ಹುಲಿಕಲ್ ಘಾಟ್ ಮಣ್ಣು ಕುಸಿತ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ: ಸಚಿವ ಮಧು ಬಂಗಾರಪ್ಪ

Published : Apr 29, 2026, 09:47 PM IST
madhu bangarappa

ಸಾರಾಂಶ

ಹುಲಿಕಲ್ ಘಾಟ್ ರಸ್ತೆ ಕಾಮಗಾರಿ ವೇಳೆ ಸಂಭವಿಸಿದ ಮಣ್ಣು ಕುಸಿತ ಅವಘಡದ ಕುರಿತು ಸಮಗ್ರ ವಿವರ ಪಡೆದು, ತಪ್ಪಿತಸ್ಥರ ವಿರುದ್ದ ಕಾನೂನಾತ್ಮಕ ಕ್ರಮ ವಹಿಸಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಹೊಸನಗರ (ಏ.29): ಮಲೆನಾಡು ಮತ್ತು ಕರಾವಳಿಯನ್ನು ಸಂಪರ್ಕಿಸುವ ಪ್ರಮುಖ ಕೊಂಡಿಯಾಗಿರುವ ಹೊಸನಗರ ತಾಲೂಕಿನ ವ್ಯಾಪ್ತಿಯ ಹುಲಿಕಲ್ ಘಾಟ್ ರಸ್ತೆ ಕಾಮಗಾರಿ ವೇಳೆ ಸಂಭವಿಸಿದ ಮಣ್ಣು ಕುಸಿತ ಅವಘಡದ ಕುರಿತು ಸಮಗ್ರ ವಿವರ ಪಡೆದು, ತಪ್ಪಿತಸ್ಥರ ವಿರುದ್ದ ಕಾನೂನಾತ್ಮಕ ಕ್ರಮ ವಹಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ತಾಲೂಕು ವ್ಯಾಪ್ತಿಯಲ್ಲಿ ಪ್ರಗತಿಯಲ್ಲಿರುವ ಹುಲಿಕಲ್ ಘಾಟ್ ರಸ್ತೆ ತಡೆಗೋಡೆ ನಿರ್ಮಾಣ ಕಾಮಗಾರಿ ಪ್ರದೇಶಕ್ಕೆ ಭೇಟಿ ನೀಡಿ, ಕಾಮಗಾರಿ ಮತ್ತು ಮಣ್ಣು ಕುಸಿತದ ಪ್ರದೇಶವನ್ನು ಅಧಿಕಾರಿಗಳೊಂದಿಗೆ ಪರಿಶೀಲಿಸಿದ ನಂತರ ಮಾತನಾಡಿದರು. ಹುಲಿಕಲ್ ರಸ್ತೆ ತಡೆಗೋಡೆ ನಿರ್ಮಾಣ ವೇಳೆ ಮಣ್ಣು ಕುಸಿತ ಅವಘಡ ಸಂಭವಿಸಿ ಮೂರು ಕಾರ್ಮಿಕರು ಮೃತಪಟ್ಟಿದ್ದು, ಸೂಕ್ತ ರೀತಿಯ ಮುನ್ನೆಚ್ಚರಿಕೆ ವಹಿಸದೆ ಕಾಮಗಾರಿ ನಡೆಸಿದ ತಪ್ಪಿತಸ್ಥ ಅಧಿಕಾರಿ, ಗುತ್ತಿಗೆದಾರರ ವಿರುದ್ದ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.

ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ನ್ಯಾಯ ಒದಗಿಸಲಾಗುವುದು ಎಂದು ತಿಳಿಸಿದರು. ಹಾಗೂ ಲೋಕೋಪಯೋಗಿ ಸಚಿವರೊಂದಿಗೆ , ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ತುರ್ತಾಗಿ ವ್ಯವಸ್ಥಿತ ರೀತಿಯ ಕಾಮಗಾರಿ ನಡೆಸಲು ಕ್ರಮ ವಹಿಸಲಾಗುವುದು ಎಂದ ಅವರು ಈ ಭಾಗದ ಜನಸಾಮಾನ್ಯರ ಅಹವಾಲುಗಳಿಗೆ ಪರಿಹಾರ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿದ್ದು, ಮುಂದೆಯೂ ಮಾಡುತ್ತೇನೆಂದು ಭರವಸೆ ನೀಡಿದರು.

ಹೇರ್ ಪಿನ್ ತಿರುವುಗಳ ಸುಧಾರಣೆ: ರಸ್ತೆಯ ಸರಪಳಿ 42.05 ಕಿ.ಮೀ ನಿಂದ 42.25 ಕಿ.ಮೀ ವರೆಗಿನ ಭಾಗವು ಪ್ರಸ್ತುತ ಅತ್ಯಂತ ಕಿರಿದಾದ ಹೇರ್ ಪಿನ್ ತಿರುವುಗಳಿಂದ ಕೂಡಿದ್ದು, ಈ ಭಾಗದ ಸುಧಾರಣೆಗೂ ಆದ್ಯತೆ ನೀಡಲಾಗಿದೆ ಎಂದರು. ಹುಲಿಕಲ್ ಘಾಟ್ ರಸ್ತೆ ಮೂಲಕ ಸುಗಮ ಸಂಚಾರಕ್ಕೆ ವ್ಯವಸ್ಥಿತ ಯೋಜನೆ ರೂಪಿಸಿ, ಅನುದಾನ ನಿಗದಿಗೊಳಿಸಿ ಶಾಶ್ವತ ಪರಿಹಾರ ಒದಗಿಸುವಂತೆ ಸಾರ್ವಜನಿಕರು ಮನವಿ ಮಾಡಿದರು.

ಹುಲಿಕಲ್ ಘಾಟ್ ತಡೆಗೋಡೆ ಕಾಮಗಾರಿ ವಿವರ

ಮಳೆಯಿಂದ ಭೂಕುಸಿತ ಉಂಟಾಗಿದ್ದ ಹುಲಿಕಲ್ ಘಾಟ್ ಸ್ಥಳದಲ್ಲಿ ಶಾಶ್ವತ ಪರಿಹಾರಕ್ಕಾಗಿ ಲೋಕೋಪಯೋಗಿ ಇಲಾಖೆಯ ವತಿಯಿಂದ ತಡೆಗೋಡೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ಮೊದಲ ಹಂತದಲ್ಲಿ ರೂ.‌435 ಲಕ್ಷಗಳ ಅನುದಾನದಲ್ಲಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಸುಮಾರು 80 ಮೀಟರ್ ಉದ್ದದ ಆರ್.ಸಿ.ಸಿ. ತಡೆಗೋಡೆಯನ್ನು ಇಲಾಖೆಯ ತಾಂತ್ರಿಕ ವಿನ್ಯಾಸದಂತೆ ನಿರ್ಮಿಸಲಾಗುತ್ತಿದೆ.

ಡಿಸೆಂಬರ್ ಮಾಹೆಯಲ್ಲಿ ಕಾಮಗಾರಿ ಆರಂಭವಾಗಿದ್ದು, ಈಗಾಗಲೇ 60 ಮೀಟರ್ ಉದ್ದದ ಭಾಗದಲ್ಲಿ ಹಳೆಯ ಮಣ್ಣನ್ನು ತೆರವುಗೊಳಿಸಿ, ಅಡಿಪಾಯದೊಂದಿಗೆ ಸುಮಾರು 6 ಮೀಟರ್ ಎತ್ತರದವರೆಗೆ ಗೋಡೆ ನಿರ್ಮಿಸಲಾಗಿದೆ. ಹೊಸನಗರ ತಾಲೂಕಿನ ತೀರ್ಥಹಳ್ಳಿ - ಕುಂದಾಪುರ ರಾಷ್ಟ್ರೀಯ ಹೆದ್ದಾರಿ 52ರ ಸರಪಳಿ 38.00 ಕಿ.ಮೀ ನಿಂದ 43.58 ಕಿ.ಮೀ ವರೆಗಿನ ಸುಮಾರು 5.58 ಕಿ.ಮೀ ಉದ್ದದ ರಸ್ತೆ ಹುಲಿಕಲ್ ಘಾಟ್ ವ್ಯಾಪ್ತಿಯಲ್ಲಿ ಬರಲಿದ್ದು, ಇಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ.

PREV
Read more Articles on
click me!

Recommended Stories

Photos: ಆಲಿಕಲ್ಲು ಮಳೆಗೆ ಕಾಶ್ಮೀರದಂತಾದ ಬೆಂಗಳೂರು; ಧರೆಗುರುಳಿದ 30 ಮರಗಳಡಿ ವಾಹನ ಜಖಂ, ಗೋಡೆ ಕುಸಿತಕ್ಕೆ 7 ಬಲಿ
ಬೆಂಗಳೂರು ಮಳೆಗೆ ಬಲಿಯಾದ ಮೃತರ ಪಟ್ಟಿ ಬಿಡುಗಡೆ, ಕುಟುಂಬಕ್ಕೆ 5 ಲಕ್ಷ ರೂ ಪರಿಹಾರ ಘೋಷಣೆ