Karnataka budget 2023: ಗದಗ ಜಿಲ್ಲೆಗೆ ಸ್ವಲ್ಪ ಸಿಹಿ, ಸ್ವಲ್ಪ ಕಹಿ, ಕಪ್ಪತ್ತಗುಡ್ಡ, ಮಾಗಡಿಯಲ್ಲಿ ಪಕ್ಷಿ ಧಾಮ ಘೋಷಣೆ

By Kannadaprabha NewsFirst Published Jul 8, 2023, 4:50 AM IST
Highlights

ರಾಜ್ಯದಲ್ಲಿ ಕಾಂಗ್ರೆಸ್‌ ನೇತೃತ್ವದ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಪೂರ್ಣ ಪ್ರಮಾಣದ ಬಜೆಟ್‌ನಲ್ಲಿ ಜಿಲ್ಲೆಗೆ ಸ್ವಲ್ಪ ಸಿಹಿ ಮತ್ತು ಕಹಿ ಎರಡನ್ನೂ ನೀಡಲಾಗಿದೆ.

ಶಿವಕುಮಾರ ಕುಷ್ಟಗಿ

ಗದಗ (ಜು.8) : ರಾಜ್ಯದಲ್ಲಿ ಕಾಂಗ್ರೆಸ್‌ ನೇತೃತ್ವದ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಪೂರ್ಣ ಪ್ರಮಾಣದ ಬಜೆಟ್‌ನಲ್ಲಿ ಜಿಲ್ಲೆಗೆ ಸ್ವಲ್ಪ ಸಿಹಿ ಮತ್ತು ಕಹಿ ಎರಡನ್ನೂ ನೀಡಲಾಗಿದೆ.

ಕಪ್ಪತ್ತಗುಡ್ಡ, ಮಾಗಡಿ ಪಕ್ಷಿಧಾಮ ಅಭಿವೃದ್ಧಿಗೆ ಆದ್ಯತೆ ನೀಡುವ ಮೂಲಕ ಹೊಸ ಯೋಜನೆ ಘೋಷಣೆ ಮಾಡಿ ಸಿಹಿ ನೀಡಿದ್ದಾರೆ. ಜಿಲ್ಲೆಯಲ್ಲಿ ಕೃಷಿ ಆಧಾರಿತ ಕೈಗಾರಿಕೆಗಳ ಸ್ಥಾಪನೆಯಾಗಬೇಕು ಎನ್ನುವ ಬಹು ವರ್ಷದ ಕನಸು ಮಾತ್ರ ಈಡೇರಿಲ್ಲ.

Karnataka budget 2023: ಉತ್ತರ ಕರ್ನಾಟಕಕ್ಕೆ ಮತ್ತೊಮ್ಮೆ ನಿರಾಸೆ, ಹೇಳಿಕೊಳ್ಳುವಂಥ ಯೋಜನೆ ಇಲ್ಲ

ಜಿಲ್ಲೆಗೆ ಸಿಕ್ಕಿದ್ದೇನು?

ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕದ 11 ಜಿಲ್ಲೆಗಳ ಜನರ ಕುಡಿವ ನೀರಿನ ಬಹು ವರ್ಷಗಳ ಸಮಸ್ಯೆಯಾಗಿದ್ದ ಕಳಸಾ- ಬಂಡೂರಿ ನಾಲಾ ತಿರುವು ಯೋಜನೆಗೆ ಹಂಚಿಕೆಯಾದ 3.90 ಟಿಎಂಸಿ ನೀರು ಬಳಕೆಗೆ ಈಗಾಗಲೇ ಕೇಂದ್ರ ಜಲ ಆಯೋಗ ಅನುಮತಿ ನೀಡಿದೆ. ಜತೆಗೆ ಅವಶ್ಯವಿರುವ ಅರಣ್ಯ ಅನುಮತಿ ಪಡೆದು ಕಾಮಗಾರಿಗೆ ಚಾಲನೆ ನೀಡುವುದು.

ಜಿಲ್ಲಾಸ್ಪತ್ರೆ ಆವರಣದಲ್ಲಿ ನಿರ್ಮಾಣ ಹಂತದಲ್ಲಿರುವ 450 ಹಾಸಿಗೆಗಳ ಆಸ್ಪತ್ರೆ ಕಾಮಗಾರಿ ಪೂರ್ಣಗೊಳಿಸುವುದು. ಕಪ್ಪತ್ತಗುಡ್ಡ, ಲಕ್ಕುಂಡಿ ಅಭಿವೃದ್ಧಿ ಮತ್ತು ಮಾಗಡಿ ಪಕ್ಷಿಧಾಮ ಅಭಿವೃದ್ಧಿ ಮಾಡುವುದು. ನದಿ ಮೂಲದಿಂದ ಜಿಲ್ಲೆಗಳಲ್ಲಿನ ವಿವಿಧ ಕೆರೆಗಳನ್ನು ಭರ್ತಿ ಮಾಡಿ ಅಂತರ್ಜಲ ಹೆಚ್ಚಳಕ್ಕೆ ವಿಶೇಷ ಕ್ರಮ ಜರುಗಿಸುವುದು. ನಗರದಲ್ಲಿರುವ ಸರ್ಕಾರಿ ವಸ್ತು ಸಂಗ್ರಹಾಲಯವನ್ನು ಅಭಿವೃದ್ಧಿ ಕುರಿತು ಬಜೆಟ್‌ನಲ್ಲಿ ಪ್ರಸ್ತಾಪಿಸಿ ಘೋಷಿಸಿದ್ದು ಜಿಲ್ಲೆಯ ಮಟ್ಟಿಗೆ ಕೊಂಚ ನೆಮ್ಮದಿ ತರುವ ವಿಚಾರವಾಗಿದೆ.

ನಿರೀಕ್ಷೆಗಳೇನಿದ್ದವು?

ಕೃಷಿ ಪ್ರಧಾನ ಜಿಲ್ಲೆ ಇದು. ಇಲ್ಲಿ ಕೃಷಿ ಆಧಾರಿತ ಕೈಗಾರಿಕೆ ಸ್ಥಾಪನೆಯಾಗಬೇಕು ಎನ್ನುವುದು ಜನರ ಬಹು ದಶಕಗಳ ಬೇಡಿಕೆ. ನೇಕಾರಿಕೆಯಲ್ಲಿ ಅತ್ಯುತ್ತಮ ಹೆಸರು ಹೊಂದಿರುವ ಗದಗ-ಬೆಟಗೇರಿ ಅವಳಿ ನಗರದಲ್ಲಿ ಜವಳಿ ಪಾರ್ಕ್ ಸ್ಥಾಪನೆ. ರಾಜ್ಯದಲ್ಲಿ ಅತಿಹೆಚ್ಚು ಈರುಳ್ಳಿ ಬೆಳೆಯುವ ಜಿಲ್ಲೆಯೆಂದು ಖ್ಯಾತಿ ಪಡೆದಿದ್ದು, ಈರುಳ್ಳಿ ಸಂಸ್ಕರಣಾ ಘಟಕಗಳ ಸ್ಥಾಪನೆ. ಜಿಲ್ಲೆಯ ರೈತರನ್ನು ಪ್ರತಿ ವರ್ಷವೂ ಅತಿಯಾಗಿ ಕಾಡುತ್ತಿರುವ ಜಿಂಕೆಗಳ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಗದಗ, ಬಾಗಲಕೋಟೆ, ಕೊಪ್ಪಳ, ಧಾರವಾಡ ಜಿಲ್ಲೆಗಳ ರೈತರಿಗೆ ಆಗುತ್ತಿರುವ ಸಮಸ್ಯೆಗೆ ಶಾಶ್ವತ ಪರಿಹಾರವಾಗಿ ಜಿಂಕೆ ಪಾರ್ಕ್ ನಿರ್ಮಾಣ. ಜಿಲ್ಲಾ ಕೇಂದ್ರವಾದ ನಗರದ ಸಮಗ್ರ ಅಭಿವೃದ್ಧಿಗಾಗಿ ಮತ್ತು ಅವಳಿ ನಗರದ ಕುಡಿವ ನೀರಿನ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ವಿಶೇಷ ಪ್ಯಾಕೇಜ್‌ ಘೋಷಣೆ.

ಕಪ್ಪತ್ತಗುಡ್ಡ ಭಾಗದಲ್ಲಿಯೇ ಆಯುರ್ವೇದ ವಿಶ್ವವಿದ್ಯಾಲಯ ಸ್ಥಾಪನೆ ಹಾಗೂ ಜಿಲ್ಲೆಯಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸ್ಥಾಪನೆಗೆ ಬೇಕಾಗುವ ಕೈಗಾರಿಕಾ ವಲಯಗಳ ಸ್ಥಾಪನೆ. ಅದಕ್ಕಾಗಿ ಬೇಕಾಗುವ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕಿತ್ತು ಎನ್ನುವುದು ಜಿಲ್ಲೆಯ ಜನರ ನಿರೀಕ್ಷೆಗಳಾಗಿವೆ. ಆದರೆ ಇವುಗಳಿಗೆ ಸರ್ಕಾರ ಆದ್ಯತೆ ನೀಡಿಲ್ಲ.

Karnataka budget 2023: ಕಾಫಿ ನಾಡಿಗೆ ಕೈ ಕೊಟ್ಟರಾಜ್ಯ ಸರ್ಕಾರ: ಜಿಲ್ಲೆಗೆ ಬಿಗ್‌ ಝೀರೋ ಶಾಕ್‌

ಇದೊಂದು ಜನಪ್ರಿಯ, ಜನೋಪಯೋಗಿ ಬಜೆಟ್‌. ಜಿಲ್ಲೆಯ ಜನರ ಬಹು ವರ್ಷಗಳ ಬೇಡಿಕೆಯಾಗಿದ್ದ ಲಕ್ಕುಂಡಿ ಅಭಿವೃದ್ಧಿ, ಮಾಗಡಿ ಪಕ್ಷಿಧಾಮ ಸೇರಿದಂತೆ ಪ್ರವಾಸೋದ್ಯಮ ಬೆಳವಣಿಗೆ ವಿಶೇಷ ಆದ್ಯತೆ ನೀಡಲಾಗಿದೆ. ಸರ್ಕಾರಿ ವಸ್ತು ಸಂಗ್ರಹಾಲಯದ ಅಭಿವೃದ್ಧಿ ಸೇರಿ ಕಳೆದ ಸರ್ಕಾರದಲ್ಲಿ ಜಿಲ್ಲೆಗೆ ಯಾವುದೇ ಹೊಸ ಯೋಜನೆಗಳನ್ನೇ ನೀಡಿರಲಿಲ್ಲ. ಸಚಿವ ಎಚ್‌.ಕೆ. ಪಾಟೀಲರ ಪ್ರಭಾವದಿಂದ ಈ ಬಜೆಟ್‌ನಲ್ಲಿ ಆದ್ಯತೆ ಲಭಿಸಿದೆ.

-ಅಶೋಕ ಮಂದಾಲಿ, ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ 

click me!