ಏರೋ ಇಂಡಿಯಾ ದಿನಾಂಕ ನಿಗದಿಯಾಗಿಲ್ಲ. ಆದರೆ, 2023ರ ಫೆಬ್ರವರಿಯಲ್ಲಿ ಆಯೋಜಿಸುವ ಸಾಧ್ಯತೆ
ಬೆಂಗಳೂರು(ಜು.28): ಮುಂದಿನ ವರ್ಷ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ 14ನೇ ಆವೃತ್ತಿಯ ‘ಏರೋ ಇಂಡಿಯಾ ವೈಮಾನಿಕ ಪ್ರದರ್ಶನ’ಕ್ಕೆ ರಾಜ್ಯ ಸರ್ಕಾರ ಅಗತ್ಯ ಸಿದ್ಧತೆ ಆರಂಭಿಸಿದೆ. ಏರ್ ಶೋ ನಡೆಯುವ ಯಲಹಂಕ ವಾಯುನೆಲೆಯ ಸುತ್ತಮುತ್ತ ಪಾರ್ಕಿಂಗ್, ರಸ್ತೆ ಕಾಮಗಾರಿ, ಬಸ್ ಸಂಚಾರ ಸೇರಿದಂತೆ ಮೂಲಸೌಕರ್ಯಗಳನ್ನು ಕಲ್ಪಿಸಲು ಸಂಬಂಧಪಟ್ಟ ಇಲಾಖೆಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಕೊರೋನಾ ಕಾರಣದಿಂದ 2021ರಲ್ಲಿ ಸೀಮಿತ ಸಂಖ್ಯೆಯಲ್ಲಿ ಜನ ಭಾಗಿಯಾಗಿದ್ದರು. ಆದರೆ, ಈ ಬಾರಿ ಕೊರೋನಾ ಪೂರ್ವದ ಆವೃತ್ತಿಯಂತೆ 5-7 ಲಕ್ಷ ಮಂದಿ ಭಾಗವಹಿಸಲುವ ನಿರೀಕ್ಷೆ ಇದೆ. ಇವರೆಲ್ಲರಿಗೆ ಅಗತ್ಯ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ 7 ತಿಂಗಳು ಮುಂಚೆಯೇ ಸಿದ್ಧತೆ ಆರಂಭಿಸಲಾಗಿದೆ. ಈ ನಿಟ್ಟಿನಲ್ಲಿ ಕಳೆದ ವಾರ ಮೂಲ ಸೌಲಭ್ಯ ಅಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ ಗುಪ್ತಾ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ ನಡೆಸಿದ್ದು, ಬಿಬಿಎಂಪಿ, ಬಿಎಂಟಿಸಿ, ಭಾರತೀಯ ವಾಯುಪಡೆ ಮತ್ತು ಸಂಚಾರ ಪೊಲೀಸ್ ವಿಭಾಗ ಮುಖ್ಯಸ್ಥರು ಭಾಗಿಯಾಗಿದ್ದರು. ಆಯಾ ಇಲಾಖೆಗಳಿಗೆ ಸಂಬಂಧಪಟ್ಟಂತೆ ಜವಾಬ್ದಾರಿಗಳನ್ನು ಹಂಚಿಕೆ ಮಾಡಲಾಗಿದೆ.
ಸಭೆಯಲ್ಲಿ ಯಲಹಂಕ ವಾಯುನೆಲೆಯ ಗ್ರೂಪ್ ಕ್ಯಾಪ್ಟನ್ ಎಸ್.ಗಿರೀಶ್, ನಗರ ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ, ಸಂಚಾರ ವಿಭಾಗದ ಜಂಟಿ ಕಮಿಷನರ್ ಬಿ.ಆರ್.ರವಿಕಾಂತೇಗೌಡ, ಬಿಬಿಎಂಪಿ ವಿಶೇಷ ಆಯುಕ್ತ ಎಸ್.ರಂಗಪ್ಪ ಸೇರಿದಂತೆ ಹಲವು ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
Singapore Airshow 2022ರಲ್ಲಿ ಹೀರೋ ಆದ 'ಮೇಡ್ ಇನ್ ಇಂಡಿಯಾ'ದ ತೇಜಸ್!
ಪರ್ಯಾಯ ಮಾರ್ಗ: ಹೆಚ್ಚು ಬಸ್‌ಗಳ ಸೇವೆ
ಮುಖ್ಯವಾಗಿ ವಾಯುನೆಲೆ ತೆರಳುವ ಮಾರ್ಗದಲ್ಲಿ ವಾಹನ ದಟ್ಟಣೆ ತಗ್ಗಿಸಲು 15ಕ್ಕೂ ಅಧಿಕ ಪರ್ಯಾಯ ಮಾರ್ಗಗಳನ್ನು ಗುರುತಿಸಲು ಸಂಚಾರಿ ಪೊಲೀಸ್ ಇಲಾಖೆಗೆ ತಿಳಿಸಲಾಗಿದೆ. ಜತೆಗೆ ಆ ರಸ್ತೆಗಳ ಗುಂಡಿ ಮುಚ್ಚುವುದು ಮತ್ತು ಡಾಂಬರೀಕರಣ ಕಾಮಗಾರಿ ಕೈಗೊಳ್ಳುವಂತೆ ಬಿಬಿಎಂಪಿ ಮತ್ತು ಲೋಕೋಪಯೋಗಿ ಇಲಾಖೆಗೆ ನಿರ್ದೇಶನ ನೀಡಲಾಗಿದೆ. ವಾಹನ ದಟ್ಟಣೆ ತಪ್ಪಿಸುವುದಕ್ಕಾಗಿ ಏರ್‌ಶೋ ನಡೆಯುವ ಮೂರು ದಿನ ನಗರದ ಮುಖ್ಯ ಭಾಗಗಳಿಂದ ಯಲಹಂಕ ವಾಯುನೆಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸಾರಿಗೆ ಬಸ್‌ಗಳನ್ನು ಓಡಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಬಿಎಂಟಿಸಿಗೆ ಸೂಚಿಸಲಾಗಿದೆ.
20 ಸಾವಿರ ವಾಹನಕ್ಕೆ ಪಾರ್ಕಿಂಗ್ ಅವಕಾಶ
2019ರಲ್ಲಿ ಅಗ್ನಿ ಅವಗಡ ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮಬದ್ಧವಾಗಿ ಈ ಹಿಂದಿನ ಆವೃತ್ತಿಗಿಂತ ಅಧಿಕ ವಾಹನ ನಿಲುಗಡೆ ತಾಣಗಳ ವ್ಯವಸ್ಥೆ ಮಾಡಲಾಗುತ್ತಿದ್ದು, ಬರೋಬ್ಬರಿ 20,000 ವಾಹನಗಳ ನಿಲುಗಡೆಗೆ ಸೌಕರ್ಯ ಕಲ್ಪಿಸಲು ನಿರ್ಧರಿಸಲಾಗಿದೆ. ಹೀಗಾಗಿ, ವಾಯುನೆಲೆ ಸುತ್ತ ಮಾತ್ರವಲ್ಲದೇ ನಗರದ ಕೇಂದ್ರ ಭಾಗದಿಂದ ವಾಯುನೆಲೆಗೆ ತೆರಳುವ ಮಾರ್ಗದಲ್ಲಿ ಬರುವ ಬೃಹತ್ ಮೈದಾನಗಳಲ್ಲಿಯೂ ಪಾರ್ಕಿಂಗ್ ವ್ಯವಸ್ಥೆ ಮಾಡಲು ಮುಂದಾಗಿದ್ದಾರೆ. ವಾಯುನೆಲೆ ಸುತ್ತಮುತ್ತ ಎರಡು ಪಾರ್ಕಿಂಗ್ ತಾಣಗಳು. ಗಡಿ ಭದ್ರತಾ ಪಡೆ ಕ್ಯಾಂಪಸ್, ಜಕ್ಕೂರು ಸರ್ಕಾರಿ ವೈಮಾನಿಕ ತರಬೇತಿ ಶಾಲೆ ಆವರಣ, ಅರಮನೆ ಮೈದಾನ, ಹೆಬ್ಬಾಳದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಆವರಣಗಳಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡುವ ಯೋಜನೆ ವಾಯುಪಡೆ ಅಧಿಕಾರಿಗಳು ಹೊಂದಿದ್ದಾರೆ.
ಪಾರ್ಕಿಂಗ್ ಸ್ಥಳದಿಂದ ಬಸ್ ಸೌಲಭ್ಯ
ಈ ಬಾರಿ ಏರೋ ಇಂಡಿಯಾ ಟಿಕೆಟ್‌ನಲ್ಲೇ ವಾಹನ ನಿಲುಗಡೆ ಶುಲ್ಕವನ್ನೂ ವಿಧಿಸಲಾಗುತ್ತದೆ. ವೈಮಾನಿಕ ಪ್ರದರ್ಶನ ಸ್ಥಳದ ಸಮೀಪದ ಪಾರ್ಕಿಂಗ್ ಸ್ಥಳಗಳಲ್ಲಿ ಹೆಚ್ಚು ದರ ನೀಡಿ ಟಿಕೆಟ್ ಖರೀದಿಸಿದವರ ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಇನ್ನು ದೂರದ ಪಾರ್ಕಿಂಗ್ ಸ್ಥಳಗಳಿಂದ ವಾಯುನೆಲೆಯ ವಿವಿಧ ಗೇಟ್‌ಗಳಿಗೆ ತೆರಳು ಬಸ್ ವ್ಯವಸ್ಥೆ ಮಾಡುಲು ಯೋಜನೆ ರೂಪಿಸಲಾಗಿದೆ.
ಬೆಳಗ್ಗೆ 9.30ಕ್ಕೇ ಮೊದಲ ಪ್ರದರ್ಶನ
ಏರ್ ಶೋ ಮೂರು ದಿನ ಜನ ಮತ್ತು ವಾಹನ ದಟ್ಟಣೆಯನ್ನು ತಪ್ಪಿಸುವುದಕ್ಕಾಗಿ ಪ್ರತಿದಿನ ಬೆಳಗ್ಗೆ 9.30ಕ್ಕೆ ಮೊದಲ ಪ್ರದರ್ಶನ ಆರಂಭಿಸಿ 10.30ರಿಂದ 11ರೊಳಗೆ ಮುಕ್ತಾಯಗೊಳಿಸುವಂತೆ ವಾಯಪಡೆ ಅಧಿಕಾರಿಗಳಿಗೆ ಸಭೆಯಲ್ಲಿ ಸಲಹೆ ನೀಡಲಾಗಿದೆ. ಈ ಹಿಂದೆ ಮೊದಲ ಶೋ 10.30ರಿಂದ 12ವರೆಗೂ ನಡೆಯುತ್ತಿತ್ತು.
ಏರೋ ಇಂಡಿಯಾ ದಿನಾಂಕ ನಿಗದಿಯಾಗಿಲ್ಲ. ಆದರೆ, 2023ರ ಫೆಬ್ರವರಿಯಲ್ಲಿ ಆಯೋಜಿಸುವ ಸಾಧ್ಯತೆಗಳಿವೆ. ಹೆಚ್ಚು ಜನ ಸೇರುವ ಹಿನ್ನೆಲೆಯಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲು ರಾಜ್ಯ ಸರ್ಕಾರದ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಲಾಗಿದೆ. ಆಯಾ ಇಲಾಖೆಗಳಿಗೆ ಅಗತ್ಯ ಸಿದ್ಧತೆ ಕೈಗೊಳ್ಳುವ ಬಗ್ಗೆ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ ಅಂತ ಮೂಲಸೌಲಭ್ಯ ಅಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ತಿಳಿಸಿದ್ದಾರೆ.