ಕೊರೋನಾ ಲಕ್ಷಣ ರಹಿತರು ಹಾಗೂ ಸೌಮ್ಯ ಲಕ್ಷಣ ಇರುವವರು ಮನೆಯಲ್ಲಿ ಪ್ರತ್ಯೇಕವಾಸ (ಹೋಂ ಐಸೋಲೇಷನ್) ಇದ್ದು ಚಿಕಿತ್ಸೆ ಪಡೆಯುವ ಸಂಬಂಧ ಹೊಸ ಮಾರ್ಗಸೂಚಿಯನ್ನು ಆರೋಗ್ಯ ಇಲಾಖೆ ಪ್ರಕಟಿಸಿದೆ.
ಬೆಂಗಳೂರು (ಏ.21): ಕೊರೋನಾ ಸೋಂಕು ಗಂಭೀರ ಇಲ್ಲದಿದ್ದರೂ ಆಸ್ಪತ್ರೆಗೆ ದಾಖಲಾಗುತ್ತಿರುವವರಿಂದ ಅರ್ಹ ರೋಗಿಗಳು ಚಿಕಿತ್ಸೆಯಿಂದ ವಂಚಿತರಾಗುತ್ತಿರುವ ಹಿನ್ನೆಲೆಯಲ್ಲಿ ಕೊರೋನಾ ಲಕ್ಷಣ ರಹಿತರು ಹಾಗೂ ಸೌಮ್ಯ ಲಕ್ಷಣ ಇರುವವರು ಮನೆಯಲ್ಲಿ ಪ್ರತ್ಯೇಕವಾಸ (ಹೋಂ ಐಸೋಲೇಷನ್) ಇದ್ದು ಚಿಕಿತ್ಸೆ ಪಡೆಯುವ ಸಂಬಂಧ ಹೊಸ ಮಾರ್ಗಸೂಚಿಯನ್ನು ಆರೋಗ್ಯ ಇಲಾಖೆ ಪ್ರಕಟಿಸಿದೆ.
ಸ್ವಲ್ಪ ಜ್ವರ (38 ಡಿಗ್ರಿಗಿಂತ ಕಡಿಮೆ ಉಷ್ಣತೆ), ಆಮ್ಲಜನಕ ಮಟ್ಟ95 ಅಥವಾ ಹೆಚ್ಚು ಇದ್ದವರಿಗೆ ಮಾತ್ರ ಮನೆಯಲ್ಲಿ ಪ್ರತ್ಯೇಕವಾಸ ಅವಕಾಶ ಸಿಗಲಿದೆ. ಮನೆಯಲ್ಲಿ ಪ್ರತ್ಯೇಕವಾಗಿರಲು ವ್ಯವಸ್ಥೆ ಇರಬೇಕು. ರೋಗಿಯ ಮೇಲೆ ಸದಾ ನಿಗಾ ಇಡಲು ಒಬ್ಬ ವ್ಯಕ್ತಿ ಲಭ್ಯ ಇರಬೇಕು. ನಿಗಾ ಇಡುವ ವ್ಯಕ್ತಿ ಮತ್ತು ಆಸ್ಪತ್ರೆಯ ಮಧ್ಯೆ ನಿರಂತರ ಸಂಪರ್ಕ ಇರಬೇಕು. 60 ವರ್ಷ ದಾಟಿದವರು, ಪೂರ್ವ ಕಾಯಿಲೆಗಳಾದ ರಕ್ತದೊತ್ತಡ, ಮಧುಮೇಹ, ಹೃದ್ರೋಗ, ಶ್ವಾಸಕೋಶ, ಕಿಡ್ನಿ, ಲಿವರ್ ಸಮಸ್ಯೆ ಇರುವವರ ಆರೋಗ್ಯ ಸ್ಥಿತಿಗತಿಯ ಸಂಪೂರ್ಣ ಪರಿಶೀಲನೆ ನಡೆಸಿದ ಬಳಿಕ ವೈದ್ಯಕೀಯ ಅಧಿಕಾರಿ, ಕುಟುಂಬದ ವೈದ್ಯರ ಅನುಮತಿ ಮೇಲೆ ಪ್ರತ್ಯೇಕವಾಸಕ್ಕೆ ಅವಕಾಶ ನೀಡಬಹುದು. ಜತೆಗೆ ರೋಗಿ ಪ್ರತ್ಯೇಕವಾಸ ಇರುವುದಾಗಿ ಮತ್ತು ಈ ಸಂಬಂಧ ನಿಯಮ ಪಾಲಿಸುವುದಾಗಿ ಒಪ್ಪಿಗೆ ಪತ್ರ ನೀಡಬೇಕು. ತನ್ನ ಆರೋಗ್ಯ ಪರಿಸ್ಥಿತಿ ಮೇಲೆ ಸದಾ ನಿಗಾ ಇಟ್ಟು ಮಾಹಿತಿಯನ್ನು ಟೆಲಿಮಾನಿಟರಿಂಗ್ ಟೀಮ್‌ಗೆ ನೀಡುತ್ತಿರಬೇಕು ಎಂದು ಮಾರ್ಗಸೂಚಿಯಲ್ಲಿ ವಿವರಿಸಲಾಗಿದೆ.
undefined
ಬಿಬಿಎಂಪಿ ಸೂಚಿತ ರೋಗಿಗಳ ಮೇಲೆ ಖಾಸಗಿ ಆಸ್ಪತ್ರೆಗಳ ದೌರ್ಜನ್ಯ..! ...
ಬಾಣಂತಿಯರಿಗೂ ಪ್ರತ್ಯೇಕವಾಸ : ಪ್ರಸವಕ್ಕೆ ಎರಡು ವಾರ ಬಾಕಿ ಇರುವ ಗರ್ಭಿಣಿಯರಿಗೆ ಪ್ರತ್ಯೇಕವಾಸಕ್ಕೆ ಅವಕಾಶ ಇಲ್ಲ. ಆದರೆ ವೈದ್ಯರು ಅನುಮತಿ ನೀಡಿದರೆ ಬಾಣಂತಿಯರು ಪ್ರತ್ಯೇಕವಾಸ ಇರಬಹುದು. ಇವರಿಗೂ ಸಹ ಪ್ರತ್ಯೇಕ ಕೊಠಡಿ, ಶೌಚಾಲಯ ಇರುವುದು ಕಡ್ಡಾಯ. ಹಿರಿಯ ನಾಗರಿಕರು, ಪೂರ್ವ ಕಾಯಿಲೆ ಇರುವವರಿಂದ ಸದಾ ಅಂತರ ಕಾಪಾಡಬೇಕು ಎಂದು ಮಾರ್ಗಸೂಚಿ ತಿಳಿಸಿದೆ.
ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿ ಸತತ ಮೂರು ದಿನಗಳಿಂದ ಕೋವಿಡ್‌ನ ಗುಣ ಲಕ್ಷಣ ಹೊಂದಿಲ್ಲದಿದ್ದರೆ, ಸತತ ನಾಲ್ಕು ದಿನಗಳಿಂದ ಆಮ್ಲಜನಕದ ಮಟ್ಟ95ಕ್ಕಿಂತ ಹೆಚ್ಚಿದ್ದರೆ ಆ ವ್ಯಕ್ತಿಯನ್ನು ಆರೋಗ್ಯದ ಸಂಪೂರ್ಣ ಪರಿಶೀಲನೆ ನಡೆಸಿ ಕೋವಿಡ್ ಆರೈಕೆ ಕೇಂದ್ರಕ್ಕೆ ದಾಖಲಿಸಬಹುದು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.