ಪಿಲಿಕುಳ ಪ್ರಾಣಿ ಸಂಗ್ರಹಾಲಯದಲ್ಲಿನ ಪ್ರಾಣಿ- ಪಕ್ಷಿಗಳನ್ನು ತೀರ ಹಿಂಸಾತ್ಮಕ ರೀತಿಯಲ್ಲಿ ಇರಿಸಲಾಗಿದ್ದು, ಅವುಗಳಿಗೆ ಈ ಹೀನಾಯ ಬಂಧನದಿಂದ ಮುಕ್ತಿ ನೀಡಬೇಕು ಎಂದು ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ ಶಶಿಧರ ಶೆಟ್ಟಿಒತ್ತಾಯಿಸಿದ್ದಾರೆ.
ಮಂಗಳೂರು (ಜೂ.11) :
ಪಿಲಿಕುಳ ಪ್ರಾಣಿ ಸಂಗ್ರಹಾಲಯದಲ್ಲಿನ ಪ್ರಾಣಿ- ಪಕ್ಷಿಗಳನ್ನು ತೀರ ಹಿಂಸಾತ್ಮಕ ರೀತಿಯಲ್ಲಿ ಇರಿಸಲಾಗಿದ್ದು, ಅವುಗಳಿಗೆ ಈ ಹೀನಾಯ ಬಂಧನದಿಂದ ಮುಕ್ತಿ ನೀಡಬೇಕು ಎಂದು ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ ಶಶಿಧರ ಶೆಟ್ಟಿಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿನ ಪ್ರಾಣಿ ಸಂಗ್ರಹಾಲಯದಲ್ಲಿ ಈ ಹಿಂದೆ ನೂರಕ್ಕೂ ಅಧಿಕ ಕಾಡುಕೋಳಿಗಳಿದ್ದವು. ಇತ್ತೀಚೆಗೆ ಒಕ್ಕೂಟದ ವತಿಯಿಂದ ಸ್ಥಳ ಪರಿಶೀಲನೆ ನಡೆಸಿದಾಗ 4 ಕಾಡುಕೋಳಿಗಳು ಮಾತ್ರ ಇದ್ದವು. ಇತ್ತೀಚೆಗೆ ಇಲ್ಲಿನ ನೀರು ಬಾತುವನ್ನು ಹೊರಗಿನಿಂದ ಬಂದ ಬೆಕ್ಕೊಂದು ಎಳೆದೊಯ್ದು ತಿಂದು ಹಾಕಿದೆ. ಜಿಂಕೆ, ಕಡವೆಗಳನ್ನು ಒಟ್ಟಿಗೆ ಇಡಬಾರದು ಎನ್ನುವ ನಿಯಮ ಇದ್ದರೂ ಪಿಲಿಕುಳದಲ್ಲಿ ಇವೆರಡೂ 30-40 ಪ್ರಾಣಿಗಳನ್ನು ಇರಿಸಲಾಗಿದೆ. ಇತ್ತೀಚೆಗೆ ಗರ್ಭಿಣಿ ಕೃಷ್ಣಮೃಗವೊಂದರ ಪ್ರಸವದ ಬಳಿಕ ಕರು ಸತ್ತಿತ್ತು. ಬೇರೆ ಪ್ರಾಣಿಗಳೊಂದಿಗೆ ಗರ್ಭಿಣಿ ಕೃಷ್ಣಮೃಗವನ್ನು ಇಟ್ಟದ್ದೇ ಇದಕ್ಕೆ ಕಾರಣ. ಹನುಮಾನ್ ಮಂಗಗಳು ಇರುವ ಕಡೆ ಕೇವಲ ಅಕೇಶಿಯಾದ ನಾಲ್ಕು ಮರಗಳು ಮಾತ್ರ ಇವೆ. ಕರಡಿಗಳು ಇರುವ ಪ್ರದೇಶದಲ್ಲೂ ನಾಲ್ಕೈದು ಗಾಳಿಮರಗಳು ಬಿಟ್ಟರೆ ಯಾವುದೇ ಮರಗಳಿಲ್ಲ. ಕಾಡುಹಂದಿಗಳುಳ್ಳ ಪ್ರದೇಶಕ್ಕೆ ಶೌಚಾಲಯದ ನೀರು ಬಿಡಲಾಗುತ್ತಿದ್ದು ವಾಸನೆ ಹರಡಿದೆ ಎಂದು ಆಗ್ರಹಿಸಿದರು.
ಇತ್ತೀಚೆಗೆ ಹುಲಿಯೊಂದು ಸಾವಿಗೀಡಾಗಿದೆ. ಎರಡು ಹುಲಿಗಳ ನಡುವೆ ಇದ್ದ ಬೇಲಿ ತುಕ್ಕು ಹಿಡಿದು ಶಿಥಿಲವಾಗಿದ್ದರಿಂದ ಅದನ್ನು ಮುರಿದ ಹುಲಿಯು ಇನ್ನೊಂದು ಹುಲಿಯನ್ನು ಕೊಂದು ಹಾಕಿದೆ. ಗಾಯಗೊಂಡ ಹುಲಿಗೆ ಚಿಕಿತ್ಸೆ ನೀಡಲೂ ಅಲ್ಲಿ ಸರಿಯಾದ ವ್ಯವಸ್ಥೆಗಳಿಲ್ಲ. ಸಿಸಿ ಕ್ಯಾಮರಾಗಳಿದ್ದರೂ ಯಾವುದೂ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿದರು.
ಮಂಗ್ಳೂರಿನ ಪಿಲಿಕುಳದಲ್ಲಿ ಹುಲಿಗಳ ಕಾದಾಟ: ‘ನೇತ್ರಾವತಿ’ ಸಾವು
ಅಕೇಶಿಯಾ ಕಡಿಯಿರಿ: ಎನ್‌ಇಸಿಎಫ್‌ನ ಬೆನೆಡಿಕ್ಟ್ ಫರ್ನಾಂಡಿಸ್ ಮಾತನಾಡಿ, ಪಿಲಿಕುಳ ಅಭಿವೃದ್ಧಿ ಕಾಯ್ದೆ ಪ್ರಕಾರ ಪಶ್ಚಿಮಘಟ್ಟದ ಸಸ್ಯ ಪ್ರಬೇಧಗಳನ್ನು ಬೆಳೆಸಬೇಕು ಎಂದಿದ್ದರೂ ಪಿಲಿಕುಳ ಪ್ರಾಣಿ ಸಂಗ್ರಹಾಲಯದಲ್ಲಿ ಅಕೇಶಿಯಾ ಮರಗಳೇ ಹೆಚ್ಚಿವೆ. ಇಲ್ಲಿನ ಎಂಆರ್‌ಪಿಎಲ್ ಗ್ರೀನ್ ಬೆಲ್ಟ್ ಪ್ರದೇಶದಲ್ಲೂ ಶೇ.90ರಷ್ಟುಸಸ್ಯಗಳು ಅಕೇಶಿಯಾ ಜಾತಿಯದ್ದೇ ಇವೆ. ಕೂಡಲೆ ಈ ಮರಗಳನ್ನು ತೆಗೆದು ಆ ಸ್ಥಳದಲ್ಲಿ ಪಶ್ಚಿಮ ಘಟ್ಟಪ್ರಬೇಧದ ಮರಗಳನ್ನು ಬೆಳೆಸಬೇಕು ಎಂದು ಆಗ್ರಹಿಸಿದರು.
ಮಾರ್ಗಸೂಚಿಯಂತೆ ನಡೆಯುತ್ತಿದೆ
ಪ್ರಾಣಿ ಸಂಗ್ರಹಾಲಯದ ಎಲ್ಲ ಮಾರ್ಗಸೂಚಿಗಳ ಪ್ರಕಾರ ವ್ಯವಸ್ಥಿತವಾಗಿ ಪಿಲಿಕುಳ ಝೂ ನಡೆಯುತ್ತಿದೆ. ಭಾರತದಲ್ಲೇ ಉತ್ತಮ ಪ್ರಾಣಿ ಸಂಗ್ರಹಾಲಯದ ಎಂಬ ಹೆಸರು ಇದಕ್ಕಿದೆ. ಇಲ್ಲಿ ಯಾವ ಪ್ರಾಣಿ ಹುಟ್ಟಿದರೂ, ಸತ್ತರೂ ಎಲ್ಲವೂ ದಾಖಲಾಗುತ್ತದೆ. ಎಲ್ಲ ವ್ಯವಸ್ಥೆ ಉತ್ತಮ ರೀತಿಯಲ್ಲಿ ನಡೆಯುತ್ತಿರುವುದರಿಂದ ಸೆಂಟ್ರಲ್ ಝೂ ಅಥಾರಿಟಿಯು ಈ ಬಾರಿ ಪಿಲಿಕುಳ ಪ್ರಾಣಿ ಸಂಗ್ರಹಾಲಯಕ್ಕೆ 3 ವರ್ಷಕ್ಕೆ ರೆಕಗ್ನಿಶನ್ ನೀಡಿದೆ. ಝೂಗಳಲ್ಲಿ ಪ್ರಾಣಿಗಳ ಸಾವಿನ ಸರಾಸರಿ ಪ್ರಮಾಣ ಶೇ.6-8ರಷ್ಟಿದ್ದರೆ, ಪಿಲಿಕುಳದಲ್ಲಿ ಅತಿ ಕಡಿಮೆ ಶೇ.1.9ರಷ್ಟಿದೆ. ಇಲ್ಲಿ ಮರಿಗಳು ಹುಟ್ಟುವುದೂ ಅತಿ ಹೆಚ್ಚು. ಪ್ರತಿ ವರ್ಷ 2 ಸಾವಿರಕ್ಕೂ ಅಧಿಕ ಸಸಿಗಳನ್ನು ನೆಟ್ಟು ಬೆಳೆಸಲಾಗುತ್ತಿದೆ. ಪ್ರಾಣಿಗಳಿಗೆ ಗುಣಮಟ್ಟದ ಆಹಾರವನ್ನು ಪರೀಕ್ಷಿಸಿಯೇ ನೀಡಲಾಗುತ್ತಿದೆ.
- ಜಯಪ್ರಕಾಶ್ ಭಂಡಾರಿ, ಪಿಲಿಕುಳ ಪ್ರಾಣಿ ಸಂಗ್ರಹಾಲಯ ನಿರ್ದೇಶಕರು