ಪ್ರಸಿದ್ಧ ಮಠದ ಸ್ವಾಮೀಜಿಯೋರ್ವರ ಸಹೋದರ ಉಪನ್ಯಾಸಕಿ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದಾನೆ. ಮದುವೆಯಾಗುವುದಾಗಿ ನಂಬಿಸಿ ಈ ಕೃತ್ಯ ಎಸಗಿದ್ದಾನೆ.
ಬೆಂಗಳೂರು (ಫೆ.08): ವಿವಾಹವಾಗುವುದಾಗಿ ನಂಬಿಸಿ ಉಪನ್ಯಾಸಕಿಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಚಿತ್ರದುರ್ಗದ ಪ್ರಭಾವಿ ಮಠದ ಸ್ವಾಮೀಜಿಯೊಬ್ಬರ ಪೂರ್ವಾಶ್ರಮದ ಸಹೋದರನ ವಿರುದ್ಧ ಬೆಂಗಳೂರಿನ ಠಾಣೆಯೊಂದರಲ್ಲಿ ಎಫ್‌ಐಆರ್ ದಾಖಲಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಸ್ವಾಮೀಜಿ ಸಹೋದರ ಎನ್ನಲಾದ ಎಂ.ಜಿ. ದೊರೆಸ್ವಾಮಿ ಎಂಬಾತನ ಮೇಲೆ ಅತ್ಯಾಚಾರದ ಆರೋಪ ಕೇಳಿ ಬಂದಿದ್ದು, ಆರೋಪಿ ತಲೆಮರೆಸಿಕೊಂಡಿದ್ದಾನೆ. ಈತನೊಂದಿಗೆ ಸಂತ್ರಸ್ತೆಗೆ ಬೆದರಿಕೆ ಹಾಕಿದ ಆರೋಪದ ಮೇರೆಗೆ ಎ.ಜೆ. ಪರಮಶಿವಯ್ಯ, ಎನ್. ಗಂಗಾಧರ್ ಹಾಗೂ ಎಂ.ಟಿ. ಮಲ್ಲಿಕಾರ್ಜುನ್ ಎಂಬ ಮೂವರು ಆರೋಪಿಗಳ ವಿರುದ್ಧ ಕೂಡ ದೂರು ದಾಖಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
undefined
ಏನಿದು ಪ್ರಕರಣ?: ಮಠಕ್ಕೆ ಸೇರಿದ ವಿದ್ಯಾಪೀಠದಲ್ಲಿ ದೊರೆಸ್ವಾಮಿ ಕಾರ್ಯನಿರ್ವಾಹಕ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದ. 2019ರ ಸೆ.17ರಂದು ಕಾರ್ಯಾಗಾರವೊಂದರಲ್ಲಿ ದೊರೆಸ್ವಾಮಿ ಸಂತ್ರಸ್ತೆಯ ಮೊಬೈಲ್ ಸಂಖ್ಯೆ ಪಡೆದುಕೊಂಡಿದ್ದ. ಕಾರ್ಯಾಗಾರ ಪೂರ್ಣಗೊಂಡ ಬಳಿಕ ಹಲವು ಬಾರಿ ದೊರೆಸ್ವಾಮಿ ಉಪನ್ಯಾಸಕಿಗೆ ಆಗಾಗ್ಗೆ ಕರೆ ಮಾಡಿ ಮಾತನಾಡುತ್ತಿದ್ದ. ಉಪನ್ಯಾಸಕಿ ಕರೆ ಮಾಡಬೇಡಿ ಎಂದು ಹೇಳಿದರೂ ‘ನನಗೆ ನೀವು ಎಂದರೆ ಇಷ್ಟ’ ಎಂದು ವಾಟ್ಸ್‌ಆ್ಯಪ್‌ನಲ್ಲಿ ಸಂದೇಶ ಕಳುಹಿಸುತ್ತಿದ್ದ. ನನಗೆ ವಿವಾಹವಾಗಿ ವಿಚ್ಛೇದನ ಆಗಿದೆ ಎಂದು ಹೇಳಿಕೊಂಡು ಆರೋಪಿ ಸಂಪರ್ಕ ಬೆಳೆಸಿದ್ದ. ‘2019ರ ಅಕ್ಟೋಬರ್‌ನಲ್ಲಿ ನನ್ನನ್ನು ಭೇಟಿಯಾಗಿದ್ದ ದೊರೆಸ್ವಾಮಿ ಊಟಕ್ಕೆ ಆಹ್ವಾನಿಸಿದ್ದ. ಬೆಂಗಳೂರಿನ ರಾಜಾಜಿನಗರದಲ್ಲಿರುವ ಪ್ರತಿಷ್ಠಿತ ಹೋಟೆಲ್‌ವೊಂದರಲ್ಲಿ ಊಟ ಮಾಡಿದ ನಂತರ ಯಶವಂತಪುರದಲ್ಲಿ ಹೋಟೆಲ್‌ವೊಂದನ್ನು ಕಾಯ್ದಿರಿಸಿದ್ದ. ಇಬ್ಬರೂ ಒಟ್ಟಿಗೆ ಇರೋಣ ಎಂದು ಬಲವಂತ ಮಾಡಿದ್ದ. ಹೋಟೆಲ್‌ಗೆ ಕರೆದೊಯ್ದು ಬಲವಂತವಾಗಿ ದೊರೆಸ್ವಾಮಿ ಅತ್ಯಾಚಾರ ಎಸಗಿದ್ದಾನೆ’ ಎಂದು ಆರೋಪಿಸಿ ಸಂತ್ರಸ್ತೆ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದರು.
ನಿರಂತರ ಅತ್ಯಾಚಾರ?: ಬಳಿಕ ಮತ್ತೆ ಉಪನ್ಯಾಸಕಿಗೆ ಕರೆ ಮಾಡಿದ್ದ ದೊರೆಸ್ವಾಮಿ ಭೇಟಿ ಆಗೋಣವೆಂದು ಹೇಳಿದ. ನಾನು ಬರುವುದಿಲ್ಲ ಎಂದು ಹೇಳಿದಾಗ ನನ್ನ ಬಳಿ ವಿಡಿಯೋ ಇದೆ ಎಂದು ಬೆದರಿಸಿದ. 2019ರ ಅಕ್ಟೋಬರ್ 25 ಮತ್ತು 26ರಂದು ಹೋಟೆಲ್‌ಗೆ ಕರೆಸಿಕೊಂಡ. ಇಷ್ಟವಿಲ್ಲದಿದ್ದರೂ ಎರಡು ದಿನಗಳ ಕಾಲ ನಿರಂತರವಾಗಿ ಅತ್ಯಾಚಾರ ನಡೆಸಿದ್ದ. ಹಲವು ಪ್ರತಿಷ್ಠಿತ ಹೋಟೆಲ್‌ಗಳಿಗೆ ಕರೆದುಕೊಂಡು ಹೋಗಿ ಹಲವು ಬಾರಿ ಅತ್ಯಾಚಾರ ಮಾಡಿದ್ದಾನೆ ಎಂದು ಆರೋಪಿಸಿ ದೂರು ನೀಡಿದ್ದಾರೆ.
ಮದುವೆಯಾಗುವಂತೆ ಒತ್ತಾಯಿಸಿದಾಗ ಹಲವು ಸಬೂಬು ಹೇಳಿಕೊಂಡು ಬರುತ್ತಿದ್ದ. ಆ ಬಳಿಕ ದೊರೆಸ್ವಾಮಿ ಯಾವುದೇ ವಿಚ್ಛೇದನ ಪಡೆದಿಲ್ಲ ಎಂಬುದು ಗೊತ್ತಾಯಿತು. ಇನ್ನಿಬ್ಬರು ಆರೋಪಿಗಳಾದ ಎ.ಜೆ.ಪರಮಶಿವಯ್ಯ ಮತ್ತು ಎನ್.ಗಂಗಾಧರ್ ಮದುವೆ ಮಾಡಿಸುವುದಾಗಿ ಹೇಳಿ ನಂಬಿಸಿದ್ದರು. ನನ್ನ ಮತ್ತು ದೊರೆಸ್ವಾಮಿ ನಡುವಿನ ಸಂಭಾಷಣೆಯ ಆಡಿಯೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಜೀವ ಬೆದರಿಕೆ ಹಾಕಿದ್ದರು. ಎಂ.ಟಿ. ಮಲ್ಲಿಕಾರ್ಜುನ ಎಂಬುವರು ‘ಈ ವಿಚಾರವನ್ನು ಇಲ್ಲಿಗೇ ಬಿಡಿ. ಇಲ್ಲದಿದ್ದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ’ ಎಂದು ಬೆದರಿಕೆವೊಡ್ಡಿದ್ದಾರೆ ಎಂದು ಆರೋಪಿಸಿ ಮಹಿಳೆ ದೂರಿನಲ್ಲಿ ವಿವರಿಸಿದ್ದಾರೆ.
ಜಾಮೀನು ನಿರಾಕರಣೆ
ಇನ್ನು ಪ್ರಕರಣದ ಸಂಬಂಧ ಆರೋಪಿ ದೊರೆಸ್ವಾಮಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು 55ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ವಜಾಗೊಳಿಸಿದೆ. ಉಳಿದಂತೆ ಇನ್ನುಳಿದ ಮೂವರು ಆರೋಪಿಗಳಾದ ಎ.ಜೆ.ಪರಮಶಿವಯ್ಯ, ಎನ್.ಗಂಗಾಧರ್ ಹಾಗೂ ಎಂ.ಟಿ.ಮಲ್ಲಿಕಾರ್ಜುನ್‌ಗೆ ನ್ಯಾಯಾಲಯ ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.