
ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಬಿ. ಸುರೇಶ್‌ಗೌಡ ಅವರ ಪುತ್ರಿ, ಎಸಿಪಿ ಗೌತಮ್ ಅವರ ಪತ್ನಿ ಐಶ್ವರ್ಯ ಅವರು ದೇವಸ್ಥಾನದಲ್ಲಿ ದರ್ಶನ ತಡವಾದ ವಿಚಾರವಾಗಿ ಅಹಂಕಾರ ತೋರಿಸಿ ಮಹಿಳಾ ಸಬ್ ಇನ್ಸ್‌ಪೆಕ್ಟರ್ (PSI) ಅವರೊಂದಿಗೆ ವಾಗ್ವಾದ ನಡೆಸಿ, ಕಪಾಳಮೋಕ್ಷ ಮಾಡಿರುವ ಘಟನೆ ಆಗಸ್ಟ್ 12ರಂದು ರಾತ್ರಿ ಸುಮಾರು 8.15ರ ಸುಮಾರಿಗೆ ನಡೆದಿದ್ದಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಶಾಸಕ ಸುರೇಶ್‌ಗೌಡ ಅವರು ಪ್ರತಿಕ್ರಿಯಿಸಿದ್ದು, ಘಟನೆಯಲ್ಲಿ ನನ್ನ ಮಗಳ ತಪ್ಪಿದ್ದರೆ ನಾನು ಕ್ಷಮೆಯಾಚಿಸಲು ಸಿದ್ಧ ಎಂದು ಸ್ಪಷ್ಟಪಡಿಸಿದ್ದಾರೆ.
ಭೀಮನ ಅಮಾವಾಸ್ಯೆಯ ಶುಭ ಸಂದರ್ಭದಲ್ಲಿ ಶಾಸಕ ಸುರೇಶ್‌ಗೌಡ ಅವರ ಪುತ್ರಿ, ಎಸಿಪಿ ಗೌತಮ್ ಪತ್ನಿ ಐಶ್ವರ್ಯ ಅವರು ತಮ್ಮ ಇಬ್ಬರು ಮಕ್ಕಳೊಂದಿಗೆ ಮಂಡ್ಯ ಜಿಲ್ಲೆಯ ಶೀರಂಗಪಟ್ಟಣ ತಾಲೂಕಿನ ಆರತಿ ಉಕ್ಕಡ ದೇವಸ್ಥಾನಕ್ಕೆ ತೆರಳಿದ್ದರು. ತನ್ನ ಪ್ರಭಾವ ಬಳಸಿ ದೇಗುಲಕ್ಕೆ ಬಂದಿದ್ದ ಐಶ್ವರ್ಯಾ ವಿಐಪಿ (VIP) ಸಾಲಿನಲ್ಲಿ ನಿಂತು ದರ್ಶನಕ್ಕೆ ಕಾಯುತ್ತಿದ್ದರು. ದೇಗುಲದ ಗರ್ಭಗುಡಿಯೊಳಗೆ ಪ್ರವೇಶಕ್ಕೆ ಅವಕಾಶ ನೀಡಬೇಕೆಂದು ಮಹಿಳಾ ಸಬ್ ಇನ್ಸ್‌ಪೆಕ್ಟರ್ ಸುನೀತಾ ಪಾಟೀಲ್ ಕೇಳಿದಾಗ ಆ ರೀತಿಯ ನಿಯಮ ಇಲ್ಲ ಎಂದಿದ್ದಾರೆ. ಇದೇ ವೇಳೆ ಮಹಿಳಾ ಪೇದೆಯೊಬ್ಬರು ಕೆಲಸ ನಿಮಿತ್ತ ಗರ್ಭಗುಡಿಯ ಒಳಗೆ ಹೋದರು. ಆ ಸಮಯದಲ್ಲಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು, ನಾನು ಎಂಎಲ್‌ಎ ಮಗಳು ಎಸಿಪಿ ಪತ್ನಿ ಎಂದು ದರ್ಪ ತೋರಿದ್ದಾರೆನ್ನಲಾಗಿದೆ.
ಇದಾದ ಕೆಲವೇ ಕ್ಷಣಗಳಲ್ಲಿ ಸ್ಥಳಕ್ಕೆ ಆಗಮಿಸಿದ ಸರ್ಕಲ್ ಇನ್ಸ್‌ಪೆಕ್ಟರ್ (CI) ಅವರು ಶಾಸಕರ ಪುತ್ರಿಯನ್ನು ಗುರುತಿಸಿ, ಅವರನ್ನು ದರ್ಶನಕ್ಕೆ ಒಳಗೆ ಬಿಟ್ಟಿದ್ದಾರೆ. ಈ ವೇಳೆ ಐಶ್ವರ್ಯ ಅವರು, "ನನ್ನನ್ನು ಏಕೆ ತಡೆದಿರಿ?" ಎಂದು ಸಬ್ ಇನ್ಸ್‌ಪೆಕ್ಟರ್ ಅವರನ್ನು ಮತ್ತೆ ಪ್ರಶ್ನಿಸಿದ್ದಾರೆ. ಆ ಸಂದರ್ಭದಲ್ಲಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ವಾಗ್ವಾದದ ನಡುವೆ ಶಾಸಕರ ಪುತ್ರಿ ಐಶ್ವರ್ಯ ಅವರು ಸಬ್ ಇನ್ಸ್‌ಪೆಕ್ಟರ್ ಅವರ ಕಪಾಳಕ್ಕೆ ಹೊಡೆದಿದ್ದಾರೆಂದು ಆರೋಪಿಸಲಾಗಿದೆ.
ಈ ಇಡೀ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಬಿ. ಸುರೇಶ್‌ಗೌಡ ಅವರು ಕಳಕಳಿ ಮತ್ತು ಹೊಣೆಗಾರಿಕೆಯ ಮಾತುಗಳನ್ನಾಡಿದ್ದಾರೆ.
"ದೇವಸ್ಥಾನದಲ್ಲಿ ಗಲಾಟೆಯಾಗಿದ್ದು ನಿಜ ಎಂದು ನನ್ನ ಮಗಳು ಒಪ್ಪಿಕೊಂಡಿದ್ದಾಳೆ. ದೇವಸ್ಥಾನಕ್ಕೆ ಪ್ರತಿಯೊಬ್ಬರೂ ಮನಸ್ಸಿನ ಶಾಂತಿಗಾಗಿ ಹೋಗುತ್ತಾರೆ, ಅಲ್ಲಿ ಇಂತಹ ಗಲಾಟೆಗಳು ನಡೆಯಬಾರದಿತ್ತು. ಮಾಧ್ಯಮಗಳಲ್ಲಿ ನನ್ನ ಮಗಳು ಕಪಾಳಕ್ಕೆ ಹೊಡೆದಿದ್ದಾಳೆ ಎಂಬ ಸುದ್ದಿಗಳನ್ನು ನೋಡಿದ್ದೇನೆ. ಈ ಘಟನೆಯಲ್ಲಿ ಪರಿಶೀಲನೆ ನಡೆಸಿ, ಒಂದು ವೇಳೆ ನನ್ನ ಮಗಳದ್ದೇ ತಪ್ಪು ಅಂತ ಸಾಬೀತಾದರೆ, ನಾನು ಬಹಿರಂಗವಾಗಿ ಕ್ಷಮೆ ಕೇಳಲು ಸಿದ್ಧನಿದ್ದೇನೆ ಎಂದಿದ್ದಾರೆ.
ಇನ್ನು ಘಟನೆ ಸಂಬಂಧ ಕ್ಯಾತನಹಳ್ಳಿ ಪೊಲೀಸ್ ಠಾಣೆಯಲ್ಲಿ ಐಶ್ವರ್ಯ ವಿರುದ್ಧ ಬಿಎನ್‌ಎಸ್‌ನ ಸೆಕ್ಷನ್ 132, 115(2), 352 ಮತ್ತು 351(2) ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ಇದೇ ವೇಳೆ, ಮಹಿಳಾ ಪಿಎಸ್‌ಐ ವಿರುದ್ಧವೂ ಪ್ರತಿದೂರು ದಾಖಲಾಗಿದೆ ಎಂದು ವರದಿ ತಿಳಿಸಿದೆ. ಶಾಸಕರ ಪುತ್ರಿಯನ್ನು ಪಿಎಸ್‌ಐ ಕೂಡ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂಬ ಆರೋಪದಡಿ ಈ ಪ್ರತಿದೂರು ನೀಡಲಾಗಿದೆಯಂತೆ.
ಘಟನೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಎಂಎಲ್‌ಎಗಳು, ಡಿವೈಎಸ್‌ಪಿ ಗಳು ಬಂದಾಗ ದೇಗುಲದಲ್ಲಿ ವಿಶೇಷ ದರ್ಶನ, ಗರ್ಭಗುಡಿ ಸಮೀಪ ಬಿಡುವುದು ಶಿಷ್ಟಾಚಾರ. ಪ್ರಭಾವಿಗಳ ಮಕ್ಕಳಿಗೆ ಏಕೆ ಎಂದು ಚರ್ಚೆ ಆರಂಭವಾಗಿದೆ.