ಮದ್ದೂರು ಕ್ಷೇತ್ರದಲ್ಲಿ ಕಮಲ ಅರಳಿಸಲು ಈಗಿನಿಂದಲೇ ಬಿಜೆಪಿ ಸಜ್ಜಾಗುತ್ತಿದ್ದು, ಟಿಕೆಟ್ ಆಕಾಂಕ್ಷಿಯಾಗಿ ಇರುವುದಾಗಿ ಮುಖಂಡರೋರ್ವರು ಪರೋಕ್ಷವಾಗಿ ಹೇಳಿದ್ದಾರೆ.
ಮದ್ದೂರು (ಆ.30): ಮುಂದಿನ ಚುನಾವಣೆಯಲ್ಲಿ ಮದ್ದೂರು ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಬೇಕೆನ್ನುವುದು ನಮ್ಮ ಹಠ. ಅದಕ್ಕೆ ಪೂರಕವಾಗಿ ಕಾರ್ಯಕ್ರಮ ರೂಪಿಸುವುದಾಗಿ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಹೇಳಿದರು.
ಪಟ್ಟಣದ ಶಕ್ತಿದೇವತೆ ಮದ್ದೂರಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಬಿಜೆಪಿ ಕಾರ್ಯಕರ್ತರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡು ಸುದ್ದಿಗಾರರೊಂದಿಗೆ ಮಾತನಾಡಿದರು.
ಮುಂಬರುವ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಬಿಜೆಪಿ ಶಾಸಕರು ಆಯ್ಕೆಯಾಗಲಿದ್ದಾರೆಂಬ ದೃಢ ವಿಶ್ವಾಸವಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ಸಮರ್ಥವಾಗಿ ಪೈಪೋಟಿ ನೀಡುವುದು ನಮ್ಮ ಗುರಿ. ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವಲ್ಲಿ ನಮ್ಮ ಕೊಡುಗೆಯೂ ಇರಲಿದೆ ಎಂದು ವಿಶ್ವಾಸದಿಂದ ಹೇಳಿದರು.
ಕನಕಪುರ ಬಂಡೆ ಕಣ್ಣು ಸಿಎಂ ಕುರ್ಚಿ ಮ್ಯಾಲೆ..!..
ಸಚಿವ ಸಂಪುಟ ಪುನಾರಚನೆ ವೇಳೆ ಮಂತ್ರಿಸ್ಥಾನ ಕೊಡುವುದು, ಬಿಡುವುದು ಪಕ್ಷದ ವರಿಷ್ಠರಿಗೆ ಬಿಟ್ಟವಿಚಾರ. ಯಾವುದೇ ಖಾತೆ ನೀಡಿದರೂ ನಿಭಾಯಿಸಲು ಸಿದ್ಧನಿದ್ದೇನೆ. ಸದ್ಯಕ್ಕೆ ನನ್ನನ್ನು ವಿಧಾನಪರಿಷತ್ತಿಗೆ ಆಯ್ಕೆ ಮಾಡಿದ್ದಾರೆ. ಹಳೇ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆ ಮಾಡುವ ಜವಾಬ್ದಾರಿ ನೀಡಿದರೆ ವಹಿಸಿಕೊಳ್ಳಲು ಸಿದ್ಧನಿದ್ದೇನೆ. ಅದನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಪಕ್ಷದ ಹಿರಿಯರು ನಿರ್ಧಾರ ಮಾಡುತ್ತಾರೆ ಎಂದರು.
ಪಕ್ಷದ ರಾಷ್ಟ್ರೀಯ, ರಾಜ್ಯ ಅಧ್ಯಕ್ಷರೂ ಕೂಡಾ ಕರ್ನಾಟಕ ಎಂದರೆ ಹಳೇ ಮೈಸೂರು ಭಾಗದಲ್ಲಿ ಪಕ್ಷ ಬಲವರ್ಧನೆಯಾಗಬೇಕೆಂದು ಹೇಳಿದ್ದಾರೆ. ಅದಕ್ಕಾಗಿಯೇ ನಾರಾಯಣಗೌಡರನ್ನು ಸಚಿವರನ್ನಾಗಿ ಮಾಡಲಾಗಿದೆ. ಪಕ್ಷದ ಬೆಳವಣಿಗೆಗೆ ಪೂರಕವಾಗಿ ಎಲ್ಲ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಮಂಡ್ಯ ಜಿಲ್ಲೆಯಲ್ಲಿ ಪಕ್ಷ ನೂರಕ್ಕೆ ನೂರು ಭಾಗ ಸಂಘಟನೆಯಾಗಲಿದೆ. ಪಕ್ಷ ಬಲವರ್ಧನೆಗೊಳ್ಳುತ್ತಿರುವುದು ನಿಶ್ಚಿತ ಎಂದರು.
ನನ್ನ ತವರು ಕ್ಷೇತ್ರದಲ್ಲಿ ರಾಜಕೀಯ ಸಂಘರ್ಷಕ್ಕೆ ಅವಕಾಶ ನೀಡುವುದಿಲ್ಲ. ಜನರ ಕೆಲಸ ಮಾಡುವುದಕ್ಕಾಗಿಯೇ ನಾವು ಸಾರ್ವಜನಿಕ ಕ್ಷೇತ್ರಕ್ಕೆ ಬಂದಿದ್ದೇವೆ. ಹಾಗಾಗಿ ಅಭಿವೃದ್ಧಿಗೆ ಸಹಕಾರ ನೀಡುವುದಾಗಿ ಹೇಳಿದರು.
ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಕೆ.ನಾಗಣ್ಣಗೌಡ, ತಾಲೂಕು ಮಾಜಿ ಅಧ್ಯಕ್ಷ ಸತೀಶ್, ತಾಪಂ ಸದಸ್ಯ ಚೆಲುವರಾಜು, ಮುಖಂಡ ಮನ್‌ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ, ಸಿಪಾಯಿ ಶ್ರೀನಿವಾಸ್, ಪ್ರೀತಂ, ತೈಲೂರು ರಾಜಣ್ಣ ಮತ್ತಿರರಿದ್ದರು.