
ಕೊಪ್ಪಳ: ಮೈಸೂರು ದಸರಾ ಉತ್ಸವದ ಉದ್ಘಾಟನೆಯ ಆಹ್ವಾನವನ್ನು ಗವಿಮಠದ ಶ್ರೀಗಳು (Sri Abhinava Gavisiddeshwara Mahaswamiji) ತಿರಸ್ಕರಿಸಿದ್ದರೆ ಮಹಾತ್ಮ ಗಾಂಧೀಜಿ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಸಾಲಿನಲ್ಲಿ ನಿಲ್ಲುತ್ತಿದ್ದರು ಎಂದು ಜೇವರ್ಗಿಯ ಸಿದ್ದಬಸವ ಕಬೀರ ಸ್ವಾಮೀಜಿ ಅಭಿಪ್ರಾಯಪಟ್ಟರು.
ಶನಿವಾರ ಇಲ್ಲಿ ಕಾರ್ಖಾನೆಗಳ ವಿರುದ್ಧ ನಡೆದ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಲ್ದೋಟಾ ಕಾರ್ಖಾನೆ ವಿರುದ್ಧದ ಹೋರಾಟವನ್ನು ಗವಿಮಠದ ಗವಿಸಿದ್ದೇಶ್ವರ ಮಹಾಸ್ವಾಮೀಜಿಗಳೇ ಆರಂಭಿಸಿದ್ದರು. ಆದರೆ, ಹೋರಾಟ ಇನ್ನೂ ಕಾರ್ಯಗತವಾಗದ ಹಿನ್ನೆಲೆಯಲ್ಲಿ ಮೈಸೂರು ದಸರಾ ಉತ್ಸವದ ಉದ್ಘಾಟನೆಗೆ ತೆರಳಬಾರದಿತ್ತು ಎಂಬುದು ತಮ್ಮ ಅಭಿಪ್ರಾಯ ಎಂದರು.
ಈ ಕುರಿತು ಶ್ರೀಗಳು ದಸರಾ ಉದ್ಘಾಟನೆಗೆ ತೆರಳುವುದಿಲ್ಲ ಎಂಬ ಸುದ್ದಿ ಹರಡಿದಾಗ ತಮಗೆ ಅತ್ಯಂತ ಸಂತೋಷವಾಗಿತ್ತು. ಆದರೆ, ಆ ಸುದ್ದಿ ಸುಳ್ಳು ಎಂಬುದು ತಿಳಿದಾಗ ಬೇಸರವಾಯಿತು. ಈ ಸಂದರ್ಭದಲ್ಲಿ ದಸರಾ ಉದ್ಘಾಟನೆಯ ಆಹ್ವಾನ ತಿರಸ್ಕರಿಸುವಂತಹ ನಿರ್ಧಾರ ಕೈಗೊಂಡಿದ್ದರೆ, ಗವಿಮಠದ ಶ್ರೀಗಳು ಗಾಂಧೀಜಿ ಮತ್ತು ಅಂಬೇಡ್ಕರ್ ಅವರಂತೆ ಸಾಮಾಜಿಕ ಹೋರಾಟದ ಇತಿಹಾಸದಲ್ಲಿ ಗುರುತಿಸಿಕೊಳ್ಳುತ್ತಿದ್ದರು. ದೇಶದಲ್ಲಿಯೇ ಶ್ರೇಷ್ಠ ಸ್ಥಾನ ಪಡೆಯುವ ಅವಕಾಶವಿತ್ತು ಎಂದು ವಿಷಾಧಿಸಿದರು.