Karnataka Budget 2023: ಮಧ್ಯ ಕರ್ನಾಟಕ ಜಿಲ್ಲೆ ಮನ ತಣಿಸದ ಬಜೆಟ್‌

By Kannadaprabha News  |  First Published Feb 18, 2023, 5:25 AM IST
  • ಮಧ್ಯ ಕರ್ನಾಟಕ ಜಿಲ್ಲೆ ಮನ ತಣಿಸದ ಬಜೆಟ್‌
  • ಸಿಎಂ ಬೊಮ್ಮಾಯಿ ಆಯವ್ಯಯದಲ್ಲಿ ದಾವಣಗೆರೆಗೆ ಬಯಸಿದ್ದು ಸಿಗ್ಲಿಲ್ಲ, ಕೈಗಾರಿಕೆ-ವಿದ್ಯೆಗೂ ಕೊಡ್ಲಿಲ್ಲ
  • ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತೆ ಗಗನ ಕುಸುಮ

ನಾಗರಾಜ ಎಸ್‌.ಬಡದಾಳ್‌

ದಾವಣಗೆರೆ (ಫೆ.17) : ಜಿಲ್ಲೆಗೆ ಕೈಗಾರಿಕೆ ನೀಡಬಹುದು, ಪ್ರವಾಸೋದ್ಯಮ ಕಕ್ಷೆಗೆ ತಲುಪಿಸಬಹುದು, ಹಿಂದೆ ಬಿ.ಎಸ್‌.ಯಡಿಯೂರಪ್ಪ ಘೋಷಣೆ ಮಾಡಿದ್ದ ದಾವಣಗೆರೆ-ಚಿತ್ರದುರ್ಗ ಹಾಲು ಒಕ್ಕೂಟ, ಕೃಷಿ ಆಧಾರಿತ ಕೈಗಾರಿಕೆ, ಮೆಕ್ಕೆಜೋಳ ಸಂಸ್ಕರಣಾ ಘಟಕ ಸ್ಥಾಪಿಸಬಹುದು, ಐಟಿ-ಬಿಟಿ ಕಂಪನಿಗಳು ಬರಲು ಪೂರಕ ವಾತಾವರಣ ಒದಗಿಸಬಹುದೆಂಬ ಜನರ ಕನಸು, ನಿರೀಕ್ಷೆಯೆಲ್ಲಾ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿದ ಚುನಾವಣೆ ಪೂರ್ವದ ಬಜೆಟ್‌ನಲ್ಲಿ ಹುಸಿಯಾಗಿದೆ.

Tap to resize

Latest Videos

ಜಿಲ್ಲೆಯ ಬಿಜೆಪಿ(BJP) ಜನ ಪ್ರತಿನಿಧಿಗಳಿಗೆ ಆತ್ಮೀಯರು, ವಿಪಕ್ಷ ಕಾಂಗ್ರೆಸ್ಸಿನ ನಾಯಕರಿಗೆ ಹತ್ತಿರದವರೆಂಬ ಕಾರಣಕ್ಕೆ, ದಾವಣಗೆರೆ(Davanagere) ಬಗ್ಗೆ ತಮಗೆ ವಿಶೇಷ ಪ್ರೀತಿಯೆಂದೆಲ್ಲಾ ಹಿಂದೆ ಹೇಳಿದ್ದ ಸಿಎಂ ಬಸವರಾಜ ಬೊಮ್ಮಾಯಿ(CM Basavaraj Bommai) ದಾವಣಗೆರೆ ಜಿಲ್ಲೆ ಕಂಡಿದ್ದ ದೊಡ್ಡ ಕನಸುಗಳಿಗೆ ತಣ್ಣೀರೆರಚಿ, ಸಣ್ಣಪುಟ್ಟದಾಗಿ ತುಪ್ಪ ಸವರುವ ಕೆಲಸ ಮಾಡಿದ್ದಾರೆ. ಕಡೆಗೆ ಮಧ್ಯ ಕರ್ನಾಟಕದ ಜನರಿಗಲ್ಲದಿದ್ದರೂ ಜನ ಪ್ರತಿನಿಧಿಗಳಾದರೂ ಒಂದಿಷ್ಟುನಿರಮ್ಮಳರಾಗಲಿ ಎಂಬ ಕಾರಣಕ್ಕೆ ವಿಮಾನ ನಿಲ್ದಾಣ(Davanagere airport) ಕಾಮಗಾರಿ ಆರಂಭಿಸುವ ಅರಿವೆ ಹಾವು ಬಿಟ್ಟಿರುವುದು ಸ್ಪಷ್ಟವಾಗಿದೆ.

 

ದಾವಣಗೆರೆ: ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿಲ್ಲವೆಂದು ಸಾಬೀತುಪಡಿಸಿ: ಎಂ.ಪಿ.ರೇಣುಕಾಚಾರ್ಯ ಸವಾಲ್

ವಿಶ್ವ ಕನ್ನಡ ಸಮ್ಮೇಳನ, ವಿಮಾನ ನಿಲ್ದಾಣ ಕೆಲಸ ಶುರು:

ಹಿಂದೆ ಎಸ್ಸೆಸ್‌ ಮಲ್ಲಿಕಾರ್ಜುನ ಸಚಿವರಿದ್ದಾಗ ಅತ್ಯಂತ ಚರ್ಚೆಯಲ್ಲಿದ್ದ ವಿಚಾರ ವಿಶ್ವ ಕನ್ನಡ ಸಮ್ಮೇಳನ ನಡೆಸುವುದು. ನಂತರದಲ್ಲಿ ಅದು ಮೂಲೆಗುಂಪಾಗಿತ್ತು. ಈಚೆಗೆ ಹಾವೇರಿಯಲ್ಲಿ ಜಿಲ್ಲೆಯ ಸಾಹಿತ್ಯಾಸಕ್ತರ ಮನವಿಗೆ ಸ್ಪಂದಿಸಿದ್ದ ಸಿಎಂ ವಿಶ್ವ ಕನ್ನಡ ಸಮ್ಮೇಳನವನ್ನು ದಾವಣಗೆರೆಗೆ ಘೋಷಣೆ ಮಾಡಿದ್ದಾರೆ. ದಶಕಗಳ ಕನಸು ವಿಮಾನ ನಿಲ್ದಾಣ ಆಗಬೇಕೆಂಬುದಾಗಿದೆ. ಅದಕ್ಕಾಗಿ ಎಲ್ಲಾ ಪರಿಶೀಲನೆ, ಜಾಗ ಗುರುತಿಸುವ ಕಾರ್ಯವೂ ಆಗಿದೆ. ಆದರೆ, ನಿರ್ದಿಷ್ಟವಾಗಿ ಇಂತಹದ್ದೇ ಜಾಗವೆಂಬ ಸಂಗತಿ ಸ್ಪಷ್ಟವಾಗಿಲ್ಲ. ಆದರೂ, ಬೊಮ್ಮಾಯಿ ವಿಮಾನ ನಿಲ್ದಾಣ ಕಾಮಗಾರಿ ಆರಂಭಿಸುವ ಭರವಸೆ ನೀಡಿದ್ದಾರೆ.

ಬರ ಪೀಡಿತ ಜಗಳೂರು ತಾಲೂಕು ಕೆರೆ ತುಂಬಿಸುವ ಯೋಜನೆ ಪೂರ್ಣಗೊಳಿಸುವ, ಕೇಂದ್ರ ಘೋಷಿಸಿದ 5300 ಕೋಟಿ ರು.ಗಳ ಭದ್ರಾ ಮೇಲ್ದಂಡೆ ತೀವ್ರ ಅನುಷ್ಠಾನಕ್ಕೆ ಬದ್ಧವೆಂದು ಸಾರಿದ್ದಾರೆ. ಬಂಜಾರ ಸಮಾಜದ ಕುಲಗುರು ಶ್ರೀ ಸಂತ ಸೇವಾಲಾಲ್‌ರ ಜನ್ಮಸ್ಥಳ ಹೊನ್ನಾಳಿ ಕ್ಷೇತ್ರದ ಸೂರಗೊಂಡನಕೊಪ್ಪ ಅಭಿವೃದ್ಧಿಗೆ 5 ಕೋಟಿ, ಛತ್ರಪತಿ ಶಿವಾಜಿ ಮಹಾರಾಜರ ತಂದೆ ಷಹಾಜಿ ಮಹಾರಾಜರ ಸಮಾಧಿ ಸ್ಥಳ ಅಭಿವೃದ್ಧಿಗೆ 5 ಕೋಟಿ ಘೋಷಿಸಿದ್ದಾರೆ. ದಾವಣಗೆರೆ ಸೇರಿ 9 ನಗರಗಳಲ್ಲಿ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥ ನಿರ್ಮಾಣ ಇತರೆ 9 ಊರಿಗೆ 80 ಕೋಟಿ ರು. ಮೀಸಲಿಟ್ಟಿದ್ದಾರೆ.

ಮೆಕ್ಕೆಜೋಳ ಸಂಸ್ಕರಣಾ ಘಟಕ ಬಂದಿಲ್ಲ:

ಅತೀ ಹೆಚ್ಚು ಮೆಕ್ಕೆಜೋಳ ಬೆಳೆಯುವ ಜಿಲ್ಲೆ ದಾವಣಗೆರೆ. ಮೆಕ್ಕೆಜೋಳ ಸಂಸ್ಕರಣಾ ಘಟಕವಾಗಲೀ, ಮೆಕ್ಕೆಜೋಳ ಆಧಾರಿತ ಕೈಗಾರಿಕೆಗಳನ್ನಾಗಲೀ ತರುವ ಕೆಲಸ ಸರ್ಕಾರ ಮಾಡಿಲ್ಲ. ಒಂದು ಕಾಲದ ಕರ್ನಾಟಕದ ಮ್ಯಾಂಚೆಸ್ಟರ್‌ ಖ್ಯಾತಿ ದಾವಣಗೆರೆಗೆ ಕೈಗಾರಿಕೆಯನ್ನೂ ಕೊಡಲಿಲ್ಲ. ಈಗ ಕರ್ನಾಟಕದ ವಿದ್ಯಾನಗರಿ ಅಂತಲೇ ಕರೆಯಲ್ಪಡುವ ಈ ಊರು, ಜಿಲ್ಲೆಗೆ ಶೈಕ್ಷಣಿಕವಾಗಿಯೂ ಸ್ಪಂದಿಸಿಲ್ಲ. ಸರ್ಕಾರಿ ವೈದ್ಯಕೀಯ ಕಾಲೇಜು ತರುವ ಪ್ರಯತ್ನ ಯಕ್ಷಪ್ರಶ್ನೆಯಾಗಿದೆ ಎನ್ನುತ್ತಾರೆ ಜನತೆ.

ಭೈರನಪಾದ ಸೇರಿ ಯಾವುದೇ ಏತ ಯೋಜನೆ ಇಲ್ಲ:

ಹಿಂದೆ ದಾವಣಗೆರೆ ವಿವಿ ಸ್ಥಾಪನೆ, ಪಾಲಿಕೆಯಾಗಿದ್ದು, ಪಾಲಿಕೆಗೆ ಸಿಎಂ ವಿಶೇಷಾನುದಾನ, ಭದ್ರಾ ನಾಲೆಗಳ ಆಧುನೀಕರಣ, ಈಚೆಗೆ ಜಗಳೂರು ತಾಲೂಕಿನ ಕೆರೆ ತುಂಬಿಸುವ ಯೋಜನೆ ಬಿಟ್ಟರೆ ಜಿಲ್ಲೆಗೆ ಹೇಳಿಕೊಳ್ಳುವ ಯಾವುದೇ ಯೋಜನೆ, ಕಾರ್ಯಕ್ರಮ ಸಿಕ್ಕಿಲ್ಲ. ದಾವಣಗೆರೆ ಜಿಲ್ಲಾ ಆಸ್ಪತ್ರೆ ಆವರಣದಲ್ಲೇ ಜಯದೇವ ಹೃದ್ರೋಗ ಉಪ ಕೇಂದ್ರ ಸ್ಥಾಪಿಸುವ ಪ್ರಸ್ತಾಪವಾಗಲೀ, ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಯಾಗಲೀ ಇಲ್ಲ. ಈಗ ವಿಮಾನ ನಿಲ್ದಾಣ ಕಾಮಗಾರಿ ಆರಂಭವೆಂದು ಸಿಎಂ ಬಜೆಟ್‌ನಲ್ಲಿ ಹೇಳಿದ್ದು, ಕೃತಿಗೆ ಬರಬೇಕಿದೆ. ಮೆಕ್ಕೆಜೋಳದ ಕಣಜ, ಅಡಿಕೆ, ತೆಂಗು, ಬತ್ತ, ಕಬ್ಬು ಮತ್ತಿತರೆ ತೋಟಗಾರಿಕೆ ಬೆಳೆಯುವ ಜಿಲ್ಲೆಯಲ್ಲೊಂದು ಕೃಷಿ ಕಾಲೇಜು ಸ್ಥಾಪಿಸಬೇಕೆಂಬ ಬೇಡಿಕೆ ಇದೆ. ಇದಕ್ಕಾಗಿ ಜಿಲ್ಲೆಯಲ್ಲಿ ಎರಡು ಕಡೆ ಜಾಗವೂ ಇದೆ. ದಾವಣಗೆರೆ-ಚಿತ್ರದುರ್ಗ ಜಿಲ್ಲೆಗಳಿಗೆ ಮೆಗಾ ಡೈರಿ ಸ್ಥಾಪಿಸಬೇಕೆಂಬುದೂ ಕನ್ನಡಿಯೊಳಗಿನ ಗಂಟಾಗಿದೆ. ಹಿಂದೆ ಯಡಿಯೂರಪ್ಪ ಘೋಷಣೆ ಮಾಡಿದ್ದ ಹಾಲು ಒಕ್ಕೂಟದ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಚಕಾರ ಎತ್ತಿಲ್ಲ. ಹರಿಹರ ತಾ. ಭೈರನಪಾದ ಸೇರಿದಂತೆ ಅನೇಕ ಏತ ನೀರಾವರಿ ಯೋಜನೆ ಮತ್ತೆ ನೆನೆಗುದಿಗೆ ಬಿದ್ದಿವೆ. ಐತಿಹಾಸಿಕ ಸೂಳೆಕೆÜರೆ ಹೂಳೆತ್ತುವ, ಪ್ರವಾಸಿ ತಾಣಗಳನ್ನಾಗಿಸುವ, ಜವಳಿ ಪಾರ್ಕ್ಗೆ ಒತ್ತು ನೀಡುವ ಕೆಲಸವಾಗಿಲ್ಲವೆಂಬುದು ಅಷ್ಟೇ ಸತ್ಯ.

ಖಾಸಗಿ ಬಸ್ಸು ನಿಲ್ದಾಣಕ್ಕೆ ನಾಮಕರಣ; ಬಿಜೆಪಿ ಕಾಂಗ್ರೆಸ್ ನಡುವೆ ಕಿತ್ತಾಟ

ಜಿಲ್ಲೆಗೆ ಎಸ್‌ಡಿಆರ್‌ಎಫ್‌ ಮಂಜೂರು

ಎಸ್‌ಡಿಆರ್‌ಎಫ್‌ ಮಂಜೂರು ಮಾಡಿದ್ದು, ಶೋಧನಾ-ರಕ್ಷಣಾ ಉಪಕರಣಕ್ಕೆ 30 ಕೋಟಿ ಕಾಯ್ದಿರಿಸಿದೆ. ದಾವಣಗೆರೆಯ ಇಎಸ್‌ಐ ಆಸ್ಪತ್ರೆಯನ್ನು 50ರಿಂದ 100ಕ್ಕೆ ಹಾಸಿಗೆ ಸಾಮರ್ಥ್ಯ ಹೆಚ್ಚಳ ಮಾಡುವುದಾಗಿ ಹೇಳಿದ್ದಾರೆ. ಚಿತ್ರದುರ್ಗ-ದಾವಣಗೆರೆ- ಹಾವೇರಿ ಷಟ್ಪಥ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಅನುದಾನ ಬರುವುದೇ ನಿಂತಿರುವ ದಾವಣಗೆರೆ ಸ್ಮಾರ್ಚ್‌ ಸಿಟಿ ಕಾಮಗಾರಿ ಪೂರ್ಣಗೊಳಿಸುವ ವಾಗ್ದಾನ ಸಿಎಂ ಬೊಮ್ಮಾಯಿ ಮಾಡಿದ್ದಾರೆ.

click me!