Karnataka monsoon: ಉಳ್ಳಾಲದಲ್ಲಿ ಮಳೆ ನಿಂತರೂ ಮನೆಗಳಿಗೆ ಅಪ್ಪಳಿಸುತ್ತಿವೆ ಅಲೆಗಳು!

By Kannadaprabha News  |  First Published Jun 11, 2023, 5:30 AM IST

ಕಳೆದೆರಡು ದಿನಗಳಿಂದ ಉಳ್ಳಾಲ ತಾಲೂಕಿನಾದ್ಯಂತ ಮಳೆ ಸುರಿಯುತ್ತಿದ್ದು, ಶನಿವಾರ ಮಳೆ ಪ್ರಮಾಣ ಕಡಿಮೆಯಾಗಿದೆ. ಉಳ್ಳಾಲ, ಸೋಮೇಶ್ವರ, ಉಚ್ಚಿಲ ಪ್ರದೇಶದಲ್ಲಿ ಸಮುದ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿದೆ.


ಉಳ್ಳಾಲ (ಜೂ.11): ಕಳೆದೆರಡು ದಿನಗಳಿಂದ ಉಳ್ಳಾಲ ತಾಲೂಕಿನಾದ್ಯಂತ ಮಳೆ ಸುರಿಯುತ್ತಿದ್ದು, ಶನಿವಾರ ಮಳೆ ಪ್ರಮಾಣ ಕಡಿಮೆಯಾಗಿದೆ. ಉಳ್ಳಾಲ, ಸೋಮೇಶ್ವರ, ಉಚ್ಚಿಲ ಪ್ರದೇಶದಲ್ಲಿ ಸಮುದ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿದೆ.

ಉಳ್ಳಾಲದಲ್ಲಿ ಬಿಟ್ಟು ಬಿಟ್ಟು ಮಳೆ ಸುರಿಯುತ್ತಿದ್ದು, ಬೆಳಗ್ಗೆ ಮಳೆ ಧಾರಾಕಾರವಾಗಿ ಸುರಿದರೆ ಬಳಿಕ ಹನಿ ಮಳೆ ಸಂಜೆಯವರೆಗೆ ಇತ್ತು. ಮಳೆ ಆರಂಭವಾಗುತ್ತದ್ದಂತೆ ರಸ್ತೆಗಳಲ್ಲಿ ಹೊಂಡಗಳು ಬಿದ್ದಿದ್ದು, ಚರಂಡಿ ಸಮಸ್ಯೆಯಿಂದ ರಸ್ತೆಯಲ್ಲಿ ನೀರು ಹರಿದು ರಸ್ತೆಗಳಿಗೆ ಹಾನಿಯಾಗುತ್ತಿದೆ. ಮಳೆ ಆರಂಭವಾದರೂ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಮುಂದುವರಿದಿದ್ದು, ಸತತವಾಗಿ ಮಳೆ ಬಂದರೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುವ ಆಶಾವಾದ ಜನರಲ್ಲಿದೆ.

Tap to resize

Latest Videos

 

ಕರ್ನಾಟಕಕ್ಕೆ ನಾಡಿದ್ದು ಮುಂಗಾರು ಪ್ರವೇಶ: ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆ

ಹೆಚ್ಚಿದ ಸಮುದ್ರದ ಅಬ್ಬರ: ಕೈಕೋ, ಸೀಗ್ರೌಂಡ್‌, ಮೊಗವೀರಪಟ್ಣ, ಸೋಮೇಶ್ವರ, ಉಚ್ಚಿಲ ಪ್ರದೇಶದಲ್ಲಿ ಸಮುದ್ರದ ಅಲೆಗಳು ದಡಕ್ಕಪ್ಪಳಿಸುತ್ತಿದೆ. ಉಚ್ಚಿಲ ಬಟ್ಟಪ್ಪಾಡಿಯಲ್ಲಿ ತಾತ್ಕಾಲಿಕ ಕಾಮಗಾರಿ ನಡೆಯುತ್ತಿದ್ದರೂ ಸಮುದ್ರದ ಅಲೆಗಳು ಮನೆಗಳಿಗೆ ಅಪ್ಪಳಿಸುತ್ತಿದೆ.

ಬಂಟ್ವಾಳ ತಾಲೂಕಿನಲ್ಲಿ ಸಾಧಾರಣ ಮಳೆ

ಬಂಟ್ವಾಳ: ತಾಲೂಕಿನಲ್ಲಿಯೂ ಶನಿವಾರ ಸಾಧಾರಣ ಮಳೆಯಾಗಿದ್ದು, ಬಿಸಿಲಿನ ಬೇಗೆಯಿಂದ ಮುಕ್ತಿ ದೊರೆತಿದೆ. ಬೆಳಗ್ಗಿನಿಂದಲೇ ಮೋಡ ಕವಿದ ವಾತಾವರಣವಿದ್ದು, ಆಗಾಗ್ಗೆ ಮಳೆ ಧಾರಕಾರವಾಗಿ ಸುರಿಯಿತು. ಇದರಿಂದಾಗಿ ಬಿಸಿಲ ಬೇಗೆಗೆ ಬಸವಳಿದಿದ್ದ ಜನತೆಗೆ ಮಳೆ ತಂಪೆರೆದಂತಾಗಿದೆ.

ವಾಡಿಕೆಯ ಮುಂಗಾರು ಕೇರಳ ಪ್ರವೇಶವಾಗಿದ್ದು, ಅದರೊಂದಿಗೆ ಚಂಡಮಾರುತದ ಪ್ರಭಾವವೂ ಇರುವ ಕಾರಣ ಈಗ ಮಳೆಯಾಗುತ್ತಿದ್ದು, ಕಚೇರಿ, ಶಾಲೆ, ಕಾಲೇಜುಗಳಿಗೆ ತೆರಳುವವರು ಮೊದಲೇ ಸಿದ್ಧರಾಗಿದ್ದರು. ಬಸ್‌ ನಿಲ್ದಾಣ ಸಹಿತ ಹಲವೆಡೆ ಹೂಳೆತ್ತದ ಕಾರಣ ರಸ್ತೆಯಲ್ಲೇ ನೀರು ನಿಂತ ದೃಶ್ಯಗಳು ಕಂಡುಬಂದವು. ಇನ್ನು ಬಿ.ಸಿ.ರೋಡ್‌ ನಲ್ಲಿ ಮಂಗಳೂರಿಗೆ ತೆರಳುವ ಪ್ರಯಾಣಿಕರು ಎಂದಿನಂತೆಯೇ ನೀರಿನ ಮಧ್ಯೆ ನಿಂತರೆ, ದಶಕಗಳಿಂದ ಮಳೆಗಾಲದಲ್ಲಿ ನೀರು ನಿಲ್ಲುವ ಜಾಗವಾಗಿ ಪ್ರಸಿದ್ಧಿ ಪಡೆದಿದ್ದ ಬಿ.ಸಿ.ರೋಡಿನ ಭೂ ಅಭಿವೃದ್ಧಿ ಬ್ಯಾಂಕ್‌ ಕಟ್ಟಡದ ಮುಂಭಾಗದ ರಸ್ತೆ ಕಾಂಕ್ರೀಟ್‌ ಆಗಿ ಬದಲಾದರೂ ನೀರು ಹರಿದುಹೋಗಲು ದಾರಿ ಇಲ್ಲದೆ ರಸ್ತೆಯಲ್ಲೇ ನೀರು ನಿಂತಿತ್ತು.

ಕೇರಳಕ್ಕೆ ಮಾನ್ಸೂನ್‌ ಎಂಟ್ರಿ, ಕೆಲವೇ ಸಮಯದಲ್ಲಿ ಕರ್ನಾಟಕ-ತಮಿಳುನಾಡಿಗೂ ಪ್ರವೇಶ!

click me!