
ಬೆಂಗಳೂರು: ಇತ್ತೀಚೆಗೆ ನಗರದ ಶಾಂತಿಯುತ ಬಡಾವಣೆಗಳಲ್ಲಿ ಗಲಾಟೆ ಜೋರಾಗಿದೆ. ಅದಕ್ಕೆ ಕಾರಣ ಏರ್‌ಬಿಎನ್‌ಬಿ (Airbnb) ಸ್ಟೈಲ್‌ನ ಹೋಂಸ್ಟೇಗಳು. ಈ ಹೋಂ ಸ್ಟೇ ಹಾಗೂ ಕೆಫೆಗಳ ಹಾವಳಿ ಹೆಚ್ಚಾಗುತ್ತಿದೆ. ಹೀಗಾಗಿ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಉದಾಹರಣೆಯಾಗಿ ನೋಡೋದಾದ್ರೆ ಎಚ್‌ಆರ್‌ಬಿಆರ್ ಲೇಔಟ್‌ನ 5ನೇ ‘ಎ’ ಮುಖ್ಯರಸ್ತೆಯ ನಿವಾಸಿಗಳು, ವಸತಿ ಪ್ರದೇಶದಲ್ಲಿ ವಾಣಿಜ್ಯ ಉದ್ದೇಶದ ಹೋಮ್‌ಸ್ಟೇ ಆರಂಭಿಸುವುದನ್ನು ವಿರೋಧಿಸಿ ಬೀದಿಗಿಳಿದು ಬ್ಯಾನರ್ ಹಿಡಿದು ಪ್ರತಿಭಟನೆ ನಡೆಸಿ ಅಚ್ಚರಿ ಮೂಡಿಸಿದ್ದಾರೆ. ಆದರೆ ಅವರ ಪ್ರತಿಭಟನೆಯ ಹಿಂದೆ ಮನದಾಳದ ನೋವು ಇದೆ. ಹಾಗಿದ್ದರೆ ಯಾಕೆ ಇವರೆಲ್ಲ ವಿರೋಧ ಮಾಡ್ತಿದ್ದಾರೆ ಗೊತ್ತಾ? ಏನಿದು ವಿವಾದ?
HSR ಲೇಔಟ್ ಸಂಪೂರ್ಣ ವಸತಿ ಪ್ರದೇಶ. ಈ ರೆಸಿಡೆನ್ಸಿ ಇವರ ರಸ್ತೆಯಲ್ಲಿ Blossomly House ಎಂಬ ಹೆಸರಿನ ಕಮರ್ಷಿಯಲ್ ಹೋಮ್‌ಸ್ಟೇ ಹಾಗೂ ಕೆಫೆಟೇರಿಯಾ ತೆರೆಯಲು ಸಿದ್ಧತೆ ನಡೆದಿತ್ತು. ಇದನ್ನು ವಿರೋಧಿಸಿ ಯುವಕರು, ಮಹಿಳೆಯರು ಹಾಗೂ ಹಿರಿಯ ನಾಗರಿಕರೆಲ್ಲರೂ ಒಟ್ಟಾಗಿ ಪ್ರತಿಭಟಿಸಿದ್ದಾರೆ. ನಾವು ನೆಮ್ಮದಿಯಿಂದ ಬದುಕಲು ಮನೆ ಕಟ್ಟಿಕೊಂಡಿರುವ ಜಾಗದಲ್ಲಿ ಇಂತಹ ವಾಣಿಜ್ಯ ವ್ಯವಹಾರಗಳಿಗೆ ಅವಕಾಶ ನೀಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೆಮ್ಮದಿಗೆ ಭಂಗ ಮತ್ತು ಸದ್ದು-ಗದ್ದಲ: ಹೋಮ್‌ಸ್ಟೇ ಮತ್ತು ಕೆಫೆಗಳು ಇದ್ದ ಜಾಗಕ್ಕೆ ನಿರಂತರವಾಗಿ ಅಪರಿಚಿತ ಗ್ರಾಹಕರು ಬಂದು ಹೋಗುತ್ತಾರೆ. ಒಮ್ಮೆಗೆ 20 ರಿಂದ 30 ಜನ ಸೇರುತ್ತಾರೆ. ಗುಂಪು ಗುಂಪಾಗಿ ಓಡಾಡುತ್ತಾರೆ. ಸಿಗರೇಟ್ ಸೇದುವುದು, ತಡರಾತ್ರಿವರೆಗೆ ಗಲಾಟೆ ಮಾಡುವುದರಿಂದ ಸುತ್ತಮುತ್ತಲಿನ ಕುಟುಂಬಗಳ ನೆಮ್ಮದಿ ಹಾಗೂ ಆರೋಗ್ಯಕ್ಕೆ ತೊಂದರೆಯಾಗುತ್ತದೆ ಎಂದು ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಪಾರ್ಕಿಂಗ್ ಕಿರಿಕಿರಿ: ಈಗಾಗಲೇ ವಾಹನಗಳ ದಟ್ಟಣೆ ಹೆಚ್ಚಾಗಿದೆ. ಹೊಸದಾಗಿ ಕೆಫೆ ಮತ್ತು ಹೋಮ್‌ಸ್ಟೇ ಬಂದರೆ ಬರುವ ಗ್ರಾಹಕರು ಸ್ಥಳೀಯರ ಮನೆಗಳ ಮುಂದೆ, ಗೇಟ್‌ಗಳ ಎದುರು ಅಡ್ಡಾದಿಡ್ಡಿಯಾಗಿ ಕಾರು-ಬೈಕ್‌ಗಳನ್ನು ನಿಲ್ಲಿಸುತ್ತಾರೆ. ಇದರಿಂದ ನಿವಾಸಿಗಳು ತಮ್ಮ ವಾಹನಗಳನ್ನು ನಿಲ್ಲಿಸಲೂ ಜಾಗ ಇರೋದಿಲ್ಲ.
ಮಾಲಿನ್ಯ: ಕೆಫೆ ಅಡುಗೆಮನೆಗಾಗಿ ದೊಡ್ಡ ಕಮರ್ಷಿಯಲ್ ಎಕ್ಸಾಸ್ಟ್ ಸಿಸ್ಟಮ್ ಅಳವಡಿಸಲಾಗುತ್ತಿದೆ. ಇದರಿಂದ ಬರುವ ಭಾರೀ ಶಬ್ದ, ಹೊಗೆ ಹಾಗೂ ಎಣ್ಣೆಯ ವಾಸನೆ ಪಕ್ಕದ ಮನೆಗಳ ಜನರಿಗೆ ಉಸಿರುಗಟ್ಟುವ ವಾತಾವರಣ ಸೃಷ್ಟಿಸುತ್ತದೆ.
ರಾಜಕಾಲುವೆ ಒತ್ತುವರಿ ಆರೋಪ: ಈ ಕಟ್ಟಡದ ಪಕ್ಕದಲ್ಲೇ ಹಾದುಹೋಗಿರುವ ರಾಜಕಾಲುವೆಯನ್ನು (ಮಳೆನೀರುಗಾಲುವೆ) ಮಾಲೀಕರು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಗಂಭೀರ ಆರೋಪವನ್ನೂ ಸ್ಥಳೀಯರು ಮಾಡಿದ್ದಾರೆ.
ಸುಮಾರು 35 ವರ್ಷಗಳಿಂದ ಅಲ್ಲಿ ವಾಸಿಸುತ್ತಿರುವ ಗೋಮತಿ ವೆಂಕಟೇಶನ್ ಎಂಬ ಹಿರಿಯ ಮಹಿಳೆ ಮಾತನಾಡಿ.. ನಮ್ಮ ಆಕ್ಷೇಪವನ್ನು ಮಾಲೀಕರು ಕ್ಯಾರೇ ಎನ್ನಲಿಲ್ಲ. ಬದಲಿಗೆ ಇದು ಮುಂದೆ ದೊಡ್ಡ ಕಮರ್ಷಿಯಲ್ ರಸ್ತೆ ಆಗಲಿದೆ. ಹೊಂದಿಕೊಂಡು ಇರಿ ಇಲ್ಲವೇ ಮನೆ ಖಾಲಿ ಮಾಡಿ ಎಂದು ಉಡಾಫೆಯಾಗಿ ಉತ್ತರಿಸಿದ್ದಾರೆ ಎಂದು ಮಹಿಳೆ ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು,
ವಸತಿ ಪ್ರದೇಶದ ನಿಯಮಗಳನ್ನು ಉಲ್ಲಂಘಿಸಿ ವಾಣಿಜ್ಯ ಚಟುವಟಿಕೆಗೆ ಪರವಾನಗಿ ನೀಡಲಾಗಿದೆಯೇ ಎಂದು ಪರಿಶೀಲಿಸುವಂತೆ ಸ್ಥಳೀಯರು ಪಾಲಿಕೆಗೆ ಪತ್ರ ಬರೆದಿದ್ದಾರೆ.