MLC Election: 20 ನಾಮಪತ್ರ ವಾಪಸ್‌, ಅಂತಿಮ ಕಣದಲ್ಲಿ 91 ಸ್ಪರ್ಧಿಗಳು!

Kannadaprabha News   | Asianet News
Published : Nov 27, 2021, 07:28 AM ISTUpdated : Nov 27, 2021, 07:36 AM IST
MLC Election: 20 ನಾಮಪತ್ರ ವಾಪಸ್‌, ಅಂತಿಮ ಕಣದಲ್ಲಿ 91 ಸ್ಪರ್ಧಿಗಳು!

ಸಾರಾಂಶ

*ಬಿಜೆಪಿ, ಕಾಂಗ್ರೆಸ್‌ ತಲಾ 20 ಕ್ಷೇತ್ರಗಳಲ್ಲಿ ಸ್ಪರ್ಧೆ, ಜೆಡಿಎಸ್‌ 6 ಕಡೆ ಹೋರಾಟ *ಡಿ.10ಕ್ಕೆ ಮತದಾನ : ಇಂದಿನಿಂದ ಪ್ರಚಾರದಬ್ಬರ  : 20 ನಾಮಪತ್ರ ವಾಪಸ್‌ *ಕೊಡಗಿನ ಜೆಡಿಎಸ್‌ ಅಭ್ಯರ್ಥಿ ನಾಮಪತ್ರ ಹಿಂತೆಗೆತ

ಬೆಂಗಳೂರು(ನ.27): ಸ್ಥಳೀಯ ಸಂಸ್ಥೆಗಳಿಂದ (Local body) ವಿಧಾನಪರಿಷತ್ತಿನ (Legislative Council) 20 ಕ್ಷೇತ್ರಗಳ 25 ಸ್ಥಾನಗಳಿಗೆ ನಡೆಯುವ ಚುನಾವಣೆಗೆ (Election) ನಾಮಪತ್ರ ವಾಪಸಾತಿ ಪ್ರಕ್ರಿಯೆ ಶುಕ್ರವಾರ ಮುಗಿದಿದ್ದು, ಅಂತಿಮವಾಗಿ 91 ಅಭ್ಯರ್ಥಿಗಳು ಕಣದಲ್ಲಿ ಉಳಿದುಕೊಂಡಿದ್ದಾರೆ. ಇದರಿಂದಾಗಿ ಇನ್ನು ಪ್ರಚಾರದ ಭರಾಟೆ ಆರಂಭವಾಗಲಿದೆ. ಬಹುತೇಕ ಕ್ಷೇತ್ರಗಳಲ್ಲಿ ಬಿಜೆಪಿ-ಕಾಂಗ್ರೆಸ್‌  ನೇರ ಹಣಾಹಣಿ ಇದ್ದು, ಹಳೆ ಮೈಸೂರಿನ ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್‌-ಜೆಡಿಎಸ್‌-ಬಿಜೆಪಿ (BJP-Congress-JDS) ನಡುವೆ ತ್ರಿಕೋನ ಸಮರ ಏರ್ಪಡಲಿದೆ.ನಾಮಪತ್ರ (Nomination) ವಾಪಸ್‌ ಪಡೆಯಲು ಕೊನೆಯ ದಿನವಾದ ಶುಕ್ರವಾರ 20 ಮಂದಿ ತಮ್ಮ ಉಮೇದುವಾರಿಕೆಯನ್ನು ವಾಪಸ್‌ ಪಡೆದುಕೊಂಡಿದ್ದಾರೆ.

ಕೊಡಗು ಕ್ಷೇತ್ರದಿಂದ ಕಣಕ್ಕಿಳಿದಿದ್ದ ಜೆಡಿಎಸ್‌ ತಮ್ಮ ಅಭ್ಯರ್ಥಿಯನ್ನು ಸ್ಪರ್ಧೆಯಿಂದ ವಾಪಸ್‌ ಕರೆಸಿಕೊಂಡಿದ್ದು ಅಚ್ಚರಿಯ ಬೆಳವಣಿಗೆಯಾಗಿದೆ. ಇನ್ನುಳಿದಂತೆ ನಾಮಪತ್ರಗಳನ್ನು (Nomination) ವಾಪಸ್‌ ಪಡೆದವರ ಪೈಕಿ 19 ಅಭ್ಯರ್ಥಿಗಳು ಪಕ್ಷೇತರರಾಗಿದ್ದಾರೆ. ಆಡಳಿತಾರೂಢ ಬಿಜೆಪಿ, ಪ್ರತಿಪಕ್ಷ ಕಾಂಗ್ರೆಸ್‌, ಜೆಡಿಎಸ್‌ ಮತ್ತು ಇತರರು ಸೇರಿದಂತೆ 91 ಅಭ್ಯರ್ಥಿಗಳ ನಡುವೆ ಹಣಾಹಣಿ ನಡೆಯಲಿದೆ. ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್‌ ತಲಾ 20 ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೆ, ಜೆಡಿಎಸ್‌ 6 ಕ್ಷೇತ್ರದಲ್ಲಿ ಮಾತ್ರ ಕಣಕ್ಕಿಳಿದಿದೆ. ಡಿ.10ರಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನ (Voting) ನಡೆಯಲಿದೆ. ಡಿ.14ರಂದು ಮತ ಎಣಿಕೆ ಕಾರ್ಯ (Counting) ನಡೆಯಲಿದೆ.

ಬಹುಮತ ಗಳಿಸಲು ಬಿಜೆಪಿ ಯತ್ನ:

ಈವರೆಗೆ 75 ಸದಸ್ಯಬಲದ ಮೇಲ್ಮನೆಯಲ್ಲಿ (Upper House) ಬಿಜೆಪಿ 32, ಕಾಂಗ್ರೆಸ್‌ 29, ಜೆಡಿಎಸ್‌ 12, ಒಬ್ಬ ಪಕ್ಷೇತರ ಸದಸ್ಯರು ಹಾಗೂ ಸಭಾಪತಿ ಇದ್ದಾರೆ. ಜ.5ರಂದು 25 ಸದಸ್ಯರು ನಿವೃತ್ತರಾಗಲಿದ್ದು, ಇವರಲ್ಲಿ 14 ಜನ ಕಾಂಗ್ರೆಸ್ಸಿಗರಾಗಿದ್ದಾರೆ. ಉಳಿದ 6 ಜನರು ಬಿಜೆಪಿ, 4 ಜನರು ಜೆಡಿಎಸ್‌ನವರು ಹಾಗೂ ಒಬ್ಬರು ಪಕ್ಷೇತರರು.

Karnataka politics: ಮುಂಬರುವ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಯನ್ನು ಘೋಷಿಸಿದ ಕುಮಾರಸ್ವಾಮಿ

ಸದನದಲ್ಲಿ ಬಹುಮತ ಸಾಧಿಸಲು ಬಿಜೆಪಿಗೆ 38 ಸದಸ್ಯರು ಬೇಕು. 6 ಬಿಜೆಪಿ ಸದಸ್ಯರು ನಿವೃತ್ತಿ ಹೊಂದಿದ ಬಳಿಕ ಬಿಜೆಪಿ ಬಲ 26ಕ್ಕೆ ಇಳಿಯಲಿದೆ. ಹೀಗಾಗಿ ಬಹುಮತ ಸಾಧಿಸಲು ಬಿಜೆಪಿಗೆ 12 ಸ್ಥಾನದಲ್ಲಿ ಗೆಲ್ಲುವುದು ಅಗತ್ಯವಾಗಿದೆ. ಹೀಗಾಗಿ ಈ ಚುನಾವಣೆಯನ್ನು ಪಕ್ಷ ಪ್ರತಿಷ್ಠೆಯಾಗಿ ಸ್ವೀಕರಿಸಿದೆ. ಕಾಂಗ್ರೆಸ್‌ ಪಕ್ಷವು ತನ್ನ ಹಳೆಯ ಸ್ಥಾನಗಳ ಜತೆ ಹೊಸ ಸ್ಥಾನಗಳನ್ನು ಗೆದ್ದು ಬಿಜೆಪಿಗೆ ಮುಖಭಂಗ ಸೃಷ್ಟಿಸಲು ಯತ್ನಿಸುತ್ತಿದ್ದರೆ, ಜೆಡಿಎಸ್‌ ತನ್ನ ಬಳಿ ಇದ್ದ 4 ಕ್ಷೇತ್ರಗಳಲ್ಲಿ ಪುನಃ ಗೆಲ್ಲಲು ಗಮನ ಕೇಂದ್ರೀಕರಿಸಿದೆ.

ನಾಮಪತ್ರ ಹಿಂದೆ ಪಡೆಯದೆ ಬಿಜೆಪಿ, ಕೈಗೆ ಲಖನ್‌ ಶಾಕ್‌!

ಬೆಳಗಾವಿ (Belagavi) ಜಿಲ್ಲೆಯ ಎರಡು ಸ್ಥಾನಗಳಿಗೆ ನಡೆಯುತ್ತಿರುವ ಮೇಲ್ಮನೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿರುವ ಗೋಕಾಕ್‌ ಉದ್ಯಮಿ ಲಖನ್‌ ಜಾರಕಿಹೊಳಿ (Lakhan Jarkiholi) ಅವರು ನಾಮಪತ್ರ ವಾಪಸ್‌ ಪಡೆಯದಿರುವುದು ರಾಷ್ಟ್ರೀಯ ಪಕ್ಷಗಳಿಗೆ ತಲೆನೋವು ತರಿಸಿದೆ. ಅವರು ಸ್ಪರ್ಧೆಯಲ್ಲೇ ಉಳಿಯುವ ಮೂಲಕ ಬಿಜೆಪಿಗಿಂತ ಕಾಂಗ್ರೆಸ್‌ ಅಭ್ಯರ್ಥಿಗೆ ಹೆಚ್ಚು ಸವಾಲಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಬಿಜೆಪಿಗೆ ಬೆಂಬಲ ನೀಡುವ ಕುರಿತು ಎಚ್‌ಡಿಕೆ ಸುಳಿವು

ಚಿಕ್ಕಬಳ್ಳಾಪುರ (ChikkaBallapura) ಜೆಡಿಎಸ್‌ ಸ್ಪರ್ಧಿಸದಿರುವ ಕ್ಷೇತ್ರಗಳಲ್ಲಿ ತಮಗೆ ಬೆಂಬಲ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ 2-3 ಸಭೆಗಳಲ್ಲಿ ಮನವಿ ಮಾಡಿದ್ದಾರೆ. ಅವರನ್ನು ಬೆಂಬಲಿಸಬೇಕೋ ಅಥವಾ ಒಳ ಒಪ್ಪಂದ ಎಂದು ವಾಗ್ದಾಳಿ ನಡೆಸುತ್ತಿರುವ ಕಾಂಗ್ರೆಸ್‌ಗೆಬೆಂಬಲಿಸಬೇಕೋ ಎಂದು ಮುಂದಿನ ದಿನಗಳಲ್ಲಿ ನಿರ್ಧರಿಸುತ್ತೇವೆ ಎಂದು ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

PREV
Read more Articles on
click me!

Recommended Stories

ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮುಗಿಸಿ ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ಸಾವು
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ