ಸಿಗಂದೂರು ವಿವಾದಿತ ಭೂಮಿ ಸರ್ಕಾರದ ವಶಕ್ಕೆ

By Kannadaprabha News  |  First Published Mar 28, 2021, 10:10 AM IST

ಸಿಗಂದೂರು ಭೂ ವಿವಾದಕ್ಕೆ ಸಂಬಂಧಿಸಿದಂತೆ ಇದೀಗ ಮಹತ್ವದ ಆದೇಶ ನೀಡಲಾಗಿದೆ. ವಿವಾದಿತ  ಭೂಮಿಯನ್ನು ಸರ್ಕಾರದ ವಶಕ್ಕೆ ನೀಡಲು ಆದೇಶ ನೀಡಲಾಗಿದೆ.


 ಬೆಂಗಳೂರು (ಮಾ.28): ಪ್ರಸಿದ್ಧ ಸಿಗಂದೂರು ಚೌಡೇಶ್ವರಿ ದೇವಾಲಯದ ಹೆಸರಿನಲ್ಲಿ ಒತ್ತುವರಿ ಮಾಡಲಾಗಿದೆ ಎನ್ನಲಾದ ಅರಣ್ಯ ಭೂಮಿಯಲ್ಲಿ ದೇವಾಲಯ ಹಾಗೂ ಇತರ ಕಟ್ಟಡಗಳಿರುವ ಜಾಗ ಹೊರತುಪಡಿಸಿ ಉಳಿದ 6.16 ಎಕರೆ ಜಾಗವನ್ನು ಸರ್ಕಾರದ ವಶಕ್ಕೆ ನೀಡುವಂತೆ ದೇವಸ್ಥಾನದ ಆಡಳಿತ ಮಂಡಳಿಗೆ ಹೈಕೋರ್ಟ್‌ ನಿರ್ದೇಶಿಸಿದೆ.

ಸಾಗರ ತಾಲೂಕಿನ ಕೆ.ಎಸ್‌.ಲಕ್ಷ್ಮೀ ನಾರಾಯಣ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ್‌ ನೇತೃತ್ವದ ವಿಭಾಗೀಯ ಪೀಠ ಶುಕ್ರವಾರ ವಿಚಾರಣೆ ನಡೆಸಿತು.

Tap to resize

Latest Videos

ವಿಚಾರಣೆ ವೇಳೆ ಅಡ್ವೊಕೇಟ್‌ ಜನರಲ್‌ ಹಾಜರಾಗಿ, ಒತ್ತುವರಿಯಾಗಿರುವ ಸರ್ಕಾರಿ ಜಾಗವನ್ನು ತೆರವು ಮಾಡುವಂತೆ ಈ ಹಿಂದೆಯೇ ಆದೇಶಿಸಲಾಗಿದೆ. ಈ ವಿಚಾರದಲ್ಲಿ ಹಿಂದೆ ಸರಿಯುವ ಮಾತೇ ಇಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ದೇವಾಲಯದ ಪರ ವಕೀಲರು, ನ್ಯಾಯಾಲಯದ ಹಿಂದಿನ ನಿರ್ದೇಶನದಂತೆ ದೇವಸ್ಥಾನ, ಕಲ್ಯಾಣ ಮಂಟಪ ಹಾಗೂ ಇತರ ಕಟ್ಟಡಗಳಿರುವ ಜಾಗ ಬಿಟ್ಟು ಉಳಿದ ಪ್ರದೇಶವನ್ನು ಬಿಟ್ಟುಕೊಡಲು ಸಿದ್ಧವಿರುವುದಾಗಿ ನ್ಯಾಯಪೀಠಕ್ಕೆ ತಿಳಿಸಿದರು.

ಸಿಗಂದೂರು : ಎದುರಾಯ್ತು ಈಗ ಮತ್ತೊಂದು ವಿವಾದ ...

ದೇವಾಲಯದ ಪರ ವಕೀಲರ ಹೇಳಿಕೆಯನ್ನು ಪರಿಗಣಿಸಿದ ನ್ಯಾಯಪೀಠ, ಕಟ್ಟಡಗಳಿರುವ ಜಾಗ ಹೊರತುಪಡಿಸಿ ಉಳಿದ 6.16 ಎಕರೆ ಸರ್ಕಾರಿ ಭೂಮಿಯನ್ನು ಸಾಗರ ತಹಸೀಲ್ದಾರ್‌ ವಶಕ್ಕೆ ನೀಡಬೇಕು. ಏ.1ರಂದು ಅಧಿಕಾರಿಗಳು ಸ್ಥಳದ ಮಹಜರು ನಡೆಸಿ, ಭೂಮಿಯನ್ನು ಸರ್ಕಾರದ ವಶಕ್ಕೆ ಪಡೆದುಕೊಂಡು, ಸುತ್ತಲೂ ತಂತಿ ಬೇಲಿ ಅಳವಡಿಸಬೇಕು. ಕೈಗೊಂಡ ಕ್ರಮಗಳ ಕುರಿತ ವರದಿಯನ್ನು ಮುಂದಿನ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ನಿರ್ದೇಶಿಸಿತು.

ಒತ್ತುವರಿಯಾಗಿದ್ದ ಖಾಲಿ ಜಾಗ ಬಿಟ್ಟುಕೊಟ್ಟಮಾತ್ರಕ್ಕೆ ದೇವಸ್ಥಾನವಿರುವ ಜಾಗ ಸಕ್ರಮವಾದಂತಲ್ಲ. ಆ ಬಗ್ಗೆ ಮುಂದೆ ವಿಚಾರಣೆ ನಡೆಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವ ಕುರಿತು ನಿರ್ಧರಿಸಲಾಗುವುದು ಎಂದು ಸ್ಪಷ್ಟಪಡಿಸಿದ ಪೀಠ, ವಿಚಾರಣೆಯನ್ನು ಏ.16ಕ್ಕೆ ಮುಂದೂಡಿತು.

ಅರ್ಜಿಯ ಕಳೆದ ವಿಚಾರಣೆ ವೇಳೆ, ಶಿವಮೊಗ್ಗ ಜಿಲ್ಲಾಧಿಕಾರಿ ನೀಡಿರುವ ಮಾಹಿತಿಯಂತೆ ದೇವಸ್ಥಾನ 12.16 ಎಕರೆಯನ್ನು ಬಳಸಿಕೊಂಡಿಲ್ಲ. ದೇವಸ್ಥಾನ ಹಾಗೂ ಇತರ ಕಟ್ಟಡಗಳೆಲ್ಲವೂ ಅಂದಾಜು 5 ಎಕರೆ ಪ್ರದೇಶದಲ್ಲಿದೆ ಎಂದು ದೇವಾಲಯದ ಪರ ವಕೀಲರು ಕೋರ್ಟ್‌ಗೆ ತಿಳಿಸಿದ್ದರು. ಇದಕ್ಕೆ ನ್ಯಾಯಪೀಠ, ಕಟ್ಟಡಗಳಿರುವ ಜಾಗ ಬಿಟ್ಟು ಉಳಿದ ಪ್ರದೇಶವನ್ನು ಸ್ವಯಂಪ್ರೇರಿತವಾಗಿ ಸರ್ಕಾರದ ವಶಕ್ಕೆ ನೀಡುವ ಬಗ್ಗೆ ನಿಲುವು ತಿಳಿಸುವಂತೆ ಆಡಳಿತ ಮಂಡಳಿಗೆ ಸೂಚಿಸಿತ್ತು.

click me!