ರಾಜ್ಯದ ಕರಾವಳಿ ಸುಭದ್ರವಾಗಿದೆ ಎಂದ ಭಾಸ್ಕರ್ ರಾವ್/ ರಾಜ್ಯದ ಆಂತರಿಕ ಭದ್ರತಾ ವಿಭಾಗದ ಎಡಿಜಿಪಿ ಭಾಸ್ಕರ್ ರಾವ್/ ಸೋಶಿಯಲ್ ಮೀಡಿಯಾದಲ್ಲಿ ಆತಂಕ ತರುವವರ ಮೇಲೆ ಕಣ್ಣು/ ಮೀನುಗಾರರ ಮೇಲೆ ನಿಗಾ ಇರಿಸಲು ಚಿಪ್ ವ್ಯವಸ್ಥೆ
ಮಲ್ಪೆ(ಆ. 25) ರಾಜ್ಯದ 322 ಕಿ.ಮೀ. ಉದ್ದದ ಕರಾವಳಿ ವ್ಯಾಪ್ತಿಯ 43 ಬೀಚುಗಳಲ್ಲಿ ಆಧುನಿಕ ತಂತ್ರಜ್ಞಾನಗಳೊಂದಿಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ಕರಾವಳಿ ಕಾವಲು ಪಡೆಯ ಜೊತೆಗೆ ಗೃಹರಕ್ಷಕ ದಳದ ಸಿಬ್ಬಂದಿಯನ್ನೊಳಗೊಂಡ ಕರಾವಳಿ ನಿಯಂತ್ರಣ ದಳ ಹಾಗೂ ಸ್ಥಳಿಯ ಮೀನುಗಾರರನ್ನೊಳಗೊಂಡ ಸಾಗರ ರಕ್ಷಕ ದಳವನ್ನು ಆರಂಭಿಸಲಾಗಿದೆ. ಒಟ್ಟಿನಲ್ಲಿ ಆಂತರಿಕ ಭದ್ರತೆಯ ದೃಷ್ಟಿಯಲ್ಲಿ ನಮ್ಮ ಕರಾವಳಿ ಈಗ ಸುರಕ್ಷಿತವಾಗಿದೆ ಎಂದು ರಾಜ್ಯದ ಆಂತರಿಕ ಭದ್ರತಾ ವಿಭಾಗದ ಎಡಿಜಿಪಿ ಭಾಸ್ಕರ್ ರಾವ್ ತಿಳಿಸಿದ್ದಾರೆ.
ಮಂಗಳವಾರ ಇಲ್ಲಿನ ಕರಾವಳಿಯ ಕಚೇರಿಯಲ್ಲಿ ಮೀನುಗಾರ ಮುಖಂಡರೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿದರು. ರಾಜ್ಯದಲ್ಲಿ ಆಂತರಿಕ ಭದ್ರತೆಗೆ ಅಗತ್ಯ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಮುದ್ರದ ಮೇಲೆ ನಿಗಾ ಇರಿಸಲು ಕರಾವಳಿ ಕಾವಲು ಪಡೆಗೆ ಶೀಘ್ರದಲ್ಲಿ 3 ಹೊಸ ಜೆಟ್ ಸ್ಕೀಗಳನ್ನು ಒದಗಿಲಾಗುತ್ತದೆ ಎಂದು ತಿಳಿಸಿದರು.
undefined
ಏಳು ವರ್ಷಗಳ ನಂತರ ಜೀವ ಪಡೆದುಕೊಂಡ ಆಂತರಿಕ ಭದ್ರತಾ ಇಲಾಖೆ
ಸಮುದ್ರದಲ್ಲಿ ಮೀನುಗಾರಿಕೆ ನಡೆಸುವ ಮೀನುಗಾರರ ಮೇಲೆ ನಿಗಾ ಇರಿಸುವುದಕ್ಕೆ ಚಿಪ್ ಆಧಾರಿತ ತಂತ್ರಜ್ಞಾನವನ್ನು ಬಳಲಾಗುತ್ತದೆ. ಇದರಿಂದ ಮೀನುಗಾರರ ರಕ್ಷಣೆ ಸಾಧ್ಯವಾಗಲಿದೆ. ಮೀನುಗಾರರ ಜೊತೆಗೆ ಸಮುದ್ರದಲ್ಲಿರುವ ಜೀವವೈವಿದ್ಯ ರಕ್ಷಣೆಗೂ ಸಹ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸೋಶಿಯಲ್ ಮಿಡಿಯಾ ಸವಾಲಾಗಿದೆ : ಆಂತರಿಕ ಭದ್ರತೆಗೆ ಸೋಶಿಯಲ್ ಮಿಡಿಯಾ ಒಂದು ಸವಾಲಾಗುತ್ತಿದೆ. ಸೋಶಿಯಲ್ ಮಿಡಿಯಾಗಳನ್ನು ಉಪಯೋಗಿಸಿ ದೇಶದ್ರೋಹಿ ಚಟುವಟಿಕೆಗಳನ್ನು ನಡೆಸುವವರನ್ನು ಪತ್ತೆ ಮಾಡುವುದಕ್ಕೆ ಇಲಾಖೆಯಯಲ್ಲಿರುವ ಸೋಶಿಯಲ್ ಮೀಡಿಯಾ ಸೆಲ್ ನಲ್ಲಿ ಸಾಕಷ್ಟು ತಂತ್ರಜ್ಞಾನದ ವ್ಯವಸ್ಥೆಯೂ ಇದೆ. ಆದ್ದರಿಂದ ಭದ್ರತೆಗೆ ಅಡ್ಡಿಪಡಿಸುವವರನ್ನು ಪತ್ತೆ ಹಚ್ಚಿ, ಅವರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭಾಸ್ಕರ ರಾವ್ ಎಚ್ಚರಿಕೆ ನೀಡಿದರು.
ಕರಾವಳಿ ಕಾವಲು ಪಡೆಗೆ ಪ್ರತ್ಯೇಕ ಸಿಬ್ಬಂದಿಗಳನ್ನು ನೇಮಿಸಿ, ಅವರಿಗೆ ದೈಹಿಕ, ತಾಂತ್ರಿಕ, ಭಾವನಾತ್ಮಕ ದೃಢತೆ, ಕ್ಷಮತೆ ಹೆಚ್ಚಿಸಲು ವಿಶೇಷ ತರಬೇತಿ ನೀಡಲಾಗುತ್ತಿದೆ. ಎಂದವರು ಮಾಹಿತಿ ನೀಡಿದರು. ಕರಾವಳಿ ಕಾವಲು ಪಡೆಯ ಎಸ್ಪಿ ಚೇತನ್ ಉಪಸ್ಥಿತರಿದ್ದರು.