ಮಹದಾಯಿ ಪ್ರಸ್ತಾವನೆ, ಹುಬ್ಬಳ್ಳಿಯಲ್ಲೊಂದು ಅತ್ಯಾಧುನಿಕ ಲ್ಯಾಬ್, ಸಂಶೋಧನಾ ಕೇಂದ್ರ, ಕೈಗಾರಿಕಾ ವಸಾಹತು, ಕಲಬುರ್ಗಿ ಹೆಸರಲ್ಲಿ ಟ್ರಸ್ಟ್..!
ಶಿವಾನಂದ ಗೊಂಬಿ
ಹುಬ್ಬಳ್ಳಿ (ಜು.8) : ಮಹದಾಯಿ ಪ್ರಸ್ತಾವನೆ, ಹುಬ್ಬಳ್ಳಿಯಲ್ಲೊಂದು ಅತ್ಯಾಧುನಿಕ ಲ್ಯಾಬ್, ಸಂಶೋಧನಾ ಕೇಂದ್ರ, ಕೈಗಾರಿಕಾ ವಸಾಹತು, ಕಲಬುರ್ಗಿ ಹೆಸರಲ್ಲಿ ಟ್ರಸ್ಟ್..! fಇವಿಷ್ಟೇ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಮೊದಲ ಬಜೆಟ್‌ನಲ್ಲಿ ಧಾರವಾಡ ಜಿಲ್ಲೆಗೆ ಸಿಕ್ಕಿರುವುದು. ಉಳಿದಂತೆ ಜಿಲ್ಲೆಯ ಹೆಚ್ಚಿನ ಬೇಡಿಕೆಗಳಿಗೆ ಬಜೆಟ್‌ನಲ್ಲಿ ಸ್ಪಂದನೆ ಸಿಕ್ಕಿಲ್ಲ. ಇದು ಜನರಲ್ಲಿ ಕೊಂಚ ಬೇಸರವನ್ನುಂಟು ಮಾಡಿದೆ. ಬಜೆಟ್‌ನಲ್ಲಿ ಜಿಲ್ಲೆಗೆ ಕೊಂಚ ಸಿಹಿ ನೀಡಿದ ಅನುಭವವಾಗಿದ್ದರೆ, ಕೊಂಚ ಕಹಿ ಅನುಭವ ಕೂಡ ನೀಡಿದಂತಾಗಿದೆ.
ಮಹದಾಯಿ ಪ್ರಸ್ತಾವನೆ:
ಮಹದಾಯಿ ನ್ಯಾಯಾಧಿಕರಣದಿಂದ ಕಳಸಾ- ಬಂಡೂರಿ ನಾಲಾ ತಿರುವು ಕುಡಿಯುವ ನೀರಿನ ಯೋಜನೆಗೆ 3.90 ಟಿಎಂಸಿ ನೀರು ರಾಜ್ಯದ ಪಾಲಿದೆ. ಈಗಾಗಲೇ ಕೇಂದ್ರ ಜಲ ಆಯೋಗದ ಒಪ್ಪಿಗೆ ಸಿಕ್ಕಿದೆ. ಅವಶ್ಯವಿರುವ ಅರಣ್ಯ ಇಲಾಖೆಯ ತೀರುವಳಿ ಪಡೆದು ಕಾಮಗಾರಿಗೆ ಚಾಲನೆ ನೀಡಲು ಪ್ರಯತ್ನಿಸಲಾಗುವುದು ಎಂದು ಸರ್ಕಾರ ಹೇಳಿಕೊಂಡಿದೆ. ಪ್ರಯತ್ನ ಎಂದು ಹೇಳಿರುವುದು ಈ ಭಾಗದ ಹೋರಾಟಗಾರರಲ್ಲಿ ಅಸಮಾಧಾನವನ್ನುಂಟು ಮಾಡಿದೆ. ಚಾಲನೆ ನೀಡುತ್ತೇವೆ ಎನ್ನುವುದು ಬಿಟ್ಟು ಪ್ರಯತ್ನಿಸಲಾಗುವುದು ಎಂದರೆ ಹೇಗೆ? ಇವರಿಗೆ ಮಾಡುವ ಇಚ್ಛೆ ಕಂಡು ಬರುತ್ತಿಲ್ಲ ಎಂಬ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇನ್ಮೇಲಾದರೂ ಈ ಭಾಗದ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ಹೇರಿ ಕಾಮಗಾರಿ ಪ್ರಾರಂಭಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಸದ್ಯ ಹಿಂದಿನ ಸರ್ಕಾರ .1677 ಕೋಟಿ ಇದಕ್ಕೆ ಮೀಸಲಿಟ್ಟಿದೆ. ಈ ಸರ್ಕಾರ ಇನ್ನಷ್ಟುಅನುದಾನ ಕೂಡ ನೀಡಬೇಕಿತ್ತು ಎಂಬ ಅಭಿಪ್ರಾಯ ಹೋರಾಟಗಾರರದ್ದು.
'ರೈತರು ಸಾಲ ಕೇಳಿದ್ರೆ ಸಿಬಿಲ್ ಸ್ಕೋರ್ ನೋಡದಿರಿ': ಸಂಸದ ಡಾ.ಜಿಎಂ ಸಿದ್ದೇಶ್ವರ್ ಸೂಚನೆ
ಸಂತಸಕರ:
ಇನ್ನು ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾಲಯ ವತಿಯಿಂದ ಏಳು ಜಿಲ್ಲೆಗಳಲ್ಲಿ ಅತ್ಯಾಧುನಿಕ ಕೌಶಲ್ಯ ಪ್ರಯೋಗಾಲಯ, ಸಂಶೋಧನಾ ಕೇಂದ್ರ ತೆರೆಯುವುದಾಗಿ ಹೇಳಿಕೊಂಡಿದೆ. ಅದರಲ್ಲಿ ಹುಬ್ಬಳ್ಳಿ ಕೂಡ ಸೇರಿರುವುದು ಸಂತಸಕರ ಎಂದೇ ಹೇಳಬೇಕು.
ಇನ್ನು ರಾಜ್ಯದಲ್ಲಿ ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಉತ್ತೇಜನ ನೀಡುವ ಉದ್ದೇಶದಿಂದ ಏಳು ಕಡೆಗಳಲ್ಲಿ ಕೈಗಾರಿಕಾ ವಸಾಹತುಗಳನ್ನು ಸ್ಥಾಪಿಸುವುದಾಗಿ ಸರ್ಕಾರ ಘೋಷಿಸಿಕೊಂಡಿದೆ. ಏಳರ ಪೈಕಿ ಹುಬ್ಬಳ್ಳಿ ಕೂಡ ಒಂದಾಗಿದೆ.
ಕಲಬುರ್ಗಿ ಹೆಸರಲ್ಲಿ ಟ್ರಸ್ಟ್:
ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿರುವ ಡಾ. ಎಂ.ಎಂ. ಕಲಬುರ್ಗಿ ಅವರ ಹೆಸರಲ್ಲಿ ಟ್ರಸ್ಟ್ ಸ್ಥಾಪಿಸುವುದಾಗಿ ಭರವಸೆ ನೀಡಿದ್ದಾರೆ. ಇದು ನಿಜಕ್ಕೂ ಒಳ್ಳೆಯ ಕಾರ್ಯ. ಕಲಬುರ್ಗಿ ಸಾಹಿತ್ಯ ಲೋಕಕ್ಕೆ ಸಾಕಷ್ಟುಕೊಡುಗೆ ನೀಡಿದವರು. ಅವರ ನಿಧನದ ಬಳಿಕ ಅವರನ್ನು ಸ್ಮರಿಸುವಂತಹ ಕೆಲಸಗಳೂ ಅಷ್ಟಾಗಿ ಆಗಿರಲಿಲ್ಲ. ಇದೀಗ ಅವರ ಹೆಸರಲ್ಲಿ ಟ್ರಸ್ಟ್ ಸ್ಥಾಪಿಸಲು ನಿರ್ಧರಿಸಿರುವುದು ಸಂತಸಕರ ಎಂದು ಸಾಹಿತ್ಯಾಸಕ್ತರು ಅಂಬೋಣ.
ಕೊಂಚ ನಿರಾಸೆ:
ಈ ಭಾಗದ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಕೆಲಸ ಆಗಿಲ್ಲ. ಜತೆಗೆ ಹುಬ್ಬಳ್ಳಿ-ಧಾರವಾಡ ರಾಜ್ಯದ ಎರಡನೆಯ ದೊಡ್ಡ ನಗರ ಎನಿಸಿಕೊಂಡಿದೆ. ಇದರ ಅಭಿವೃದ್ಧಿಗೆ ವಿಶೇಷ ಅನುದಾನ ಬಿಡುಗಡೆ ಮಾಡಬೇಕು ಎಂಬ ಬೇಡಿಕೆ ಇತ್ತು. ಜತೆಗೆ ಪ್ರತಿವರ್ಷ ಹೈರಾಣು ಮಾಡುವ ಬೆಣ್ಣಿಹಳ್ಳದ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು ಎಂಬ ಬೇಡಿಕೆಯಾಗಿತ್ತು. ಜತೆಗೆ ಹುಬ್ಬಳ್ಳಿಯಲ್ಲಿ ರಾಜ್ಯದ ಎರಡನೆಯ ಹಜ್ ಭವನ ನಿರ್ಮಿಸಬೇಕು. ಇಲ್ಲಿನ ವಿಮಾನ ನಿಲ್ದಾಣದ ಬಳಿ ಹಜ್ ಭವನ ಸ್ಥಾಪಿಸಬೇಕು ಎಂದು ಒತ್ತಾಯಿಸಿದ್ದರು. ಜತೆಗೆ ಚರಂಡಿ, ರಸ್ತೆ ಅಭಿವೃದ್ಧಿಗೆ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕಿತ್ತು. ಆದರೆ ಸರಿಯಾಗಿ ಸ್ಪಂದನೆ ಸಿಕ್ಕಿಲ್ಲ ಎಂಬ ಬೇಸರ ಜನರದ್ದು.