
ಉತ್ತರ ಕನ್ನಡ (ಜ.07): ಜಿಲ್ಲೆಯ ಹೊನ್ನಾವರ ತಾಲೂಕಿನ ಗೇರುಸೊಪ್ಪ ಸಮೀಪದ ಸುಳೆಮುರ್ಕಿ ಕ್ರಾಸ್ ಬಳಿ ತಡರಾತ್ರಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಇಬ್ಬರು ವ್ಯಕ್ತಿಗಳು ಕಾರಿನೊಳಗೇ ಸಜೀವ ದಹನವಾಗಿರುವ ಘಟನೆ ನಡೆದಿದೆ. ಅತಿ ವೇಗವಾಗಿ ಬಂದ ಕಾರು ಮರಕ್ಕೆ ಢಿಕ್ಕಿ ಹೊಡೆದು ಪಲ್ಟಿಯಾಗಿ ಕಂದಕಕ್ಕೆ ಬಿದ್ದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎಂದು ಶಂಕಿಸಲಾಗಿದೆ.
ಗೇರುಸೊಪ್ಪ ರಸ್ತೆಯ ಸುಳೆಮುರ್ಕಿ ಕ್ರಾಸ್ ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಪಕ್ಕದ ಮರಕ್ಕೆ ಬಲವಾಗಿ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಕಾರು ಪಲ್ಟಿಯಾಗಿ ಹಳ್ಳಕ್ಕೆ ಬಿದ್ದಿದ್ದು, ತಕ್ಷಣವೇ ಬೆಂಕಿ ಹೊತ್ತಿಕೊಂಡಿದೆ. ತಡರಾತ್ರಿ ಈ ಅಪಘಾತ ಸಂಭವಿಸಿರುವುದರಿಂದ ರಕ್ಷಣೆಗೆ ಯಾರು ಇಲ್ಲದ ಕಾರಣ, ಕಾರಿನೊಳಗಿದ್ದ ಇಬ್ಬರು ಹೊರಬರಲಾಗದೆ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಗುರುತು ಸಿಗದಷ್ಟು ಸುಟ್ಟು ಕರಕಲಾಗಿದ್ದಾರೆ.
ಬೆಂಕಿಯ ತೀವ್ರತೆಗೆ ಕಾರು ಸಂಪೂರ್ಣವಾಗಿ ಭಸ್ಮವಾಗಿದ್ದು, ವಾಹನದ ನಂಬರ್ ಪ್ಲೇಟ್ ಕೂಡ ಸುಟ್ಟು ಹೋಗಿದೆ. ಹೀಗಾಗಿ ಮೃತರ ಗುರುತು ಪತ್ತೆ ಮಾಡುವುದು ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ. ಸದ್ಯಕ್ಕೆ ಸಿಕ್ಕಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ, ಮೃತರು ಸಿದ್ಧಾಪುರದ ಚಂದ್ರಘಟ್ಟ ಮೂಲದವರು ಎಂದು ಶಂಕಿಸಲಾಗಿದೆ. ಆದರೆ, ಪೊಲೀಸರು ಅಧಿಕೃತವಾಗಿ ಇದನ್ನು ದೃಢಪಡಿಸಿಲ್ಲ.
ವಿಷಯ ತಿಳಿಯುತ್ತಿದ್ದಂತೆಯೇ ಹೊನ್ನಾವರ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿದ್ದಾರೆ. ಸುಟ್ಟು ಕರಕಲಾದ ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಘಟನಾ ಸ್ಥಳದಲ್ಲಿ ಹರಡಿರುವ ಅವಶೇಷಗಳನ್ನು ಪರಿಶೀಲಿಸಿ ಕಾರಿನ ಮಾಲೀಕರು ಮತ್ತು ಮೃತರ ನಿಖರ ಮಾಹಿತಿ ಕಲೆಹಾಕಲು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದ್ದು, ಮೃತರ ಕುಟುಂಬಸ್ಥರನ್ನು ಸಂಪರ್ಕಿಸಲು ಪ್ರಯತ್ನಿಸಲಾಗುತ್ತಿದೆ. ಇನ್ನು ಪೊಲೀಸರು ಮೃತರ ಸಂಬಂಧಿಕರು ತಿಳಿಯುತ್ತಿದ್ದಂತೆ, ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ, ಡಿಎನ್‌ಎ ಪರೀಕ್ಷೆಗೆ ಒಳಪಡಿಸಲಿದ್ದಾರೆ. ನಂತರ, ಮೃತರ ಗುರುತು ಪತ್ತೆಹಚ್ಚು ವಾರಸುದಾರರಿಗೆ ಹಸ್ತಾಂತರ ಮಾಡಲಿದ್ದಾರೆ.
ಇತ್ತೀಚೆಗೆ ಚಿತ್ರದುರ್ಗದ ಹಿರಿಯೂರು ಬಳಿ ನಡೆದ ಬಸ್ ಭೀಕರ ಅಪಘಾತದಲ್ಲಿ ಬಸ್ಸಿಗೆ ಬೆಂಕಿ ತಗುಲಿ ಒಟ್ಟು ಐವರು ಮಹಿಳೆಯರು ಸಜೀವ ದಹನವಾಗಿದ್ದರು. ಇದರಲ್ಲಿ ಉತ್ತರ ಕನ್ನಡ ಜಿಲ್ಲೆಯ ತಾಯಿ-ಮಗಳು ಹಾಗೂ ಒಬ್ಬ ಯುವತಿ ಸೇರಿದಂತೆ ಒಟ್ಟು ಮೂವರು ಸುಟ್ಟು ಕರಕಲಾಗಿದ್ದರು. ಇನ್ನು ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಇಬ್ಬರು ಯುವತಿಯರು ಕೂಡ ಸಜೀವ ದಹನವಾಗಿದ್ದರು. ಈ ದುರ್ಘಟನೆ ಮಾಸುವ ಮುನ್ನವೇ ಉತ್ತರ ಕನ್ನಡ ಜಿಲ್ಲೆಯ ಮತ್ತಿಬ್ಬರು ಕಾರು ಅಪಘಾತದಲ್ಲಿ ಸುಟ್ಟು ಕರಕಲಾಗಿದ್ದು, ಅವರ ಮೃತದೇಹಗಳು ಗುರುತು ಸಿಗದಷ್ಟು ಕರಕಲಾಗಿವೆ.