ಅಬಕಾರಿ ಲಂಚ ಪ್ರಕರಣ, ಸಚಿವ ತಿಮ್ಮಾಪುರ ವಿರುದ್ಧ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಲಿಖಿತ ದೂರು

Published : Jan 18, 2026, 11:47 AM IST
 JDS MLA HT Manju

ಸಾರಾಂಶ

ಬೆಂಗಳೂರು ಲೋಕಾಯುಕ್ತ ಪೊಲೀಸರು, ಸಿಎಲ್–7 ಪರವಾನಗಿ ನೀಡಲು 25 ಲಕ್ಷ ರೂ. ಲಂಚ ಪಡೆಯುತ್ತಿದ್ದ ಅಬಕಾರಿ ಇಲಾಖೆಯ ಮೂವರು ಅಧಿಕಾರಿಗಳನ್ನು ಬಂಧಿಸಿದ್ದಾರೆ. ಈ ನಡುವೆ, ಶಾಸಕ ಹೆಚ್.ಟಿ. ಮಂಜು ಅವರು ಆಡಿಯೋ ಸಾಕ್ಷ್ಯದೊಂದಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದಾರೆ.

ಬೆಂಗಳೂರು: ಅಬಕಾರಿ ಇಲಾಖೆಯಲ್ಲಿ ಲಂಚದಾಟ ಮಿತಿ ಮೀರಿದೆ ಎಂಬ ಆರೋಪಗಳಿಗೆ ಮತ್ತೊಮ್ಮೆ ಬಲ ನೀಡುವಂತೆ, ಬೆಂಗಳೂರು ಲೋಕಾಯುಕ್ತ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಪರವಾನಗಿ ನೀಡಲು 25 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಅಬಕಾರಿ ಇಲಾಖೆಯ ಮೂವರು ಅಧಿಕಾರಿಗಳನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದರು. ಇದೀಗ ಈ ಪ್ರಕರಣ ಮಹತ್ವದ ತಿರುವು ಪಡೆಯುತ್ತಿದೆ.

ಈ ಘಟನೆಯ ಬೆನ್ನಲ್ಲೇ, ಅಬಕಾರಿ ಇಲಾಖೆಯಲ್ಲಿನ ಭ್ರಷ್ಟಾಚಾರ ಕುರಿತು ಜೆಡಿಎಸ್ ಶಾಸಕ ಹೆಚ್.ಟಿ. ಮಂಜು ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಲಿಖಿತ ದೂರು ಸಲ್ಲಿಸಿದ್ದಾರೆ. ಅಬಕಾರಿ ಸಚಿವ ತಿಮ್ಮಾಪುರ, ಅಬಕಾರಿ ಇಲಾಖೆಯ ಅಧಿಕಾರಿಗಳ ವಿರುದ್ಧ ದೂರು ನೀಡಿದ್ದಾರೆ. ಅಬಕಾರಿ ಇಲಾಖೆಯ ಕೆಲ ಅಧಿಕಾರಿಗಳು ಪರವಾನಿಗೆ ನೀಡಲು ಲಂಚ ಕೇಳುತ್ತಿದ್ದಾರೆ ಎಂಬುದಕ್ಕೆ ಸಂಬಂಧಿಸಿದಂತೆ ತಮ್ಮ ಬಳಿ ಆಡಿಯೋ ಸಾಕ್ಷ್ಯವಿದೆ ಎಂದು ಹೆಚ್.ಟಿ. ಮಂಜು ಆರೋಪಿಸಿದ್ದಾರೆ. ಈ ಸಂಬಂಧ ಈಗಾಗಲೇ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ದೂರು ನೀಡಿರುವುದಾಗಿಯೂ ತಿಳಿಸಿದ್ದಾರೆ.

15 ದಿನಗಳಲ್ಲಿ ಕ್ರಮ ಕೈಗೊಳ್ಳುವಂತೆ ಎಚ್ಚರಿಕೆ

ಪತ್ರದಲ್ಲಿ, 15 ದಿನಗಳೊಳಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ರಾಜ್ಯಪಾಲರಿಗೆ ದೂರು ನೀಡುವುದಾಗಿ ಹೆಚ್.ಟಿ. ಮಂಜು ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ. ಅಬಕಾರಿ ಇಲಾಖೆಯಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಲಂಚದಾಟಕ್ಕೆ ಕಡಿವಾಣ ಹಾಕಬೇಕೆಂದು ಅವರು ಆಗ್ರಹಿಸಿದ್ದಾರೆ.

ಸರ್ಕಾರದ ಮೇಲೆ ಹೆಚ್ಚುತ್ತಿರುವ ಒತ್ತಡ

ಒಂದೆಡೆ ಲೋಕಾಯುಕ್ತ ದಾಳಿ, ಮತ್ತೊಂದೆಡೆ ಶಾಸಕರಿಂದ ನೇರ ಆರೋಪಗಳು ಕೇಳಿಬರುತ್ತಿರುವುದರಿಂದ ಅಬಕಾರಿ ಇಲಾಖೆ ಹಾಗೂ ಸರ್ಕಾರದ ಮೇಲೆ ಭಾರೀ ಒತ್ತಡ ನಿರ್ಮಾಣವಾಗಿದೆ. ಈ ಪ್ರಕರಣವು ಮುಂದಿನ ದಿನಗಳಲ್ಲಿ ರಾಜ್ಯ ರಾಜಕೀಯ ಮತ್ತು ಆಡಳಿತ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗುವ ಸಾಧ್ಯತೆ ಇದೆ.

ಲೋಕಾ ಬಲೆಗೆ ಬಿದ್ದ ಅಧಿಕಾರಿಗಳು ಯಾರು?

ಬಂಧಿತರಲ್ಲಿ ಅಬಕಾರಿ ಉಪ ಆಯುಕ್ತ ಜಗದೀಶ್ ನಾಯ್ಕ್ (57), ಅಬಕಾರಿ ಕಚೇರಿ ಅಧೀಕ್ಷಕ ಕೆ.ಎಂ. ತಮ್ಮಣ್ಣ (41) ಹಾಗೂ ಅಬಕಾರಿ ಕಾನ್ಸ್‌ಟೇಬಲ್ ಲಕ್ಕಪ್ಪ ಗಣಿ (31) ಸೇರಿದ್ದಾರೆ. ಲಕ್ಷ್ಮೀನಾರಾಯಣ ಎಂಬುವರು ನೀಡಿದ ದೂರಿನ ಆಧಾರದ ಮೇಲೆ ಲೋಕಾಯುಕ್ತ ಪೊಲೀಸರು ಈ ಕಾರ್ಯಾಚರಣೆ ನಡೆಸಿ ಲಂಚಕೋರರನ್ನು ಬಂಧಸಿದ್ದರು.

ಸಿಎಲ್–7 ಪರವಾನಿಗೆಗಾಗಿ 25 ಲಕ್ಷ ಲಂಚ ಬೇಡಿಕೆ

ದೂರುದಾರ ಲಕ್ಷ್ಮೀನಾರಾಯಣ ಅವರ ಪ್ರಕಾರ, ಸಿಎಲ್–7 (CL-7) ಪರವಾನಿಗೆ ನೀಡಲು ಅಬಕಾರಿ ಅಧಿಕಾರಿಗಳು ಒಟ್ಟು 25 ಲಕ್ಷ ರೂಪಾಯಿ ಲಂಚ ಬೇಡಿಕೆ ಇಟ್ಟಿದ್ದರು. ಇದರಿಂದ ಬೇಸತ್ತ ಅವರು ಲೋಕಾಯುಕ್ತ ಪೊಲೀಸರನ್ನು ಸಂಪರ್ಕಿಸಿದ್ದು, ಪೂರ್ವನಿಯೋಜಿತ ಕಾರ್ಯಾಚರಣೆಯ ಮೂಲಕ ಲಂಚ ಸ್ವೀಕರಿಸುತ್ತಿದ್ದ ಕ್ಷಣದಲ್ಲೇ ಅಧಿಕಾರಿಗಳನ್ನು ಬಂಧಿಸಲಾಗಿದೆ. ಇವರು ಮೊದಲು ಒಟ್ಟು 2 ಕೋಟಿ 30 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಹೀಗಾಗಿ ಮುಂಗಡ 25 ಲಕ್ಷ ಪಡೆಯುವಾಗ ಸಿಕ್ಕಿಬಿದ್ದಿದ್ದರು.

 

PREV
Read more Articles on
click me!

Recommended Stories

ಪರಪ್ಪನ ಅಗ್ರಹಾರದಲ್ಲಿ ಜೈಲು ಸಿಬ್ಬಂದಿಗೆ ಹಲ್ಲೆ ಮಾಡಿದ ಕೈದಿಗಳು; ಅಸಿಸ್ಟಂಟ್ ಜೈಲರ್ ಮೇಲೆ ಇಬ್ಬರ ಹಲ್ಲೆ
ಲಕ್ಕುಂಡಿ: ಉತ್ಖನನ ಪಕ್ಕದಲ್ಲಿಯೇ ಕಾಣಿಸಿಕೊಂಡ ಬೃಹತ್ ಹಾವು; ಇತ್ತ ಪುಟಾಣಿ ಶಿವಲಿಂಗು ಪತ್ತೆ