
ಬೆಂಗಳೂರು (ಜ.18): ರಾಜ್ಯದ ಅತ್ಯಂತ ಸುರಕ್ಷಿತ ಮತ್ತು ದೊಡ್ಡ ಕಾರಾಗೃಹ ಎನಿಸಿಕೊಂಡಿರುವ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಪುಂಡಾಟಿಕೆ ಮಿತಿಮೀರಿದ್ದು, ಕರ್ತವ್ಯನಿರತ ಜೈಲು ಸಿಬ್ಬಂದಿಯ ಮೇಲೆಯೇ ಹಲ್ಲೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಶಿಕ್ಷಾ ಬಂಧಿಗಳ ಕಚೇರಿಗೆ ಅಕ್ರಮವಾಗಿ ನುಗ್ಗಲು ಯತ್ನಿಸಿದ ಕೈದಿಗಳನ್ನು ತಡೆದಿದ್ದೇ ಅಸಿಸ್ಟೆಂಟ್ ಜೈಲರ್ ಮೇಲಿನ ಹಲ್ಲೆಗೆ ಕಾರಣವಾಗಿದೆ.
ಕಳೆದ ಜನವರಿ 07ರಂದು ಮಧ್ಯಾಹ್ನ ಸುಮಾರು 3 ಗಂಟೆಯ ವೇಳೆಗೆ ಈ ಘಟನೆ ಸಂಭವಿಸಿದೆ. ಕಾರಾಗೃಹದ ಶಿಕ್ಷಾ ಬಂಧಿ ಕಚೇರಿಗೆ ಕೈದಿಗಳಾದ ಆನಂದ (ಸಂಖ್ಯೆ: 1489) ಮತ್ತು ಅಬ್ದುಲ್ ಘನಿ (ಸಂಖ್ಯೆ: 18589) ಎಂಬುವವರು ಅನವಶ್ಯಕವಾಗಿ ನುಗ್ಗಲು ಪ್ರಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಅಲ್ಲಿಯೇ ಇದ್ದ ಅಸಿಸ್ಟೆಂಟ್ ಜೈಲರ್ ಅವರು ಕೈದಿಗಳನ್ನು ತಡೆದು, ನಿಯಮದಂತೆ ನಡೆದುಕೊಳ್ಳುವಂತೆ ಸೂಚಿಸಿದ್ದಾರೆ. ಇದರಿಂದ ಕೆರಳಿದ ಇಬ್ಬರೂ ಕೈದಿಗಳು ಅಸಿಸ್ಟೆಂಟ್ ಜೈಲರ್ ಅವರೊಂದಿಗೆ ವಾಗ್ವಾದಕ್ಕಿಳಿದಿದ್ದಲ್ಲದೆ, ಅವರ ಮೇಲೆರಗಿ ಕಾಲಿನಿಂದ ಒದ್ದು ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ. ಜೈಲಿನ ಶಿಸ್ತು ಕಾಪಾಡಬೇಕಾದ ಅಧಿಕಾರಿಗಳ ಮೇಲೆಯೇ ಕೈದಿಗಳು ಕೈ ಮಾಡಿರುವುದು ಜೈಲು ಆವರಣದಲ್ಲಿ ಭೀತಿಯ ವಾತಾವರಣ ನಿರ್ಮಿಸಿದೆ.
ಈ ಘಟನೆ ನಡೆದು ಹಲವು ದಿನಗಳಾದರೂ ಆಂತರಿಕ ವಿಚಾರಣೆ ನಡೆಸಲಾಗುತ್ತಿತ್ತು ಎನ್ನಲಾಗಿದೆ. ಆದರೆ, ಪರಿಸ್ಥಿತಿ ಕೈಮೀರುವ ಮುನ್ನ ಸಿಬ್ಬಂದಿಗಳ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಮತ್ತು ಹಲ್ಲೆಕೋರರಿಗೆ ಶಿಕ್ಷೆಯಾಗಬೇಕು ಎಂಬ ಉದ್ದೇಶದಿಂದ ನಿನ್ನೆ (ಶನಿವಾರ) ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಲಾಗಿದೆ. ಜೈಲಿನ ಪ್ರಭಾರ ಅಧೀಕ್ಷಕರು ಈ ಸಂಬಂಧ ದೂರು ನೀಡಿದ್ದು, ಸರ್ಕಾರಿ ನೌಕರನ ಕರ್ತವ್ಯಕ್ಕೆ ಅಡ್ಡಿ ಮತ್ತು ಹಲ್ಲೆ ಪ್ರಕರಣ ದಾಖಲಾಗಿದೆ.
ಜೈಲಿನಲ್ಲಿ ಕರ್ತವ್ಯ ನಿರ್ವಹಿಸಲು ಭಯದ ವಾತಾವರಣ ಸೃಷ್ಟಿಯಾಗಿದೆ. ಶಿಕ್ಷಾ ಕೈದಿಗಳೇ ಈ ರೀತಿ ಕಾನೂನು ಕೈಗೆತ್ತಿಕೊಂಡರೆ ಸಿಬ್ಬಂದಿಗಳ ಸುರಕ್ಷತೆ ಏನು? ಎಂದು ಜೈಲು ಸಿಬ್ಬಂದಿಗಳು ಪ್ರಶ್ನಿಸುತ್ತಿದ್ದಾರೆ. ಕೂಡಲೇ ಹಿರಿಯ ಅಧಿಕಾರಿಗಳು ಮಧ್ಯಪ್ರವೇಶಿಸಿ ಜೈಲಿನಲ್ಲಿ ಶಿಸ್ತು ಕಾಪಾಡಲು ಮತ್ತು ಸಿಬ್ಬಂದಿಗಳಿಗೆ ಸೂಕ್ತ ರಕ್ಷಣೆ ನೀಡಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ. ಸದ್ಯ ಪೊಲೀಸರು ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದಾರೆ.