ಪ್ರೀತಿ ವಿಚಾರಕ್ಕೆ 17ರ ಮಗಳನ್ನೇ ಕೊಂದ ಪಾಪಿ ತಂದೆ! ಶವ ಹೂತು ಹಾಕಿ ತಿಂಗಳ ಕಾಲ ನಾಟಕವಾಡಿದ್ದ ಆರೋಪಿ ಅರೆಸ್ಟ್

Published : May 17, 2026, 04:22 PM IST
Tumakuru News

ಸಾರಾಂಶ

ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನಲ್ಲಿ, ಪ್ರೀತಿಯ ವಿಚಾರಕ್ಕೆ ವಿರೋಧ ವ್ಯಕ್ತಪಡಿಸಿದ ತಂದೆಯೊಬ್ಬ ತನ್ನ 17 ವರ್ಷದ ಮಗಳನ್ನು ಹತ್ಯೆ ಮಾಡಿದ್ದಾನೆ. ಒಂದು ತಿಂಗಳ ನಂತರ, ಪೊಲೀಸರ ತನಿಖೆಯಿಂದ ಈ ಘೋರ ಕೃತ್ಯ ಬಯಲಾಗಿದ್ದು, ಜಮೀನಿನ ಬಳಿ ಹೂತಿದ್ದ ಮೃತದೇಹವನ್ನು ಹೊರತೆಗೆಯಲಾಗಿದೆ.

ತುಮಕೂರು (ಮೇ 17): ಮಕ್ಕಳ ರಕ್ಷಣೆಗೆ ನಿಲ್ಲಬೇಕಾದ ತಂದೆಯೇ ಕಾಲಾಂತಕನಾದ ಘೋರ ಘಟನೆಯೊಂದು ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ನಿಂಬೆಮರದಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಪ್ರೀತಿಯ ವಿಚಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ತಂದೆ, ತನ್ನ 17 ವರ್ಷದ ಮಗಳನ್ನು ಹತ್ಯೆ ಮಾಡಿ, ಜಮೀನಿನ ಪಕ್ಕದ ಹಳ್ಳದಲ್ಲಿ ಹೂತು ಹಾಕಿದ್ದ ಆತಂಕಕಾರಿ ವಿಷಯ ಈಗ ಬಯಲಾಗಿದೆ.

ಘಟನೆಯ ಹಿನ್ನೆಲೆ:

ಕೊಲೆಯಾದ ಯುವತಿಯನ್ನು ಮೇಘನಾ (17) ಎಂದು ಗುರುತಿಸಲಾಗಿದೆ. ಈಕೆಯ ತಂದೆ ತಿಮ್ಮರಾಯಪ್ಪ (48) ಎಂಬಾತನೇ ಈ ಭೀಕರ ಕೃತ್ಯ ಎಸಗಿದ ಹಂತಕ. ಮೇಘನಾ ತನ್ನ ತಾಯಿಯ ಸಂಬಂಧಿಕರ ಹುಡುಗನೊಬ್ಬನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ಆದರೆ, ಈ ಪ್ರೇಮ ಸಂಬಂಧಕ್ಕೆ ತಂದೆ ತಿಮ್ಮರಾಯಪ್ಪ ತೀವ್ರ ವಿರೋಧ ವ್ಯಕ್ತಪಡಿಸಿದ್ದಲ್ಲದೆ, ಮನೆಯಲ್ಲಿ ಈ ವಿಚಾರವಾಗಿ ಹಲವು ಬಾರಿ ಗಲಾಟೆಗಳೂ ನಡೆದಿದ್ದವು.

ಏಪ್ರಿಲ್ 16 ರಂದು ನಡೆದಿದ್ದ ಘೋರ ಕೃತ್ಯ:

ಮಗಳ ಹಠಕ್ಕೆ ಬೇಸತ್ತಿದ್ದ ತಿಮ್ಮರಾಯಪ್ಪ, ಕಳೆದ ಏಪ್ರಿಲ್ 16 ರಂದೇ ಮೇಘನಾಳನ್ನು ಕೊಲೆ ಮಾಡಿದ್ದ. ಯಾರಿಗೂ ಸಂಶಯ ಬಾರದಂತೆ ತನ್ನ ಜಮೀನಿನ ಪಕ್ಕದಲ್ಲೇ ಇರುವ ಸರ್ಕಾರಿ ಹಳ್ಳವೊಂದರಲ್ಲಿ ಮಗಳ ಶವವನ್ನು ಹೂತು ಹಾಕಿದ್ದ. ಮಗಳು ಮನೆಗೆ ಬಾರದೇ ಇದ್ದಾಗ, ಏನೂ ಅರಿಯದವನಂತೆ ನಾಟಕವಾಡಿದ್ದ ಈತ, ಬಳಿಕ ಮಗಳ ಮಿಸ್ಸಿಂಗ್ ಕೇಸ್ ದಾಖಲಾಗುವಂತೆ ನೋಡಿಕೊಂಡಿದ್ದ.

ಪೊಲೀಸರ ತನಿಖೆ ಮತ್ತು ಬಯಲಾದ ಸತ್ಯ:

ಮೇಘನಾ ನಾಪತ್ತೆಯಾಗಿರುವ ಕುರಿತು ಆಕೆಯ ತಾಯಿ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದಾಗ ತಿಮ್ಮರಾಯಪ್ಪನ ವರ್ತನೆ ಮೇಲೆ ಅನುಮಾನ ವ್ಯಕ್ತವಾಗಿತ್ತು. ಪೊಲೀಸರು ವಿಚಾರಣೆಗೆ ಕರೆದಾಗ ಗಾಬರಿಗೊಂಡ ತಿಮ್ಮರಾಯಪ್ಪ, ನಾಪತ್ತೆಯಾಗಿದ್ದ. ಸುಮಾರು ಒಂದು ತಿಂಗಳ ಕಾಲ ತಿರುಪತಿ, ಧರ್ಮಸ್ಥಳ ಸೇರಿದಂತೆ ವಿವಿಧ ಪುಣ್ಯಕ್ಷೇತ್ರಗಳಲ್ಲಿ ತಲೆಮರೆಸಿಕೊಂಡು ಓಡಾಡುತ್ತಿದ್ದ. ಇತ್ತ ಪತಿಯೂ ನಾಪತ್ತೆಯಾದ ಹಿನ್ನೆಲೆಯಲ್ಲಿ ಪತ್ನಿ ಮತ್ತೆ ಕಳ್ಳಂಬೆಳ್ಳ ಠಾಣೆಗೆ ಪತಿ ನಾಪತ್ತೆಯಾಗಿರುವ ಕುರಿತು ದೂರು ನೀಡಿದ್ದರು. ಈ ದೂರಿನ ಅನ್ವಯ ಕಾರ್ಯಾಚರಣೆ ನಡೆಸಿದ ಪೊಲೀಸರು ತಿಮ್ಮರಾಯಪ್ಪನನ್ನು ಪತ್ತೆಹಚ್ಚಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಮಗಳನ್ನು ಕೊಲೆ ಮಾಡಿದ ಸತ್ಯವನ್ನು ಆತ ಒಪ್ಪಿಕೊಂಡಿದ್ದಾನೆ.

ತಿಂಗಳ ಬಳಿಕ ಹೊರಬಂತು ಮೃತದೇಹ:

ಕೊಲೆಯಾಗಿ ಒಂದು ತಿಂಗಳ ಬಳಿಕ ಪ್ರಕರಣ ಬಯಲಾಗಿದ್ದು, ಇಂದು ಶಿರಾ ತಹಸೀಲ್ದಾರ್ ಸಮ್ಮುಖದಲ್ಲಿ ಹೂತು ಹಾಕಿದ್ದ ಮೃತದೇಹವನ್ನು ಹೊರತೆಗೆಯಲಾಯಿತು. ಸ್ಥಳದಲ್ಲೇ ಮರಣೋತ್ತರ ಪರೀಕ್ಷೆ ನಡೆಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ. 'ಗೌರವ'ದ ಹೆಸರಿನಲ್ಲಿ ಹೆತ್ತ ಮಗಳನ್ನೇ ಬಲಿಪಡೆದ ತಂದೆಯ ಕ್ರೌರ್ಯಕ್ಕೆ ಜಿಲ್ಲೆಯಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗಿದೆ. ಕಳ್ಳಂಬೆಳ್ಳ ಪೊಲೀಸರು ಆರೋಪಿಯನ್ನು ಬಂಧಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

PREV
Read more Articles on
click me!

Recommended Stories

ಬೆಂಗಳೂರು: ನಿರಾಶ್ರಿತರ ಆಶ್ರಮದಲ್ಲಿ ಇರಿಸಿದ್ದ ಅಕ್ರಮ ವಿದೇಶಿ ಮಹಿಳಾ ಪ್ರಜೆಗಳು ಗ್ರಿಲ್ ಮುರಿದು ಎಸ್ಕೇಪ್
ರಾಯಚೂರು:ದಿನಾಲು ಕುಡಿದು ತಾಯಿ ಜತೆಗೆ ಜಗಳವಾಡ್ತಿದ್ದ ಅಣ್ಣನ ಕೊಂದ ತಮ್ಮಆತ್ಮ*ಹತ್ಯೆ ಎಂದು ನಂಬಿಸಲು ಹೆಣ ನೇತು ಹಾಕಿದ!