
ಬೆಳಗಾವಿ (ಫೆ.24): ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮದ್ಯ ಮಾರಾಟ ದರ ಹೆಚ್ಚಳ ಮಾಡಲಾಗಿದೆ. ಇದರಿಂದಾಗಿ ಗ್ರಾಮೀಣ ಪ್ರದೇಶ ಹಾಗೂ ಗುಡ್ಡಗಾಡುಗಳಲ್ಲಿ ವಾಸವಿರುವ ಜನರು ತಮ್ಮ ಇಡೀ ದಿನದ ಕೂಲಿಯನ್ನು ಕೊಟ್ಟರೂ ಮದ್ಯ ಸೇವನೆಗೆ ಸಾಲುವುದಿಲ್ಲ ಎಂದು ಬೇಸತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಕ್ರಮವಾಗಿ ಕಳ್ಳಭಟ್ಟಿ ಸಾರಾಯಿ ಮಾಡುವುದಕ್ಕೆ ಮುಂದಾಗಿದ್ದು, ಅಬಕಾರಿ ಮತ್ತು ಪೊಲೀಸ್ ಇಲಾಖೆ ಬಲೆಗೆ ಬಿದ್ದಿದ್ದಾರೆ.
ರಾಜ್ಯ ಸರ್ಕಾರದಿಂದ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ಮಹಿಳೆಯರು ಹಾಗೂ ಬಡ ಕುಟುಂಬಗಳ ನಿರ್ವಹಣೆಗೆ ಅನುಕೂಲವನ್ನು ಮಾಡಿಕೊಟ್ಟಿದೆ. ಆದರೆ, ಮದ್ಯ ಸೇವನೆ ಮಾಡುವ ಮದ್ಯ ಪ್ರಿಯರ ಮೇಲೆ ಯಾವುದೇ ಕರುಣೆಯನ್ನು ತೋರಿಸಲೂ ಮುಂದಾಗಿಲ್ಲ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಮದ್ಯದ ದರ ಹೆಚ್ಚಳ ಮಾಡಿದೆ. ಪುನಃ 2024-25ನೇ ಸಾಲಿನ ಬಜೆಟ್‌ನಲ್ಲಿಯೂ ಬಡಜನರು ಬಳಸುವ ಮದ್ಯದ ದರಕ್ಕೆ ಕಡಿವಾಣ ಹಾಕದೇ, ದುಬಾರಿ ಮದ್ಯಗಳ (ಪ್ರೀಮಿಯಂ ಬ್ರ್ಯಾಂಡ್) ದರವನ್ನು ಇಳಿಕೆ ಮಾಡಿದೆ. ಜೊತೆಗೆ, ಬಿಯರ್ ದರವನ್ನು ಹೆಚ್ಚಳ ಮಾಡಿದೆ.
ಕೋಟಿ ಕೋಟಿ ಕೊಟ್ರೂ ಬಾರ್ ಲೈಸೆನ್ಸ್ ಸಿಗೊಲ್ಲ, ಅಂಥದ್ರಲ್ಲಿ ದಿನಸಿ ಅಂಗಡೀಲಿ ಮದ್ಯ ಮಾರಾಟಕ್ಕೆ ಪರವಾನಗಿ ಕೇಳ್ತಾನೆ!
ಗ್ರಾಮೀಣ ಜನರು ಕೂಲಿ ಕೆಲಸ ಹಾಗೂ ದಣಿವಾಗುವ ಕೆಲಸವನ್ನು ಮಾಡಿದ ನಂತರ ದಣಿವಾರಿಸಿಕೊಳ್ಳಲು ಮದ್ಯ ಸೇವನೆ ಮಾಡುತ್ತಾರೆ. ಆದರೆ, ಈ ಬಗ್ಗೆ ಯಾವುದೇ ಕನಿಕರ ತೋರಿಸದ ಸರ್ಕಾರ ಮದ್ಯ ದರ ಹೆಚ್ಚಳ ಮಾಡಿದ್ದರಿಂದ ಗ್ರಾಮೀಣ ಜನರು ರೋಸಿ ಹೋಗಿದ್ದಾರೆ. ಇದರಿಂದಾಗಿ ಅಕ್ರಮವಾಗಿ ಮದ್ಯ ಸೇವನೆ ಮಾರ್ಗವನ್ನು ಹುಡುಕಿಕೊಂಡಿದ್ದಾರೆ. ಅಂದರೆ, ಈ ಹಿಂದೆ ಗುಡ್ಡಗಾಡು ಹಾಗೂ ಅರಣ್ಯ ಪ್ರದೇಶದಲ್ಲಿ ತಯಾರಿಸುತ್ತಿದ್ದಂತೆ ಕಳ್ಳಭಟ್ಟಿ ಸಾರಾಯಿ ತಯಾರಿಸಲು ಮುಂದಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ಸೋನಟ್ಟಿ ಗ್ರಾಮದ ಗುಡ್ಡಗಾಡು ಪ್ರದೇಶದಲ್ಲಿ ಬರೋಬ್ಬರಿ 5,700 ಲೀಟರ್ ಕಳ್ಳಬಟ್ಟಿ ಸಾರಾಯಿ ಮಾಡುವುದು ಕಂಡುಬಂದಿದೆ. ಈ ಬಗ್ಗೆ ಬೆಳಗಾವಿ ಜಿಲ್ಲಾ ಪೊಲೀಸರಿಗೆ ಮಾಹಿತಿ ಲಭ್ಯವಾಗಿದ್ದು, ಸುಮಾರು 200ಕ್ಕೂ ಅಧಿಕ ಪೊಲೀಸರನ್ನು ಒಳಗೊಂಡ ಮೂರ್ನಾಲ್ಕು ತಂಡಗಳನ್ನು ರಚಿಸಿಕೊಂಡು ಡಿಸಿಪಿ ರೂಹನ್ ಜಗದೀಶ್ ನೇತೃತ್ವದಲ್ಲಿ ಕಳ್ಳಭಟ್ಟಿ ಸಾರಾಯಿ ತಯಾರಿಕಾ ಅಡ್ಡೆ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ 5,700 ಲೀ, ಕಳ್ಳಬಟ್ಟಿ ಸಾರಾಯಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಅಯೋಧ್ಯೆ ರಾಮಮಂದಿರ ನಿರ್ಮಾಣ ಕ್ರೆಡಿಟ್ ಮೋದಿಗೆ ಮಾತ್ರವಲ್ಲ, ಯೋಗಿಗೂ ಸಲ್ಲುತ್ತೆ: ಚಕ್ರವರ್ತಿ ಸೂಲಿಬೆಲೆ
ಕಳ್ಳಭಟ್ಟಿ ಸಾರಾಯಿ ಅಡ್ಡೆ ಮೇಲೆ ದಾಳಿ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಬೆಳಗಾವಿ ನಗರ ಪೊಲೀಸ್ ಆಯುಕ್ತ ಎಸ್.ಎನ್. ಸಿದ್ದರಾಮಪ್ಪ ಅವರು, ಒಟ್ಟು 5,700 ಲೀಟರ್ ಕಳ್ಳಬಟ್ಟಿ ವಶಕ್ಕೆ ಪಡೆದಿದ್ದೇವೆ. ಕೆಲವು ಮನೆಗಳ ಮೇಲೂ ಸಹ ದಾಳಿ ಮಾಡಿ ಕಳ್ಳಭಟ್ಟಿ ವಶಕ್ಕೆ ಪಡೆಯಲಾಗಿದೆ. ಒಂದು ವಾರದ ಹಿಂದೆ ಈ ಬಗ್ಗೆ ಮಾಹಿತಿ ಬಂತು. ಇಂದು ಕಾರ್ಯಾಚರಣೆ ಮಾಡಿದ್ದೇವೆ. ಆರೋಪಗಳನ್ನು ಬಂಧಿಸಿ ವಿಚಾರಣೆ ಮಾಡುತ್ತೇವೆ. ಪೊಲೀಸರು ಬಂದ ತಕ್ಷಣ ಎಲ್ಲರೂ ಓಡಿ ಹೋಗಿದ್ದಾರೆ. ಅದರಲ್ಲಿ ಒಬ್ಬ ಮಾತ್ರ ಸಿಕ್ಕಿದ್ದಾನೆ. ಕೆಲವು ದಿನಗಳಿಂದ ಇಲ್ಲಿ ಧಂಧೆ ನಡೆಯುತ್ತಿದೆ. ಈಗ ಆರೋಪಿಯನ್ನು ವಿಚಾರಣೆ ಮಾಡಲಾಗುತ್ತಿದ್ದು, ಎಲ್ಲ ಆರೋಪಿಗಳನ್ನು ವಶಕ್ಕೆ ಪಡೆಯಲಾಗುವುದು ಎಂದು ತಿಳಿಸಿದರು.