ಜಾತಿಗಣತಿ ವಿರೋಧಿಸಿ ಹೈಕೋರ್ಟ್‌ಗೆ ಎರಡು ಪಿಐಎಲ್ ಸಲ್ಲಿಕೆ; ದಿಢೀರ್ ಸಭೆ ಕರೆದ ಸರ್ಕಾರ!

Published : Sep 18, 2025, 04:30 PM IST
Karnataka Caste Census

ಸಾರಾಂಶ

ಕರ್ನಾಟಕ ಸರ್ಕಾರದ ಜಾತಿಗಣತಿ ಯೋಜನೆಗೆ ಹೈಕೋರ್ಟ್‌ನಲ್ಲಿ ಕಾನೂನು ಸವಾಲು ಎದುರಾಗಿದೆ. ಹಿಂದುಳಿದ ವರ್ಗಗಳ ಆಯೋಗದ ಅಧಿಕಾರ ವ್ಯಾಪ್ತಿ ಮತ್ತು ಜಾತಿಗಳ ವರ್ಗೀಕರಣದಲ್ಲಿನ ದೋಷಗಳನ್ನು ಪ್ರಶ್ನಿಸಿ ಎರಡು ಪ್ರತ್ಯೇಕ ಅರ್ಜಿಗಳು ಸಲ್ಲಿಕೆಯಾಗಿವೆ.  ಇದರ ಬೆನ್ನಲ್ಲೇ ಸರ್ಕಾರ ದಿಢೀರ್ ಸಭೆ ಕರೆದಿದೆ.

ಬೆಂಗಳೂರು (ಸೆ.18): ರಾಜ್ಯ ಸರ್ಕಾರವು ನಡೆಸಲು ಉದ್ದೇಶಿಸಿರುವ ಜಾತಿಗಣತಿ ಯೋಜನೆಗೆ ದೊಡ್ಡ ಹಿನ್ನಡೆ ಎದುರಾಗಿದೆ. ಈ ಗಣತಿ ಪ್ರಕ್ರಿಯೆಯನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸೇರಿದಂತೆ ಎರಡು ಪ್ರತ್ಯೇಕ ಅರ್ಜಿಗಳು ಸಲ್ಲಿಕೆಯಾಗಿವೆ. ಈ ಅರ್ಜಿಗಳಿಂದಾಗಿ ಸರ್ಕಾರದ ಮುಂದಿನ ನಡೆಯ ಮೇಲೆ ಹೈಕೋರ್ಟ್‌ನ ತೀರ್ಪು ನಿರ್ಣಾಯಕವಾಗುವ ಸಾಧ್ಯತೆಯಿದೆ.

ಮೊದಲ ಪಿಐಎಲ್ ಅರ್ಜಿಯ ವಿವರಗಳು:

ವಕೀಲ ಕೆ.ಎನ್. ಸುಬ್ಬಾರೆಡ್ಡಿ ಸೇರಿದಂತೆ ನಾಲ್ವರು ಸಲ್ಲಿಸಿರುವ ಅರ್ಜಿಯಲ್ಲಿ, ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಜಾತಿಗಣತಿ ನಡೆಸುವ ಅಧಿಕಾರ ಇಲ್ಲ ಎಂದು ವಾದಿಸಿದ್ದಾರೆ. ಅಲ್ಲದೆ, ಸರ್ಕಾರವು 1,500 ಜಾತಿಗಳು ಮತ್ತು ಉಪಜಾತಿಗಳನ್ನು ಸರಿಯಾಗಿ ವರ್ಗೀಕರಿಸದೆ ಒಂದಕ್ಕೊಂದು ಮಿಶ್ರಣ ಮಾಡಿದೆ. ಇದು ಕಾನೂನು ಬಾಹಿರ ಮತ್ತು ಅಧಿಕಾರ ವ್ಯಾಪ್ತಿ ಮೀರಿದ ಕ್ರಮ ಎಂದು ಆರೋಪಿಸಿದ್ದಾರೆ. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ, ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿ, ಹಿಂದುಳಿದ ವರ್ಗಗಳ ಇಲಾಖೆಯ ಕಾರ್ಯದರ್ಶಿ, ಕೇಂದ್ರ ಗೃಹ ಸಚಿವಾಲಯ ಹಾಗೂ ಭಾರತ ಜನಗಣತಿ ಆಯೋಗವನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. ಈ ಗಣತಿ ಪ್ರಕ್ರಿಯೆಯನ್ನು ಕೂಡಲೇ ಸ್ಥಗಿತಗೊಳಿಸುವಂತೆ ಅರ್ಜಿದಾರರು ಮನವಿ ಮಾಡಿದ್ದಾರೆ.

ಎರಡನೇ ಅರ್ಜಿಯ ಪ್ರಮುಖ ಆಕ್ಷೇಪಗಳು:

ವಿವಿಧ ಹಿಂದುಳಿದ ಸಮುದಾಯಗಳ ಮುಖಂಡರು ಸಲ್ಲಿಸಿರುವ ಎರಡನೇ ಅರ್ಜಿಯಲ್ಲಿ, ಸರ್ಕಾರ ಜಾತಿ ಸಮೀಕ್ಷೆ ನಡೆಸಲು ಬಿಎನ್‌ಎಸ್‌ 340 ಮತ್ತು 341ರ ಪ್ರಕಾರ ಯಾವುದೇ ಅಧಿಕಾರ ಹೊಂದಿಲ್ಲ ಎಂದು ವಾದಿಸಲಾಗಿದೆ. ಈ ಅರ್ಜಿ ಸಲ್ಲಿಸಿದವರಲ್ಲಿ ಮಾಜಿ ಶಾಸಕ ನೆ.ಲ. ನರೇಂದ್ರ ಬಾಬು, ಮಾಜಿ ಕಾರ್ಪೊರೇಟರ್ ಸೋಮಶೇಖರ್, ಕರುಣಾಕರ್ ಖಾಸಲೆ ಸೇರಿದಂತೆ ಅನೇಕ ಪ್ರಮುಖರು ಸೇರಿದ್ದಾರೆ.

ಈ ಅರ್ಜಿಯಲ್ಲಿ ಪ್ರಮುಖವಾಗಿ ಎತ್ತಿರುವ ಆಕ್ಷೇಪಗಳು ಹೀಗಿವೆ:

  • ಹಿಂದೂ ಜಾತಿಗಳ ಪಟ್ಟಿಯ ಜೊತೆಗೆ ಆದಿ ಆಂಧ್ರ ಕ್ರಿಶ್ಚಿಯನ್, ಆದಿ ದ್ರಾವಿಡ ಕ್ರಿಶ್ಚಿಯನ್, ಆದಿ ಕರ್ನಾಟಕ ಕ್ರಿಶ್ಚಿಯನ್ ಎಂಬಂತಹ ಹೊಸ ಕ್ರಿಶ್ಚಿಯನ್ ಹೆಸರುಗಳನ್ನು ಸೇರಿಸಿ ಗೊಂದಲ ಸೃಷ್ಟಿಸಲಾಗಿದೆ.
  • ಬಂಟ ಸಮುದಾಯದಂತಹ ಪ್ರಬಲ ಸಮುದಾಯಗಳನ್ನು ಬಂಟ ಮತ್ತು ನಾವಡ ಎಂದು ಪ್ರತ್ಯೇಕಿಸಿ, ಮೀಸಲಾತಿ ವಿಷಯದಲ್ಲಿ ಒಡಕು ಮೂಡಿಸಲು ಪ್ರಯತ್ನಿಸಲಾಗಿದೆ.
  • ಯಾವುದೇ ಇತಿಹಾಸ ಇಲ್ಲದ ಹೊಸ ಜಾತಿಗಳನ್ನು ಸೃಷ್ಟಿಸುವ ಮೂಲಕ ಗೊಂದಲಮಯ ವಾತಾವರಣ ನಿರ್ಮಿಸಲಾಗಿದೆ.

ಈ ಎಲ್ಲ ಅಂಶಗಳನ್ನು ಉಲ್ಲೇಖಿಸಿ, ಸರ್ಕಾರ ಜಾತಿ ಗಣತಿ ಪ್ರಕ್ರಿಯೆಯನ್ನು ತಕ್ಷಣವೇ ನಿಲ್ಲಿಸುವಂತೆ ತಡೆಯಾಜ್ಞೆ ನೀಡಬೇಕೆಂದು ಅರ್ಜಿದಾರರು ಕೋರ್ಟ್‌ಗೆ ಮನವಿ ಮಾಡಿದ್ದಾರೆ. ಸದ್ಯ ಎರಡೂ ಅರ್ಜಿಗಳು ವಿಚಾರಣೆಗೆ ನಿಗದಿಯಾಗಬೇಕಿದ್ದು, ಮುಂದಿನ ದಿನಗಳಲ್ಲಿ ಹೈಕೋರ್ಟ್‌ನ ತೀರ್ಪು ಜಾತಿ ಗಣತಿಯ ಭವಿಷ್ಯ ನಿರ್ಧರಿಸಲಿದೆ.

ಜಾತಿಗಣತಿ ಗೊಂದಲ ಸಚಿವರ ತುರ್ತು ಸಭೆ:

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಜಾತಿಗಣತಿ ಯೋಜನೆ ಇದೀಗ ಗೊಂದಲದ ಗೂಡಾಗಿದೆ. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಗಣತಿಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು, ಈ ಹಿನ್ನೆಲೆಯಲ್ಲಿ ಸಚಿವರ ತುರ್ತು ಸಭೆಯನ್ನು ಕರೆಯಲಾಗಿದೆ. ಇಂದು ಸಂಜೆ ವಿಧಾನಸೌಧದಲ್ಲಿ ಸಚಿವ ಎಚ್.ಕೆ. ಪಾಟೀಲ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದ್ದು, ಜಾತಿಗಣತಿಯ ಸಾಧಕ-ಬಾಧಕಗಳ ಕುರಿತು ಚರ್ಚೆ ನಡೆಯಲಿದೆ.

ಸರ್ಕಾರದಲ್ಲಿ ಒಡಕು: 

ಜಾತಿಗಣತಿ ಕುರಿತು ಸಚಿವ ಸಂಪುಟದಲ್ಲಿ ಭಿನ್ನಾಭಿಪ್ರಾಯಗಳು ತೀವ್ರಗೊಂಡಿವೆ. ಕೇವಲ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಸಂತೋಷ್ ಲಾಡ್ ಮತ್ತು ಕೆ.ಹೆಚ್. ಮುನಿಯಪ್ಪ ಮಾತ್ರ ಸಮೀಕ್ಷೆ ಮುಂದುವರಿಸುವ ಬಗ್ಗೆ ಒಲವು ಹೊಂದಿದ್ದಾರೆ ಎನ್ನಲಾಗಿದೆ. ಉಳಿದ ಬಹುತೇಕ ಸಚಿವರು, ಈ ಗೊಂದಲದ ಗಣತಿಯನ್ನು ಮುಂದುವರಿಸಿದರೆ ಸರ್ಕಾರಕ್ಕೆ ತೊಂದರೆಯಾಗಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜಾತಿಗಣತಿಯ ಕುರಿತು ಮಾಧ್ಯಮಗಳು ಮತ್ತು ಪ್ರತಿಪಕ್ಷಗಳು ನಿರಂತರವಾಗಿ ಟೀಕೆ ಮಾಡುತ್ತಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಸರಗೊಂಡಿದ್ದಾರೆ. 'ನನ್ನ ಮೇಲೆ ಜಾತಿವಾದಿ ಎಂಬ ಪಟ್ಟ ಕಟ್ಟುತ್ತಿದ್ದಾರೆ. ಇದು ಬಡವರ ಪರ ಸಮೀಕ್ಷೆ ಎಂಬ ಸಂದೇಶ ಹೋಗುತ್ತಿಲ್ಲ, ಕೇವಲ ಜಾತಿ ಸಮೀಕ್ಷೆ ಎಂದು ಬಿಂಬಿತವಾಗುತ್ತಿದೆ' ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಚಿವರ ತುರ್ತು ಸಭೆ

ಈ ಎಲ್ಲಾ ಗೊಂದಲಗಳ ಹಿನ್ನೆಲೆಯಲ್ಲಿ, ಸಚಿವ ಎಚ್.ಕೆ. ಪಾಟೀಲ್ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಮಹದೇವಪ್ಪ, ಕೆ.ಹೆಚ್. ಮುನಿಯಪ್ಪ, ಭೈರತಿ ಸುರೇಶ್, ಎಂ.ಬಿ. ಪಾಟೀಲ್, ಈಶ್ವರ್ ಖಂಡ್ರೆ ಸೇರಿದಂತೆ ಪ್ರಮುಖ ಸಚಿವರು ಭಾಗವಹಿಸಲಿದ್ದಾರೆ. ಸಭೆಯಲ್ಲಿ ಜಾತಿಗಣತಿಯನ್ನು ಮುಂದೂಡುವ ಬಗ್ಗೆಯೂ ಚರ್ಚೆ ನಡೆಸುವ ಸಾಧ್ಯತೆ ಇದೆ. ಸಭೆಯಲ್ಲಿ ಚರ್ಚಿಸಿದ ಬಳಿಕ ಸಚಿವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವರದಿ ಸಲ್ಲಿಸಲಿದ್ದಾರೆ. ಸದ್ಯಕ್ಕೆ, ಜಾತಿಗಣತಿ ಪ್ರಕ್ರಿಯೆ ಗೊಂದಲದ ಸುಳಿಯಲ್ಲಿ ಸಿಲುಕಿದ್ದು, ಮುಂದಿನ ಹಂತದ ನಿರ್ಧಾರಗಳು ಈ ಸಭೆಯ ನಂತರ ಹೊರಬೀಳುವ ಸಾಧ್ಯತೆ ಇದೆ. ಇದು ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ.

PREV
Read more Articles on
click me!

Recommended Stories

ಹೊಸ ವರ್ಷಕ್ಕೆ ಎಲೆಕ್ಟ್ರಾನಿಕ್ ಸಿಟಿ ಹೈ ಅಲರ್ಟ್; ಮಹಿಳೆಯರ ಸುರಕ್ಷತೆಗೆ 'ರಾಣಿ ಚೆನ್ನಮ್ಮ ಪಡೆ ಸಜ್ಜು, ಪಬ್-ಬಾರ್‌ಗಳಿಗೆ ಪೊಲೀಸರ ಬಿಗಿ ರೂಲ್ಸ್!
ಡಿ.25ಕ್ಕೆ ಸಾಲು ಸಾಲು ದುರಂತ, ಲಾರಿ ಬೈಕ್ ಭೀಕರ ಅಪಘಾತದಲ್ಲಿ ನಾಲ್ವರು ಸಾವು