
ಚಿಕ್ಕಮಗಳೂರು (ನ.01): ಪ್ರವಾಸಿಗರು ಹಾಗೂ ವಾಹನ ಸವಾರರ ನೆಚ್ಚಿನ ಮಾರ್ಗವಾಗಿರುವ ಮೂಡಿಗೆರೆ ತಾಲೂಕಿನ ಕುಖ್ಯಾತ ಚಾರ್ಮಾಡಿ ಘಾಟ್‌ನಲ್ಲಿ (Charmadi Ghat) ಕಿಡಿಗೇಡಿಗಳು ತಮ್ಮ ವಿಕೃತಿ ಮೆರೆದಿದ್ದಾರೆ. ವಾಹನ ಸವಾರರ ಪ್ರಾಣ ರಕ್ಷಣೆಗಾಗಿ ಅಪಾಯಕಾರಿ ತಿರುವುಗಳಲ್ಲಿ ಅಳವಡಿಸಲಾಗಿದ್ದ ಪ್ರಮುಖ ಸುರಕ್ಷತಾ ಕನ್ನಡಿಗಳನ್ನೇ ಕಳ್ಳರು ದೋಚಿಕೊಂಡು ಹೋಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಒಟ್ಟು 11 ಅತ್ಯಂತ ಅಪಾಯಕಾರಿ ತಿರುವುಗಳಿವೆ. ಈ ತಿರುವುಗಳಲ್ಲಿ ಎದುರಿನಿಂದ ಬರುವ ವಾಹನಗಳು ಸ್ಪಷ್ಟವಾಗಿ ಕಾಣದೆ ಹಲವು ಅಪಘಾತಗಳು ಸಂಭವಿಸುತ್ತಿದ್ದವು. ಇದನ್ನು ಮನಗಂಡು ಧರ್ಮಸ್ಥಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯವರು ಈ ಎಲ್ಲಾ 11 ತಿರುವುಗಳಲ್ಲಿ ಮುನ್ನೆಚ್ಚರಿಕೆಗಾಗಿ ವಿಶೇಷ ಕನ್ನಡಿಗಳನ್ನು (Convex Mirrors) ಅಳವಡಿಸಿದ್ದರು. ಈ ಕನ್ನಡಿಗಳಿಂದಾಗಿ ಹಗಲಿರುಳು ಸಂಚರಿಸುವ ವಾಹನ ಸವಾರರಿಗೆ ಎದುರುಮಾರ್ಗದ ವಾಹನಗಳ ಅಂದಾಜು ಸಿಕ್ಕು, ಅಪಘಾತಗಳು ಗಣನೀಯವಾಗಿ ತಗ್ಗಿದ್ದವು.
ಆದರೆ ಇತ್ತೀಚೆಗೆ ಕೆಲವು ಮೈಗಳ್ಳರು, ದುಡಿಯಲು ಸೋಮಾರಿಗಳಾದ ಕಿರಾತಕರು ಜನರ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಅಪಘಾತಗಳನ್ನು ತಡೆಯಲು ನೆರವಾಗಿದ್ದ ಆ ರಕ್ಷಣಾ ಕನ್ನಡಿಗಳನ್ನು ರಾತ್ರಿ ವೇಳೆ ಕಿತ್ತುಕೊಂಡು ಪರಾರಿಯಾಗುತ್ತಿದ್ದಾರೆ. ಇದರಿಂದಾಗಿ ಮತ್ತೆ ತಿರುವುಗಳಲ್ಲಿ ಅಪಘಾತಗಳ ಭೀತಿ ಎದುರಾಗಿದೆ.
ಸವಾರರ ಜೀವ ಉಳಿಸುವ ಸತ್ಕಾರ್ಯಕ್ಕೆ ಕನ್ನ ಹಾಕಿರುವ ಕಳ್ಳರ ಕೃತ್ಯವನ್ನು ಸ್ಥಳೀಯ ಸಾರ್ವಜನಿಕರು ತೀವ್ರವಾಗಿ ಖಂಡಿಸಿದ್ದಾರೆ. 'ಜೀವ ಉಳಿಯಲು ಸಹಾಯ ಮಾಡುವ ಇಂತಹ ವಸ್ತುಗಳನ್ನು ಯಾರೂ ಕಳವು ಮಾಡಬೇಡಿ' ಎಂದು ಸಾರ್ವಜನಿಕರು ಮನವಿ ಮಾಡಿಕೊಂಡಿದ್ದಾರೆ. ಅಲ್ಲದೆ, ಕೂಡಲೇ ಸಂಬಂಧಪಟ್ಟ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಎಚ್ಚೆತ್ತುಕೊಂಡು, ಕಳುವಾಗಿರುವ ಜಾಗದಲ್ಲಿ ಹೊಸ ಕನ್ನಡಿಗಳನ್ನು ಮರುಅಳವಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸಂಪೂರ್ಣ ಕಳವು ಪ್ರಕರಣವು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ. ಸಾರ್ವಜನಿಕ ಆಸ್ತಿ ಹಾಗೂ ಜೀವ ರಕ್ಷಕ ಪರಿಕರಗಳನ್ನು ಕಳವು ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬಂದಿದೆ.