ಮೊದಲ ಬಾರಿ BJP-JDS ಮೈತ್ರಿಗೆ ಕ್ಲೀನ್ ಸ್ವೀಪ್, ಬ್ಯಾಲೆಟ್ ಪೇಪರ್ ಚುನಾವಣೆ 28 MLC ಸ್ಥಾನದಲ್ಲಿ ಕಾಂಗ್ರೆಸ್‌ಗೆ 0

Published : Oct 28, 2026, 01:20 PM IST
Karnataka MLC Election Result set back for congress

ಸಾರಾಂಶ

ಕರ್ನಾಟಕ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಕೂಟ ಕ್ಲೀನ್ ಸ್ವೀಪ್ ಗೆಲುವು ದಾಖಲಿಸಿದೆ. ರಾಹುಲ್ ಗಾಂಧಿಯ ಎಸ್ಐರ್ ಹೋರಾಟ, ಇವಿಎಂ ಬೇಡ ಬ್ಯಾಲೆಟ್ ಪೇಪರ್ ಬೇಕು ಆಗ್ರಹ ಸೇರಿ ಕಾಂಗ್ರೆಸ್ ಎತ್ತಿದ ಪ್ರಮುಖ ಹೋರಾಟಕ್ಕೆ ಪ್ರಬುದ್ಧ ಮತದಾರರು ಸೊಪ್ಪು ಹಾಕಲಿಲ್ಲವೇ? ಮುಂದಿನ ಚುನಾವಣೆಗೆ ಈ ಫಲಿತಾಂಶ ದಿಕ್ಸೂಚಿನಾ?

ಬೆಂಗಳೂರು (ಅ.28) ಕರ್ನಾಟಕ ವಿಧಾನ ಪರಿಷತ್ (MLC) ಚುನಾವಣೆ ಫಲಿತಾಂಶ ಆಡಳಿತರೂಢ ಕಾಂಗ್ರೆಸ್ ತಲೆನೋವು ಹೆಚ್ಚಿಸಿದೆ. ಸ್ಟಿಂಗ್ ಆಪರೇಶನ್, ಪಕ್ಷದೊಳಗಿನ ಅಸಮಧಾನ, ಗುಂಪುಗಾರಿಕೆಯಿಂದ ಹೈರಾಣಾಗಿರುವ ಕಾಂಗ್ರೆಸ್ ಇದೀಗ ವಿಧಾನ ಪರಿಷತ್ ಚುನಾವಣೆ ಮುಖಭಂಗ ತಲೆನೋವು ಹೆಚ್ಚಿಸಿದೆ. ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿಕೂಟಕ್ಕೆ ಕ್ಲೀನ್ ಸ್ವೀಪ್ ಗೆಲುವು ಸಿಕ್ಕಿದೆ. ವಿಧಾನ ಪರಿಷತ್‌ನ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಎನ್‌ಡಿಎ ನಾಲ್ಕು ಸ್ಥಾನ ಗೆದ್ದುಕೊಂಡಿದೆ. ಇದು ಮುಂಬರುವ ಚುನಾವಣೆಗಳಿಗೆ ದಿಕ್ಸೂಚಿ ಎಂದು ಬಿಜೆಪಿ ಹೇಳಿಕೊಂಡರೆ, ಈ ಫಲಿತಾಂಶ ಜನರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ, ಮುಂಬರುವ ಚುನಾವಣೆಗೂ ಯಾವುದೇ ಸಂಬಂಧ ಇಲ್ಲ ಎಂದು ಕರ್ನಾಟಕ ಕಾಂಗ್ರೆಸ್ ಹೇಳಿದೆ.

ನಾಲ್ಕು ಕ್ಷೇತ್ರದಲ್ಲಿ ಕ್ಲೀನ್ ಸ್ವೀಪ್, ಬೆಂಗಳೂರು ಕಳೆದುಕೊಂಡ ಕಾಂಗ್ರೆಸ್

  • ಈಶಾನ್ಯ ಶಿಕ್ಷಕರ ಕ್ಷೇತ್ರ: ಶಶೀಲ್ ಜಿ ನಮೋಶಿ, ಬಿಜೆಪಿ
  • ಆಗ್ನೇಯ ಪದವೀಧರ ಕ್ಷೇತ್ರ: ಕೆ.ಎಂ ಸುರೇಶ, ಬಿಜೆಪಿ
  • ಪಶ್ಚಿಮ ಪದವೀಧರ ಕ್ಷೇತ್ರ: ಎಸ್ ವಿ ಸಂಕನೋರ, ಬಿಜೆಪಿ
  • ಬೆಂಗಳೂರು ಶಿಕ್ಷಕರ ಕ್ಷೇತ್ರ:ಎಪಿ ರಂಗನಾಥ್ , ಜೆಡಿಎಸ್

ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ ಸ್ಥಾನ ಕಳೆದುಕೊಂಡಿದೆ. ಕಾಂಗ್ರೆಸ್‌ನ ಸಿಟ್ಟಿಂಗ್ ಎಂಎಲ್‌ಸಿ ಪುಟ್ಟಣ್ಣ ವಿರುದ್ದ ಎನ್‌ಡಿಎ ಅಭ್ಯರ್ಥಿ ಎಪಿ ರಂಗನಾಥ್ ಗೆಲುವು ದಾಖಲಿಸಿದ್ದಾರೆ. ಘಟಾನುಘಟಿ ನಾಯಕರೇ ಇರುವ ಬೆಂಗಳೂರಿನಲ್ಲಿ ಆಡಳಿತರೂಢ ಕಾಂಗ್ರೆಸ್ ಸ್ಥಾನ ಕಳೆದುಕೊಂಡಿದ್ದು ತೀವ್ರ ಹಿನ್ನಡೆಗೆ ಕಾರಣವಾಗಿದೆ. ಇತ್ತ ಎನ್‌ಡಿಎ ಮೈತ್ರಿಗೆ ಮೊದಲ ಕ್ಲೀನ್ ಸ್ವೀಪ್ ಗೆಲುವು ಇದಾಗಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯೊಂದಿಗೆ ಸ್ಪರ್ಧಿಸಿತ್ತು. ಕರ್ನಾಟಕದಲ್ಲಿ ಬಿಜೆಪಿ 17, ಜೆಡಿಎಸ್ 2 ಸ್ಥಾನದ ಮೂಲಕ ಎನ್‌ಡಿಎ ಮೈತ್ರಿ ಒಟ್ಟು 19 ಸ್ಥಾನ ಗೆದ್ದುಕೊಂಡಿತ್ತು. 2019ರ ಚುನಾವಣೆಗೆ ಹೋಲಿಸಿದರೆ ಬಿಜೆಪಿ ಸ್ಥಾನ ಇಳಿಕೆಯಾಗಿತ್ತು. ಆದರೆ ಈ ಬಾರಿ ಬಿಜೆಪಿ ಜೆಡಿಎಸ್ ಮೈತ್ರಿ ಮೊದಲ ಬಾರಿಗೆ ಕ್ಲೀನ್ ಸ್ವೀಪ್ ಗೆಲುವಿನ ದಾಖಲೆ ಬರೆದಿದೆ.

ಇವಿಎಂ ಬೇಡ ಬ್ಯಾಲೆಟ್ ಪೇಪರ್ ಸಾಕೂ ಎಂದರೂ ಗೆಲುವು ಸಿಗಲಿಲ್ಲ

ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಕಳೆದ ಕೆಲ ವರ್ಷಗಳಿಂದ ಇವಿಎಂ ಮಶಿನ್ ಮೂಲಕ ಚುನಾವಣೆ ಬಿಜೆಪಿಗೆ ವರವಾಗಿದೆ. ಇದು ಅಕ್ರಮ, ಇವಿಎಂ ಮಶಿನ್ ಹ್ಯಾಕ್ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಮಾಡಿದ್ದರು. ಇವಿಎಂ ಬದಲು ಬ್ಯಾಲೆಟ್ ಪೇಪರ್ ಸಾಕು ಎಂದು ರಾಹುಲ್ ಸೇರಿದಂತೆ ಕಾಂಗ್ರೆಸ್ ನಾಯಕರು ಪದೇ ಪದೇ ಹೇಳಿಕೆ ನೀಡಿದ್ದಾರೆ. ಆದರೆ ವಿಧಾನ ಪರಿಷತ್ ಚುನಾವಣೆ ಬ್ಯಾಲೆಟ್ ಪೇಪರ್ ಮೂಲಕವೇ ನಡೆದಿತ್ತು. ಒಂದೂ ಸ್ಥಾನ ಗೆಲ್ಲಲು ಕಾಂಗ್ರೆಸ್‌ಗೆ ಸಾಧ್ಯವಾಗಲಿಲ್ಲ ಅನ್ನೋದು ವಾಸ್ತವ.

ಎಸ್ಐಆರ್ ಹೋರಾಟ, ಗ್ಯಾನೇಶ್ ರಾಜೀನಾಮೆ ಆಗ್ರಹ ಕೈಹಿಡಿಯಲಿಲ್ಲ

ವಿಧಾನ ಪರಿಷತ್ ಚುನಾವಣೆ ಪ್ರಜ್ಞಾವಂತರ, ಪ್ರಬುದ್ಧರ ಚುನಾವಣೆ ಎಂದೇ ಗುರುತಿಸಿಕೊಂಡಿದೆ. ಆದರೆ ಈ ಪ್ರಬುದ್ಧ, ಸುಶಿಕ್ಷಿತ ಮತದಾರರು ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಹೋರಾಟವನ್ನು ಗಣನೆಗೆ ತೆಗೆದುಕೊಂಡಿಲ್ಲ ಅನ್ನೋದು ಫಲಿತಾಂಶ ಹೇಳುತ್ತಿದೆ. ಎಸ್ಐಆರ್‌ನಲ್ಲಿ ಆಕ್ರಮ ನಡೆದಿದೆ, ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ರಾಜೀನಾಮೆ ನೀಡಬೇಕು, ಇವರನ್ನು ನೇಮಿಸಿದ ಪ್ರಧಾನಿ ಮೋದಿ, ಅಮಿತ್ ಶಾ ರಾಜೀನಾಮೆ ನೀಡಬೇಕು. ದೇಶದಲ್ಲಿ ಪ್ರಜಾಪ್ರಭುತ್ವ ಉಳಿವಿಗೆ ರಾಜೀನಾಮೆ ಅಗತ್ಯ, ಕಾಂಗ್ರೆಸ್ ಸಂವಿಧಾನ, ಪ್ರಜಾಪ್ರಭುತ್ವ ರಕ್ಷಣೆಗೆ ಹೋರಾಡುತ್ತಿದೆ ಎಂದರೂ ಪ್ರಜ್ಞಾವಂತ ಮತದಾರರು ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಮಾತುಗಳಿಗೆ ಬೆಲೆ ನೀಡಿಲ್ಲ. ಬದಲಾಗಿ ಎನ್‌ಡಿಎ ಮೇಲೆ ಭರವಸೆಯಿಟ್ಟು ಮತದಾನ ಮಾಡಿದ್ದಾರೆ. ಸುಶಿಕ್ಷತ ಮತದರಾರು ಕಾಂಗ್ರೆಸ್ ಆರೋಪಗಳನ್ನು ತಳ್ಳಿ ಹಾಕಿದ್ದಾರೆ ಅನ್ನೋದು ವಿಧಾನ ಪರಿಷತ್ ಚುನಾವಣೆ ಫಲಿತಾಂಶ ಹೇಳುತ್ತಿದೆ.

ಮುಂದಿನ ಚುನಾವಣೆ ಆತಂಕ

ಆಡಳಿತರೂಢ ಕಾಂಗ್ರೆಸ್ ಪಂಚ ಗ್ಯಾರೆಂಟಿಯಿಂದ ಮುಂಬರುವ ಚುನಾವಣೆ ಗೆಲ್ಲಬಹುದು ಅನ್ನೋ ನಿರೀಕ್ಷೆಯಲ್ಲಿತ್ತು. ಆದರೆ ಪರಿಷತ್ ಚುನಾವಣೆ ಈ ಲೆಕ್ಕಾಚಾರ ಉಲ್ಟಾ ಮಾಡಿದೆ. ಪ್ರಜ್ಞಾವಂತರು ಗ್ಯಾರೆಂಟಿಗಳ ನೋಡಿ ಮತ ಹಾಕುವುದಿಲ್ಲ ಅನ್ನೋದು ಸ್ಷಷ್ಟವಾಗಿದೆ. ಇಷ್ಟೇ ಅಲ್ಲ ಕಾಂಗ್ರೆಸ್ ಭರವಸೆ ನೀಡಿದ್ದ ಉದ್ಯೋಗವಕಾಶ, ನೇಮಕಾತಿ ಪ್ರಕ್ರಿಯೆ, ಪಾರದರ್ಶಕ ಪರೀಕ್ಷೆ, ಶಿಕ್ಷಣ ಸೌಲಭ್ಯ, ಮೂಲಭೂತ ಸೌಕರ್ಯಗಳನ್ನು ತುಲನೆ ಮಾಡುತ್ತಾರೆ ಅನ್ನೋದು ಸಾಬೀತಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ಗೆ ತೀವ್ರ ಸವಾಲಾಗಿ ಪರಿಣಮಿಸಲಿದೆ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಎನ್‌ಡಿಎ ಮೈತ್ರಿ ಗೆಲುವಿಗೆ ಕಾರಣವೇನು

ಬಿಜೆಪಿ ಸಂಘಟನಾ ಶಕ್ತಿ, ಜೆಡಿಎಸ್ ನಾಯಕತ್ವ ಹಾಗೂ ಸ್ಥಳೀಯ ಪ್ರಭಾವ ಈ ಬಾರಿ ಕೆಲಸ ಮಾಡಿದೆ. ಮತದಾರರು ಸರ್ಕಾರದ ಭರವಸೆ, ನಿಲುವುಗಳು,ಆಡಳಿತದಿಂದ ಬೇಸತ್ತಿದ್ದರು. ಇತ್ತ ಸ್ಥಳೀಯ, ಪರಿಚಿತ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ಮತಗಳು ಚದುರದಂತೆ ನೋಡಿಕೊಳ್ಳಲಾಯಿತು. ಪ್ರಧಾನಿ ಮೋದಿ ನಾಯಕತ್ವ, ದೇಶದ ಸುರಕ್ಷತೆ, ಮೂಲಭೂತ ಸೌಕರ್ಯ, ಅಭಿವೃದ್ಧಿ, ಜಾಗತಿಕ ಮಟ್ಟದಲ್ಲಿ ದೇಶದ ಸ್ಥಾನ ಸೇರಿದಂತೆ ಹಲವು ವಿಚಾರಗಳ ಜೊತೆಗೆ ಸ್ಥಳೀಯ ಕಾಂಗ್ರೆಸ್ ಆಡಳಿತದಿಂದ ಆಗಿರುವ ಸಮಸ್ಯೆಗಳು, ಎಸ್ಐಆರ್ ಕುರಿತು ಕಾಂಗ್ರೆಸ್ ಮಾಡುತ್ತಿರುವ ಆರೋಪಗಳ ಸತ್ಯಾಸತ್ಯತೆ ಕುರಿತು ಎನ್‌ಡಿಎ ವಿವರಣೆ ಜೊತೆ ಅವಕಾಶವನ್ನು ಬಳಸಿಕೊಂಡಿತು. ಕಾಂಗ್ರೆಸ್ ಮತಗಳು ಎನ್‌ಡಿಎ ಕಡೆ ಹರಿದಿದೆ. ಪ್ರಮುಖವಾಗಿ ಜೆಡಿಎಸ್ ನಾಯಕ, ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಪ್ರಭಾವ ಹೆಚ್ಚಿಸಿಕೊಳ್ಳುತ್ತಿದ್ದು, ಕಾಂಗ್ರೆಸ್‌ಗೆ ತೀವ್ರ ಹಿನ್ನಡೆಯಾಗಿ ಪರಿಣಿಸುತ್ತಿದೆ.

PREV
Read more Articles on
click me!

Recommended Stories

ಬೆಂಗಳೂರು-ತುಮಕೂರು 4 ಪಥದ ರೈಲ್ವೆ ಯೋಜನೆಗೆ ಇನ್ನೂ ಆಗದ ಭೂಸ್ವಾಧೀನ, ಸರ್ಕಾರದ ಸಹಕಾರಕ್ಕೆ ಕಾಯುತ್ತಿರುವ ರೈಲ್ವೇಸ್‌
ನಮ್ಮ ಮೆಟ್ರೋ 'ಪಿಂಕ್ ಲೈನ್' ಮಾರ್ಗಕ್ಕೆ CMRS ಗ್ರೀನ್ ಸಿಗ್ನಲ್: ಕೇಂದ್ರದ ಒಪ್ಪಿಗೆ ಸಿಕ್ಕ ತಕ್ಷಣ ಸಂಚಾರ!