
ಬೆಂಗಳೂರು (ಜು.24): ಆಕಾಶದಲ್ಲಿ ವಿಮಾನ ಹಾರಿಸಬೇಕು, ಪೈಲಟ್ (Pilot) ಆಗಬೇಕು ಎಂಬ ಕನಸು ಹೊತ್ತಿರುವ ಬಡ ಹಾಗೂ ಮಧ್ಯಮ ವರ್ಗದ ಯುವಕ-ಯುವತಿಯರಿಗೆ ರಾಜ್ಯ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದೆ. ಬೆಂಗಳೂರಿನಲ್ಲಿರುವ (Bengaluru) ಜಕ್ಕೂರು ಸರ್ಕಾರಿ ವಿಮಾನ ಚಾಲನಾ ತರಬೇತಿ ಶಾಲೆಯ (Jakkur Government Flying Training School) ವ್ಯಾಪ್ತಿಯನ್ನು ವಿಸ್ತರಿಸಲು ಮುಂದಾಗಿರುವ ಸರ್ಕಾರ, ಮೈಸೂರು (Mysuru) ಹಾಗೂ ಹಾಸನದಲ್ಲಿ (Hassan) 'ಸ್ಯಾಟಲೈಟ್ ಬೇಸ್ ತರಬೇತಿ ಸಂಸ್ಥೆ' (Satellite Base Training Institute) ಆರಂಭಿಸಲು ಚಿಂತನೆ ನಡೆಸಿದೆ.
ಈ ಕುರಿತು ಜಕ್ಕೂರು ಏರೋಡ್ರೋಮ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸಚಿವ ಡಾ. ಜಿ. ಪರಮೇಶ್ವರ್ ಮಹತ್ವದ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ಮೈಸೂರಿನಲ್ಲಿ ಸ್ಯಾಟಲೈಟ್ ಬೇಸ್ ತರಬೇತಿ ಕೇಂದ್ರ ಆರಂಭಿಸುವ ಉದ್ದೇಶವಿದ್ದು, ಪರಿಶೀಲನೆ ನಡೆಯುತ್ತಿದೆ. ತರಬೇತಿಯ ಅಂಗವಾಗಿ ವಿಮಾನ ಇಲ್ಲಿಂದ ಟೇಕ್ ಆಫ್ (Take-off) ಆದರೆ, ಮೈಸೂರಿನಲ್ಲಿ ಲ್ಯಾಂಡ್ ಆಗುತ್ತದೆ. ಇದನ್ನು ವಿಮಾನಯಾನ ಭಾಷೆಯಲ್ಲಿ 'ಟಚ್ ಆ್ಯಂಡ್ ಗೋ' (Touch and Go) ಎನ್ನಲಾಗುತ್ತದೆ. ಮೈಸೂರಿನಲ್ಲಿ ಇದಕ್ಕೆ ಪೂರಕ ವಾತಾವರಣವಿದ್ದು, ಇದೇ ಮಾದರಿಯಲ್ಲಿ ಹಾಸನದಲ್ಲೂ ಸ್ಯಾಟಲೈಟ್ ಬೇಸ್ ಮಾಡುವ ಉದ್ದೇಶವನ್ನು ಸರ್ಕಾರ ಹೊಂದಿದೆ.
ಪ್ರಸ್ತುತ ಇರುವ 'ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ'ಯನ್ನು, 'ಕ್ರೀಡಾ, ಯುವ ಸಬಲೀಕರಣ ಮತ್ತು ನಾಗರಿಕ ವಿಮಾನಯಾನ ಇಲಾಖೆ' (Civil Aviation Department) ಎಂದು ಮರುನಾಮಕರಣ ಮಾಡಲು ಕ್ಯಾಬಿನೆಟ್‌ಗೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ. ಇನ್ನು ಮೆಟ್ರೋಪಾಲಿಟನ್ ನಗರಗಳಲ್ಲಿ (Metropolitan cities) ವಿಮಾನ ಲ್ಯಾಂಡಿಂಗ್ ಮತ್ತು ಟೇಕ್ ಆಫ್ ದಟ್ಟಣೆ ಹೆಚ್ಚಿರುವುದರಿಂದ, ವರ್ಟಿಕಲ್ ಟೇಕ್ ಆಫ್ (Vertical take-off) ತರಬೇತಿ ನೀಡುವ ಬಗ್ಗೆ ಚಿಂತನೆ ನಡೆದಿದೆ. ಜೊತೆಗೆ ಹೊಸದಾಗಿ 'ಸಿವಿಲ್ ಏರ್ ಕ್ರಾಫ್ಟ್ ಮೇಂಟೆನೆನ್ಸ್ ಅಕಾಡೆಮಿ' (Civil Aircraft Maintenance Academy) ಸ್ಥಾಪಿಸುವ ಉದ್ದೇಶವೂ ಇದೆ.
1940ರಲ್ಲಿ ಆರಂಭವಾದ ಜಕ್ಕೂರು ತರಬೇತಿ ಶಾಲೆಯು ಸಾವಿರಾರು ಪೈಲಟ್‌ಗಳನ್ನು ಸೃಷ್ಟಿಸಿದೆ. ಇತ್ತೀಚೆಗೆ ರದ್ದಾಗಿದ್ದ ಶಾಲೆಯ ಲೈಸೆನ್ಸ್ ಅನ್ನು ಡಿಜಿಸಿಎ (DGCA - Directorate General of Civil Aviation) ಮುಂದಿನ ಐದು ವರ್ಷಗಳ ಕಾಲ ರಿನಿವಲ್ (License Renewal) ಮಾಡಿದೆ. ಪ್ರಸ್ತುತ ಇಲ್ಲಿ 5 ಏರ್‌ಕ್ರಾಫ್ಟ್‌ಗಳಿದ್ದು (Aircrafts), ಹೊಸದಾಗಿ ಮತ್ತೇ 2 ವಿಮಾನಗಳನ್ನು ಖರೀದಿಸಲು ಸರ್ಕಾರ ಪ್ರಸ್ತಾವನೆ ಸಲ್ಲಿಸಿದೆ.
ಭಾರತದಲ್ಲಿ ಇಂಡಿಗೋ (IndiGo) ಸೇರಿದಂತೆ ಹಲವು ಸಂಸ್ಥೆಗಳು ಸಾವಿರಾರು ಹೊಸ ವಿಮಾನಗಳನ್ನು ಖರೀದಿಸುತ್ತಿವೆ. ಹೀಗಾಗಿ ಮುಂದಿನ ದಿನಗಳಲ್ಲಿ ದೇಶಾದ್ಯಂತ ಸುಮಾರು 35 ಸಾವಿರ ಪೈಲಟ್‌ಗಳ ಅಗತ್ಯವಿದೆ. ಹೀಗಾಗಿ ಇಲ್ಲಿ ತರಬೇತಿ ಪಡೆದವರಿಗೆ ನೂರಕ್ಕೆ ನೂರರಷ್ಟು ಉದ್ಯೋಗ (Job opportunities) ಗ್ಯಾರಂಟಿ.
ಪ್ರೈವೇಟ್ ಪೈಲಟ್ ಲೈಸೆನ್ಸ್ (PPL - Private Pilot License): 40 ಗಂಟೆಗಳ ಹಾರಾಟದ ತರಬೇತಿ ಅಗತ್ಯ. ಕನ್ನಡಿಗರಿಗೆ ಶುಲ್ಕ 10 ಲಕ್ಷ ರೂ. ಇದ್ದರೆ, ಹೊರಗಿನವರಿಗೆ 15 ಲಕ್ಷ ರೂ. ಇರಲಿದೆ.
ವಾಣಿಜ್ಯ ಪೈಲಟ್ ಲೈಸೆನ್ಸ್ (CPL - Commercial Pilot License): 180 ಗಂಟೆಗಳ ಹಾರಾಟದ ತರಬೇತಿ ಅಗತ್ಯ. ಕರ್ನಾಟಕದವರಿಗೆ 37 ಲಕ್ಷ ರೂ. ಮತ್ತು ಹೊರಗಿನವರಿಗೆ 42 ಲಕ್ಷ ರೂ. ಶುಲ್ಕ ನಿಗದಿಪಡಿಸಲಾಗಿದೆ.
ಜಕ್ಕೂರು ಶಾಲೆಯ ರನ್‌ವೇ (Runway) ಪ್ರಸ್ತುತ 954 ಮೀಟರ್ ಇದ್ದು, ಇದನ್ನು 160 ಮೀಟರ್ ಹೆಚ್ಚಿಸಲು 10 ಎಕರೆ ಭೂಮಿ ಸ್ವಾಧೀನ ಪಡಿಸಿಕೊಳ್ಳುವ ಪ್ರಸ್ತಾವನೆ ಇದೆ. "ಶಾಲೆಯ ಸುತ್ತಮುತ್ತಲಿನ 2.7 ಕಿ.ಮೀ ವ್ಯಾಪ್ತಿಯಲ್ಲಿ 45 ಮೀಟರ್‌ಗಿಂತ ಎತ್ತರದ ಕಟ್ಟಡಗಳನ್ನು (High-rise buildings) ನಿರ್ಮಿಸುವಂತಿಲ್ಲ. ನಿಯಮ ಉಲ್ಲಂಘನೆಗೆ ನಾವು ಆಸ್ಪದ ನೀಡುವುದಿಲ್ಲ. ಎಷ್ಟೇ ಒತ್ತಡ ಬಂದರೂ, ಸಾವಿರಾರು ಜನರಿಗೆ ಉದ್ಯೋಗ ನೀಡುವ ಈ ಸಂಸ್ಥೆಯನ್ನು ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ" ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.