Covid19: ಬೆಂಗ್ಳೂರಲ್ಲಿ ಮತ್ತೆ ಹೆಚ್ಚಿದ ಕೊರೋನಾ, ಆತಂಕದಲ್ಲಿ ಜನತೆ

By Kannadaprabha News  |  First Published Nov 27, 2021, 6:18 AM IST

*  ದೊಮ್ಮಸಂದ್ರದ ಸ್ಕೂಲ್‌ನಲ್ಲಿ 33, ಮರಸೂರಿನಲ್ಲಿ 12 ವಿದ್ಯಾರ್ಥಿಗಳಲ್ಲಿ ಸೋಂಕು
*  ಶಿಕ್ಷಣ ಸಂಸ್ಥೆ ಸೀಲ್‌ಡೌನ್‌
*  ಎರಡೂ ಡೋಸ್‌ ಲಸಿಕೆ ಪಡೆದುಕೊಂಡ ಶಿಕ್ಷಣ ಸಂಸ್ಥೆಯ ಎಲ್ಲ ಸಿಬ್ಬಂದಿ


ಬೆಂಗಳೂರು(ನ.27): ಪಾಲಿಕೆಯ ಮಹದೇವಪುರ ವಲಯ ವ್ಯಾಪ್ತಿಯ ದೊಮ್ಮಸಂದ್ರ ಖಾಸಗಿ ಶಾಲೆಯಲ್ಲಿ 33 ವಿದ್ಯಾರ್ಥಿಗಳು ಹಾಗೂ ಒಬ್ಬ ಸಿಬ್ಬಂದಿ, ಹಾಗೂ ಮರಸೂರಿನ ಸ್ಪೂರ್ತಿ ನರ್ಸಿಂಗ್‌ ಕಾಲೇಜಿನಲ್ಲಿ 12 ವಿದ್ಯಾರ್ಥಿಗಳಲ್ಲಿ ಕೊರೋನಾ(Coronavirus) ಸೋಂಕು ಪತ್ತೆಯಾಗಿದ್ದು ಸದ್ಯ ಶಿಕ್ಷಣ ಸಂಸ್ಥೆಯನ್ನು ಸೀಲ್‌ಡೌನ್‌(Sealdown) ಮಾಡಲಾಗಿದೆ.

‘ದಿ ಇಂಟರ್‌ನ್ಯಾಷನಲ್‌ ಸ್ಕೂಲ್‌ ಬೆಂಗಳೂರು’ ಶಿಕ್ಷಣ ಸಂಸ್ಥೆಯಲ್ಲಿ ಕೋವಿಡ್‌(Covid19) ಪ್ರಕರಣಗಳು ವರದಿಯಾಗಿವೆ. ಆರಂಭದಲ್ಲಿ ನಾಗಪುರದ ಇಬ್ಬರು ವಿದ್ಯಾರ್ಥಿಗಳಲ್ಲಿ(Students) ಜ್ವರ ಕಾಣಿಸಿಕೊಂಡಿದ್ದು ಕೋವಿಡ್‌ ಗುಣಲಕ್ಷಣಗಳು ಕಂಡುಬಂದಿದ್ದವು. ಅವರನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ಇರುವುದು ಪತ್ತೆಯಾಗಿತ್ತು.

Tap to resize

Latest Videos

undefined

ಈ ಹಿನ್ನೆಲೆಯಲ್ಲಿ 297 ವಿದ್ಯಾರ್ಥಿಗಳು ಮತ್ತು 200 ಶಾಲಾ ಸಿಬ್ಬಂದಿಯನ್ನು ಕೋವಿಡ್‌ ಪರೀಕ್ಷೆಗೆ(Covid Test) ಒಳಪಡಿಸಲಾಗಿತ್ತು. 8ನೇ ತರಗತಿಯ ಒಬ್ಬ ವಿದ್ಯಾರ್ಥಿ, 9ನೇ ತರಗತಿಯ 12 ವಿದ್ಯಾರ್ಥಿಗಳು, 10ನೇ ತರಗತಿಯ 8 ವಿದ್ಯಾರ್ಥಿಗಳು, ಪ್ರಥಮ ಪಿಯುಸಿಯ 3 ವಿದ್ಯಾರ್ಥಿಗಳು ಹಾಗೂ ದ್ವಿತೀಯ ಪಿಯುಸಿಯ 9 ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗಿದೆ. ಜೊತೆಗೆ ಶಿಕ್ಷಣ ಸಂಸ್ಥೆಯ ಓರ್ವ ಸಿಬ್ಬಂದಿಯೂ ಸೋಂಕಿತರಾಗಿದ್ದಾರೆ.

Coronavirus:ಕೊರೋನಾ ಹೊಸ ತಳಿ ಆತಂಕ, ಕರ್ನಾಟಕದಲ್ಲಿ ಕಟ್ಟೆಚ್ಚರ ವಹಿಸಲು ಸೂಚನೆ

ಶಿಕ್ಷಣ ಸಂಸ್ಥೆಯ ಎಲ್ಲ ಸಿಬ್ಬಂದಿ ಎರಡು ಡೋಸ್‌ ಲಸಿಕೆ ಪಡೆದುಕೊಂಡಿದ್ದಾರೆ. ಹೀಗಾಗಿ ಸೋಂಕಿನ ತೀವ್ರತೆ ಕಂಡು ಬಂದಿಲ್ಲ. ಸೋಂಕಿತರು ಲಕ್ಷಣ ರಹಿತರಾಗಿದ್ದು, ಆಸ್ಪತ್ರೆಗೆ ದಾಖಲಿಸಿಲ್ಲ. ವಿದ್ಯಾರ್ಥಿಗಳ ಸಂಪರ್ಕಿತರಿಗೆ ಕೋವಿಡ್‌ ಪರೀಕ್ಷೆ ನಡೆಸಲಾಗಿದ್ದು, ಶಿಕ್ಷಣ ಸಂಸ್ಥೆಯನ್ನು ಸೀಲ್‌ಡೌನ್‌ ಮಾಡಲಾಗಿದೆ. ಸೋಂಕಿತ ವಿದ್ಯಾರ್ಥಿಗಳಿಗೆ ಆರೈಕೆ ಒದಗಿಸುತ್ತಿರುವ ಕೇಂದ್ರ ಹಾಗೂ ವಸತಿ ನಿಲಯವನ್ನು ಪ್ರತ್ಯೇಕಿಸಲಾಗಿದೆ. 33 ವಿದ್ಯಾರ್ಥಿಗಳಿಗೆ ಸಂಸ್ಥೆಯ ವೈದ್ಯಕೀಯ ಕೇಂದ್ರದಲ್ಲಿಯೇ ಆರೈಕೆ ಮಾಡಲಾಗುತ್ತಿದೆ ಎಂದು ಬೆಂಗಳೂರು ನಗರ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಜಿ.ಶ್ರೀನಿವಾಸ್‌ ತಿಳಿಸಿದ್ದಾರೆ.

ಇನ್ನು ಆನೇಕಲ್‌ ತಾಲೂಕಿನ ಮರಸೂರಿನಲ್ಲಿರುವ ಸ್ಫೂರ್ತಿ ನರ್ಸಿಂಗ್‌ ಕಾಲೇಜಿನ ಹಾಸ್ಟೆಲ್‌ನಲ್ಲಿನ 158 ವಿದ್ಯಾರ್ಥಿನಿಯನ್ನು ತಪಾಸಣೆಗೆ ಒಳಪಡಿಸಲಾಗಿದ್ದು, 12 ವಿದ್ಯಾರ್ಥಿನಿಯರಲ್ಲಿ ಪಾಸಿಟಿವ್‌ ಕಂಡು ಬಂದಿದೆ. 9 ವಿದ್ಯಾರ್ಥಿನಿಯರನ್ನು ಜಿಗಣಿಯ ಸುಸಜ್ಜಿತ ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ(Covid Care Center) ದಾಖಲಿಸಲಾಗಿದೆ. ಮೂವರನ್ನು ಹೊರ ರಾಜ್ಯದಲ್ಲಿ ಐಸೊಲೇಷನ್‌ನಲ್ಲಿಡಲಾಗಿದೆ. ಒಟ್ಟಾರೆ 106 ವಿದ್ಯಾರ್ಥಿಗಳ ವೈದ್ಯಕೀಯ ಕೋಡ್‌ ತಪಾಸಣಾ ವರದಿ ನಿರೀಕ್ಷೆಯಲ್ಲಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ವಿನಯ್‌ ತಿಳಿಸಿದರು.

ಡೀಸಿ ನಿಗಾ:

ಜಿಲ್ಲಾಧಿಕಾರಿ ಮಂಜುನಾಥ್‌ ಹಾಗೂ ಡಿಎಚ್‌ಒ ಶ್ರೀನಿವಾಸ್‌ ಎಲ್ಲ ಮಾಹಿತಿಯನ್ನು ತರಿಸಿಕೊಂಡಿದ್ದು, ಜಿಲ್ಲಾ ಸರ್ವಲೆನ್ಸ್‌ ಅಧಿಕಾರಿ ಡಾ. ಮನೋಹರ್‌, ತಹಸೀಲ್ದಾರ್‌ ದಿನೇಶ್‌ ಸ್ಥಳಕ್ಕೆ ಭೇಟಿ ನೀಡಿ ಅಧೀನ ಅಧಿಕಾರಿಗಳಿಗೆ ಸೂಕ್ತ ಕ್ರಮ ವಸಲು ಸೂಚನೆ ನೀಡಿದ್ದಾರೆ. ಕಾಲೇಜು ಆಡಳಿತ ಮಂಡಳಿಯವರೊಡನೆ ಸತತ ಸಂಪರ್ಕದಲ್ಲಿದ್ದು, ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ವಿವಿಧ ಪ್ರಾಥುಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ 20 ಸೇರಿದಂತೆ ಒಟ್ಟು 66 ಪ್ರಕರಣಗಳು ಇಂದು ದಾಖಲಾಗಿವೆ ಎಂದು ಡಾ. ವಿನಯ್‌ ತಿಳಿಸಿದ್ದಾರೆ.

ನಗರದಲ್ಲಿ ಕೊರೋನಾ 200+

ನಗರದಲ್ಲಿ(Bengaluru) ಕೋವಿಡ್‌ ಸೋಂಕಿತ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದ್ದು, ಶುಕ್ರವಾರ 224 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಓರ್ವ ವ್ಯಕ್ತಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ(Death).

ಹೊಸ ಪ್ರಕರಣಗಳ ಪತ್ತೆಯಿಂದ ಈವರೆಗಿನ ಸೋಂಕಿತರ ಸಂಖ್ಯೆ 12,55,835ಕ್ಕೆ ಏರಿಕೆಯಾಗಿದೆ. 129 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಈವರೆಗೆ ಬಿಡುಗಡೆಯಾದವರ ಸಂಖ್ಯೆ 12,34,272ಕ್ಕೆ ಏರಿಕೆಯಾಗಿದೆ. ಒಬ್ಬರ ಸಾವಿನಿಂದ ಮೃತರ ಸಂಖ್ಯೆ 16,327ಕ್ಕೆ ಏರಿಕೆಯಾಗಿದೆ. ನಗರದಲ್ಲಿ ಸದ್ಯ 5235 ಸಕ್ರಿಯ ಸೋಂಕಿತ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ವರದಿ ಮಾಹಿತಿ ನೀಡಿದೆ.

ಕಳೆದ ಹತ್ತು ದಿನಗಳಿಂದ ಬೆಳ್ಳಂದೂರು ವಾರ್ಡ್‌ನಲ್ಲಿ 6, ಹೊರಮಾವು ವಾರ್ಡ್‌ 4, ಬೇಗೂರು, ಹಗದೂರು, ದೊಡ್ಡ ನೆಕ್ಕುಂದಿ, ಗರುಡಾಚಾರ್‌ಪಾಳ್ಯ, ಹೂಡಿ, ಕೋರಮಂಗಲ, ಉತ್ತರಹಳ್ಳಿ , ವಿಜ್ಞಾನ ನಗರ ವಾರ್ಡ್‌ಗಳಲ್ಲಿ ತಲಾ 3 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.

Covid Vaccination fraud :JDS ಶಾಸಕರ ವಿರುದ್ದ ದೂರು

ಬನಶಂಕರಿ ದೇವಸ್ಥಾನ, ಹೊಸಕೆರೆಹಳ್ಳಿ, ಆಡುಗೋಡಿ, ಆಜಾದ್‌ನಗರ, ಕೆ.ಆರ್‌.ಮಾರುಕಟ್ಟೆ, ಚಲವಾದಿಪಾಳ್ಯ, ರಾಯಪುರ, ಜಗಜೀವನರಾಂನಗರ, ಬಾಪೂಜಿನಗರ, ಹಮ್ಮಿಗೆನಗರ ವಾರ್ಡ್‌ಗಳಲ್ಲಿ ಕಳೆದ ಹತ್ತು ದಿನಗಳಿಂದ ಸೋಂಕು ಪತ್ತೆಯಾಗಿಲ್ಲ ಎಂದು ಬಿಬಿಎಂಪಿ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

67 ಮೈಕ್ರೋ ಕಂಟೈನ್ಮೆಂಟ್‌: 

ಪಾಲಿಕೆ(BBMP) ವ್ಯಾಪ್ತಿಯ ಎಂಟು ವಲಯಗಳಲ್ಲಿ 66 ಮೈಕ್ರೋ ಕಂಟೈನ್ಮೆಂಟ್‌ಗಳನ್ನು ಗುರುತಿಸಲಾಗಿದೆ. ಈ ಪೈಕಿ ಬೊಮ್ಮನಹಳ್ಳಿ 18, ದಕ್ಷಿಣ ವಲಯ 16, ಪೂರ್ವ 11, ಯಲಹಂಕ 10, ಮಹದೇವಪುರ 9, ಪಶ್ಚಿಮ 3 ಮೈಕ್ರೋ ಕಂಟೈನ್ಮೆಂಟ್‌ಗಳಿದ್ದು ದಾಸರಹಳ್ಳಿ ಮತ್ತು ರಾಜರಾಜೇಶ್ವರಿ ನಗರ ವಲಯ ಮೈಕ್ರೋ ಕಂಟೈನ್ಮೆಂಟ್‌ ಮುಕ್ತವಾಗಿವೆ.

ಐಎಲ್‌ಐ, ಸಾರಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಕಡ್ಡಾಯವಾಗಿ ಕೋವಿಡ್‌ ಪರೀಕ್ಷೆ ನಡೆಸಲಾಗುತ್ತಿದೆ. ಇದರಿಂದಾಗಿ ಸೋಂಕಿತರ ಪತ್ತೆ ಪ್ರಮಾಣ ಹೆಚ್ಚುತ್ತಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ(ಆರೋಗ್ಯ) ಡಾ.ತ್ರಿಲೋಕಚಂದ್ರ ತಿಳಿಸಿದ್ದಾರೆ. 
 

click me!