* ಕೋವಿಡ್‌ನಿಂದಲೂ ಮಕ್ಕಳ ರಕ್ಷಣೆಗೆ ಫ್ಲೂ ಲಸಿಕೆ ಸೂಕ್ತ
* ಆಸ್ಪತ್ರೆಗಳಿಗೆ ಪೋಷಕರ ದೌಡು
* ಕೊರೋನಾಗೂ ಫ್ಲೂ ಲಸಿಕೆಗೂ ಸಂಬಂಧವಿಲ್ಲ
ಬೆಂಗಳೂರು(ನ.27): ನಗರವನ್ನು(Bengaluru) ಬೆಂಬಿಡದೇ ಕಾಡುತ್ತಿರುವ ಮಳೆ, ಶೀತಗಾಳಿಯ ಪರಿಣಾಮವಾಗಿ ವೈರಲ್ ಜ್ವರದ ಬಾಧೆ ಮಿತಿ ಮೀರಿದೆ. ಕಳೆದ ಒಂದೂವರೆ ತಿಂಗಳಿನಿಂದ ಮಳೆಯ(Rain) ವಾತಾವರಣವೇ ನಗರದಲ್ಲಿ ಇರುವುದರಿಂದ ಮಕ್ಕಳಲ್ಲಿ ಶೀತ, ಕೆಮ್ಮು, ವೈರಲ್ ಜ್ವರದ ಜೊತೆಗೆ ಮಾರಣಾಂತಿಕ ಚಿಕೂನ್ ಗುನಿಯಾ, ಡೆಂಘೀ ಕಾಯಿಲೆಗಳು ನಗರದಲ್ಲಿ ಹೆಚ್ಚಾಗಿದೆ. ವೈರಲ್ ಜ್ವರದಿಂದ ಪಾರಾಗಲು ಹೆಚ್ಚಿನ ಪ್ರಮಾಣದಲ್ಲಿ ಪೋಷಕರು ಮಕ್ಕಳಿಗೆ ಫ್ಲೂ ಲಸಿಕೆಯ ಮೊರೆ ಹೋಗುತ್ತಿದ್ದಾರೆ.
ವಯಸ್ಕರು ಕೋವಿಡ್ ಲಸಿಕೆ(Covid Vaccine)ಪಡೆದು ಕೋವಿಡ್ ಪೂರ್ವದ ದಿನಗಳಂತೆ ತಮ್ಮ ಕೆಲಸ, ಓಡಾಟ, ದಿನಚರಿಗಳನ್ನು ಮಾಡುತ್ತಿದ್ದಾರೆ. ಆದರೆ ಮಕ್ಕಳು ಕೋವಿಡ್ ಲಸಿಕೆಗೆ ಇನ್ನೂ ಅರ್ಹರಾಗಿರದಿದ್ದರೂ ಕೂಡ ಶಾಲೆ ಆರಂಭಗೊಂಡು ಮಕ್ಕಳ ಕಾರ್ಯ ಚಟುವಟಿಕೆಗಳು ಕೋವಿಡ್ ಪೂರ್ವದ ದಿನಗಳಿಗೆ ಮರಳಿದೆ. ಈ ಹಿನ್ನೆಲೆಯಲ್ಲಿ ಕೋವಿಡ್ ಲಸಿಕೆ ಪಡೆಯಲು ಸಾಧ್ಯವಾಗದಿದ್ದರೂ ಕನಿಷ್ಠ ಪಕ್ಷ ಫ್ಲೂ ಲಸಿಕೆ(Flu Vaccine) ಪಡೆದರೆ ಕೋವಿಡ್ ಆಪಾಯದಿಂದ ಮಕ್ಕಳು ಪಾರಾಗಬಹುದು ಎಂಬ ಕಾರಣದಿಂದಲೂ ಪೋಷಕರು ಮಕ್ಕಳಿಗೆ(Children) ಫ್ಲೂ ಲಸಿಕೆ ನೀಡುತ್ತಿದ್ದಾರೆ.
Covid19: ಬೆಂಗ್ಳೂರಲ್ಲಿ ಮತ್ತೆ ಹೆಚ್ಚಿದ ಕೊರೋನಾ, ಆತಂಕದಲ್ಲಿ ಜನತೆ
ಆದರೆ ಕೆ.ಸಿ.ಜನರಲ್ ಆಸ್ಪತ್ರೆಯ ಮಕ್ಕಳ ರೋಗ ವಿಭಾಗದ ಮುಖ್ಯಸ್ಥ ಡಾ. ಲಕ್ಷ್ಮೀಪತಿ ಅವರು ಫ್ಲೂ ಲಸಿಕೆ ಪಡೆದು ಕೋವಿಡ್‌ನಿಂದ(Covid19) ಪಾರಾಗಬಹುದು ಎಂಬ ತರ್ಕವನ್ನು ಅಲ್ಲಗಳೆಯುತ್ತಾರೆ. ತಮ್ಮ ಮಕ್ಕಳಿಗೆ ಫ್ಲೂ ಲಸಿಕೆ ನೀಡುವಂತೆ ಅನೇಕ ಪೋಷಕರು ಬರುತ್ತಾರೆ. ಫ್ಲೂ ಲಸಿಕೆ ಪಡೆದರೆ ಕೋವಿಡ್‌ನಿಂದಲೂ ಪಾರಾಗಬಹುದು ಎಂಬುದು ಅವರ ಲೆಕ್ಕಾಚಾರ. ಆದರೆ ಫ್ಲೂ ಲಸಿಕೆಗೂ, ಕೋವಿಡ್‌ಗೂ ಯಾವುದೇ ಸಂಬಂಧವಿಲ್ಲ. ನಾನೇ ಅನೇಕ ಪೋಷಕರಿಗೆ ಈ ಬಗ್ಗೆ ಮನವರಿಕೆ ಮಾಡಿದ್ದೇನೆ ಎಂದು ಹೇಳುತ್ತಾರೆ.
ಫೋರ್ಟೀಸ್ ಆಸ್ಪತ್ರೆಯ ಮಕ್ಕಳ ತೀವ್ರ ನಿಗಾ ಘಟಕದ ಮುಖ್ಯಸ್ಥ ಡಾ. ಯೋಗೇಶ್ ಕುಮಾರ್ ಗುಪ್ತಾ ಅವರ ಪ್ರಕಾರ ಕಳೆದ ಆರು ತಿಂಗಳಲ್ಲಿ ಫ್ಲೂ ಲಸಿಕೆ ಹಾಕಿಸಿಕೊಳ್ಳುವ ಮಕ್ಕಳ ಪ್ರಮಾಣ ಶೇ.60ರಿಂದ 70ರಷ್ಟು ಹೆಚ್ಚಳವಾಗಿದೆ. ಸದ್ಯ ಮಕ್ಕಳಿಗೆ ಕೋವಿಡ್ ಲಸಿಕೆ ಇಲ್ಲದಿರುವ ಕಾರಣ ಪೋಷಕರು ತಮ್ಮ ಮಕ್ಕಳಿಗೆ ಫ್ಲೂ ಕೊಡಿಸುತ್ತಿದ್ದಾರೆ. ಮಳೆ ಹೆಚ್ಚಿರುವ ಕಾರಣ ವೈರಲ್ ಫೀವರ್ ಕಾಟ ಹೆಚ್ಚಿದೆ. ಶಾಲೆಯು ತೆರೆದಿರುವುದರಿಂದ ಸಾಂಕ್ರಾಮಿಕ ರೋಗದ ಭೀತಿಯೂ ಹೆಚ್ಚಿದೆ. ಹೀಗಾಗಿ ಪೋಷಕರು ತಮ್ಮ ಮಕ್ಕಳಿಗೆ ಫ್ಲೂ ಲಸಿಕೆ ಕೊಡಿಸಲು ಆಸ್ಪತ್ರೆಗಳಿಗೆ(Hospitals) ಭೇಟಿ ನೀಡುತ್ತಿದ್ದಾರೆ ಎಂದು ಹೇಳುತ್ತಾರೆ.
ಈ ಮೊದಲು 6 ವರ್ಷದೊಳಗಿನ ಮಕ್ಕಳು ಫ್ಲೂ ಲಸಿಕೆ ಪಡೆದುಕೊಳ್ಳುತ್ತಿದ್ದರು. ಆದರೆ ಈಗ ಕೋವಿಡ್ ಭಯದಿಂದ 6 ವರ್ಷ ಮೇಲ್ಪಟ್ಟಮಕ್ಕಳು ಸಹ ಫ್ಲೂ ಲಸಿಕೆ ಪಡೆಯಲು ಬರುತ್ತಿದ್ದಾರೆ. ಫ್ಲೂ ಲಸಿಕೆ ಹಾಕಿಸಿಕೊಂಡ ಮಕ್ಕಳಲ್ಲಿ ಕೋವಿಡ್ ಸೋಂಕು ತಗುಲಿದರೂ ತೀವ್ರತರ ಆರೋಗ್ಯ(Health) ಸಮಸ್ಯೆ ಎದುರಾಗುವುದಿಲ್ಲ. ಹೀಗಾಗಿ ಫ್ಲೂ ಹಾಕಿಸಿಕೊಳ್ಳುವ ಮಕ್ಕಳ ಪ್ರಮಾಣ ಸಹ ಹೆಚ್ಚಿದೆ. ಕೋವಿಡ್ ಪ್ರಾರಂಭದಲ್ಲಿ ಪ್ರತಿ ದಿನ 10-15 ಮಕ್ಕಳು ಫ್ಲೂ ಲಸಿಕೆಗೆ ಆಗಮಿಸುತ್ತಿದ್ದರು. ಈಗ ಈ ಪ್ರಮಾಣ 50ರವರೆಗೂ ಮುಟ್ಟಿದೆ ಎಂದು ಡಾ. ಯೋಗೇಶ್ ಕುಮಾರ್ ಹೇಳುತ್ತಾರೆ.
Botswana variant: ಅತ್ಯಂತ ವೇಗವಾಗಿ ಹಬ್ಬುವ, ಲಸಿಕೆಗೂ ಬಗ್ಗದ ಕೋವಿಡ್‌ನ ಹೊಸ ರೂಪಾಂತರಿ ಪತ್ತೆ!
ಉಚಿತವಾಗಿ ಫ್ಲೂಲಸಿಕೆಗೆ ಒತ್ತಾಯ
ಸರ್ಕಾರದ ಲಸಿಕೆ ಅಭಿಯಾನದ ವ್ಯಾಪ್ತಿಯಲ್ಲಿ ಫ್ಲೂ ಲಸಿಕೆ ಬರುವುದಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಫ್ಲೂ ಲಸಿಕೆ ಉಚಿತವಾಗಿ ಲಭ್ಯವಿಲ್ಲ. ಇದರಿಂದಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಫ್ಲೂ ಲಸಿಕೆಯನ್ನು ದುಬಾರಿ ಹಣ ತೆತ್ತು ಪಡೆಯಬೇಕಿದೆ. ಬಡ ಪೋಷಕರಿಗೆ ತಮ್ಮ ಮಕ್ಕಳಿಗೆ ಫ್ಲೂ ಲಸಿಕೆ ನೀಡುವುದು ಕಷ್ಟ. ಆದ್ದರಿಂದ ಫ್ಲೂ ಲಸಿಕೆಯನ್ನು ಉಚಿತವಾಗಿ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಪೋಷಕರು ಒತ್ತಾಯಿಸುತ್ತಾರೆ.
ಮುನ್ನೆಚ್ಚರಿಕೆ ವಹಿಸಿ: ತಜ್ಞ ವೈದ್ಯರು
ಮಳೆ, ಶೀತಗಾಳಿಯ ದಿನಗಳಲ್ಲಿ ವೈರಲ್ ಕಾಯಿಲೆಗಳು(Viral Diseases), ಸೊಳ್ಳೆಯಿಂದ ಹರಡುವ ಡೆಂಘೀ, ಚಿಕೂನ್ ಗುನಿಯಾ, ಮಲೇರಿಯಾ ಪ್ರಕರಣ ಹೆಚ್ಚುತ್ತದೆ. ಆದ್ದರಿಂದ ಬಿಸಿ ಆಹಾರ, ಕುದಿಸಿ ಆರಿಸಿದ ನೀರು ಸೇವನೆ ಮಾಡಬೇಕು. ಈ ಸಂದರ್ಭದಲ್ಲಿ ಹೊರಗಿನ ತಣ್ಣನೆಯ ಆಹಾರವನ್ನು ವರ್ಜಿಸಿ. ಮನೆ, ಕಚೇರಿಯ ಪಕ್ಕ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಿ. ಕೈಗಳ ಸ್ವಚ್ಛತೆ, ಮಾಸ್ಕ್(Mask) ಧಾರಣೆಯನ್ನು ಚಾಚೂ ತಪ್ಪದೆ ಪಾಲಿಸಿ ಎಂದು ತಜ್ಞ ವೈದ್ಯರು ಸಲಹೆ ನೀಡುತ್ತಾರೆ.