ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ ನೋಡಿಕೊಳ್ಳಿ..!

By Kannadaprabha NewsFirst Published Sep 2, 2022, 7:33 AM IST
Highlights

ಮತದಾನದ ವೇಳೆ ಯಾವುದೇ ದೂರು ಕೇಳಿ ಬರದಂತೆ ವಾರ್ಡ್‌ವಾರು ಮತದಾರ ಪಟ್ಟಿಪರಿಷ್ಕರಣೆ ಮಾಡಬೇಕು, ಯಾವುದೇ ಮತದಾರ ಹೆಸರು ಪಟ್ಟಿಯಿಂದ ಬಿಟ್ಟು ಹೋಗದಂತೆ ಎಚ್ಚರಿಕೆ ವಹಿಸಬೇಕು 

ಬೆಂಗಳೂರು(ಸೆ.02): ಬಿಬಿಎಂಪಿ ವಾರ್ಡ್‌ಗಳ ಗಡಿ ಬದಲಾವಣೆ ಆಗಿರುವುದರಿಂದ ಮತದಾರ ಪಟ್ಟಿ ಪರಿಷ್ಕರಿಸುತ್ತಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಮತದಾರರೂ ತಮ್ಮ ಹೆಸರು ಹಾಗೂ ಮತಗಟ್ಟೆ ವಿಳಾಸ ಸೇರಿದಂತೆ ಇತರೆ ವಿವರವನ್ನು ಪರಿಶೀಲಿಸಿಕೊಳ್ಳುವಂತೆ ರಾಜ್ಯ ಚುನಾವಣಾ ಆಯೋಗದ ಆಯುಕ್ತ ಬಸವರಾಜು ಮನವಿ ಮಾಡಿದ್ದಾರೆ.

ಗುರುವಾರ ಶಿವಾಜಿನಗರ, ಶಾಂತಿನಗರ ಹಾಗೂ ಪುಲಕೇಶಿನಗರ ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದ ಅವರು, ಮತದಾನದ ದಿನ ಹೆಸರು ಬಿಟ್ಟು ಹೋಗಿದೆ, ಮತಗಟ್ಟೆ ವಿಳಾಸ ಬದಲಾಗಿದೆ ಸೇರಿದಂತೆ ವಿವಿಧ ದೂರುಗಳನ್ನು ಹೇಳುವ ಬದಲು ಬಿಡುಗಡೆ ಮಾಡಿರುವ ಕರಡು ಮತದಾರ ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೋ ಅಥವಾ ಇಲ್ಲವೋ ಎಂಬದನ್ನು ಪರಿಶೀಲನೆ ಮಾಡಿಕೊಳ್ಳುವುದರಿಂದ ಈಗಲೇ ಲೋಪಗಳನ್ನು ಸರಿಪಡಿಸಿಕೊಳ್ಳಬಹುದು ಎಂದರು.

ಬಿಬಿಎಂಪಿಯ ಚುನಾವಣೆಗಾಗಿ ಕಾಂಗ್ರೆಸ್‌ನ ವಿಷನ್‌ ಡಾಕ್ಯೂಮೆಂಟ್‌ ರಚನೆಗೆ ನಿರ್ಧಾರ

ಇದೇ ವೇಳೆ ಮತದಾನದ ವೇಳೆ ಯಾವುದೇ ದೂರು ಕೇಳಿ ಬರದಂತೆ ವಾರ್ಡ್‌ವಾರು ಮತದಾರ ಪಟ್ಟಿಪರಿಷ್ಕರಣೆ ಮಾಡಬೇಕು, ಯಾವುದೇ ಮತದಾರ ಹೆಸರು ಪಟ್ಟಿಯಿಂದ ಬಿಟ್ಟು ಹೋಗದಂತೆ ಎಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಮಾತನಾಡಿ, ಮತದಾರ ಕರಡು ಪಟ್ಟಿಗೆ ಸಂಬಂಧಿಸಿದಂತೆ ಹೆಚ್ಚಿನ ಸಂಖ್ಯೆಯ ಆಕ್ಷೇಪಣೆಗಳು ಸಲ್ಲಿಕೆಯಾಗಿಲ್ಲ. ಶುಕ್ರವಾರ ಆಕ್ಷೇಪಣೆ ಸಲ್ಲಿಕೆಗೆ ಕೊನೆಯ ದಿನವಾಗಿದೆ ಎಂದು ತಿಳಿಸಿದರು.
ಅಪರ ಜಿಲ್ಲಾ ಚುನಾವಣಾ ಅಧಿಕಾರಿ (ಕೇಂದ್ರ) ರಂಗಪ್ಪ, ವಲಯ ಆಯುಕ್ತ ರವೀಂದ್ರ, ವಲಯ ಜಂಟಿ ಆಯುಕ್ತೆ ಶಿಲ್ಪಾ, ಸಹಾಯಕ ಆಯುಕ್ತ ಉಮೇಶ್‌ ಉಪಸ್ಥಿತರಿದ್ದರು.

ಬಿಬಿಎಂಪಿ ಚುನಾವಣೆ ಅಂತಿಮ ಮತದಾರರ ಪಟ್ಟಿ ಸೆ.22ಕ್ಕೆ ಪ್ರಕಟ

ಬಿಬಿಎಂಪಿ ಚುನಾವಣೆ ಸಂಬಂಧ ಸೆ.22ರಂದು ಮತದಾರರ ಅಂತಿಮ ಪಟ್ಟಿ ಪ್ರಕಟಿಸುವ ಸಾಧ್ಯತೆಯಿದೆ ಎಂದು ರಾಜ್ಯ ಚುನಾವಣಾ ಆಯೋಗ ಹೈಕೋರ್ಟ್‌ಗೆ ಗುರುವಾರ ಮಾಹಿತಿ ನೀಡಿದೆ.

BBMP ವಾರ್ಡ್‌ವಾರು ತೆರಿಗೆ ಪಾವತಿ ಪರಿಶೀಲನೆ, ವ್ಯತ್ಯಾಸವಿದ್ದರೆ ದಂಡ

ಬಿಬಿಎಂಪಿ ವಾರ್ಡ್‌ ಮರು ವಿಂಗಡಣೆಯ ಅಂತಿಮ ಅಧಿಸೂಚನೆ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಹಲವು ತಕರಾರು ಅರ್ಜಿಗಳು ನ್ಯಾಯಮೂರ್ತಿ ಹೇಮಂತ್‌ಚಂದನ್‌ ಗೌಡರ್‌ ಅವರ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿದ್ದವು. ವಿಚಾರಣೆ ವೇಳೆ ಯಾವಾಗ ಬಿಬಿಎಂಪಿ ಚುನಾವಣಾ ವೇಳಾಪಟ್ಟಿ ಎಂದು ನಿಗದಿಪಡಿಸಲಾಗುತ್ತದೆ ಎಂದು ನ್ಯಾಯಮೂರ್ತಿಗಳ ಪ್ರಶ್ನೆಗೆ ಉತ್ತರಿಸಿದ ಆಯೋಗದ ಪರ ಹಿರಿಯ ವಕೀಲ ಕೆ.ಎನ್‌.ಫಣೀಂದ್ರ, ಮತದಾರರ ಅಂತಿಮ ಪಟ್ಟಿಯನ್ನು ಸೆ.22ಕ್ಕೆ ಪ್ರಕಟಿಸುವ ಸಾಧ್ಯತೆಯಿದೆ. ಅದಾದ ಬಳಿಕವಷ್ಟೇ ಚುನಾವಣಾ ವೇಳಾಪಟ್ಟಿ ಪ್ರಕಟಿಸಲಾಗುವುದು ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಈ ವೇಳೆ ಅರ್ಜಿದಾರರ ವಕೀಲರು, ನಿಯಮಗಳಿಗೆ ಅನುಸಾರವಾಗಿ ವಾರ್ಡ್‌ ಮರು ವಿಂಗಡಣೆ ಮಾಡಿಲ್ಲ. ಆದ್ದರಿಂದ ವಾರ್ಡ್‌ ಮರು ವಿಂಗಡಣೆ ಅಧಿಸೂಚನೆಗೆ ತಡೆಯಾಜ್ಞೆ ನೀಡಬೇಕು ಎಂದು ಮಧ್ಯಂತರ ಮನವಿ ಮಾಡಿದರು. ಅ ಮನವಿಗೆ ಒಪ್ಪದ ನ್ಯಾಯಪೀಠ, ಮತದಾರರ ಅಂತಿಮ ಪಟ್ಟಿಯನ್ನು ಪ್ರಕಟಿಸಿದ ನಂತರವೇ ಚುನಾವಣಾ ವೇಳಾಪಟ್ಟಿ ಹೊರಡಿಸಲಾಗುವುದು ಎಂದು ಆಯೋಗ ತಿಳಿಸಿದೆ. ಹಾಗಾಗಿ, ಸೆ.22ರೊಳಗೆ ವಿಚಾರಣೆ ಪೂರ್ಣಗೊಳಿಸಲಾಗುವುದು. ಆದರೆ, ಇಂದು ಮಧ್ಯಂತರ ಆದೇಶದ ಬಗ್ಗೆ ನಿರ್ಧರಿಸುವುದಿಲ್ಲ ಎಂದು ತಿಳಿಸಿ ಸೆ.8ಕ್ಕೆ ವಿಚಾರಣೆಯನ್ನು ಮುಂದೂಡಿತು.
 

click me!