ರಾಜ್ಯದಲ್ಲಿ ಬಿಜೆಪಿ ವಿರೋಧಿ ಅಲೆ ಇದ್ದು ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ನೆಪಮಾತ್ರಕ್ಕೆ ಇದ್ದಾರೆಂದು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಟೀಕಿಸಿದರು.
ಚಿಕ್ಕಬಳ್ಳಾಪುರ (ನ. 29) : ರಾಜ್ಯದಲ್ಲಿ ಬಿಜೆಪಿ ವಿರೋಧಿ ಅಲೆ ಇದ್ದು ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ನೆಪಮಾತ್ರಕ್ಕೆ ಇದ್ದಾರೆಂದು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಟೀಕಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸಂಪೂರ್ಣವಾಗಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ರಾಜ್ಯ ಬಿಜೆಪಿ ಸರ್ಕಾರಕ್ಕೆ ಜೀವ ಇಲ್ಲದಂತಾಗಿದೆ. 2023ಕ್ಕೆ ರಾಜ್ಯದಲ್ಲಿ(Congress) ಅಧಿಕಾರಕ್ಕೆ ಬರುವುದು ಶತಃಸಿದ್ದ ಎಂದು ಭವಿಷ್ಯ ನುಡಿದರು.
ರಾಜ್ಯ (BJP) ಸರ್ಕಾರದ ದುರಾಡಳಿತ ಪರಿಣಾಮ ರಾಜ್ಯದ ಅಭಿವೃದ್ಧಿ ಮಣ್ಣು ಪಾಲಾಗಿದೆ. ಪ್ರತಿ ಹಂತದಲ್ಲಿ ಸರ್ಕಾರ ಕಮಿಷನ್ ಪಡೆಯುತ್ತಿದೆ. ಬೊಮ್ಮಾಯಿ ಅಸಮರ್ಥ ಮುಖ್ಯಮಂತ್ರಿ ಆಗಿದ್ದಾರೆ. ಸರ್ಕಾರ ರಾಜ್ಯದಲ್ಲಿಯೆ ಇದೆಯೆ ಎನ್ನುವುದು ಪ್ರಶ್ನೆ ಆಗಿದೆ. ಇದೊಂದು ನಿರ್ಜೀವ ಸರ್ಕಾರ ಎಂದು ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ವೀರಪ್ಪ ಮೊಯ್ಲಿ, ಕೇಂದ್ರದಲ್ಲಿ ಕೂಡ ಬಿಜೆಪಿ ಅಗತ್ಯ ವಸ್ತುಗಳ ಬೆಲೆ ನಿಯಂತ್ರಿಸಲಾಗದೇ ಜನ ಸಾಮಾನ್ಯರಿಗೆ ಹೊರೆ ಆಗಿದೆಂದರು. ರಾಜ್ಯ ಮಾತ್ರವಲ್ಲದೇ ಇಡೀ ದೇಶದ ಉದ್ದಗಲಕ್ಕೂ ಬಿಜೆಪಿ ವಿರೋಧಿ ಅಲೆ ಇದ್ದು ಕಾಂಗ್ರೆಸ್ ಪರವಾದ ಅಲೆ ಇದೆ. ಕೇಂದ್ರದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ಹಿಡಿಯಲಿದೆ ಎಂದರು.
ಪ್ರತಿ ಗ್ರಾಪಂಗೂ ಭೇಟಿ:
ಮುಂಬರುವ 2023 ರ ಸಾರ್ವತ್ರಿಕ ಚುನಾವಣೆಗೆ ಕಾಂಗ್ರೆಸ್ ಪಕ್ಷವನ್ನು ಸಜ್ಜುಗೊಳಿಸಬೇಕಿದೆ. ಮುಂದಿನ ದಿನಗಳಲ್ಲಿ ಪ್ರತಿ ಗ್ರಾಪಂ ಮಟ್ಟದಲ್ಲಿ ಕಾರ್ಯಕರ್ತರ ಸಭೆಯನ್ನು ನಡೆಸಲಾಗುವುದೆಂದ ಮಾಜಿ ಸಿಎಂ ವೀರಪ್ಪ ಮೊಯ್ಲಿ, ಜಿಲ್ಲೆಯಲ್ಲಿ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರು ಗೆಲುವು ಸಾಧಿಸಲಿದ್ದಾರೆ. ಬಿಜೆಪಿ ಜನ ವಿರೋಧಿ ನೀತಿಗಳಿಂದ ಮತದಾರರು ಸಾಕಷ್ಟುಬೇಸತ್ತಿದ್ದಾರೆ. ಬಿಜೆಪಿ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ದಕ್ಕೆ ತರುತ್ತಿದೆಯೆಂದು ಮೊಯ್ಲಿ ಆರೋಪಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎಂ.ಶಿವಾನಂದ್, ರಾಜ್ಯ ಖಾದಿ ಮತ್ತು ಗ್ರಾಮೋದೋಗ ಮಂಡಳಿ ಮಾಜಿ ಅಧ್ಯಕ್ಷ ಯಲುವಹಳ್ಳಿ ರಮೇಶ್, ಮುಖಂಡರಾದ ವಕೀಲ ನಾರಾಯಣಸ್ವಾಮಿ, ಮಮತಮೂರ್ತಿ, ಬಾಗೇಪಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನರೇಂದ್ರ, ಪಟ್ರೇನಹಳ್ಳಿ ನಾರಾಯಣಸ್ವಾಮಿ ಸೇರಿದಂತೆ ಮತ್ತಿತರರು ಇದ್ದರು.
ಸಿಎಂ ಅಭ್ಯರ್ಥಿ ಹೈಕಮಾಂಡ್ ನಿರ್ಧಾರ:
ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ರೇಸ್‌ನಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನಡುವೆ ಪೈಪೋಟಿ ನಡೆಯುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ವೀರಪ್ಪ ಮೊಯ್ಲಿ, ಮುಖ್ಯಮಂತ್ರಿ ಅಭ್ಯರ್ಥಿಯನ್ನು ಶಾಸಕಾಂಗ ಸಭೆ ಆಯ್ಕೆ ಮಾಡುತ್ತದೆ. ವರಿಷ್ಠರ ತಿರ್ಮಾನ ಅಂತಿಮವಾಗುತ್ತದೆ. ಮೊದಲು ನಾವು ಸರ್ಕಾರ ರಚನೆಗೆ ಬೇಕಾದ ಸಂಖ್ಯಾ ಬಲವನ್ನು ಗಳಿಸುವ ಕಡೆಗೆ ಕಾಂಗ್ರೆಸ್ ಕೆಲಸ ಮಾಡಬೇಕಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಉತ್ತಮವಾಗಿ ಕೆಲಸ ಮಾಡುವ ಮೂಲಕ ಬಿಜೆಪಿ ವೈಫಲ್ಯಗಳನ್ನು ಮನೆ ಮನೆಗೆ ತಿಳಿಸುವ ಕಾರ್ಯವನ್ನು ಪಕ್ಷದ ಕಾರ್ಯಕರ್ತರು ಮಾಡಬೇಕಿದೆಂದರು.