಕಾಂಗ್ರೆಸ್‌ನಲ್ಲಿ ಇಷ್ಟೊಂದು ಅಸ್ಥಿರತೆ ಇದ್ದು, ಎಷ್ಟು ಜನ ಮುಖ್ಯಮಂತ್ರಿಯಾದರೂ ಏನು ಪ್ರಯೋಜನ? ರಾಜ್ಯ ಹಾಗೂ ದೇಶದಲ್ಲಿ ಅರಾಜಕತೆ ಸೃಷ್ಟಿಸುವುದೇ ಕಾಂಗ್ರೆಸ್‌ನ ಉದ್ದೇಶವಾಗಿದ್ದು, ಕಾಂಗ್ರೆಸ್‌ನ ಯಾವ ಸಿಎಂ ಬಂದರೂ ಅಷ್ಟೇ. 2028ಕ್ಕೆ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹನಿಟ್ರ್ಯಾಪ್ ಮೂಲಕ ಸ್ಟಿಂಗ್ ಮಾಡಲಾಗುತ್ತಿದ್ದು, ಎಲ್ಲರನ್ನೂ ಅನುಮಾನದಿಂದ ನೋಡುವ ಕೆಲಸವಾಗುತ್ತಿದೆ. ಆದರೆ, ಸತ್ಯ ಹೇಳಿದ ಒಬ್ಬ ಮಂತ್ರಿಯ ರಾಜೀನಾಮೆ ಪಡೆಯುವ ಕೆಲಸವಾಯಿತು. ಆದರೆ, ಹನಿಟ್ರ್ಯಾಪ್ ಮಾಡಿದವರು ಯಾರು ಎಂಬ ಬಗ್ಗೆ ತನಿಖೆಯಾಗಲಿಲ್ಲ. ಸತ್ಯ ಸಂಗತಿ ಹೇಳಿದ ಕೆ. ರಾಜಣ್ಣ ಅವರನ್ನು ಸಂಪುಟದಿಂದ ಕೈಬಿಡಲಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.

PREV
Read more Articles on
click me!

Recommended Stories

Mysuru Dasara: 44.200 ಲೀ. ಹಾಲು ಕರೆದು 1 ಲಕ್ಷ ಬಹುಮಾನ ಪಡೆದ ಅಶ್ವಿನಿ ಅಂಬರೀಶ್
‘ಕೆಲಸ ಕೊಡಿಸಿ, ಮೊದಲ ತಿಂಗಳ ಸಂಬಳ ನಿಮಗೇ!’ ಬೆಂಗಳೂರು ಯುವಕನ ವಿಭಿನ್ನ ಆಫರ್ ಈಗ ವೈರಲ್