ಶಾಸಕ ಉಮೇಶ್ ಮೇಟಿ ಸೊಸೆಗೆ ಅಕ್ರಮವಾಗಿ 75 ಸಾವಿರ ಸಂಬಳ? ಪುತ್ರಿಯನ್ನೇ ವಜಾ ಮಾಡಿದ ತಂದೆ

Published : Sep 15, 2026, 09:39 PM IST
Dr.Ankitha

ಸಾರಾಂಶ

ಬಾಗಲಕೋಟೆ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ರಾಜಕುಮಾರ ಯರಗಲ್ ಅವರ ಪುತ್ರಿ ಡಾ. ಅಂಕಿತಾ, ಎಂಡಿ ವ್ಯಾಸಂಗ ಮಾಡುತ್ತಲೇ 'ನಮ್ಮ ಕ್ಲಿನಿಕ್' ವೈದ್ಯಾಧಿಕಾರಿಯಾಗಿ ಸರ್ಕಾರಿ ವೇತನ ಪಡೆಯುತ್ತಿದ್ದ ಆರೋಪಕ್ಕೆ ಗುರಿಯಾಗಿದ್ದರು. ಈ ಅಕ್ರಮ ಮತ್ತು ಅನಧಿಕೃತ ಗೈರುಹಾಜರಿ ತನಿಖೆಯಲ್ಲಿ ಸಾಬೀತಾದ ಹಿನ್ನೆಲೆಯಲ್ಲಿ, ಸ್ವತಃ ಅವರ ತಂದೆಯೇ ಮಗಳನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಆದೇಶ ಹೊರಡಿಸಿದ್ದಾರೆ.

ಬಾಗಲಕೋಟೆ: ಬಾಗಲಕೋಟೆ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ರಾಜಕುಮಾರ ಯರಗಲ್ ಅವರ ಪುತ್ರಿ ಹಾಗೂ ಕಾಂಗ್ರೆಸ್ ಶಾಸಕ ಉಮೇಶ್ ಮೇಟಿ ಅವರ ಸೊಸೆ ಡಾ. ಅಂಕಿತಾ ಯರಗಲ್ ಅವರ ವಿರುದ್ಧ ಗಂಭೀರ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ, ಅಂಕಿತಾ ಅವರ ತಂದೆಯೇ, ಖುದ್ದು ಮಗಳನ್ನು ಕೆಲಸದಿಂದ ಬಿಡುಗಡೆಗೊಳಿಸಿರುವ ಕುತೂಹಲದ ಘಟನೆ ನಡೆದಿದೆ. ಡಾ. ಅಂಕಿತಾ ಯರಗಲ್ ಅವರು ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಅಕ್ರಮ ಎಸಗಿರುವ ಆರೋಪ ಕೇಳಿಬಂದಿದೆ. ಇವರು, ಪೂರ್ಣಾವಧಿ ಸ್ನಾತಕೋತ್ತರ ವ್ಯಾಸಂಗ ಅರ್ಥಾತ್​ ಎಂಡಿ ಪದವಿ ಮಾಡುತ್ತಿದ್ದರೂ, ಪ್ರತಿ ತಿಂಗಳು ಸರ್ಕಾರದಿಂದ 75 ಸಾವಿರ ರೂಪಾಯಿ ವೇತನ ಪಡೆಯುತ್ತಿರುವ ಗಂಭೀರ ಆರೋಪ ಕೇಳಿಬಂದಿತ್ತು.

ಡಾ. ಅಂಕಿತಾ ಯರಗಲ್ ಅವರು 2025ರ ಸೆಪ್ಟೆಂಬರ್‌ನಿಂದ ಬಾಗಲಕೋಟೆಯ ವಾಂಬೆ ಕಾಲೋನಿಯ ‘ನಮ್ಮ ಕ್ಲಿನಿಕ್’ಗೆ ವೈದ್ಯಾಧಿಕಾರಿಯಾಗಿ ನೇಮಕಗೊಂಡಿದ್ದರು.ಆದರೆ ಮರುವರ್ಷ ಅರ್ಥಾತ್​ 2026ರ ಮಾರ್ಚ್‌ನಲ್ಲಿ ಬಾಗಲಕೋಟೆಯ ಎಸ್.ಎನ್. ಮೆಡಿಕಲ್ ಕಾಲೇಜಿನಲ್ಲಿ ಎಂ.ಡಿ. ಪ್ಯಾಥಾಲಜಿ ಕೋರ್ಸ್‌ಗೆ ಪ್ರವೇಶ ಪಡೆದಿದ್ದಾರೆ. ಏಪ್ರಿಲ್​ನಿಂದ ತರಗತಿಗಳಿಗೆ ಹಾಜರು ಕೂಡ ಆಗುತ್ತಿದ್ದಾರೆ. ನಿಯಮಗಳ ಪ್ರಕಾರ ಬೆಳಗ್ಗೆ 9 ರಿಂದ ಸಂಜೆ 4:30 ರವರೆಗೆ ಕ್ಲಿನಿಕ್‌ನಲ್ಲಿ ಕರ್ತವ್ಯ ನಿರ್ವಹಿಸಬೇಕಾದ ಅಂಕಿತಾ, ಕಾಲೇಜಿನಲ್ಲಿ ಪೂರ್ಣಾವಧಿ ಶಿಕ್ಷಣ ಪಡೆಯುತ್ತಿರುವುದರಿಂದ ಕ್ಲಿನಿಕ್‌ಗೆ ಸರಿಯಾಗಿ ಹಾಜರಾಗುತ್ತಿಲ್ಲ. ಇದರಿಂದ ಸಾರ್ವಜನಿಕರಿಗೆ ಸಿಗದೆ ವಾಂಬೆ ಕಾಲೋನಿಯ ನಮ್ಮ ಕ್ಲಿನಿಕ್ ಬಹುತೇಕ ಬಂದ್ ಆದ ಸ್ಥಿತಿಯಲ್ಲಿದೆ ಎಂಬ ಆರೋಪ ಕೇಳಿಬಂದಿತ್ತು.

ಸರ್ಕಾರದ ನಿಯಮಾವಳಿ ಏನಿದೆ?

ಸರ್ಕಾರಿ ನಿಯಮಾವಳಿ ಪ್ರಕಾರ ಎಂ.ಡಿ. ವ್ಯಾಸಂಗ ಮಾಡುತ್ತಾ ಸರ್ಕಾರಿ ಸೇವೆಯ ವೇತನ ಪಡೆಯುವುದು ಕಾನೂನುಬಾಹಿರವಾಗಿದೆ. ಈ ಬಗ್ಗೆ ಡಾ. ರಾಜಕುಮಾರ ಯರಗಲ್ ಮಾತ್ರ ನುಣುಚಿಕೊಳ್ಳೋ ಕೆಲಸ ಮಾಡುತ್ತಿದ್ದಾರೆ ಎಂಬೆಲ್ಲಾ ಆರೋಪಗಳು ಕೇಳಿಬಂದಿದ್ದವು. ಆರೋಗ್ಯ ಇಲಾಖೆ ಸಹ ಈ ಬಗ್ಗೆ ಮೌನವಾಗಿದ್ದು, ಇಷ್ಟೆಲ್ಲ ಅಕ್ರಮ ಬಯಲಾದ್ರೂ ಡಿಎಚ್‌ಓ ಯರಗಲ್ ವಿರುದ್ಧವಾಗಲಿ ಅಥವಾ ಅವರ ಮಗಳ ವಿರುದ್ಧವಾಗಲಿ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಗಂಭೀರ ಆರೋಪ ಮಾಡಲಾಗಿತ್ತು.

ಕರ್ತವ್ಯದಿಂದ ಬಿಡುಗಡೆ

ಈ ಎಲ್ಲ ಆರೋಪಗಳ ಹಿನ್ನೆಲೆಯಲ್ಲಿ, ಇದೀಗ ವೈದ್ಯಾಧಿಕಾರಿ ಡಾ. ಅಂಕಿತಾ ಯರಗಲ್​​ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜಕುಮಾರ ಯರಗಲ್ ಅರ್ಥಾತ್​ ಅಂಕಿತಾ ಅವರ ತಂದೆಯೇ ಆದೇಶ ಹೊರಡಿಸಿದ್ದಾರೆ. ಡಾ. ಅಂಕಿತಾ ಯರಗಲ್, ನಮ್ಮ ಕ್ಲಿನಿಕ್‌ನಲ್ಲಿ ವೈದ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರೂ, 2023ರ ಮಾರ್ಚ್ 23ರಿಂದ ಬಾಗಲಕೋಟೆ ಎಸ್.ಎನ್. ಮೆಡಿಕಲ್ ಕಾಲೇಜಿನಲ್ಲಿ ಎಂಡಿ ಪೆಥಾಲಜಿ ಅಧ್ಯಯನ ಮಾಡುತ್ತಿದ್ದರು. ಈ ಅವಧಿಯಲ್ಲಿ ಎರಡೂ ಕಡೆ ಹಾಜರಾತಿ ಸಹಿ ಮಾಡಿದ್ದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಆರೋಗ್ಯ ಇಲಾಖೆಗೆ ಮಾಹಿತಿ ನೀಡದೆ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡಿದ್ದು ಮತ್ತು ಅನಧಿಕೃತ ಗೈರು ಹಾಜರಿ ಕರ್ತವ್ಯ ಲೋಪಕ್ಕೆ ಕಾರಣವಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದ್ದು, ಸೇವೆಯಿಂದ ಬಿಡುಗಡೆ ಮಾಡಲಾಗಿದೆ.

PREV
Read more Articles on
click me!

Recommended Stories

ರಾಜ್ಯದ ಇಂಜಿನಿಯರ್‍‌ಗಳಿಗೆ ಸರ್ಕಾರದಿಂದ ಎರಡು ಭರ್ಜರಿ ಗುಡ್‌ನ್ಯೂಸ್
ತುಳು ಭಾಷೆಗೆ ಕರ್ನಾಟಕದ 2ನೇ ಅಧಿಕೃತ ಭಾಷೆ ಸ್ಥಾನಮಾನ, ಸೂಚನೆ ನೀಡಿದ ಸಚಿವ ಶಿವರಾಜ್ ತಂಗಡಗಿ