ರಾಜ್ಯದ ಇಂಜಿನಿಯರ್‍‌ಗಳಿಗೆ ಸರ್ಕಾರದಿಂದ ಎರಡು ಭರ್ಜರಿ ಗುಡ್‌ನ್ಯೂಸ್

Published : Sep 15, 2026, 09:31 PM IST
september 15 engineers day

ಸಾರಾಂಶ

ಕರ್ನಾಟಕ ಸರ್ಕಾರ ರಾಜ್ಯದ ಇಂಜಿನಿಯರ್‍‌ಗಳಿಗೆ ಭರ್ಜರಿ ಗುಡ್‌ನ್ಯೂಸ್ ನೀಡಿದೆ. ಸೆಪ್ಟೆಂಬರ್ 15 ರಂದು ಇನ್ಮುಂದೆ ಇಂಜಿನಿಯರ್ ದಿನವನ್ನಾಗಿ ಆಚರಿಸುವುದರ ಜೊತೆಗೆ ಮತ್ತೊಂದು ಸಿಹಿಸುದ್ದಿಯನ್ನ ಕೊಟ್ಟಿದೆ.

ಬೆಂಗಳೂರು: ರಾಜ್ಯದ ಇಂಜಿನಿಯರ್‌ಗಳಿಗೆ ಸರ್ಕಾರದಿಂದ ಗುಡ್ ನ್ಯೂಸ್ ಸಿಕ್ಕಿದೆ. ಇನ್ಮುಂದೆ ಇಂಜಿನಿಯರ್‌ಗಳ ಹೆಸರಿನ ಮುಂದೆ ‘Er’ ಶೀರ್ಷಿಕೆ ಬಳಸಲು ಅಧಿಕೃತವಾಗಿ ಗ್ರೀನ್ ಸಿಗ್ನಲ್ ನೀಡಿದೆ. ಅಂದರೆ ವೈದ್ಯರಿಗೆ Dr ಬಳಸಿದಂತೆ ಇಂಜಿನಿಯರ್‌ಗಳೂ ತಮ್ಮ ಹೆಸರಿನ ಮುಂದೆ ಪೂರ್ವಪ್ರತ್ಯಯ ಬಳಸಲು ಸರ್ಕಾರದ ಆದೇಶ ನೀಡಿದೆ.

ಜೊತೆಗೆ ಪ್ರತಿ ವರ್ಷ ಸೆಪ್ಟೆಂಬರ್ 15 ರಂದು ಅಧಿಕೃತವಾಗಿ ಇಂಜಿನಿಯರ್ಸ್ ದಿನ ಆಚರಣೆಗೆ ಆದೇಶ ನೀಡಿದೆ. ಸರ್ ಎಂ. ವಿಶ್ವೇಶ್ವರಯ್ಯ ಜನ್ಮದಿನದ ಅಂಗವಾಗಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. 'Er' ಎಂಬುದು ಇಂಜಿನಿಯರ್‌ಗಳ ಜೀವಿತಾವಧಿ ಸೇವೆಗೆ ಗೌರವ ಎಂಬ ಕಾರಣಕ್ಕೆ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮೈಸೂರು ಸಂಸ್ಥಾನದ 19ನೇ ದಿವಾನರಾಗಿದ್ದ ಸರ್ ಎಂ.ವಿಶ್ವೇಶ್ವರಯ್ಯರ ಕೊಡುಗೆ ಸ್ಮರಿಸಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಸರ್ಕಾರದ ಆದೇಶದಲ್ಲಿ ಏನಿದೆ?

ಕರ್ನಾಟಕ ಸರ್ಕಾರದ ನಡವಳಿಗಳು

ವಿಷಯ : ಪ್ರತಿ ವರ್ಷ ಸೆಪ್ಟೆಂಬರ್, 15 ನ್ನು ಇಂಜಿನಿಯರ್ಸ್ ದಿನವನ್ನಾಗಿ ಆಚರಿಸುವ ಬಗ್ಗೆ, ಮತ್ತು ಇಂಜಿನಿಯರ್ ಗಳ ಹೆಸರುಗಳ ಪೂರ್ವದಲ್ಲಿ Er (Engineer-ಅಭಿಯಂತರರು) ಎಂಬ ಶೀರ್ಷಿಕೆಯನ್ನು ಬಳಸಲು ಅನುಮತಿಸುವ ಕುರಿತು.

ಪ್ರಸ್ತಾವನೆ :

ಸೆಪ್ಟೆಂಬರ್ 15, 1861 ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ ಜನಿಸಿದ, ಭಾರತದ ಶ್ರೇಷ್ಠ ಇಂಜಿನಿಯರ್, ಆಧುನಿಕ ಮೈಸೂರು ರಾಜ್ಯದ ನಿರ್ಮಾತೃ ಮತ್ತು ಮಹಾನ್ ದೇಶಭಕ್ತರಾಗಿದ್ದ ಸರ್ ಎಂ. ವಿಶ್ವೇಶ್ವರಯ್ಯ (Sir M. Visvesvaraya) ರವರು ದೇಶಕ್ಕೆ ನೀಡಿರುವ ಕೊಡುಗೆಗಳು ಅವಿಸ್ಮರಣೀಯ.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತಾವಧಿಯಲ್ಲಿ 1912 ರಿಂದ 1918 ರವರೆಗೆ ಮೈಸೂರು ರಾಜ್ಯದ 19ನೇ ದಿವಾನರಾಗಿ ಸೇವೆ ಸಲ್ಲಿಸಿದ ಮಾನ್ಯರ ದೂರದೃಷ್ಟಿಯ ಚಿಂತನೆಗಳು ಕೈಗಾರಿಕೀಕರಣ ಇಲ್ಲವೇ ವಿನಾಶ (Industrialize or Perish) ಎಂಬ ತತ್ವದ ಮೇಲೆ ಆಧಾರಿತವಾಗಿದ್ದು, ವಿವಿಧ ಕ್ಷೇತ್ರಗಳಲ್ಲಿ ಅವರು ನೀಡಿರುವ ಕೊಡುಗೆ, ಮಾಡಿರುವ ಸಾಧನೆ ಅಪಾರವಾದುದಾಗಿದೆ. ಆ ಪೈಕಿ ಇಂಜಿನಿಯರಿಂಗ್ ಮತ್ತು ನೀರಾವರಿ ಕ್ಷೇತ್ರದಲ್ಲಿ ಕೆ.ಆರ್.ಎಸ್ ಅಣೆಕಟ್ಟು (KRS Dam) ನಿರ್ಮಾಣ, ಪ್ರವಾಹದ ನೀರನ್ನು ನಿಯಂತ್ರಿಸಲು ಸ್ವಯಂಚಾಲಿತ ಫ್ಲಡ್ ಗೇಟ್‌ಗಳ ಅಳವಡಿಕೆ, ಕೈಗಾರಿಕಾ ಕ್ಷೇತ್ರದಲ್ಲಿ ಭದ್ರಾವತಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಸ್ಥಾಪನೆ, ಮೈಸೂರಿನ ಸುಪ್ರಸಿದ್ಧ ಶ್ರೀಗಂಧದ ತೈಲ ಕಾರ್ಖಾನೆ ಮತ್ತು ಸಾಬೂನು ಕಾರ್ಖಾನೆ ಪ್ರಾರಂಭ, ಶಿಕ್ಷಣ ಮತ್ತು ಹಣಕಾಸು ಕ್ಷೇತ್ರದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಸ್ಥಾಪನೆ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು (ಈಗಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ) ಸ್ಥಾಪನೆ ಮತ್ತು ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆ, ಹೀಗೆ ಹಲವಾರು ಕ್ಷೇತ್ರಗಳಲ್ಲಿ ಅಳಿಸಲಾಗದಂಥ ತಮ್ಮ ಛಾಪನ್ನು ಮೂಡಿಸಿರುತ್ತಾರೆ.

ಮುಂದುವರೆದು, ಸಮಾಜದ ಪ್ರಗತಿ ಮತ್ತು ಆಧುನಿಕ ಜಗತ್ತಿನ ನಿರ್ಮಾಣದಲ್ಲಿ ಇಂಜಿನಿಯರ್ ಗಳ (ಅಭಿಯಂತರರ) ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಇಂಜಿನಿಯರ್‌ಗಳು ಕೇವಲ ಯಂತ್ರಗಳನ್ನು ವಿನ್ಯಾಸಗೊಳಿಸುವುದೇ ಅಲ್ಲ, ಬದಲಿಗೆ ಮಾನವನ ಸವಾಲುಗಳಿಗೆ ತಾಂತ್ರಿಕ ಪರಿಹಾರಗಳನ್ನು ಕಂಡುಕೊಳ್ಳುವ ಮೂಲಕ ಭವಿಷ್ಯವನ್ನು ರೂಪಿಸುವ ಶಿಲ್ಪಿಗಳು ಎಂದರೆ ತಪ್ಪಾಗಲಾರದು.

ದೇಶದ ಅಭಿವೃದ್ಧಿಯಲ್ಲಿ ಇಂಜಿನಿಯರ್ಸ್ ಗಳ ಮಹತ್ವದ ಪಾತ್ರವನ್ನು ಅರಿತು, ಸರ್ ಎಂ. ವಿಶ್ವೇಶ್ವರಯ್ಯ ರವರು ರಾಷ್ಟ್ರಕ್ಕೆ ನೀಡಿರುವ ಗಮನಾರ್ಹ ಕೊಡುಗೆಗಳನ್ನು ಗೌರವಿಸಲು ಅವರ ಜನ್ಮ ದಿನವಾದ ಸೆಪ್ಟೆಂಬರ್ 15 ನ್ನು ಇಂಜಿನಿಯರ್ಸ್ ದಿನವನ್ನಾಗಿ ಆಚರಿಸಿಕೊಂಡು ಬರುತ್ತಿರುವುದನ್ನು ಅಧಿಕೃತವಾಗಿ ಘೋಷಿಸಲು ಹಾಗೂ ಅವರ ಕೊಡುಗೆಯನ್ನು ವಿಶಿಷ್ಟ ಚಿಹ್ನೆಯೊಂದಿಗೆ ಗೌರವಿಸಲು ನಿರ್ಧರಿಸಿದ್ದು, ಕರ್ನಾಟಕದ ಇಂಜಿನಿಯರ್ ಗಳು ತಮ್ಮ ಹೆಸರಿನ ಮೊದಲು Er ಎಂಬ ಪೂರ್ವಪ್ರತ್ಯಯವನ್ನು ಹೆಮ್ಮೆಯಿಂದ ಬಳಸಬಹುದಾಗಿದ್ದು, ಇದು ಕೇವಲ ಎರಡು ಅಕ್ಷರಗಳಾಗೀರದೇ, ಅವರುಗಳ ಜೀವಿತಾವಧಿಯ ಸೇವೆಯನ್ನು ಪ್ರತಿನಿಧಿಸುವುದರಿಂದ, ಇಂಜಿನಿಯರ್‌ಗಳ ಹೆಸರುಗಳ ಪೂರ್ವದಲ್ಲಿ Er ಶೀರ್ಷಿಕೆಯನ್ನು (Title) ಬಳಸಲು ಸರ್ಕಾರವು ತೀರ್ಮಾನಿಸಿ, ಅದರಂತೆ ಆದೇಶ ನೀಡಲಾಗಿದೆ.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ದೇಶದ ಅಭಿವೃದ್ಧಿ ಮತ್ತು ಆರ್ಥಿಕ ಪ್ರಗತಿಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಇಂಜಿನಿಯರ್ಸ್ ಗಳ ಅತ್ಯಮೂಲ್ಯವಾದ ಕೊಡುಗೆಯನ್ನು ಸ್ಮರಿಸುತ್ತಾ, ಗೌರವ ಸಮರ್ಪಣೆ ಮಾಡುವ ಸಲುವಾಗಿ, ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ರವರ ಜನ್ಮ ದಿನವಾದ ಸೆಪ್ಟೆಂಬರ್ 15 ಎಂದು ಇಂಜಿನಿಯರ್ಸ್ ದಿನ ವನ್ನಾಗಿ ಆಚರಿಸಲು ಮತ್ತು ಇಂಜಿನಿಯರ್ ಗಳ ಹೆಸರಿನ ಪೂರ್ವದಲ್ಲಿ Er(Engineer-ಅಭಿಯಂತರರು) ಎಂಬ ಶೀರ್ಷಿಕೆಯನ್ನು (Title) ಬಳಸಲು ಸರ್ಕಾರವು ಅನುಮತಿ ನೀಡಿ ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ,

(ನಾಗಪ್ಪ ಎಸ್. ಪರೀಟ)

ಸರ್ಕಾರದ ಅಧೀನ ಕಾರ್ಯದರ್ಶಿ,

ಸಿಆಸುಇ(ಸೇವೆಗಳು-3)

PREV
Read more Articles on
click me!

Recommended Stories

ತುಳು ಭಾಷೆಗೆ ಕರ್ನಾಟಕದ 2ನೇ ಅಧಿಕೃತ ಭಾಷೆ ಸ್ಥಾನಮಾನ, ಸೂಚನೆ ನೀಡಿದ ಸಚಿವ ಶಿವರಾಜ್ ತಂಗಡಗಿ
Water Crisis: ಅನ್ನವಿದೆ, ಬೇಯಿಸಲು ನೀರಿಲ್ಲ! ಖಾಲಿ ಬಿಂದಿಗೆ ಹಿಡಿದು ರಸ್ತೆಗಿಳಿದ ಶಾಲಾ ಮಕ್ಕಳು!