
ಚಿಕ್ಕಮಗಳೂರು: ನರಸಿಂಹರಾಜಪುರಪಟ್ಟಣದ ರಸ್ತೆ ಅಗಲೀಕರಣಕ್ಕೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಮಂಜೂರು ಮಾಡಿದ ₹60 ಕೋಟಿಯಲ್ಲಿ ₹25 ಕೋಟಿ ಬಿಡುಗಡೆಯಾಗಿ ಉಪ ವಿಭಾಗಾಧಿಕಾರಿಗಳ ಖಾತೆಗೆ ಜಮಾ ಆಗಿದೆ. ಇದೀಗ ಜಿಲ್ಲೆಗೆ ಮತ್ತೊಂದು ಸಂತಸದ ಸುದ್ದಿ ಇದೆ ನರಸಿಂಹರಾಜಪುರ ತಾಲೂಕಿನ ವಿವಿಧ ಅರಣ್ಯ ವ್ಯಾಪ್ತಿಗಳಲ್ಲಿ ಕಾಡಾನೆಗಳ ನಿರಂತರ ಹಾವಳಿಯನ್ನು ತಡೆಗಟ್ಟುವ ಉದ್ದೇಶದಿಂದ 7.71 ಕಿಲೋಮೀಟರ್ ಉದ್ದದ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ರಾಜ್ಯ ಸರ್ಕಾರ ₹12.77 ಕೋಟಿ ಅನುದಾನ ಬಿಡುಗಡೆ ಮಾಡಿದೆ ಎಂದು ಶಾಸಕ ಹಾಗೂ ರಾಜ್ಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷ ಟಿ.ಡಿ. ರಾಜೇಗೌಡ ತಿಳಿಸಿದ್ದಾರೆ. ಮಂಗಳವಾರ ಪ್ರಕಟಣೆ ಹೊರಡಿಸಿದ ಅವರು, ಕೊಪ್ಪ ಅರಣ್ಯ ವಿಭಾಗದ ವ್ಯಾಪ್ತಿಗೆ ಒಳಪಡುವ ನರಸಿಂಹರಾಜಪುರ, ಚಿಕ್ಕ ಅಗ್ರಹಾರ ಮತ್ತು ಬಾಳೆಹೊನ್ನೂರು ವಲಯಗಳಲ್ಲಿ ಕಾಡಾನೆಗಳ ಉಪಟಳ ದಿನೇದಿನೇ ಹೆಚ್ಚುತ್ತಿರುವ ಹಿನ್ನೆಲೆ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ವಿವರಿಸಿದರು.
ರಾಜ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಸರ್ಕಾರಕ್ಕೆ ಸಲ್ಲಿಸಿದ್ದ ಪ್ರಸ್ತಾವನೆಯಲ್ಲಿ, ಭದ್ರಾ ಅಭಯಾರಣ್ಯದಿಂದ ಕಾಡಾನೆಗಳು ಭದ್ರಾ ಹಿನ್ನೀರು ಪ್ರದೇಶ ಹಾಗೂ ಭದ್ರಾ ನದಿ ದಾಟಿ ನರಸಿಂಹರಾಜಪುರ ಮತ್ತು ಚಿಕ್ಕ ಅಗ್ರಹಾರ ವಲಯ ವ್ಯಾಪ್ತಿಯ ಗ್ರಾಮಗಳಿಗೆ ಪ್ರವೇಶಿಸುತ್ತಿರುವುದಾಗಿ ಉಲ್ಲೇಖಿಸಲಾಗಿದೆ. ಅದೇ ರೀತಿ ಮೂಡಿಗೆರೆ ಮತ್ತು ಆಲ್ದೂರು ವಲಯಗಳಿಂದ ಬಾಳೆಹೊನ್ನೂರು ಭಾಗಕ್ಕೆ ಕಾಡಾನೆಗಳು ವಲಸೆ ಬಂದು ರೈತರು ಬೆಳೆದ ಬೆಳೆಗಳನ್ನು ಹಾನಿಗೊಳಿಸುತ್ತಿರುವುದು ಗಮನಕ್ಕೆ ಬಂದಿದೆ.
ನರಸಿಂಹರಾಜಪುರ, ಚಿಕ್ಕ ಅಗ್ರಹಾರ ಮತ್ತು ಬಾಳೆಹೊನ್ನೂರು ವಲಯ ವ್ಯಾಪ್ತಿಯ ಅರಣ್ಯ ಪ್ರದೇಶಗಳು ಹಾಗೂ ಕಾಫಿ ತೋಟಗಳಲ್ಲಿ ಅಂದಾಜು 30 ರಿಂದ 40 ಕಾಡಾನೆಗಳು ಸಂಚರಿಸುತ್ತಿರುವುದು ಪತ್ತೆಯಾಗಿದೆ. 2024ರ ನವೆಂಬರ್‌ನಿಂದ 2025ರ ಜುಲೈವರೆಗೆ ಕಾಡಾನೆ ದಾಳಿಯಿಂದ ನಾಲ್ವರು ಮೃತಪಟ್ಟಿರುವ ದುರ್ಘಟನೆಗಳು ಸಂಭವಿಸಿವೆ. ಈ ಹಿನ್ನೆಲೆ ಮಾನವ-ಕಾಡಾನೆ ಸಂಘರ್ಷವನ್ನು ತಡೆಗಟ್ಟಲು ಶಾಶ್ವತ ಪರಿಹಾರವಾಗಿ ರೈಲ್ವೆ ಬ್ಯಾರಿಕೇಡ್ ಅಳವಡಿಕೆ ಅಗತ್ಯವಿದೆ ಎಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದೀಗ ಆ ಪ್ರಸ್ತಾವನೆಗೆ ಸರ್ಕಾರ ಮನ್ನಣೆ ನೀಡಿದೆ ಎಂದು ಶಾಸಕರು ತಿಳಿಸಿದ್ದಾರೆ.
ಸರ್ಕಾರದ ಅನುಮೋದನೆ ಪ್ರಕಾರ ವಿವಿಧ ಹಂತಗಳಲ್ಲಿ ಬ್ಯಾರಿಕೇಡ್ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಲಾಗಿದೆ:
ಕಾಡಾನೆಗಳು ನಾಡಿಗೆ ಪ್ರವೇಶಿಸದಂತೆ ಶಾಶ್ವತ ತಡೆಗೋಡೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡುವಲ್ಲಿ ಸಹಕರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅರಣ್ಯ ಸಚಿವ ಈಶ್ವರ್ ಖಂಡ್ರೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆಜೆ ಜಾರ್ಚ್ ಅವರಿಗೆ ಶೃಂಗೇರಿ ಕ್ಷೇತ್ರದ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಶಾಸಕ ಟಿ.ಡಿ. ರಾಜೇಗೌಡ ಹೇಳಿದ್ದಾರೆ.
ಈ ಯೋಜನೆ ಕಾರ್ಯರೂಪಕ್ಕೆ ಬಂದ ಬಳಿಕ ರೈತರು ಮತ್ತು ಗ್ರಾಮಸ್ಥರು ಎದುರಿಸುತ್ತಿರುವ ಕಾಡಾನೆಗಳ ಹಾವಳಿ ಕಡಿಮೆಯಾಗುವ ನಿರೀಕ್ಷೆಯಿದೆ. ಮಾನವ-ವನ್ಯಜೀವಿ ಸಂಘರ್ಷ ತಗ್ಗಿಸುವ ನಿಟ್ಟಿನಲ್ಲಿ ಈ ಯೋಜನೆ ಮಹತ್ವದ ಹೆಜ್ಜೆಯಾಗಲಿದೆ.