Gadag: ಭೀಷ್ಮಕೆರೆ ಜಂಟಿ ಸರ್ವೇಗೆ ಹೈಕೋರ್ಟ್‌ ಮಹತ್ವದ ಆದೇಶ!

By Govindaraj S  |  First Published Aug 3, 2022, 7:04 PM IST

ಇಲ್ಲಿಯ ಐತಿಹಾಸಿಕ ಭೀಷ್ಮಕೆರೆ ಒತ್ತುವರಿ ಹಿನ್ನೆಲೆಯಲ್ಲಿ ಕೆರೆಯ ಜಂಟಿ ಸರ್ವೇ ನಡೆಸಿ 4 ವಾರದಲ್ಲಿ ವರದಿ ನೀಡುವಂತೆ ಬೆಂಗಳೂರಿನ ಉಚ್ಚ ನ್ಯಾಯಾಲಯ ಸೋಮವಾರ ರಾಜ್ಯ ಸರ್ಕಾರಕ್ಕೆ ಸ್ಪಷ್ಟ ಸೂಚನೆ ನೀಡಿದೆ. 


ಶಿವಕುಮಾರ ಕುಷ್ಟಗಿ

ಗದಗ (ಆ.03): ಇಲ್ಲಿಯ ಐತಿಹಾಸಿಕ ಭೀಷ್ಮಕೆರೆ ಒತ್ತುವರಿ ಹಿನ್ನೆಲೆಯಲ್ಲಿ ಕೆರೆಯ ಜಂಟಿ ಸರ್ವೇ ನಡೆಸಿ 4 ವಾರದಲ್ಲಿ ವರದಿ ನೀಡುವಂತೆ ಬೆಂಗಳೂರಿನ ಉಚ್ಚ ನ್ಯಾಯಾಲಯ ಸೋಮವಾರ ರಾಜ್ಯ ಸರ್ಕಾರಕ್ಕೆ ಸ್ಪಷ್ಟ ಸೂಚನೆ ನೀಡಿದೆ. ಗದಗ ಹೃದಯ ಭಾಗದಲ್ಲಿರುವ ಭೀಷ್ಮ ಕೆರೆ ಒತ್ತುವರಿಯಾಗಿದ್ದು, ಈ ಕುರಿತು ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತ ರಕ್ಷಣಾ ಅರ್ಜಿ ವಿಚಾರಣೆ ಆ. 1ರಂದು ಬೆಂಗಳೂರಿನಲ್ಲಿ ನಡೆದಿದೆ.

Tap to resize

Latest Videos

undefined

ಒತ್ತುವರಿ ಹೇಗೆ?: ಭೀಷ್ಮಕೆರೆಯ ಒಟ್ಟು ವಿಸ್ತೀರ್ಣ 103 ಎಕರೆ, ರಾಜ್ಯಪಾಲರ ಹೆಸರಿನಲ್ಲಿ ಆರ್‌ಟಿಸಿಯನ್ನು ಈ ಹಿಂದೆ ಹೊಂದಿತ್ತು. ಸಾಕಷ್ಟು ಒತ್ತುವರಿಯಾಗಿ ಈಗ ಉಳಿದಿರುವುದು ಕೇವಲ 65 ಎಕರೆ, ಇದರಲ್ಲಿ ಸಾರ್ವಜನಿಕರು, ಲೋಕೋಪಯೋಗಿ ಇಲಾಖೆ, ತೋಟಗಾರಿಕೆ ಹೀಗೆ ಕೆರೆಯ ಅತ್ಯಮೂಲ್ಯ ಜಮೀನನ್ನು ಒತ್ತುವರಿ ಮಾಡಿಕೊಂಡು ಅಲ್ಲಿ ಕಟ್ಟಡಗಳನ್ನು ನಿರ್ಮಿಸಿಕೊಂಡಿದ್ದಾರೆ. ಇದು ಕೆರೆ ಸಂರಕ್ಷಣಾ ಪ್ರಾಧಿಕಾರದ ನಿಯಮ 2014ರ ಹಾಗೂ ಪರಿಷ್ಕೃತ ನಿಯಮ 2018ರ ಸ್ಪಷ್ಟ ಉಲ್ಲಂಘನೆಯಾಗಿದ್ದು, ಈ ಕುರಿತು ಸಾರ್ವಜನಿಕರು ಸಾಕಷ್ಟು ಹೋರಾಟ ಮಾಡಿದರೂ ನಗರಸಭೆ ಅಧಿಕಾರಿಗಳು ಮಾತ್ರ ಭೀಷ್ಮ ಕೆರೆಯಲ್ಲಿ ಒತ್ತುವರಿಯಾಗಿಲ್ಲ, ಮೂಲ ಕೆರೆ ಎಷ್ಟುಇತ್ತು ಅಷ್ಟೇ ಇದೆ ಎಂದು ಜಿಲ್ಲಾಧಿಕಾರಿಗಳ ಮೂಲಕ ಕೆರೆ ಸಂರಕ್ಷಣಾ ಪ್ರಾಧಿಕಾರಕ್ಕೆ ವರದಿ ಸಲ್ಲಿಸಿ ಒತ್ತುವರಿ ಮಾಡಿಕೊಂಡವರ ಪರವಾಗಿ ನಿಂತಿದ್ದಕ್ಕೆ ಸಾಕಷ್ಟು ದಾಖಲೆಗಳಿವೆ.

ಅತೀ ಮಳೆಗೆ ತತ್ತರಿಸಿದ ಹೂ ಬೆಳೆಗಾರರು: ಶ್ರಾವಣದ ಮೊದಲ ಸೋಮವಾರವೂ ಹೂವಿಗಿಲ್ಲ ಬೆಲೆ

ಮೇಲ್ನೋಟಕ್ಕೆ ಕಾಣುತ್ತದೆ: ಭೀಷ್ಮ ಕೆರೆಯನ್ನು ಒಮ್ಮೆ ಸುತ್ತಿದರೆ ಸಾಕು ಎಷ್ಟು ಒತ್ತುವರಿಯಾಗಿದೆ ಎನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಆದರೆ ನಗರಸಭೆ ಅಧಿಕಾರಿಗಳು ಮಾತ್ರ ಈಗಾಗಲೇ ಸರ್ಕಾರದ ಸರ್ವೇ ಇಲಾಖೆಯ ಸಹಯೋಗದಲ್ಲಿ ಸರ್ವೇ ನಡೆಸಿದ್ದು, ಸರ್ವೇ ವರದಿಯಲ್ಲಿ ಕೆರೆಯ ಯಾವುದೇ ಭೂಮಿ ಒತ್ತುವರಿಯಾಗಿಲ್ಲ ಎಂದೇ ದಾಖಲಿಸಲಾಗಿದೆ.

ಸಾರ್ವಜನಿಕ ಹಿತಾಸಕ್ತಿ ಅರ್ಜಿ: ನಗರಸಭೆಯ ಅಮೂಲ್ಯ ಆಸ್ತಿಯನ್ನು ಉಳಿಸಬೇಕಾದ ಅಧಿಕಾರಿಗಳೇ ಒತ್ತುವರಿಯಾಗಿರುವ ಆಸ್ತಿಯನ್ನು ಒತ್ತುವರಿ ಆಗಿಲ್ಲ ಎಂದು ಉಲ್ಲೇಖಿಸಿದ್ದನ್ನು ಗಮನಿಸಿದ 3 ಜನ ಸಾರ್ವಜನಿಕರು, ನಜೀರ್‌ ಅಹ್ಮದ್‌ ಅಂಗಡಿ ಎನ್ನುವವರ ನೇತೃತ್ವದಲ್ಲಿ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದರು. ಈಗಾಗಲೇ 3 ಬಾರಿ ವಿಚಾರಣೆಯನ್ನು ನಡೆಸಿರುವ ನ್ಯಾಯಾಲಯ ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿ ಒತ್ತುವರಿಯನ್ನು ಕೂಡಲೇ ತೆರವುಗೊಳಿಸಿ ಆ ಬಗ್ಗೆ ನ್ಯಾಯಾಲಯಕ್ಕೆ ಸೂಕ್ತ ದಾಖಲೆಗಳೊಂದಿಗೆ ವರದಿ ನೀಡುವಂತೆ ಸೂಚಿಸಿತ್ತು. ಆದರೆ ನಗರಸಭೆ ಅಧಿಕಾರಿಗಳು ಮಾತ್ರ ಇದರ ಬಗ್ಗೆ ಗಮನ ಕೊಡದೇ ಒತ್ತುವರಿ ಮಾಡಿಕೊಂಡವರೊಂದಿಗೆ ಕೈಜೋಡಿಸಿ ಕೇವಲ ಕಣ್ಣು ಒರೆಸುವ ತಂತ್ರದಂತೆ ಒತ್ತುವರಿದಾರರು ಎಂದು ಪರಿಗಣಿಸಲ್ಪಟ್ಟ ವ್ಯಕ್ತಿಗಳಿಗೆ ಒಂದು ನೋಟಿಸ್‌ ನೀಡಿ ಕೈ ತೊಳೆದುಕೊಂಡಿತ್ತು. ಪರೋಕ್ಷವಾಗಿ ನಾವು ಕೊಟ್ಟ ನೋಟಿಸ್‌ ಮೇಲೆ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ತಡೆಯಾಜ್ಞೆ ಸಿಗುತ್ತದೆ ಎನ್ನುವ ಮಾಹಿತಿಯನ್ನು ನೀಡಿದ್ದರು.

ಮಹತ್ವದ ತೀರ್ಪು: ಭೀಷ್ಮಕೆರೆ ವಿಷಯದಲ್ಲಿ ನಗರಸಭೆ ಹಾಗೂ ಜಿಲ್ಲಾ ಆಡಳಿತ ನಡೆದುಕೊಳ್ಳುತ್ತಿದ್ದ ರೀತಿ ಅಧಿಕಾರಿಗಳ ವರ್ತನೆಯನ್ನು ಗಂಭೀರವಾಗಿ ಪರಿಗಣಿಸಿದ ಕೋರ್ಟ್‌ ಆಗಸ್ವ್‌ 1ರಂದು ಮಹತ್ವದ ನಿರ್ದೇಶನ ನೀಡಿದ್ದು, ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್‌ ಅರಾಧ ಹಾಗೂ ನ್ಯಾಯಮೂರ್ತಿ ಎಸ್‌. ವಿಶ್ವಜಿತ್‌ ಶೆಟ್ಟಿಅವರಿದ್ದ ಪೀಠ ಸೋಮವಾರ ವಿಚಾರಣೆ ನಡೆಸಿ ರಾಜ್ಯ ಭೂ ದಾಖಲೆಗಳ ಹೆಚ್ಚುವರಿ ನಿರ್ದೇಶಕ (ಎಡಿಎಲ್‌ಆರ್‌) ಕರ್ನಾಟಕ ಕೆರೆ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿ, ಗದಗ-ಬೆಟಗೇರಿ ನಗರಸಭೆ ಆಯುಕ್ತರನ್ನು ಒಳಗೊಂಡ ಸಮಿತಿಯಿಂದ ಭೀಷ್ಮಕೆರೆ ಪ್ರದೇಶವನ್ನು ಜಂಟಿ ಸರ್ವೇ ನಡೆಸಿ 4 ವಾರದಲ್ಲಿ ವರದಿ ಸಲ್ಲಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಸ್ಪಷ್ಟ ನಿರ್ದೇಶನ ನೀಡಿದ್ದು, ಕೆರೆ ಉಳಿಸುವ ಹೋರಾಟ ನಡೆಸುತ್ತಿರುವ ಸಾರ್ವಜನಿಕರಿಗೆ ಸಿಕ್ಕ ದೊಡ್ಡ ಜಯ ಇದಾಗಿದೆ.

ತಪ್ಪು ಮಾಹಿತಿ: ಒತ್ತುವರಿದಾರರಿಗೆ ನೋಟಿಸ್‌ ನೀಡಿ ಈ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ನೀಡಿದ ಸೂಚನೆ ಆಧಾರದಲ್ಲಿ ನಗರಸಭೆ ಜೂನ್‌ 6ರಿಂದ ಒತ್ತುವರಿದಾರರಿಗೆ ನೋಟಿಸ್‌ ನೀಡಿತ್ತು. ಈ ನೋಟಿಸ್‌ ಕುರಿತು ‘ಕನ್ನಡಪ್ರಭ’ ಸರಣಿ ವರದಿ ಪ್ರಕಟಿಸಿದಾಗ ಎಚ್ಚೆತ್ತ ಅಧಿಕಾರಿಗಳು ತರಾತುರಿಯಲ್ಲಿ ಓಡಾಟ ಪ್ರಾರಂಭಿಸಿದ್ದರು. ಆದರೆ ಕೆಲ ಪ್ರಭಾವಿಗಳು ಯಾವುದೇ ಕಾರಣಕ್ಕೂ ತೆರವು ಆಗುವುದಿಲ್ಲ, ನೀವು ಭಯಪಡಬೇಡಿ. ನಿಮಗೆ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಲು ಅವಕಾಶವಿದೆ ಎಂದು ಈಗಾಗಲೇ ಕಟ್ಟಡ ಕಟ್ಟಿಕೊಂಡಿರುವ ಜನರಿಗೆ ಅಭಯ ನೀಡಿದ್ದರು. ಆದರೆ ಸೋಮವಾರ ರಾಜ್ಯ ಉಚ್ಚ ನ್ಯಾಯಾಲಯ ಮತ್ತೊಮ್ಮೆ ಜಂಟಿಯಾಗಿ ಸಮೀಕ್ಷೆ ನಡೆಸುವಂತೆ ಸೂಚನೆ ನೀಡಿದ್ದು ಸಹಜವಾಗಿ ಪ್ರಭಾವಿಗಳಿಗೆ, ಒತ್ತುವರಿ ಮಾಡಿಕೊಂಡವರಲ್ಲಿ ನಡುಕಕ್ಕೆ ಕಾರಣವಾಗಿದೆ.

Heavy Rain Fall : ಚೇರ್ ಮೇಲೆ ರಾತ್ರಿ ಕಳೆದ ಆಪರೇಷನ್ ಆದ ವ್ಯಕ್ತಿ!

ಭೀಷ್ಮಕೆರೆ ಒತ್ತುವರಿ ವಿಷಯದಲ್ಲಿ ಸಾರ್ವಜನಿಕರ ಹಿತಾಸಕ್ತಿಗೆ ಅನುಗುಣವಾಗಿ ಹೋರಾಟ ಮಾಡಿದ್ದೇವೆ. ಇದಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದು, ಆ. 1ರಂದು ನ್ಯಾಯಾಲಯ ಜಂಟಿ ಸರ್ವೇ ನಡೆಸುವಂತೆ ಸೂಚಿಸಿ 4 ವಾರಗಳ ಕಾಲಾವಕಾಶ ನೀಡಿದ್ದು, ನಮ್ಮ ನ್ಯಾಯಯುತ ಹೋರಾಟಕ್ಕೆ ಸಿಕ್ಕ ಜಯವಾಗಲಿದೆ. ಈಗ ಸತ್ಯ ಹೊರಬರಲಿದೆ, ನಮ್ಮ ಹೋರಾಟವನ್ನು ಅಪಹಾಸ್ಯ ಮಾಡಿದವರಿಗೆ, ಬೆದರಿಕೆ ಹಾಕಿದವರಿಗೆ, ನ್ಯಾಯಾಲಯದಿಂದಲೇ ಉತ್ತರ ಸಿಕ್ಕಿದೆ.
-ನಜೀರ್‌ಅಹ್ಮದ ಅಂಗಡಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ ವ್ಯಕ್ತಿ

click me!