ದೇಶದ್ರೋಹಿ ವಿರುದ್ಧ ಸಂಘಟನೆಗಳ ಆಕ್ರೋಶ| ಪಾಕಿಸ್ತಾನಕ್ಕೆ ಜೈಕಾರ ಹಾಕಿದ್ದ ಅಮೂಲ್ಯ ವಿರುದ್ಧ ಹಿಂದು, ಕನ್ನಡ ಪರ ಸಂಘಟನೆಗಳಿಂದ ಧರಣಿ|ಪೌರತ್ವ ಕಾಯ್ದೆ ಹೆಸರಿನಲ್ಲಿ ಸಮುದಾಯಗಳ ನಡುವೆ ದ್ವೇಷ ಬಿತ್ತುವ ಕೆಲಸ| ಕಠಿಣ ಶಿಕ್ಷೆಗೆ ಪ್ರತಿಭಟನಾಕಾರರ ಒತ್ತಾಯ|
ಬೆಂಗಳೂರು(ಫೆ.22): ಪಾಕಿಸ್ತಾನ ಪರ ಘೋಷಣೆ ಕೂಗಿದ ಅಮೂಲ್ಯ ಲಿಯೋನ್ ಸೇರಿದಂತೆ ದೇಶದ್ರೋಹಿ ಹೇಳಿಕೆ ನೀಡುವವರನ್ನು ಗಡಿಪಾರು ಮಾಡಬೇಕೆಂದು ಆಗ್ರಹಿಸಿ ಹಿಂದು ಹಾಗೂ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ರಾಜಧಾನಿಯಲ್ಲಿ ಪ್ರತಿಭಟನೆ ನಡೆಸಿದರು.
ಶುಕ್ರವಾರ ಪುರಭವನದ ಎದುರು ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಹಿಂದು ಜನಜಾಗೃತಿ ಸಮಿತಿ, ಶ್ರೀರಾಮನ ಸೇನೆ, ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ಪಾಕಿಸ್ತಾನಕ್ಕೆ ಜೈಕಾರ ಹಾಕುವ ಹಾಗೂ ದೇಶ ವಿರೋಧಿ ಹೇಳಿಕೆ ನೀಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರನ್ನು ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.
ಅಮೂಲ್ಯ ವಿರುದ್ಧ ಪ್ರತಿಭಟನೆಯಲ್ಲಿ ಪಾಕ್ ಜಿಂದಾಬಾದ್ ಎಂದ ಯುವತಿ
ಗುರುವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಸಮಾವೇಶದಲ್ಲಿ ಎಂಐಎಂ ಪಕ್ಷದ ಸಂಸದ ಅಸಾದುದ್ದೀನ್ ಓವೈಸಿ ಸಮ್ಮುಖದಲ್ಲಿ ಅಮೂಲ್ಯ ಲಿಯೋನ್ ಎಂಬಾಕೆ ಪಾಕಿಸ್ತಾನಕ್ಕೆ ಜೈಕಾರ ಕೂಗಿದ್ದಾಳೆ. ಅಲ್ಲದೆ, ಈ ಹಿಂದೆ ಕಲಬುರಗಿಯಲ್ಲಿ ನಡೆದ ಪ್ರತಿಭಟನೆ ವೇಳೆಯೂ ಎಂಐಎಂ ಪಕ್ಷದ ಶಾಸಕ ವಾರಿಸ್ ಪಠಾಣ್ ಪ್ರಚೋದನಕಾರಿ ಹೇಳಿಕೆ ನೀಡಿದ್ದರು. ಇಲ್ಲಿಯ ಅನ್ನ ತಿಂದು, ನೀರು ಕುಡಿದು, ಸವಲತ್ತು ಪಡೆದು ಪಾಕಿಸ್ತಾನಕ್ಕೆ ಘೋಷಣೆ ಕೂಗುತ್ತಾರೆ. ಇಂತಹ ದೇಶದ್ರೋಹಿಗಳಿಗೆ ಕಠೋರ ಶಿಕ್ಷೆ ನೀಡಬೇಕು ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಹಿಂದು ಜನಜಾಗೃತಿ ಸಮಿತಿಯ ಸಂಚಾಲಕ ಮೋಹನ ಗೌಡ ಅವರು, ಇತ್ತೀಚೆಗೆ ಕರ್ನಾಟಕ ಸೇರಿದಂತೆ ದೇಶದ ಹಲವೆಡೆ ದೇಶ ವಿರೋಧಿ ಚಟುಚಟಿಕೆಗಳು ಹೆಚ್ಚಾಗಿವೆ. ಕೆಲವು ದಿನಗಳ ಹಿಂದೆಯಷ್ಟೇ ರಾಜ್ಯದ ಹುಬ್ಬಳ್ಳಿಯಲ್ಲಿ ಕಾಶ್ಮೀರಿ ವಿದ್ಯಾರ್ಥಿಗಳು ಪಾಕ್ ಪರ ಜೈಕಾರ ಕೂಗಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಾಕಿದ್ದರು. ಇತ್ತೀಚೆಗೆ ಪ್ರತಿಭಟನೆ ವೇಳೆ ಬೆಂಗಳೂರು ಮತ್ತು ಮೈಸೂರಿನಲ್ಲಿ ಫ್ರೀ ಕಾಶ್ಮೀರ ಫಲಕ ಹಿಡಿದು ಪ್ರತಿಭಟಿಸಿದ್ದರು. ಬೀದರ್‌ನಲ್ಲಿ ಮಕ್ಕಳಿಂದ ದೇಶ ವಿರೋಧಿ ನಾಟಕ ಮಾಡಿಸಿದ್ದರು. ಈ ಪೌರತ್ವ ವಿರೋಧಿ ಹೋರಾಟಗಳಲ್ಲಿ ಈ ದೇಶಕ್ಕೆ ವಿರುದ್ಧವಾದ ಘಟನೆಗಳು ಜರುಗುತ್ತಿವೆ ಎಂದು ಕಿಡಿಕಾರಿದರು.
ಪೌರತ್ವ ತಿದ್ದುಪಡಿ ಕಾಯ್ದೆ ಹೆಸರಿನಲ್ಲಿ ದಂಗೆ ಎಬ್ಬಿಸಿ ಸಮುದಾಯಗಳ ನಡುವೆ ದ್ವೇಷ ಬಿತ್ತಿ, ದೇಶದಲ್ಲಿ ಅಶಾಂತಿ ನಿರ್ಮಿಸುವ ಷಡ್ಯಂತ್ರ ನಡೆಯುತ್ತಿದೆ. ಇದು ಅಂತಾರಾಷ್ಟ್ರೀಯ ಮಟ್ಟದ ಷಡ್ಯಂತ್ರವಾಗಿದ್ದು, ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
'ಪಾಕ್ ಘೋಷಣೆ ನನ್ನ ಉದ್ದೇಶ ಆಗಿರಲಿಲ್ಲ, ನಾವೆಲ್ಲ ಭಾರತೀಯರೆಂದು ಹೇಳುವವಳಿದ್ದೆ'
ಪಾಕಿಸ್ತಾನಕ್ಕೆ ಜೈಕಾರ ಕೂಗಿ ಜೈಲು ಸೇರಿರುವ ಅಮೂಲ್ಯ ಲಿಯೋನ್ ಮಾಧ್ಯಮವೊಂದರ ಜೊತೆ ಮಾತನಾಡುತ್ತಾ, ತಮ್ಮ ಹಿಂದೆ ದೊಡ್ಡ ತಂಡವಿದೆ, ಅವರು ಸೂಚಿಸಿದಂತೆ ತಾವು ಮಾತನಾಡುವುದಾಗಿ ಹೇಳಿಕೆ ನೀಡಿದ್ದಾರೆ. ಹೀಗಾಗಿ ಆಕೆಯ ಹಿಂದಿರುವ ಜಾಲದ ವಿರುದ್ಧ ಸಮಗ್ರ ತನಿಖೆಯಾಗಬೇಕು. ಆಕೆಯನ್ನು ಗಡಿಪಾರು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.
ಗಲ್ಲು ಶಿಕ್ಷೆಗೆ ಆಗ್ರಹ
ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ಮಾಡಿದ ಕರ್ನಾಟಕ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು, ಪಾಕಿಸ್ತಾನ ಪರ ಘೋಷಣೆ ಕೂಗಿದ ಅಮೂಲ್ಯ ಲಿಯೋನ್‌ಗೆ ಅನುಕಂಪ ತೋರದೆ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದರು. ಭಾರತದಲ್ಲಿ ನೆಲೆಸಿ, ಎಲ್ಲ ಸೌಲಭ್ಯ ಪಡೆದು ಪಾಕಿಸ್ತಾನದ ಪರ ಘೋಷಣೆ ಕೂಗುವ ದೇಶದ್ರೋಹಿಗಳನ್ನು ಕ್ಷಮಿಸಬಾರದು. ಇವರ ಹಿಂದೆ ಯಾರೇ ಇದ್ದರೂ ಒದ್ದು ಜೈಲಿಗಟ್ಟಬೇಕು. ಬಹಿರಂಗ ಸಮಾವೇಶದಲ್ಲಿ ಪಾಕಿಸ್ತಾನಕ್ಕೆ ಜಿಂದಾಬಾದ್ ಹೇಳಿರುವ ಅಮೂಲ್ಯಳನ್ನು ಗಲ್ಲಿಗೇರಿಸಬೇಕು ಎಂದು ಆಗ್ರಹಿಸಿದ್ದಾರೆ.