ಉತ್ತರಕನ್ನಡದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಗೊಂದಲಕ್ಕೆ ತೆರೆ, ಕೊನೆಗೂ ಸರಕಾರದಿಂದ ಜಾಗ ಫಿಕ್ಸ್!

By Suvarna NewsFirst Published Mar 9, 2023, 10:21 PM IST
Highlights

ಉತ್ತರಕನ್ನಡ ಜಿಲ್ಲೆಯ ಕುಮಟಾದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ವಿಚಾರದಲ್ಲಿ ನಿರ್ಮಾಣವಾಗಿದ್ದ ಗೊಂದಲಕ್ಕೆ ರಾಜ್ಯ ಸರಕಾರ ಕೊನೆಗೂ ತೆರೆ ಎಳೆದಿದೆ.  

ಕಾರವಾರ (ಮಾ.9): ಉತ್ತರಕನ್ನಡ ಜಿಲ್ಲೆಯ ಕುಮಟಾದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ವಿಚಾರದಲ್ಲಿ ನಿರ್ಮಾಣವಾಗಿದ್ದ ಗೊಂದಲಕ್ಕೆ ರಾಜ್ಯ ಸರಕಾರ ಕೊನೆಗೂ ತೆರೆ ಎಳೆದಿದೆ. ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕಾಗಿ ಸಾಕಷ್ಟು ಹೋರಾಟಗಳು, ಅಭಿಯಾನಗಳು ನಡೆದಿದ್ದವು. ಬಳಿಕ ಮಣಿದ ಸರಕಾರ ಆಸ್ಪತ್ರೆ ನಿರ್ಮಾಣಕ್ಕೆ ಒಪ್ಪಿದ್ದು, ಆರೋಗ್ಯ ಸಚಿವ ಡಾ.‌ಸುಧಾಕರ್ ಜಿಲ್ಲೆಯ ಕುಮಟಾಕ್ಕೆ ಭೇಟಿ ನೀಡಿ ಕುಮಟಾದ ಮಿರ್ಜಾನ್ ಸೇರಿದಂತೆ ಮೂರು ಪ್ರದೇಶಗಳಲ್ಲಿ ಜಾಗ ನೋಡಿ ತೆರಳಿದ್ದರು. ಬಳಿಕ ಅರಣ್ಯ ಇಲಾಖೆಗೆ ಸೇರಿದ್ದ ಜಾಗವನ್ನು ಕಂದಾಯ ಇಲಾಖೆಗೆ ವರ್ಗಾಯಿಸಲು ಸಾಕಷ್ಟು ಪ್ರಯತ್ನಗಳು ನಡೆದರೂ ಯಾವುದೇ ಪ್ರಯೋಜನವಾಗಿಲ್ಲ. ಆಸ್ಪತ್ರೆ ನಿರ್ಮಾಣ ವಿಚಾರ ಸಾಕಷ್ಟು ಸಮಯಗಳ ಕಾಲ ಯಾವುದೇ ಬೆಳವಣಿಗೆ ಕಾಣದ ವಿರೋಧ ಪಕ್ಷಗಳು ಹಾಗೂ ಜನಸಾಮಾನ್ಯರು ಸಾಕಷ್ಟು ಟೀಕಿಸಲಾರಂಭಿಸಿದ್ದರು. ಅಲ್ಲದೇ, ಸಿಎಂ ಬಸವರಾಜ ಬೊಮ್ಮಾಯಿ ಜಿಲ್ಲೆಗೆ ಎರಡೆರಡು ಬಾರಿ ಬಂದು ತೆರಳಿದರೂ ಆಸ್ಪತ್ರೆ ವಿಚಾರದಲ್ಲಿ ಯಾವುದೇ ಚಕಾರ ಎತ್ತದಿರುವುದರಿಂದ ಮತ್ತಷ್ಟು ಅಸಮಾಧಾನಕ್ಕೆ ಕಾರಣವಾಗಿತ್ತು.

ಆದರೆ, ಇದೀಗ ಸರಕಾರ ಮಿರ್ಜಾನ್ ಪ್ರದೇಶವನ್ನು ಬಿಟ್ಟು ಕುಮಟಾ ನಗರ ಭಾಗದ ಇನ್ನೊಂದು ಪ್ರದೇಶವನ್ನು ಆಸ್ಪತ್ರೆ ನಿರ್ಮಾಣಕ್ಕೆ ನಿಗದಿಪಡಿಸಿದೆ. ಕುಮಟಾ ತಾಲೂಕಿನ ಗ್ರಾಮದ ಸರ್ವೆ ನಂ.440 ಅ/ಬರ ಪೈಕಿ ಕ್ಷೇತ್ರ 17.14 ಎಕರೆ ಪ್ರದೇಶವನ್ನು ಏಕಲವ್ಯ ಮಾದರಿ ವಸತಿ ಶಾಲೆಯ ಕಟ್ಟಡ ನಿರ್ಮಾಣಕ್ಕಾಗಿ ಕಾಯ್ದಿರಿಸಲಾಗಿತ್ತು. ಈ  ಜಮೀನಿನ ಪೈಕಿ 15.35 ಎಕರೆ ಜಮೀನನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಹಿಂದಿರುಗಿಸುವಂತೆ ಉತ್ತರಕನ್ನಡ ಜಿಲ್ಲಾಧಿಕಾರಿಗಳು ಕೋರಿದ್ದರು. ಇದಕ್ಕೆ ಪರ್ಯಾಯವಾಗಿ ಇತರ ಸ್ಥಳದಲ್ಲಿ ಬಳಸಲಾಗುವ ಜಮೀನನ್ನು ಒದಗಿಸುವುದಾಗಿ ತಿಳಿಸಲಾಗಿತ್ತು.

ಉತ್ತರ ಕನ್ನಡದಲ್ಲಿ ಶೀಘ್ರವೇ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ: ಸಚಿವ ಡಾ.ಕೆ.ಸುಧಾಕರ್

ಈ ಹಿನ್ನೆಲೆಯಲ್ಲಿ15.35 ಎಕರೆ ಜಮೀನು ಹಾಗೂ ಕೃಷಿ ಇಲಾಖೆಗೆ ಸೇರಿದಂತಹ ಮತ್ತಷ್ಟು ಜಾಗದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕಾಗಿ ಜಾಗ ನಿಗದಿಪಡಿಸಲಾಗಿದೆ. ಈ ಮೂಲಕ ಆಸ್ಪತ್ರೆ ನಿರ್ಮಾಣಕ್ಕೆ ಜಾಗವೆಲ್ಲಿ? ಸರಕಾರ ಯಾಕೆ ಮೌನವಾಗಿದೆ? ಎಂಬ ಪ್ರಶ್ನೆಗೆ ಇದೀಗ ಸರಕಾರವೇ ಜಾಗದ ವ್ಯವಸ್ಥೆ ಮಾಡುವ ಮೂಲಕ ಉತ್ತರಿಸಿದೆ.

ಉತ್ತರಕನ್ನಡ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಮುಂದಿನ ತಿಂಗಳು ಸಿಎಂ ಶಂಕು ಸ್ಥಾಪನೆ?

ಅಲ್ಲದೇ, ಅಂದಾಜು ಇದೇ  ತಿಂಗಳ 11ರಂದು ರಾಜ್ಯದ ಸಿಎಂ ಬಸವರಾಜ ಬೊಮ್ಮಾಯಿ ಮತ್ತೆ ಜಿಲ್ಲೆಗೆ ಭೇಟಿ ನೀಡಿ ಆಸ್ಪತ್ರೆಗೆ ಶಂಕುಸ್ಥಾಪನೆ ಹಾಗೂ ವಿವಿಧ ಸವಲತ್ತುಗಳ ವಿತರಣೆ ನಡೆಸಲಿದ್ದಾರೆ ಎಂದು ಈಗಾಗಲೇ ಜಿಲ್ಲೆಯ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮಾಹಿತಿ ನೀಡಿದ್ದಾರೆ.

click me!