ಬೆಂಗ್ಳೂರಲ್ಲಿ ಮಿತಿ ಮೀರುತ್ತಿರೋ ಕೊರೋನಾ ನಿಯಂತ್ರಣಕ್ಕೆ 2 ತಂಡ ರಚನೆ

By Suvarna NewsFirst Published Jun 28, 2020, 8:50 PM IST
Highlights

ಬೆಂಗಳೂರಿನಲ್ಲಿ ಕೊರೋನಾ ಪರಿಸ್ಥಿತಿ ದಿನದಿಂದ ದಿನಕ್ಕೆ  ತೀರಾ ಗಂಭೀರವಾಗುತ್ತಿದೆ. ಇದನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಎರಡು ಹೊಸ ಕಾರ್ಯ ತಂಡಗಳನ್ನು ರಚಿಸಿದೆ.

ಬೆಂಗಳೂರು, (ಜೂನ್.28): ಬೆಂಗಳೂರಿನಲ್ಲಿ ಕೊರೋನಾ ವ್ಯಾಪಕವಾಗಿ ಹರಡುತ್ತಿದ್ದು, ಪರಿಸ್ಥಿತಿ ದಿನ ಕಳೆದಂತೆ ಕೈಮೀರುತ್ತಿದೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ರಾಜ್ಯ ಸರ್ಕಾರ ಎರಡು ಹೊಸ ಕಾರ್ಯತಂಡಗಳನ್ನು ರಚಿಸಿ ಆದೇಶ ಹೊರಡಿಸಿದೆ.

ಕೋವಿಡ್ 19 ರೋಗಿಗಳ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆ ಮತ್ತು ಚಿಕಿತ್ಸೆ ವ್ಯವಸ್ಥೆ ಮಾಡಲು ಎರಡು ಹೊಸ ಕಾರ್ಯತಂಡವನ್ನು ರಚಿಸಿ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಇಂದು (ಭಾನುವಾರ) ಆದೇಶ ಹೊರಡಿಸಿದ್ದಾರೆ.

ಕರ್ನಾಟಕದಲ್ಲಿ ಕೊರೋನಾ ಸ್ಫೋಟ: ಭಾನುವಾರ ಒಂದೇ ದಿನ 1267 ಕೇಸ್

ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಟಿ.ಕೆ.ಅನಿಲ್‌ ಕುಮಾರ್ ಮತ್ತು ಬೆಂಗಳೂರು ‌ಜಲಮಂಡಳಿ ಅಧ್ಯಕ್ಷರಾದ ಎನ್.ಜಯರಾಮ್‌ ನೇತೃತ್ವದಲ್ಲಿ ಎರಡು ತಂಡ ರಚನೆ ಮಾಡಲಾಗಿದ್ದು, ಈ ಎರಡು ಕಾರ್ಯ ತಂಡಗಳು ಪ್ರತಿನಿತ್ಯ ಬಿಬಿಎಂಪಿ ಆಯುಕ್ತರಿಗೆ ವರದಿ ಮಾಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ವೈದ್ಯಕೀಯ ಸಿಬ್ಬಂದಿ ವ್ಯವಸ್ಥೆ ತಂಡ 1
ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಜೋಡಿಸಲಾದ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಮತ್ತು ಚಿಕಿತ್ಸೆಯ ವ್ಯವಸ್ಥೆ, ಕೋವಿಡ್ ಆರೋಗ್ಯ ಕೇಂದ್ರಗಳಿಗೆ ವೈದ್ಯಕೀಯ/ಅರೇ ವೈದ್ಯಕೀಯ ಸಿಬ್ಬಂದಿ ವ್ಯವಸ್ಥೆ ‌ಮಾಡಲು ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಟಿ.ಕೆ.ಅನಿಲ್‌ ಕುಮಾರ್ ನೇತೃತ್ವದಲ್ಲಿ ಕಾರ್ಯತಂಡವನ್ನು ರಚಿಸಲಾಗಿದೆ.

ಈ ಕಾರ್ಯ ತಂಡದಲ್ಲಿ ಜಿಕೆವಿಕೆ ಉಪಕುಲಪತಿ ಡಾ.ಸಚ್ಚಿದಾನಂದ, ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕ ಡಾ.ಗಿರೀಶ್, ಆಯುಷ್ ಇಲಾಖೆ ಆಯಕ್ತರಾದ ಮೀನಾಕ್ಷಿ ನೇಗಿ ಸದಸ್ಯರಾಗಿರಲಿದ್ದಾರೆ.

ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಯ ವ್ಯವಸ್ಥೆಗೆ ಟೀಂ 2
ಇನ್ನು ಎಲ್ಲಾ ಇತರೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಯ ವ್ಯವಸ್ಥೆ ‌ಮಾಡಲು ಬೆಂಗಳೂರು ‌ಜಲಮಂಡಳಿ ಅಧ್ಯಕ್ಷರಾದ ಎನ್.ಜಯರಾಮ್‌ ನೇತೃತ್ವದಲ್ಲಿ ಕಾರ್ಯ ತಂಡವನ್ನು ರಚಿಸಲಾಗಿದೆ. 

ಈ ಕಾರ್ಯತಂಡದಲ್ಲಿ ಬೆಸ್ಕಾಂ ಎಂಡಿ ರಾಜೇಶ್ ಗೌಡ, ಬೆಂ.ನಗರ ಡಿಸಿ ಶಿವಮೂರ್ತಿ, ಬೆಂಗಳೂರು ಗ್ರಾಮಾಂತರ ಡಿಸಿ ರವೀಂದ್ರ, ಸಂಬಂಧಿತ ವಿಭಾಗದ ಡಿಸಿಪಿಗಳು, ಬೆಂಗಳೂರು ನಗರ ಜಿಲ್ಲಾ ಆರೋಗ್ಯಾಧಿಕಾರಿ, ಬೆಂ.ಗ್ರಾಮಾಂತರ ಜಿಲ್ಲಾ ಆರೋಗ್ಯಾಧಿಕಾರಿ ಸದಸ್ಯರಾಗಿರಲಿದ್ದಾರೆ.

click me!