ಮನೆ ಕಟ್ಟುವವರ ಆಸೆಗೆ ಸರ್ಕಾರ ತಣ್ಣೀರು!

By Kannadaprabha NewsFirst Published Feb 8, 2021, 7:41 AM IST
Highlights

ನೀವು ಸುಂದರವಾದ ನಿಮ್ಮ ಕನಸಿನ ಅರಮನೆ ನಿರ್ಮಾಣ ಮಾಡಬೇಕು ಎಂದು ಕನಸು ಕಂಡಿದ್ದಿರಾ..? ಅದಕ್ಕೆ ಇದೀಗ ಸರ್ಕಾರ ತಣ್ಣಿರೆರಚಿದೆ. 

ಬೆಂಗಳೂರು (ಫೆ.08):  ಬಿಬಿಎಂಪಿ ವ್ಯಾಪ್ತಿಯಲ್ಲಿ ಮಾರುಕಟ್ಟೆದರದ (ಗೈಡ್‌ಲೈನ್ಸ್‌ ವ್ಯಾಲ್ಯೂ) ಆಧಾರದಲ್ಲಿ ಕಟ್ಟಡ ನಕ್ಷೆ ಮಂಜೂರಾತಿ ಮತ್ತು ಅಭಿವೃದ್ಧಿ ಶುಲ್ಕ ಪರಿಷ್ಕೃತ ದರ ಜಾರಿಗೊಳಿಸಿದೆ. ಇದರಿಂದ ಶುಲ್ಕ ಶೇಕಡ 20ರಿಂದ ಶೇ.200ಕ್ಕೆ ಹೆಚ್ಚಾಗಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಕನಸಿ ಮನೆ ಕಟ್ಟುವ ನಾಗರಿಕರ ಆಸೆಗೆ ಸರ್ಕಾರ ತಣ್ಣೀರು ಎರಚಿದೆ.

ಕರ್ನಾಟಕ ಯೋಜನಾ ಪ್ರಾಧಿಕಾರವು ಕಳೆದ ಸೆಪ್ಟೆಂಬರ್‌ನಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿನ ಎಲ್ಲ ಕಟ್ಟಡ ನಿರ್ಮಾಣ ನಕ್ಷೆ ಮಂಜೂರಾತಿ ಹಾಗೂ ಅಭಿವೃದ್ಧಿ ಶುಲ್ಕವನ್ನು ಶೇ.0.5ರಿಂದ ಶೇ.1.5ಕ್ಕೆ ಹೆಚ್ಚಿಸಿ 2020ರ ಫೆ.25ರಿಂದಲೇ ಪೂರ್ವಾನ್ವಯವಾಗುವಂತೆ ಆದೇಶ ಹೊರಡಿಸಿತ್ತು. ಇದರಲ್ಲಿ ನಕ್ಷೆ ಮಂಜೂರಾತಿಗೆ (ಒಂದು ಅಂತಸ್ತು) ಪ್ರತಿ ಚದರ ಮೀಟರ್‌ಗೆ ವಸತಿ ಕಟ್ಟಡಕ್ಕೆ ಶೇ.0.5, ಕೈಗಾರಿಕೆ ಕಟ್ಟಡಗಳಿಗೆ ಶೇ.1 ಹಾಗೂ ವಾಣಿಜ್ಯ ಕಟ್ಟಡಕ್ಕೆ ಶೇ.1.5 ಶುಲ್ಕ ಹೆಚ್ಚಿಸಲಾಗಿತ್ತು. ಜತೆಗೆ, ಬಹುಮಹಡಿ ಕಟ್ಟಡ ನಕ್ಷೆ ಮಂಜೂರಾತಿಗೆ ವಸತಿ ಕಟ್ಟಡಗಳಿಗೆ ಪ್ರತಿ ಚ.ಮೀ.ಗೆ .20 ಕೈಗಾರಿಕಾ ಕಟ್ಟಡಗಳಿಗೆ .40 ಹಾಗೂ ವಾಣಿಜ್ಯ ಕಟ್ಟಡಗಳಿಗೆ .100 ವಿಧಿಸಲಾಗುತ್ತಿದೆ. ಹೀಗಾಗಿ, ಈ ಹಿಂದೆ .50 ಸಾವಿರ ಪಾವತಿಸುತ್ತಿದ್ದ ಕಟ್ಟಡ ಮಾಲೀಕರು, ಹೊಸ ಆದೇಶದನ್ವಯ .5 ಲಕ್ಷದಿಂದ .15 ಲಕ್ಷದವರೆಗೆ (ಶೇ.20ರಿಂದ ಶೇ.200) ಹಣ ಪಾವತಿಸಬೇಕಾಗಿದೆ.

ಸಕಾರಾತ್ಮಕ ಶಕ್ತಿ ಹೆಚ್ಚಲು ಮನೆಯ ಶೃಂಗಾರ ಹೀಗಿರಲಿ..! ..

ಹೊಸ ನಿಯಮದ ಪ್ರಕಾರ ನಿವೇಶನಕ್ಕೆ ಮತ್ತು ಕಟ್ಟಡಕ್ಕೆ ಮಾರುಕಟ್ಟೆಮೌಲ್ಯ(ಗೈಡ್‌ಲೈನ್‌ ವ್ಯಾಲ್ಯೂ) ಆಧಾರದಲ್ಲಿ ಅಭಿವೃದ್ಧಿ ಶುಲ್ಕವನ್ನು ಪಾವತಿ ಮಾಡುವುದಕ್ಕೆ ಸಾಧ್ಯವಾಗದೆ ಅನೇಕರು ಮನೆ ಕಟ್ಟುವ ಆಸೆಯನ್ನು ಕೈಬಿಟ್ಟು ನಿವೇಶನ ಮಾರಾಟಕ್ಕೆ ಮುಂದಾಗುತ್ತಿದ್ದಾರೆ. ನಕ್ಷೆ ಮಂಜೂರಾತಿ ಶುಲ್ಕ ಹೆಚ್ಚಾಗಿರುವುದರಿಂದ ಕೊಳೆಗೇರಿ ಪ್ರದೇಶಗಳಲ್ಲಿ ಹಾಗೂ ರಾಜಕೀಯ ಪ್ರಭಾವಿತರು ಪಾಲಿಕೆಯಿಂದ ಯಾವುದೇ ನಕ್ಷೆ ಮಂಜೂರಾತಿ ಪಡೆಯದೆ, ಕಟ್ಟಡ ನಿರ್ಮಿಸುತ್ತಿರುವ ಪ್ರಕರಣ ಹೆಚ್ಚಾಗಿದೆ. ಇದರಿಂದ ಸರ್ಕಾರಕ್ಕೆ ಬರುತ್ತಿದ್ದ ಸಂಪನ್ಮೂಲ ನಷ್ಟವಾಗುತ್ತಿದೆ.

ಸೆಸ್‌ ಗೊಂದಲಕ್ಕೆ ಸಿಕ್ಕಿಲ್ಲ ಪರಿಹಾರ

ಇನ್ನು ಬಿಬಿಎಂಪಿಯ ಪೂರ್ವ, ಪಶ್ಚಿಮ ಮತ್ತು ದಕ್ಷಿಣ ವಲಯದ 100 ವಾರ್ಡ್‌ಗಳಲ್ಲಿ ನೀರು ಸರಬರಾಜು, ಮೆಟ್ರೋ ವ್ಯವಸ್ಥೆ, ಸಾರಿಗೆ ವ್ಯವಸ್ಥೆ ಅಭಿವೃದ್ಧಿ ಕರ (ಸೆಸ್‌) ಪಾವತಿಸುತ್ತಿದ್ದಾರೆ. ಪರಿಷ್ಕೃತ ದರ ನಿಗದಿಯಿಂದ ಮತ್ತೊಮ್ಮೆ ಎಲ್ಲ ಸಂಸ್ಥೆಗಳ ಅಭಿವೃದ್ಧಿ ಸೆಸ್‌ ಪಾವತಿಸುವಂತಾಗಿದ್ದು, ಈ ಬಗ್ಗೆ ಗೊಂದಲ ಸೃಷ್ಟಿಯಾಗಿದೆ. 2020ರ ಅ.20ರಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌, ಗೊಂದಲ ಪರಿಹರಿಸುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದರು. ಜತೆಗೆ, ಸಚಿವರು ಮತ್ತು ಶಾಸಕರು ಶುಲ್ಕ ಕಡಿಮೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದರು. ಆದರೆ, ಈವರೆಗೆ ಯಾವುದೇ ತೀರ್ಮಾನವಾಗಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಂಗ್ರಹಿಸಿದ ಶುಲ್ಕದಲ್ಲಿ ಅನ್ಯ ಸಂಸ್ಥೆಗಳಿಗೆ ಶೇ.65 ಪಾಲು

ಬಿಬಿಎಂಪಿಯು ನಗರದಲ್ಲಿ ಕಟ್ಟಡ ನಕ್ಷೆ ಮತ್ತು ಅಭಿವೃದ್ಧಿ, ಸೇವಾ ಶುಲ್ಕ ಪಡೆದು ಅದರಲ್ಲಿ ಶೇ.65 ಹಣವನ್ನು ಸರ್ಕಾರ ಮತ್ತು ಇತರೆ ಸಂಸ್ಥೆಗಳಿಗೆ ಪಾವತಿಸುತ್ತಿದೆ. ಮೆಟ್ರೋ, ನೀರು ಸರಬರಾಜು ಯೋಜನೆ (ಜಲಮಂಡಳಿ), ರಿಂಗ್‌ ರಸ್ತೆ ಅಭಿವೃದ್ಧಿ, ಕೊಳಗೇರಿ ಪ್ರದೇಶ ಹಾಗೂ ಬೃಹತ್‌ ಸಾರಿಗೆ ವ್ಯವಸ್ಥೆ ಅಭಿವೃದ್ಧಿ ಕರ ಪಾವತಿಸಿಕೊಂಡು ಆಯಾ ಸಂಸ್ಥೆಗಳಿಗೆ ನೀಡುತ್ತಿದೆ. ಒಟ್ಟಾರೆ ಬಿಬಿಎಂಪಿಗೆ ಶೇ.35ರಷ್ಟುಹಣ ಬಂದರೆ ಉಳಿದ ಹಣ ಅನ್ಯ ಸಂಸ್ಥೆಗಳಿಗೆ ಹೋಗುತ್ತಿದೆ.

click me!