KSRTC ದುರ್ಬಲ ಮಾಡಿದ ರಾಜ್ಯ ಸರ್ಕಾರದ ಶಕ್ತಿ, ₹5,648 ಕೋಟಿ ಬಾಕಿ ವಸೂಲಿಗೆ ದರ ಏರಿಕೆ ಬರೆ?

Published : Oct 01, 2026, 09:30 PM IST
ksrtc launches multi axle bus

ಸಾರಾಂಶ

ಶಕ್ತಿ ಯೋಜನೆಯಡಿ ಮಹಿಳೆಯರ ಉಚಿತ ಪ್ರಯಾಣದ ಬಾಕಿ ಮೊತ್ತ ಪಾವತಿಯಾಗದ ಕಾರಣ ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಸಂಸ್ಥೆಗಳ ಮೇಲಿನ ಒಟ್ಟು ಸಾಲ 8,095 ಕೋಟಿ ರೂ.ಗೆ ತಲುಪಿದ್ದು, ಆರ್ಥಿಕ ನಷ್ಟ ಸರಿದೂಗಿಸಲು ಶೀಘ್ರದಲ್ಲೇ ಬಸ್ ದರ ಏರಿಕೆಯಾಗುವ ಸಾಧ್ಯತೆಯಿದೆ.

ಬೆಂಗಳೂರು: ರಾಜ್ಯದ ನಾಲ್ಕು ಸರ್ಕಾರಿ ರಸ್ತೆ ಸಾರಿಗೆ ಸಂಸ್ಥೆಗಳನ್ನ ಶಕ್ತಿ ಯೋಜನೆ ದುರ್ಬಲ ಮಾಡೀತಾ ಎಂಬ ಪ್ರಶ್ನೆ ಮೂಡಿದೆ. ಅದಕ್ಕೆ ಕಾರಣ KSRTC, BMTC, NWKRTC ಮತ್ತು KKRTC ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಸಂಸ್ಥೆಗಳ ಮೇಲಿನ ಒಟ್ಟು ಸಾಲ ಮತ್ತು ಹೊಣೆಗಾರಿಕೆ ಮೊತ್ತವು ಭಾರಿ ₹8,095 ಕೋಟಿಗೆ ತಲುಪಿದೆ. ಇನ್ನು, ಸರ್ಕಾರದ ಶಕ್ತಿ ಯೋಜನೆಯಡಿ ಮಹಿಳೆಯರ ಉಚಿತ ಪ್ರಯಾಣದ ಬಾಕಿ ಮೊತ್ತ ₹5,648 ಕೋಟಿಗೆ ತಲುಪಿದೆ ಎಂದರು ವರದಿಯಾಗಿದೆ.

ಮರುಪಾವತಿಯಲ್ಲಿ ವಿಳಂಬ

ಮಹಿಳೆಯರ ಉಚಿತ ಪ್ರಯಾಣಕ್ಕಾಗಿ ರಾಜ್ಯ ಸರ್ಕಾರ ಶಕ್ತಿ ಯೋಜನೆಯನ್ನ ಜಾರಿಗೆ ತಂದಿದೆ. ಈ ಯೋಜನೆಯಡಿ ಮಹಿಳೆಯರಿಗೆ ಸಂಸ್ಥೆಗಳು ಉಚಿತ ಟಿಕೆಟ್ ನೀಡುತ್ತವೆ. ಆ ಹಣವನ್ನು ಸಂಸ್ಥೆಗಳಿಗೆ ಸರ್ಕಾರ ಮರು ಪಾವತಿ ಮಾಡುತ್ತದೆ. ಆದರೆ ಯೋಜನೆ ಶುರುವಾದಾಗಿಂದ ಸಂಸ್ಥೆಗಳು ಒಟ್ಟು ಸುಮಾರು ₹22,330 ಕೋಟಿ ವೆಚ್ಚದ ಪ್ರಯಾಣ ಸೇವೆ ಒದಗಿಸಿವೆ. ಸರ್ಕಾರ ಕೇವಲ ₹16,705 ಕೋಟಿ ಬಿಡುಗಡೆ ಮಾಡಿದೆ. ವರದಿಗಳ ಪ್ರಕಾರ, ಇನ್ನು ₹5,648 ಕೋಟಿ ಮರುಪಾವತಿ ಬಾಕಿಯಿದೆ.

ಸಂಸ್ಥೆವಾರು ಬಾಕಿ ಮೊತ್ತ

  • KSRTC: ₹2,183 ಕೋಟಿ
  • BMTC: ₹1,352 ಕೋಟಿ
  • NWKRTC: ₹1,068 ಕೋಟಿ
  • KKRTC: ₹1,045 ಕೋಟಿ

ಸರ್ಕಾರದಿಂದ ಸಾರಿಗೆ ಸಂಸ್ಥೆಗಳಿಗೆ ಬರಬೇಕಾದ ಮರುಪಾವತಿ ಬಾಕಿ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. 2023-24ರಲ್ಲಿ ಬಾಕಿ ಮೊತ್ತ ₹1,170 ಕೋಟಿಯಷ್ಟಿತ್ತು. 2024-25ರಲ್ಲಿ ₹1,180 ಕೋಟಿಗೆ ತಲುಪಿತು. 2025-26ರಲ್ಲಿ ಇದು ಭಾರಿ ಪ್ರಮಾಣದಲ್ಲಿ ಅಂದರೆ ₹2,450 ಕೋಟಿಗೆ ಏರಿಕೆಯಾಗಿದೆ ಎಂದು ಹೇಳಲಾಗಿದೆ.

ಖರ್ಚು ಹೆಚ್ಚುತ್ತಿದೆ. ಆದಾಯ ಕಡಿಮೆ ಆಗುತ್ತಿರೋದ್ರಿಂದ 4 ಸಂಸ್ಥೆಗಳು ನಷ್ಟದಲ್ಲಿವೆ. ಇತ್ತೀಚಿನ ಆರ್ಥಿಕ ವರ್ಷದಲ್ಲಿ ಒಟ್ಟು ₹40,567 ಕೋಟಿ ಆದಾಯದ ವಿರುದ್ಧ ₹44,291 ಕೋಟಿ ವೆಚ್ಚವಾಗಿದ್ದು, ಒಟ್ಟಾರೆ ₹3,724 ಕೋಟಿ ಕಾರ್ಯಾಚರಣೆ ನಷ್ಟ ದಾಖಲಾಗಿದೆ ಎಂದು ವರದಿಯಾಗಿದೆ.

ಬಸ್ ದರ ಏರಿಕೆ ಸಾಧ್ಯತೆ

ತೀವ್ರ ಆರ್ಥಿಕ ಬಿಕ್ಕಟ್ಟಿನ ಪರಿಣಾಮ ಹೊಸ ಬಸ್‌ಗಳ ಖರೀದಿ, ನಿರ್ವಹಣೆ ಮತ್ತು ಸಿಬ್ಬಂದಿ ನೇಮಕಾತಿಗೆ ತೊಂದರೆಯಾಗಿದೆ. ಪ್ರಸ್ತುತ ನಾಲ್ಕೂ ಸಂಸ್ಥೆಗಳಲ್ಲಿ ಒಟ್ಟು 15,718 ಸಿಬ್ಬಂದಿ ಕೊರತೆ (ಚಾಲಕರು, ನಿರ್ವಾಹಕರು ಮತ್ತು ತಾಂತ್ರಿಕ ಸಿಬ್ಬಂದಿ) ಇದೆ ಎನ್ನಲಾಗಿದೆ. ಆರ್ಥಿಕ ಸಂಕಷ್ಟ ನಿವಾರಿಸಲು ಮತ್ತು ನಿರ್ವಹಣಾ ವೆಚ್ಚ ಸರಿದೂಗಿಸಲು ಬಸ್ ಪ್ರಯಾಣ ದರ ಪರಿಷ್ಕರಣೆ ಮಾಡುವ ಸಾಧ್ಯತೆಯಿದೆ.

ಶಕ್ತಿ ಯೋಜನೆಯಿಂದ ಸಾರಿಗೆ ನಿಗಮಗಳಿಗೆ ಉಂಟಾಗಿರುವ ಭಾರಿ ಆರ್ಥಿಕ ನಷ್ಟವನ್ನು ಸರಿದೂಗಿಸಲು ಸರ್ಕಾರ ಬಸ್ ಟಿಕೆಟ್ ದರ ಏರಿಕೆಗೆ ಮುಂದಾಗುತ್ತಿದೆ. ಆದರೆ ಈ ಹೊರೆಯನ್ನು ಸಾಮಾನ್ಯ ಪ್ರಯಾಣಿಕರ ಮೇಲೆ ಹೊರಿಸಿದರೆ ತೀವ್ರ ಜನಾಕ್ರೋಶ ಭುಗಿಲೇಳುವುದು ಖಚಿತ. ಒಂದು ಕೈಯಲ್ಲಿ ಉಚಿತ ಪ್ರಯಾಣ ನೀಡಿ, ಇನ್ನೊಂದು ಕೈಯಲ್ಲಿ ದರ ಹೆಚ್ಚಿಸಿ ಹಣ ವಸೂಲಿ ಮಾಡುತ್ತಿದೆ ಎಂದು ಜನ ಸರ್ಕಾರದ ವಿರುದ್ಧ ಮುಗಿಬೀಳುತ್ತಾರೆ.

PREV
Read more Articles on
click me!

Recommended Stories

ಬೆಂಗಳೂರಲ್ಲಿ Airbnb ಮಾದರಿ ಹೋಂಸ್ಟೇಗಳಿಗೆ ವಿರೋಧ ಯಾಕೆ? ರೊಚ್ಚಿಗೆದ್ದು ಬೀದಿಗೆ ಇಳಿದ ಈ ಏರಿಯಾದ ಜನ
GST ಸಂಗ್ರಹ: ದಾಖಲೆ ಬರೆದ ಕರ್ನಾಟಕ! 2ನೇ ಸ್ಥಾನದಲ್ಲಿ ರಾಜ್ಯ- ಒಂದೇ ತಿಂಗಳಿನಲ್ಲಿ ದಾಖಲಾದ ಮೊತ್ತವೆಷ್ಟು